ದೆಹಲಿಯಲ್ಲಿ ನಾಳೆಯಿಂದ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ, ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಕಡ್ಡಾಯ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಖಾಸಗಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ಆದೇಶ ಹೊರಡಿಸಲಾಗಿದೆ. ಈ ಆದೇಶ ಉಲ್ಲಂಘನೆ ಮಾಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ನಿರಂತರವಾಗಿ ವಾಯು ಮಾಲಿನ್ಯ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೂ ಆನ್ ಲೈನ್ ಮೂಲಕ ತರಗತಿ ನಡೆಸಲು ದೆಹಲಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ನವದೆಹಲಿ, ಡಿಸೆಂಬರ್ 17: ದೆಹಲಿಯಲ್ಲಿ ವಾಯು ಮಾಲಿನ್ಯದ (Delhi Air Pollution) ಪ್ರಮಾಣ ವಿಪರೀತ ಹೆಚ್ಚಾಗಿರುವುದರಿಂದ ನಾಳೆಯಿಂದಲೇ (ಗುರುವಾರ) ರಾಷ್ಟ್ರ ರಾಜಧಾನಿಯಲ್ಲಿ ಕಠಿಣ ಕ್ರಮಗಳು ಜಾರಿಗೆ ಬರಲಿವೆ. ಗುರುವಾರದಿಂದ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಸಿಬ್ಬಂದಿಗೆ ಕಡ್ಡಾಯವಾಗಿ ಮನೆಯಿಂದಲೇ ಕೆಲಸ ಮಾಡಲು ಸೂಚಿಸಬೇಕು ಎಂದು ದೆಹಲಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ಆದೇಶಿಸಿದ್ದಾರೆ. ಮಾಲಿನ್ಯಕ್ಕೆ ಸಂಬಂಧಿಸಿದ ಲಾಕ್‌ಡೌನ್‌ಗಳನ್ನು ವಿಧಿಸಿದಾಗ ನಿರ್ಮಾಣ ಕಾರ್ಯಗಳ ಮೇಲಿನ ನಿಷೇಧದಿಂದಾಗಿ ದೆಹಲಿಯಲ್ಲಿನ ನಿರ್ಮಾಣ ಕಾರ್ಮಿಕರಿಗೆ ನಿರುದ್ಯೋಗ ಉಂಟಾಗುವುದರಿಂದ ಅವರಿಗೆ 10,000 ರೂ. ಪರಿಹಾರವನ್ನು ನೀಡಲಾಗುವುದು.
ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಮತ್ತು ಪರಿಸರ ಇಲಾಖೆ ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿ, ಗುರುವಾರದಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಜನರು ಕಚೇರಿಗೆ ಆಗಮಿಸುವಂತಿಲ್ಲ. ಎಲ್ಲ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಂ ಆಯ್ಕೆ ನೀಡಿದರೂ ಉತ್ತಮ ಎಂದು ಸಚಿವ ಮಿಶ್ರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ಜಾಗೃತಿ ಮೂಡಿಸಲು ಸಂಸತ್ತಿಗೆ ಸೈಕಲ್ನಲ್ಲಿ ಬಂದ ಸಂಸದ
ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು, ಅಗ್ನಿಶಾಮಕ ಸೇವೆಗಳು, ಸಾರ್ವಜನಿಕ ಸಾರಿಗೆ ಮತ್ತು ಜೈಲು ಇಲಾಖೆ ಸೇರಿದಂತೆ ಕೆಲವು ಅಗತ್ಯ ಸೇವೆಗಳಿಗೆ ಮಾತ್ರ ಈ ನಿಯಮದಲ್ಲಿ ವಿನಾಯಿತಿ ನೀಡಲಾಗಿದೆ. ವಾಹನ ಮಾಲಿನ್ಯವು ವ್ಯಾಪಕ ವಾಯು ಮಾಲಿನ್ಯಕ್ಕೆ ಕಾರಣವಾಗುವುದರಿಂದ ಮತ್ತು ಹಾನಿಕಾರಕ ವಾಯು ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುವುದರಿಂದ ವಿಶೇಷವಾಗಿ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿರುವಾಗ, ವಾಹನ ಸಂಚಾರದ ಮೇಲೆ ಹೆಚ್ಚಿನ ನಿರ್ಬಂಧಗಳ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.
ಕೆಲಸದ ಸಮಯವನ್ನು ಹೊಂದಿಕೊಳ್ಳುವಂತೆ ಮಾಡಲು ಮತ್ತು ಉದ್ಯೋಗಿಗಳಲ್ಲಿ ಕಾರ್‌ಪೂಲಿಂಗ್ ಅನ್ನು ಉತ್ತೇಜಿಸಲು ಸರ್ಕಾರ ಕಚೇರಿಗಳಿಗೆ ಮನವಿ ಮಾಡಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ; 5ನೇ ತರಗತಿವರೆಗಿನ ಮಕ್ಕಳು ಶಾಲೆಗೆ ಬರುವಂತಿಲ್ಲ
ಹಾಗೇ, ದೆಹಲಿಯಲ್ಲಿ 16 ದಿನಗಳವರೆಗೆ GRAP 3 (ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ) ವಿಧಿಸಲಾಯಿತು. ಆ ದಿನಗಳಲ್ಲಿ ನಿರ್ಮಾಣವನ್ನು ನಿಷೇಧಿಸಿದ್ದರಿಂದ ಕಟ್ಟಡ ಕಾರ್ಮಿಕರ ಮೇಲೆ ಪರಿಣಾಮ ಬೀರಿತು. ಹೀಗಾಗಿ, ದೆಹಲಿ ಸರ್ಕಾರವು ನೋಂದಾಯಿತ ಮತ್ತು ಪರಿಶೀಲಿಸಿದ ನಿರ್ಮಾಣ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 10,000 ರೂ.ಗಳನ್ನು ಕಳುಹಿಸಲು ನಿರ್ಧರಿಸಿದೆ
ಇದಿಷ್ಟೇ ಅಲ್ಲದೆ, ದೆಹಲಿಯ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಗುರುವಾರದಿಂದ ಪಿಯುಸಿ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನವನ್ನು ಒದಗಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಪಿಯುಸಿ ಪ್ರಮಾಣಪತ್ರವೆಂದರೆ ಮಾಲಿನ್ಯ ನಿಯಂತ್ರಣದಲ್ಲಿರುವ ಪ್ರಮಾಣಪತ್ರವಾಗಿದೆ. ದೆಹಲಿಯಲ್ಲಿ ಪ್ರತಿಯೊಬ್ಬ ವಾಹನ ಸವಾರರೂ ಈ ಸರ್ಟಿಫಿಕೆಟ್ ಹೊಂದಿರುವುದು ಕಡ್ಡಾಯವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




