ನವದೆಹಲಿ: 2 ವರ್ಷಗಳ ಕಾಲ ಕೊವಿಡ್ ಹಾವಳಿಯಿಂದ ಎಲ್ಲರ ಜೀವನಶೈಲಿಯೂ ಬದಲಾವಣೆಯಾಗಿದೆ. ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಜೀವನಕ್ಕೆ ಒಗ್ಗಿಕೊಂಡಿರುವ ನಮ್ಮ ಅಗತ್ಯತೆಗಳೂ ಬದಲಾಗಿವೆ. ಉದ್ಯೋಗಿಗಳಿಗೆ 2 ವರ್ಷಗಳಿಂದ ವರ್ಕ್ ಫ್ರಂ ಹೋಂ ಸೌಲಭ್ಯ ಸಿಕ್ಕಿರುವುದರಿಂದ ಈಗ ಆಫೀಸ್ ಶುರುವಾದರೂ ಯಾರೂ ಆಫೀಸ್ಗೆ ಹೋಗಲು ಮನಸು ಮಾಡುತ್ತಿಲ್ಲ. ವರ್ಕ್ ಫ್ರಂ ಹೋಂ ಆಯ್ಕೆಯಿರುವ ಉದ್ಯೋಗಕ್ಕೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಹೊಸ ಘೋಷಣೆಯನ್ನು ಮಾಡಿದ್ದು, ವಿಶೇಷ ಆರ್ಥಿಕ ವಲಯಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲು ಸೂಚಿಸಿದೆ.
ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯ ಮಂಗಳವಾರ ಅನುಮತಿ ನೀಡಿದ್ದು, ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಹೊಸ ವರ್ಕ್ ಫ್ರಮ್ ಹೋಮ್ ನಿಯಮವನ್ನು ಪ್ರಕಟಿಸಿದೆ. ಎಲ್ಲಾ ಆರ್ಥಿಕ ವಲಯಗಳಲ್ಲಿ ದೇಶಾದ್ಯಂತ ಏಕರೂಪದ ವರ್ಕ್ ಫ್ರಮ್ ಹೋಂ (WFH) ನೀತಿಯನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ವಿಭಾಗಗಳೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿ, ಈ ನಿರ್ಧಾರಕ್ಕೆ ಬರಲಾಗಿದೆ.
ಇದನ್ನೂ ಓದಿ: Wipro: ವಿಪ್ರೋ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅಂತ್ಯ; ನಾಳೆಯಿಂದಲೇ ಆಫೀಸ್ನಿಂದ ಕೆಲಸ ಶುರು
ಕೇಂದ್ರ ಸರ್ಕಾರದ ನೂತನ ನಿಯಮಗಳ ಪ್ರಕಾರ, ಗುತ್ತಿಗೆ ಆಧಾರಿತ (ಕಾಂಟ್ರಾಕ್ಟ್) ಉದ್ಯೋಗಿಗಳನ್ನು ಒಳಗೊಂಡಂತೆ ಒಟ್ಟ ಪ್ರಮಾಣದ ಶೇ. 50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಬಹುದು. ಶೇ. 50ಕ್ಕಿಂತಲೂ ಅಧಿಕ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡುವ ಅಧಿಕಾರವನ್ನು ಸ್ಪೆಷಲ್ ಎಕಾನಮಿಕ್ ಝೋನ್‌ನ ಅಭಿವೃದ್ಧಿ ಆಯುಕ್ತರಿಗೆ ನೀಡಲಾಗಿದೆ. ಈ ರೀತಿ ಶೇ. 50ಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕಾದರೆ ಅದಕ್ಕೆ ಸಂಬಂಧಪಟ್ಟ ಸೂಕ್ತ ಕಾರಣವನ್ನು ಲಿಖಿತವಾಗಿ ನೀಡಬೇಕಾಗುತ್ತದೆ.
ನೂತನ ನಿಯಮದ ಪ್ರಕಾರ ಮುಂದಿನ ಒಂದು ವರ್ಷದವರೆಗೆ ವಿಶೇಷ ಆರ್ಥಿಕ ವಲಯದ ಉದ್ಯೋಗಿಗಳು ವರ್ಕ್ ಫ್ರಮ್ ಹೋಂ ಸೌಲಭ್ಯವನ್ನು ನೀಡಬಹುದು. ಅದಕ್ಕಿಂತಲೂ ಹೆಚ್ಚಿನ ಸಮಯ ವರ್ಕ್ ಫ್ರಮ್ ಹೋಂ ನೀಡುವ ಅಧಿಕಾರ ಆ ಘಟಕದ ಡಿಸಿಯುಗೆ ಇರುತ್ತದೆ. ಅವರು ಒಪ್ಪಿಗೆ ನೀಡಿದರೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ಮತ್ತೆ ಒಂದು ವರ್ಷ ವಿಸ್ತರಿಸಬಹುದಾಗಿದೆ.
ಇದನ್ನೂ ಓದಿ: Migraine: ವರ್ಕ್ ಫ್ರಂ ಹೋಮ್ ಒತ್ತಡಕ್ಕೆ ಶುರುವಾಯ್ತಾ ಮೈಗ್ರೇನ್? ಇದರಿಂದ ಹೊರಬರಲು ಈ ವಿಧಾನಗಳನ್ನು ಅನುಸರಿಸಿ
ಭಾರತದಲ್ಲಿ ಈ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್) ಘಟಕ ಸ್ಥಾಪಿಸುವ ವ್ಯವಹಾರಗಳಿಗೆ ಪ್ರೋತ್ಸಾಹ ಧನ ದೊರಕುತ್ತದೆ. ಉಚಿತ ವಿದ್ಯುತ್, ನೀರು ಸರಬರಾಜು, ಭೂಮಿ ಬೆಲೆಯಲ್ಲಿ ಇಳಿಕೆ ಇತ್ಯಾದಿಗಳು ಇರುತ್ತವೆ. ಕೇಂದ್ರ ವಾಣಿಜ್ಯ ಸಚಿವಾಲಯ ವಿಶೇಷ ಆರ್ಥಿಕ ವಲಯಗಳ ನಿಯಮಗಳು, 2006ರಲ್ಲಿ ವರ್ಕ್ ಫ್ರಂ ಹೋಮ್ಗಾಗಿ ಹೊಸ ನಿಯಮ 43A ಅನ್ನು ಸೂಚಿಸಿತ್ತು.
ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (SEZs) ದೇಶಾದ್ಯಂತ ಏಕರೂಪದ ವರ್ಕ್ ಫ್ರಂ ಹೋಂ ನೀತಿಗೆ ನಿಬಂಧನೆಯನ್ನು ಮಾಡಲು ಉದ್ಯಮದ ಬೇಡಿಕೆಯ ಮೇರೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಇವರಲ್ಲಿ IT/ ITeS, SEZ ಘಟಕಗಳ ಉದ್ಯೋಗಿಗಳು ಕೂಡ ಸೇರಿದ್ದಾರೆ.