ಕೆಲವು ನಿರ್ದಿಷ್ಟ ವಿಷಯಗಳನ್ನು ತೆಗೆದು ಹಾಕಬೇಕು ಎಂಬ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಟ್ವಿಟರ್
ಕೇಂದ್ರ ಸರ್ಕಾರ ಇತ್ತೀಚೆಗೆ ಟ್ವಿಟರ್‌ಗೆ ನಿರ್ದಿಷ್ಟ ವಿಷಯವನ್ನು ತೆಗೆದುಹಾಕಬೇಕು ಇಲ್ಲವೇ ಕ್ರಿಮಿನಲ್ ಕ್ರಮವನ್ನು ಎದುರಿಸಬೇಕು ಎಂದು ಹೇಳಿತ್ತು.
ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಕೆಲವು ವಿಷಯವನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಟ್ವಿಟರ್ (Twitter), ಕರ್ನಾಟಕ ಹೈಕೋರ್ಟ್‌ಗೆ (Karnataka High Court) ಮೊರೆ ಹೋಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಟ್ವಿಟರ್‌ಗೆ ನಿರ್ದಿಷ್ಟ ವಿಷಯವನ್ನು ತೆಗೆದುಹಾಕಬೇಕು ಇಲ್ಲವೇ ಕ್ರಿಮಿನಲ್ ಕ್ರಮವನ್ನು ಎದುರಿಸಬೇಕು ಎಂದು ಹೇಳಿತ್ತು. ಟ್ವಿಟರ್ ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳೊಂದಿಗೆ ಜಗಳವಾಡುತ್ತಿದೆ. ಕಳೆದ ವರ್ಷ, ಉತ್ತರ ಪ್ರದೇಶ ಪೊಲೀಸರು ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರಿಗೆ ಸೆಕ್ಷನ್ 41 ಎ ಸಿಆರ್‌ಪಿಸಿ ಅಡಿಯಲ್ಲಿ ನೋಟಿಸ್ ನೀಡಿದ್ದರು. ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಗಡ್ಡ ಬೋಳಿಸುವಂತೆ ಹೇಳಿ ಬಲವಂತವಾಗಿ “ವಂದೇ ಮಾತರಂ” ಮತ್ತು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಿದ ವಿಡಿಯೊ ಟ್ವೀಟ್ ಪ್ರಕರಣದಲ್ಲಿ ಟ್ವಿಟರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆಗ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ಪಡೆದಿದ್ದರು. ಇದರ ವಿರುದ್ಧ ಯುಪಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ.
ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಕಳುಹಿಸಿದ ನೋಟಿಸ್ ಪ್ರಕಾರ ಕೆಲವು ವಿಷಯಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಟ್ವಿಟರ್ ಗೆ ಕೊನೆಯ ಗಡುವು ನೀಡಿತ್ತು. ಜೂನ್ 6 ಮತ್ತು ಜೂನ್9ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡಿದ್ದ ಆದೇಶವನ್ನು ಅನುಸರಿಸಿಲ್ಲ ಎಂದು ಹೇಳಿ ಕಳೆದ ವಾರ ಕೇಂದ್ರ ಸರ್ಕಾರ ಟ್ವಿಟರ್‌ಗೆ ನೋಟಿಸ್ ಕಳುಹಿಸಿತ್ತು. ಟ್ವಿಟರ್ ಉಲ್ಲಂಘನೆಯನ್ನು ಮುಂದುವರೆಸಿದರೆ, ಹೊಸ ಐಟಿ ನಿಯಮಗಳ ಅಡಿಯಲ್ಲಿ ಮಧ್ಯವರ್ತಿಯಾಗಿ ತಮ್ಮ ರಕ್ಷಣೆಯನ್ನು ಕಳೆದುಕೊಳ್ಳಬಹುದು ಎಂದು ಕೇಂದ್ರವು ಹೇಳಿದೆ.
ಇದಕ್ಕೂ ಮುನ್ನ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ನಿಯಮಗಳನ್ನು ಪಾಲಿಸುವಂತೆ ಟ್ವಿಟರ್‌ಗೆ ತಿಳಿಸಿದ್ದು ಜುಲೈ 4 ರ ಗಡುವನ್ನು ನಿಗದಿಪಡಿಸಿತ್ತು. ಅಂತಿಮ ಸೂಚನೆಯನ್ನು ಅನುಸರಿಸಲು ಟ್ವಿಟರ್ ವಿಫಲವಾದರೆ, ಅದು ಮಧ್ಯವರ್ತಿ ಸ್ಥಾನಮಾನವನ್ನು ಕಳೆದುಕೊಳ್ಳಬಹುದು ಎಂದು ಪಿಟಿಐ ವರದಿ ತಿಳಿಸಿದೆ. ಜೂನ್ 27 ರಂದು ಸರ್ಕಾರ ಹೊರಡಿಸಿದ ಅಂತಿಮ ಸೂಚನೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಅನುಸರಿಸಿದೆ ಎಂದು ಅಧಿಕೃತ ಮೂಲವು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ.
Published On - 5:45 pm, Tue, 5 July 22