ಬ್ರಹ್ಮೋಸ್ ಕ್ಷಿಪಣಿ: ಭಾರತದ ಅತ್ಯಂತ ಶಕ್ತಿಶಾಲಿ, ಮಾರಣಾಂತಿಕ ಆಯುಧದ ಕುರಿತು ಪಾಕಿಸ್ತಾನದ ಕುಟಿಲ ಚಿಂತೆಗಳು

ಬ್ರಹ್ಮೋಸ್ ಕ್ಷಿಪಣಿ ಯೋಜನೆಯಲ್ಲಿ ಭಾಗಿಯಾಗಿರುವ ಡಿಆರ್‌ಡಿಓ ಹಿರಿಯ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರನ್ನು ಒಳಗೊಂಡ ಗೂಢಚರ್ಯೆಯ ಪ್ರಕರಣ ಈ ಯೋಜನೆಯ ಕುರಿತು ಮಾಹಿತಿ ಪಡೆಯಲು ಪಾಕಿಸ್ತಾನದ ಪ್ರಯತ್ನಗಳು ಎಷ್ಟರಮಟ್ಟಿಗಿವೆ ಎಂಬುದನ್ನು ತೋರಿಸುತ್ತದೆ.

ಬ್ರಹ್ಮೋಸ್ ಕ್ಷಿಪಣಿ: ಭಾರತದ ಅತ್ಯಂತ ಶಕ್ತಿಶಾಲಿ, ಮಾರಣಾಂತಿಕ ಆಯುಧದ ಕುರಿತು ಪಾಕಿಸ್ತಾನದ ಕುಟಿಲ ಚಿಂತೆಗಳು
ಬ್ರಹ್ಮೋಸ್ ಕ್ಷಿಪಣಿ
Follow us
|

Updated on: Aug 06, 2023 | 2:44 PM

ಕಳೆದ ವರ್ಷ ಭಾರತ ಪ್ರಯೋಗಿಸಿದ ಬ್ರಹ್ಮೋಸ್ ಕ್ಷಿಪಣಿ (BRAHMOS MISSILE) ಯೊಂದು ಹಾದಿ ತಪ್ಪಿ, ಪಾಕಿಸ್ತಾನದಲ್ಲಿ ಪತನ ಹೊಂದಿತು. ಪಾಕಿಸ್ತಾನದಲ್ಲಿ ಅದು ಹೋಗಿ ಬಿದ್ದ ಕಾರಣದಿಂದ, ಪಾಕಿಸ್ತಾನದ ಸ್ಥಳೀಯ ತಜ್ಞರಿಗೆ ಭಾರತದ ಅತ್ಯಂತ ಅಪಾಯಕಾರಿ ಆಯುಧದ ಭಾಗಗಳನ್ನು ಪರಿಶೀಲಿಸಲು ಅವಕಾಶ ನಿರ್ಮಾಣವಾಯಿತು. ಈ ಘಟನೆ ಭಾರತೀಯ ವಾಯುಪಡೆಯ ಬ್ರಹ್ಮೋಸ್ ಕ್ಷಿಪಣಿಗೆ ನೆರೆಯ ಪಾಕಿಸ್ತಾನ ಯಾಕೆ ಅಷ್ಟೊಂದು ಭಯಪಡುತ್ತಿದೆ ಎಂಬುದರೆಡೆಗೆ ಬೆಳಕು ಚೆಲ್ಲಿತ್ತು.

ಇತ್ತೀಚೆಗೆ ಬ್ರಹ್ಮೋಸ್ ಕ್ಷಿಪಣಿ ಯೋಜನೆಯಲ್ಲಿ ಭಾಗಿಯಾಗಿರುವ ಡಿಆರ್‌ಡಿಓ ಹಿರಿಯ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರನ್ನು ಒಳಗೊಂಡ ಗೂಢಚರ್ಯೆಯ ಪ್ರಕರಣ ಈ ಯೋಜನೆಯ ಕುರಿತು ಮಾಹಿತಿ ಪಡೆಯಲು ಪಾಕಿಸ್ತಾನದ ಪ್ರಯತ್ನಗಳು ಎಷ್ಟರಮಟ್ಟಿಗಿವೆ ಎಂಬುದನ್ನು ತೋರಿಸುತ್ತದೆ.

ಗೂಢಚಾರಿಕೆಯ ಮೂಲಕ ಬ್ರಹ್ಮೋಸ್ ರಾಕೆಟ್ ತಂತ್ರಜ್ಞಾನವನ್ನು ಪಡೆಯಲು ಪಾಕಿಸ್ತಾನದ ಪ್ರಯತ್ನ

ಮಹಾರಾಷ್ಟ್ರದ ಆ್ಯಂಟಿ ಟೆರರಿಸಂ ಸ್ಕ್ವಾಡ್ (ಎಟಿಎಸ್) ನಡೆಸಿರುವ ವಿಚಾರಣೆಯ ಸಂದರ್ಭದಲ್ಲಿ, ಪಾಕಿಸ್ತಾನಿ ಗೂಢಚಾರಿಣಿ ಎಂದು ಸಂಶಯಿಸಲಾದ ‘ಜಾ಼ರಾ ದಾಸ್‌ಗುಪ್ತಾ’ ಎಂಬ ಮಹಿಳೆ ಪ್ರದೀಪ್ ಕುರುಲ್ಕರ್ ಅವರನ್ನು ಹನಿ ಟ್ರ್ಯಾಪ್‌ನಲ್ಲಿ ಬೀಳಿಸಿದ್ದಳು. ಪ್ರದೀಪ್ ಕುರುಲ್ಕರ್ ಆಕೆಯನ್ನು ವೈಯಕ್ತಿಕವಾಗಿ ಭೇಟಿಯಾದಾಗ ಅತ್ಯಂಯ ರಹಸ್ಯ ಮಾಹಿತಿಗಳನ್ನು ಆಕೆಯೊಡನೆ ಹಂಚಿಕೊಳ್ಳಲು ಉದ್ದೇಶಿಸಿದ್ದರು ಎಂಬುದು ತಿಳಿದು ಬಂದಿತ್ತು.

ಇದನ್ನೂ ಓದಿ: ಹೆಚ್ಚಿನ ಭೂ ವೀಕ್ಷಣೆಗಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಪಿಎಸ್ಎಲ್‌ವಿ-ಸಿ56 ಯೋಜನೆ

ಆದರೆ, ಪಾಕಿಸ್ತಾನಿ ಇಂಟಲಿಜೆನ್ಸ್ ಆಪರೇಟಿವ್ (ಪಿಐಒ) ಗೂಢಚಾರಿಣಿ ಮತ್ತು ಡಿಆರ್‌ಡಿಓದ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಲ್ಯಾಬೋರೇಟರಿ ಮುಖ್ಯಸ್ಥರಾದ ಪ್ರದೀಪ್ ಕುರಲ್ಕರ್ ಅವರು ಪರಸ್ಪರ ಭೇಟಿಯಾಗುವ ಮೊದಲೇ ಮಹಾರಾಷ್ಟ್ರ ಎಟಿಎಸ್ ಪ್ರದೀಪ್ ಅವರನ್ನು ಮೇ ತಿಂಗಳಲ್ಲಿ ಬಂಧಿಸಿತ್ತು.

ಪೊಲೀಸ್ ವಿಚಾರಣೆಯ ವೇಳೆ, ಈ ವಿಷಯಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳು ಬಹಿರಂಹವಾದವು. ಪಾಕಿಸ್ತಾನಿ ಇಂಟಲಿಜೆನ್ಸ್ ಆಪರೇಟಿವ್ (ಪಿಐಒ) ಗೂಢಚಾರಿಣಿ ಪ್ರದೀಪ್ ಕುರುಲ್ಕರ್ ಜೊತೆಗಿನ ವಾಟ್ಸಾಪ್ ಮಾತುಕತೆಯ ವೇಳೆ ಪದೇ ಪದೇ ಬ್ರಹ್ಮೋಸ್ ಕ್ಷಿಪಣಿಯ ಕುರಿತು ವಿಚಾರಿಸಿದ್ದಳು.

ವಾಟ್ಸಾಪ್‌ನಲ್ಲಿ ಅವರಿಬ್ಬರ ನಡುವೆ ನಡೆದ ಮಾತುಕತೆಯ ಸಂದರ್ಭದಲ್ಲಿ, ಪಾಕಿಸ್ತಾನಿ ಮಹಿಳೆ ಬ್ರಹ್ಮೋಸ್ ಕ್ಷಿಪಣಿಯನ್ನು ಪ್ರದೀಪ್ ಕುರುಲ್ಕರ್ ಅವರ ಸಂಶೋಧನೆ ಎಂದು ಹೇಳಿದ್ದು, ಅದೊಂದು ಅಪಾಯಕಾರಿ ಆಯುಧ ಎಂದಿದ್ದಳು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಾಜಿ ಡಿಆರ್‌ಡಿಓ ವಿಜ್ಞಾನಿ ತನ್ನ ಬಳಿ ಎ4 ಹಾಳೆಯಲ್ಲಿ ಅಂದಾಜು 186 ಪುಟಗಳಷ್ಟು ಎಲ್ಲ ಆವೃತ್ತಿಗಳ ಬ್ರಹ್ಮೋಸ್ ಕ್ಷಿಪಣಿಗಳ ಆರಂಭಿಕ ವಿನ್ಯಾಸವಿದೆ ಎಂದು ಸಂದೇಶ ಕಳುಹಿಸಿದ್ದರು.

ಮಹಾರಾಷ್ಟ್ರ ಎಟಿಎಸ್ ಸಲ್ಲಿಸಿದ ಆರೋಪ ಪಟ್ಟಿಯ ಪ್ರಕಾರ, ಕುರುಲ್ಕರ್ ಅವರು ಆ ಮಹಿಳೆಗೆ ಈ ಮಾಹಿತಿ ಅತ್ಯಂತ ಸೂಕ್ಷ್ಮವಾಗಿರುವ ಕಾರಣದಿಂದ ತಾನು ಅದನ್ನು ವಾಟ್ಸಾಪ್ ಮೂಲಕವಾಗಲಿ, ಇಮೇಲ್ ಮೂಲಕವಾಗಲಿ ಕಳುಹಿಸಲು ಸಾಧ್ಯವಿಲ್ಲ ಎಂದಿದ್ದರು. ತಾನು ಆ ಮಾಹಿತಿಗಳನ್ನು ನಕಲು ಮಾಡಿಕೊಂಡು, ಬೇರೊಂದು ವರದಿಯನ್ನು ತಯಾರಿಸಿ, ಆಕೆಯನ್ನು ಭೇಟಿಯಾದಾಗ ಆಕೆಗೆ ಅದನ್ನು ತೋರಿಸುವುದಾಗಿ ಹೇಳಿದ್ದರು.

ಕುರುಲ್ಕರ್ ಅವರಿಗೆ ತನ್ನನ್ನು ತಾನು ಜಾ಼ರಾ ಎಂದು ಪರಿಚಯಿಸಿಕೊಂಡ ಆ ಪಾಕಿಸ್ತಾನಿ ಮಹಿಳೆ, ಮಾತುಕತೆಯ ಸಂದರ್ಭದಲ್ಲಿ ಭಾರತದ ಬೇರೆ ಬೇರೆ ರಕ್ಷಣಾ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದಳು. ಅದರಲ್ಲಿ ಇನ್ನೂ ಅಭಿವೃದ್ಧಿಯ ಹಂತದಲ್ಲಿರುವ, ಹೆಚ್ಚಿನ ವ್ಯಾಪ್ತಿ ಹೊಂದಿರುವ, ಅಗ್ನಿ-6 ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ, ಅನ್‌ಮ್ಯಾನ್ಡ್ ಕಾಂಬ್ಯಾಟ್ ಏರ್ ವೆಹಿಕಲ್ಸ್ (UCAVs), ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳು (ಸರ್ಫೇಸ್ ಟು ಏರ್ ಮಿಸೈಲ್ಸ್ – SAM), ರುಸ್ತುಂ ಯೋಜನೆ (ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯುರೆನ್ಸ್ ಅನ್‌ಮ್ಯಾನ್ಡ್ ಏರ್ ವೆಹಿಕಲ್) ಹಾಗೂ ಡಿಆರ್‌ಡಿಓ ನಡೆಸುತ್ತಿರುವ ವಿವಿಧ ಡ್ರೋನ್ ಯೋಜನೆಗಳ ಕುರಿತು ಚರ್ಚೆ ನಡೆಸಲಾಗಿತ್ತು.

ಅವರ ವಾಟ್ಸಾಪ್ ಮಾತುಕತೆಗಳಲ್ಲಿ, ಕುರುಲ್ಕರ್ ಮತ್ತು ಪಾಕಿಸ್ತಾನಿ ಗೂಢಚಾರಿಣಿ ವಿವಿಧ ಭಾರತೀಯ ಸೇನಾ ಉಪಕರಣಗಳ ಕುರಿತೂ ಚರ್ಚಿಸಿದ್ದರು. ಅದರಲ್ಲಿ ಭಾರತೀಯ ವಾಯುಪಡೆ ಇತ್ತೀಚೆಗೆ ಪಡೆದುಕೊಂಡಿರುವ ರಫೇಲ್ ಯುದ್ಧ ವಿಮಾನಗಳು, ಆಕಾಶ ಮತ್ತು ಅಸ್ತ್ರ ಕ್ಷಿಪಣಿಗಳು, ಕ್ವಾಡ್ ಕಾಪ್ಟರ್‌ಗಳು ಮತ್ತು ಮಿಟಿಯೋರ್ ಕ್ಷಿಪಣಿಗಳೂ ಸೇರಿದ್ದವು.

ಪಾಕಿಸ್ತಾನಕ್ಕೆ ಸವಾಲೆಸೆದಿರುವ ಬ್ರಹ್ಮೋಸ್ ಕ್ಷಿಪಣಿ

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ, ಹರಿಯಾಣ ರಾಜ್ಯದ, ಅಂಬಾಲಾ ನಗರದ ಸೇನಾ ನೆಲೆಯಿಂದ ಆಕಸ್ಮಿಕವಾಗಿ ಉಡಾವಣೆಗೊಂಡ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದಲ್ಲಿ ಪತನಗೊಂಡಿತ್ತು.

ಆದರೆ ಅದೃಷ್ಟವಶಾತ್, ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ ‘ಭಾರತದ ಬ್ರಹ್ಮಾಸ್ತ್ರ’ (ಹಿಂದೂ ಪುರಾಣಗಳಲ್ಲಿ ಹೆಸರಿಸಲಾಗಿರುವ ಅತ್ಯಂತ ಶಕ್ತಿಶಾಲಿ ಅಸ್ತ್ರ) ಎಂದು ಕರೆಯಲಾಗುವ ಬ್ರಹ್ಮೋಸ್ ಕ್ಷಿಪಣಿಯಲ್ಲಿ ಯಾವುದೇ ಸಿಡಿತಲೆಗಳನ್ನು ಅಳವಡಿಸಲಾಗಿರಲಿಲ್ಲ.

ಅದರಲ್ಲಿ ಯಾವುದೇ ಸಿಡಿತಲೆಗಳು ಇಲ್ಲದ ಕಾರಣ ಮತ್ತು ಬ್ರಹ್ಮೋಸ್ ಪಾಕಿಸ್ತಾನದ ಜನ ರಹಿತ ಪ್ರದೇಶದಲ್ಲಿ ಪತನಗೊಂಡ ಕಾರಣ, ಯಾವುದೇ ಆಸ್ತಿಪಾಸ್ತಿ, ಪ್ರಾಣಹಾನಿ ಉಂಟಾದ ವರದಿ ಬಂದಿರಲಿಲ್ಲ.

ಇದನ್ನೂ ಓದಿ: ಆತಿಥ್ಯಕ್ಕೆ ಐಎಎಸ್, ವಿಪಕ್ಷ ಶಾಸಕರ ಅಮಾನತು; ಕರ್ನಾಟಕ ಶಾಸಕಾಂಗ ಇತಿಹಾಸಕ್ಕೆ ಕಪ್ಪುಚುಕ್ಕೆಯಾಯ್ತೇ ವಿದ್ಯಮಾನ?

ಆದರೆ, ಪಾಕಿಸ್ತಾನದ ಒಳಗೆ ಬರುತ್ತಿದ್ದ, ಅಪಾಯದ ಸಂಕೇತ ಎನ್ನುವಂತಿದ್ದ ಕ್ಷಿಪಣಿಯನ್ನು ಗುರುತಿಸುವಲ್ಲಿ ಪಾಕಿಸ್ತಾನಿ ವಾಯು ರಕ್ಷಣಾ ವ್ಯವಸ್ಥೆ ಸಂಪೂರ್ಣ ವೈಫಲ್ಯ ಅನುಭವಿಸಿದ್ದು ನವದೆಹಲಿಯ ಸೇನಾ ನೆಲೆಗೆ ಭಾರೀ ಸಂತೋಷ ನೀಡಿತ್ತು.

ಈ ಬ್ರಹ್ಮೋಸ್ ಕ್ಷಿಪಣಿಯ ಆಕಸ್ಮಿಕ ಪ್ರಯೋಗದ ಪ್ರಕರಣ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಗುರುತಿಸಲು ಮತ್ತು ಅದನ್ನು ಹೊಡೆದುರುಳಿಸಲು ಪಾಕಿಸ್ತಾನ ಸಾಮರ್ಥ್ಯ ಹೊಂದಿಲ್ಲದಿರುವುದನ್ನು ಎತ್ತಿ ತೋರಿಸಿತ್ತು.

ಭಾರತದ ಮಿಲಿಟರಿ ತಜ್ಞರ ಪ್ರಕಾರ, ಬ್ರಹ್ಮೋಸ್ ಕ್ಷಿಪಣಿಯ ಸೂಪರ್‌ಸಾನಿಕ್ ವೇಗ ಪಾಕಿಸ್ತಾನಿ ರೇಡಾರ್‌ಗಳಿಗೆ ಅದನ್ನು ಗುರುತಿಸಲು ಸಾಧ್ಯವಾಗದಂತೆ ಮಾಡುತ್ತದೆ. ಪಾಕಿಸ್ತಾನದಲ್ಲಿ ಪತನಗೊಂಡ, ಭೂ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ (ಗಂಟೆಗೆ 3,430 ಕಿಲೋಮೀಟರ್) ವೇಗದಲ್ಲಿ ಚಲಿಸಬಲ್ಲದು.

ಪಾಕಿಸ್ತಾನದ ಮಿಲಿಟರಿ ಚಿತ್ರಣವನ್ನು ಗಮನಿಸುವುದಾದರೆ, ಪಾಕಿಸ್ತಾನದ ಬಳಿ ತನ್ನ ವಾಯು ರಕ್ಷಣೆಗಾಗಿ ಪ್ರಸ್ತುತ ಎಚ್‌ಕ್ಯು-9 ಭೂಮಿಯಿಂದ ಗಾಳಿಗೆ ದಾಳಿ ನಡೆಸುವ (ಎಸ್‌ಎಎಂ) ಕ್ಷಿಪಣಿಗಳಿವೆ. ಇದನ್ನು ಪಾಕಿಸ್ತಾನ ತನ್ನ ಸಾರ್ವಕಾಲಿಕ ಮಿತ್ರ ಚೀನಾದೊಡನೆ 2015ರಲ್ಲಿ ನಡೆಸಿದ ಒಪ್ಪಂದದ ಅನ್ವಯ ಪಡೆದುಕೊಂಡಿದೆ. ಅಂತಿಮವಾಗಿ ಪಾಕಿಸ್ತಾನಿ ಸೇನೆ ಇದನ್ನು 2021ರಲ್ಲಿ ಸೇನೆಗೆ ಸೇರ್ಪಡೆಗೊಳಿಸಿತು.

ಆದರೆ, ಚೀನಾದ ಎಚ್‌ಕ್ಯು-9 ಸರ್ಫೇಸ್ ಟು ಏರ್ (ಎಸ್ಎಎಂ) ಕ್ಷಿಪಣಿಗಳು ಪ್ರತಿ ಗಂಟೆಗೆ 3,000 ಕಿಲೋಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಬರುವ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿಲ್ಲ. ಇದರಿಂದಾಗಿ, ಎಚ್‌ಕ್ಯು-9 ಎಸ್ಎಎಂ ಒಳ ಬರುತ್ತಿದ್ದ ಬ್ರಹ್ಮೋಸ್ ಕ್ಷಿಪಣಿಯನ್ನು ಗುರುತಿಸಲು ವಿಫಲವಾಗಿ, ಬ್ರಹ್ಮೋಸ್ ಪಾಕಿಸ್ತಾನದ ನೆಲದಲ್ಲಿ ಬೀಳುವಂತಾಯಿತು.

ಬ್ರಹ್ಮೋಸ್ ಕ್ಷಿಪಣಿಯನ್ನು ಗುರುತಿಸುವುದು ಏಕೆ ಕಷ್ಟಕರ?

ಭಾರತದ ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಓ) ಮತ್ತು ರಷ್ಯಾದ ಎನ್‌ಪಿಓ ಮಷಿನೊಸ್ಟ್ರೊಯೆನಿಯಾ ಸಂಸ್ಥೆಗಳ ಸಹಯೋಗದಿಂದ ನಿರ್ಮಾಣಗೊಂಡಿರುವ ಬ್ರಹ್ಮೋಸ್ ಕ್ಷಿಪಣಿ ಜಗತ್ತಿನ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ಷಿಪಣಿ ಎಂದು ಹೆಸರಾಗಿದೆ.

ಬ್ರಹ್ಮೋಸ್ ಕ್ಷಿಪಣಿಯ ಅಸಾಧಾರಣ ವೇಗದ ಕಾರಣದಿಂದ, ಅಮೆರಿಕಾದ ಪ್ಯಾಟ್ರಿಯಟ್ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಸೇರಿದಂತೆ, ಜಗತ್ತಿನಾದ್ಯಂತ ವಿವಿಧ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಸವಾಲೊಡ್ಡುತ್ತದೆ.

ಎಲ್ಲಕ್ಕೂ ಹೆಚ್ಚಾಗಿ, ಬ್ರಹ್ಮೋಸ್ ಕ್ಷಿಪಣಿಯ ಸೂಪರ್‌ಸಾನಿಕ್ ವೇಗ ಅದರ ಮಾರಕತೆಯನ್ನು ಇನ್ನಷ್ಟು ಹೆಚ್ಚಿಸಿ, ಅದರ ಸಹವರ್ತಿ, ರಷ್ಯಾದ ಓನಿಕ್ಸ್ ಕ್ಷಿಪಣಿಗೆ ಸರಿಸಮವಾಗಿಸುತ್ತದೆ. ಓನಿಕ್ಸ್ ಕ್ಷಿಪಣಿ ಉಕ್ರೇನ್‌ನಲ್ಲಿ ಸಾಧಿಸಿರುವ 100% ಯಶಸ್ಸು ಇದಕ್ಕೆ ಸಾಕ್ಷಿಯಾಗಿದೆ. ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಗೆ ಬೆದರದ ಬ್ರಹ್ಮೋಸ್ ಸಹ ಇಂತಹ ಮೇಲುಗೈಯನ್ನು ಹೊಂದಿದೆ.

ಭಾರತ ಆಕಸ್ಮಿಕವಾಗಿ ಪ್ರಯೋಗಿಸಿದ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದಲ್ಲಿ ಬಿದ್ದ ಕಾರಣದಿಂದ, ಅಲ್ಲಿನ ತಜ್ಞರಿಗೆ ಅದನ್ನು ಅರ್ಥೈಸಿಕೊಳ್ಳಲು ಸುವರ್ಣಾವಕಾಶ ಲಭ್ಯವಾಗಿತ್ತು. ಆದರೆ ಅವರಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ವೈಫಲ್ಯದ ಕಾರಣದಿಂದ, ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ಐಎಸ್ಐ) ಅಂತಿಮವಾಗಿ ಬ್ರಹ್ಮೋಸ್ ಕ್ಷಿಪಣಿಗೆ ಸಂಬಂಧಿಸಿದ ಭಾರತೀಯ ವಿಜ್ಞಾನಿಯನ್ನು ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆಸಿರಬಹುದು.

ಬ್ರಹ್ಮೋಸ್ ಸಾಗಿಬಂದ ಯಶಸ್ಸಿನ ಹಾದಿ

2001ರಲ್ಲಿ ಆರಂಭಿಕ ಪರೀಕ್ಷೆಗಳು ನಡೆದ ಬಳಿಕ ಬ್ರಹ್ಮೋಸ್ ಕ್ಷಿಪಣಿ ಸಾಕಷ್ಟು ಬದಲಾವಣೆಗಳಿಗೆ, ಅಭಿವೃದ್ಧಿಗೆ ಒಳಗಾಗಿದೆ. ಕಳೆದ ಎರಡು ದಶಕಗಳ ಅವಧಿಯಲ್ಲಿ, ಬ್ರಹ್ಮೋಸ್ ಕ್ಷಿಪಣಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಅದರಲ್ಲೂ ಕ್ಷಿಪಣಿಯ ವ್ಯಾಪ್ತಿ ಬಹಳಷ್ಟು ಹೆಚ್ಚಾಗಿದೆ. ಆರಂಭದಲ್ಲಿ 290 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದ ಬ್ರಹ್ಮೋಸ್, ಈಗ 450 ಕಿಲೋಮೀಟರ್‌ಗಳ ಅತ್ಯುತ್ತಮ ವ್ಯಾಪ್ತಿ ಹೊಂದಿದೆ.

ಅದಲ್ಲದೆ, ಬ್ರಹ್ಮೋಸ್ ಕ್ಷಿಪಣಿಯನ್ನು ಈಗ ಭಾರತೀಯ ವಾಯುಪಡೆಯ ಸು-30ಎಂಕೆಐ ಯುದ್ಧ ವಿಮಾನಗಳಿಂದಲೂ ಉಡಾಯಿಸಬಹುದಾಗಿದೆ. ಅದರೊಡನೆ, ಬ್ರಹ್ಮೋಸ್‌ನ ನೌಕಾಪಡೆಯ ಆವೃತ್ತಿಯನ್ನೂ ಅಭಿವೃದ್ಧಿ ಪಡಿಸಲಾಗಿದ್ದು, ಇದನ್ನು ಯುದ್ಧ ನೌಕೆಗಳು ಮತ್ತು ಸಬ್‌ಮರೀನ್‌ಗಳಿಂದಲೂ ಪರಿಣಾಮಕಾರಿಯಾಗಿ ಪ್ರಯೋಗಿಸಬಹುದಾಗಿದೆ.

ಇದಕ್ಕೆ ಪೂರಕವಾಗಿ, ಬ್ರಹ್ಮೋಸ್ ಕ್ಷಿಪಣಿಯ ಭೂ ಆವೃತ್ತಿಯೂ ಇದ್ದು, ಗಾಳಿ, ಸಮುದ್ರ ಮತ್ತು ಭೂಮಿ, ಜೊತೆಗೆ ಸಮುದ್ರದ ಆಳವೂ ಸೇರಿದಂತೆ ಎಲ್ಲ ಮಾಧ್ಯಮಗಳ ಮೂಲಕವೂ ಶತ್ರುವನ್ನು ಎದುರಿಸುವ ಕೆಲವೇ ಕ್ಷಿಪಣಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಪ್ರಸ್ತುತ ಮುಂದಿನ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿಯಾದ ಬ್ರಹ್ಮೋಸ್ ಎನ್‌ಜಿಯ ಅಭಿವೃದ್ಧಿ ನಡೆಸುತ್ತಿದೆ. ಈ ಕ್ಷಿಪಣಿಯ ಮುಂಬರುವ ಆವೃತ್ತಿ ಗಾತ್ರ ಮತ್ತು ತೂಕದಲ್ಲಿ ಹಿಂದಿನ ತಲೆಮಾರಿನ ಕ್ಷಿಪಣಿಗಳಿಗೆ ಹೋಲಿಸಿದರೆ ಸ್ವಲ್ಪ ಸಣ್ಣದಾಗಿರಲಿದೆ.

ಬ್ರಹ್ಮೋಸ್-ಎನ್‌ಜಿ ಕ್ಷಿಪಣಿಯನ್ನು ಭಾರತದ ಸ್ವದೇಶೀ ನಿರ್ಮಾಣದ ಯುದ್ಧ ವಿಮಾನವಾದ ಎಲ್‌ಸಿಎ ತೇಜಸ್‌ನಲ್ಲಿ ಅಳವಡಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯತಂತ್ರದ ನಿರ್ಧಾರ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ವೇಗದಲ್ಲಿ ತೇಜಸ್ ಅನ್ನು ಒಂದು ಮಹತ್ವದ ವಿಮಾನವನ್ನಾಗಿಸಲಿದೆ.

ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.