Trending -Late Marriages: ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?

'ಶೀಘ್ರಮೇವ ಕಲ್ಯಾಣಮಸ್ತು' ಎಂದು ಹಿಂದಿನ ಕಾಲದಲ್ಲಿ ಹಿರಿಯರು ಮನಃಪೂರ್ವಕವಾಗಿ ಕಿರಿಯರನ್ನು ಹರಸುತ್ತಿದ್ದರು. ಅದಕ್ಕೆ ತಕ್ಕಂತೆ ಮದುವೆಗಳೂ ಜರುಗುತ್ತಿದ್ದವು. ಆದರೆ ಈಗ ಕಾಲ ಹಾಗಿಲ್ಲ. ಲೇಟ್​ ಆಗಿ ಮದುವೆ ಆಗುವುದು ಲೇಟೆಸ್ಟ್​ ಟ್ರೆಂಡ್​ ಆಗಿಬಿಟ್ಟಿದೆ. ಮುಂದೆ ದೇಶದ ಅರ್ಥವ್ಯವಸ್ಥೆಗೆ ತೊಡಕಾಗಿ, ಸಾಮಾಜಿಕ ಪಿಡುಗಾಗುವ ಆತಂಕವೂ ಇದೆ. ಹಾಗಾದರೆ ತಡವಾಗಿ ಮದುವೆ ಆಗುವುದರ ಲಾಭವೇನು? ಕಷ್ಟ-ನಷ್ಟಗಳೇನು ಎಂದು ಈ ಪ್ರೀಮಿಯಂ ಲೇಖನದಲ್ಲಿ ಚರ್ಚಿಸಲಾಗಿದೆ.

Trending -Late Marriages: ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?
ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​?
Follow us
|

Updated on:Jun 27, 2024 | 5:28 PM

‘ಶೀಘ್ರಮೇವ ಕಲ್ಯಾಣಮಸ್ತು’ ಎಂದು ಹಿಂದಿನ ಕಾಲದಲ್ಲಿ ಹಿರಿಯರು ಮನಃಪೂರ್ವಕವಾಗಿ ಕಿರಿಯರನ್ನು ಹರಸುತ್ತಿದ್ದರು. ಅದಕ್ಕೆ ತಕ್ಕಂತೆ ಮದುವೆಗಳೂ ಜರುಗುತ್ತಿದ್ದವು. ಆದರೆ ಈಗ ಕಾಲ ಹಾಗಿಲ್ಲ. ಲೇಟ್​ ಆಗಿ ಮದುವೆ ಆಗುವುದು ಲೇಟೆಸ್ಟ್​ ಟ್ರೆಂಡ್​ ಆಗಿಬಿಟ್ಟಿದೆ. ಮುಂದೆ ದೇಶದ ಅರ್ಥವ್ಯವಸ್ಥೆಗೆ ತೊಡಕಾಗಿ, ಸಾಮಾಜಿಕ ಪಿಡುಗಾಗುವ ಆತಂಕವೂ ಇದೆ. ಹಾಗಾದರೆ ತಡವಾಗಿ ಮದುವೆ ಆಗುವುದರ ಲಾಭವೇನು? ಕಷ್ಟ-ನಷ್ಟಗಳೇನು ಎಂದು ಈ ಪ್ರೀಮಿಯಂ ಲೇಖನದಲ್ಲಿ ಚರ್ಚಿಸಲಾಗಿದೆ.

ರಮೇಶ್-ಶ್ರೀದೇವಿ ಎಂಬ ದಂಪತಿ ನಾಲ್ಕೈದು ವರ್ಷಗಳಿಂದ ತಮ್ಮ ಕಿರಿಯ ಮಗಳಿಗೆ ಮದುವೆ ಮಾಡಿಸುವ ಬಗ್ಗೆ ಚಿಂತನೆ ನಡೆಸಿದ್ದರು. ರಮೇಶ್ ನಿವೃತ್ತರಾಗಿ ಅದಾಗಲೇ ಆರು ವರ್ಷಗಳು ಕಳೆದಿವೆ. ಈ ಹಿಂದೆ ತಮ್ಮ ಹಿರಿಯ ಮಗಳ ಮದುವೆಯ ಸಂದರ್ಭದಲ್ಲೂ ಸೂಕ್ತ ವರ ಸಿಗದೇ ತಡವಾಗಿ ಮಡುವೆ ಮಾಡಿಕೊಟ್ಟಿದ್ದರು. ಈಗ ಚಿಕ್ಕ ಮಗುವಿನ ವಿಷಯದಲ್ಲೂ ಅದೇ ಪರಿಸ್ಥಿತಿ. ಕಿರಿ ಮಗಳಿಗೆ ಆಗಲೇ 36 ವರ್ಷಗಳು ಕಳೆದಿವೆ. ಇನ್ನೂ ಮದುವೆ ಯಾವಾಗ ಮಾಡ್ತೀರಿ ಎಂದು ಸಂಬಂಧಿಕರು, ಸ್ನೇಹಿತರು ಒಂದೇ ಸಮನೆ ಸಿಕ್ಕಿದ ಕಡೆಯೆಲ್ಲಾ ಕೇಳುತ್ತಿದ್ದರೆ ಏನು ಉತ್ತರ ನೀಡಬೇಕೆಂದು ತೋಚದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ ಆ ಹಿರಿಯ ಪೋಷಕರು. ಹೋಗಲೀ ಅದೇ ಬಂಧು ಬಾಂಧವರಾದರೂ ಆಕೆಯ ಮದುವೆ ಬಗ್ಗೆ ಪ್ರಯತ್ನಗಳನ್ನು ನಡೆಸುತ್ತಿದ್ದಾರಾ ಅಂದರೆ ಅವರೂ ಕೈಚೆಲ್ಲಿದ್ದಾರೆ. ಇನ್ನು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ಚಂದಾದಾರರಾಗಿದ್ದೇ ಬಂತೂ ಮದುವೆ ಪ್ರಸ್ತಾಪಗಳು ಯಾವುವೂ ಬಂದಿಲ್ಲ. ಹುಡುಗಿ ಸ್ಮಾರ್ಟ್ ಆಗಿದ್ದಾಳೆ; ಈಗಾಗಲೇ ಉತ್ತಮ ಕೆಲಸದಲ್ಲಿದ್ದಾಳೆ. ಸುಭದ್ರ ಆರಂಕಿ ವೇತನ ಇದೆ. ಆದರೂ ಆಕೆಗೆ ಸೂಕ್ತ ವರ ಸಿಗುವುದು ತುಂಬಾ ತುಂಬಾ ಕಷ್ಟವಾಗುತ್ತಿದೆಯಂತೆ. ಅಲ್ಲಿ ಇಲ್ಲಿ ಒಂದಷ್ಟು ಸಂಬಂಧಗಳು ಬರುತ್ತವೆ. ಆದರೆ ಈಕೆಯ ವೃತ್ತಿ ಮತ್ತು ಉದ್ಯೋಗದ ಕಾರಣದಿಂದಾಗಿ ಯಾವುದೂ ಮದುವೆ ಸಂಬಂಧದವರೆಗೂ ಮುಂದುವರಿದಿಲ್ಲ. ತಡವಾಗಿ ತೀರಾ ಈಗ ಮದುವೆಯಾಗಲು ನಿರ್ಧರಿಸಿದ್ದು, ಸೂಕ್ತ ವರ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ನಿವೃತ್ತರಾಗಿರುವ ರಮೇಶ್ ಅವರು ಈ ಹುಡುಗಿಗೂ ಮದುವೆ ಮಾಡಿಸಿ, ಬೆಂಗಳೂರು ನಗರವನ್ನು ತೊರೆದು ತಮ್ಮ ಸ್ವಂತ ಊರಿನಲ್ಲಿ ನೆಲೆಸುವ ಆಲೋಚನೆ ಹೊಂದಿದ್ದು, ನೆಮ್ಮದಿಯ ನಿವೃತ್ತ ಜೀವನ ನಡೆಸಲು ಬಯಸಿದ್ದಾರೆ. ಆದರೆ ತಮ್ಮ 66ರ ಹರೆಯದಲ್ಲೂ ಮಗಳಿಗೆ ಸೂಕ್ತ ಸಂಬಂಧಗಳು ಸಿಗದ ಚಿಂತೆಗೀಡಾಗಿದ್ದಾರೆ. ಇದು ಬಹುತೇಕ ಎಲ್ಲ ಪೋಷಕರ ಪರದಾಟಗಳು ಆಗಿವೆ.

Trending -Late Marriages: ಆದರಿದು ಯುವಜನತೆಗೆ ಅಭ್ಯಾಸವಾಗಿಬಿಟ್ಟಿದೆಯಾ?

ಇದು ಕೇವಲ ರಮೇಶ್ ದಂಪತಿಯ ಕಥೆಯಲ್ಲ. ಮಹಾನಗರಗಳಲ್ಲಿ ವಾಸಿಸುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳು ಚೆನ್ನಾಗಿ ಓದಿಕೊಂಡು, ವೃತ್ತಿಗೆ ಆದ್ಯತೆ ಕೊಟ್ಟು ಒಳ್ಳೆಯ ಉದ್ಯೋಗದಲ್ಲಿ ನೆಲೆಯೂರುತ್ತಿದ್ದಾರೆ. ಸ್ವಂತ ಕಾಲಿನ ಮೇಲೆ ನಿಂತು ಉನ್ನತ ಸ್ಥಾನಕ್ಕೇರಬೇಕೆಂಬ ಹಂಬಲದಿಂದ ಮದುವೆಯನ್ನು ಮುಂದೂಡುತ್ತಾ ಬಂದಿದ್ದಾರೆ. ಇದರಿಂದ ಸೂಕ್ತ ವಯಸ್ಸಿನಲ್ಲಿ ಮದುವೆಗಳು ನಡೆಯುತ್ತಿಲ್ಲ ಎಂಬುದು ಸುಸ್ಪಷ್ಟವಾಗಿ ಕಂಡುಬರುತ್ತಿದೆ. ಅದರ ನಂತರದ ಸಮಸ್ಯೆಯಾಗಿ, ಮದುವೆಯಾದರೂ ಸರಿಯಾದ ವಯಸ್ಸಿನಲ್ಲಿ ಮಕ್ಕಳು ಹುಟ್ಟುವುದಿಲ್ಲ. ನಮ್ಮ ದೇಶದಲ್ಲಿ ಯುವತಿಯರ ಮದುವೆಯ ಸರಾಸರಿ ವಯಸ್ಸು 24 ರಿಂದ 25 ವರ್ಷಗಳು. ಮತ್ತು ನಮ್ಮ ದೇಶದ ಕಾನೂನುಗಳು, 1955 ರ ಹಿಂದೂ ವಿವಾಹ ಕಾಯಿದೆಯು ಹುಡುಗಿಯರಿಗೆ 18 ಮತ್ತು ಹುಡುಗರಿಗೆ 21 ವರ್ಷಗಳನ್ನು ಮದುವೆ ವಯಸ್ಸೆಂದು ಜಾರಿಗೊಳಿಸಿದೆ. ವಾಸ್ತವವಾಗಿ, ಬಾಲ್ಯ ವಿವಾಹವು ಈ ದೇಶದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿತ್ತು. ಆ ಸಮಯದಲ್ಲಿ ಅದನ್ನು ನಿಗ್ರಹಿಸಲು ಸರ್ಕಾರ ನಿಗದಿಪಡಿಸಿದ ಕನಿಷ್ಠ ವಯಸ್ಸಿನ ಮಿತಿಗಳು ಇವಾಗಿವೆ. ಈ ಬಾಲ್ಯ ವಿವಾಹ ಪರಿಸ್ಥಿತಿ ಇನ್ನೂ ಹಲವಾರು ಪ್ರದೇಶಗಳಲ್ಲಿ ಮತ್ತು ಕೆಲವು ಸಮುದಾಯಗಳಲ್ಲಿ ಮುಂದುವರಿದಿದ್ದರೂ, ನಗರಗಳಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗುತ್ತಿದೆ. ಚೋದ್ಯವೆಂದರೆ, ಒಂದು ರೀತಿಯಲ್ಲಿ ಇದು ಸಂಪೂರ್ಣವಾಗಿ ಭಿನ್ನ ಬೆಳವಣಿಗೆಯಾಗಿಬಿಟ್ಟಿದೆ ಎಂದು ಹೇಳಬಹುದು. ಮಹಾನಗರಗಳಲ್ಲಿ ಬಾಲ್ಯ ವಿವಾಹದ ಬದಲು ವಿಳಂಬ ಮದುವೆ ಸರ್ವೆಸಾಧಾರಣ ಪ್ರವೃತ್ತಿಯಾಗಿ ಬೆಳೆದಿದೆ.

ಇದನ್ನೂ ಓದಿ:  ಅಲೋಪಿ ಶಂಕರಿ ಮಂದಿರ – ಈ ದೇವಸ್ಥಾನದಲ್ಲಿ ವಿಗ್ರಹವಿಲ್ಲ, ಭಕ್ತರು ತೊಟ್ಟಿಲನ್ನು ಪೂಜಿಸುತ್ತಾರೆ! ಯಾಕೆ ಗೊತ್ತಾ?

ಮದುವೆ ಎಂಬ ಸುಂದರ ಜೀವನಘಟ್ಟಕ್ಕೆ ಯುವಜನತೆ ಏಕೆ ತಡವಾಗಿ ಪ್ರವೇಶಿಸುತ್ತಿದ್ದಾರೆ ಎಂಬುದಕ್ಕೆ ಪ್ರಧಾನವಾಗಿ 2 ಕಾರಣಗಳು ಗೋಚರಿಸುತ್ತಿವೆ. ಒಂದು, ವೈಯಕ್ತಿಕ ಮಹತ್ವಾಕಾಂಕ್ಷೆಗಳು. ಮೊದಲೇ ಹೇಳಿದಂತೆ ನಗರಗಳಲ್ಲಿ ಇಂದಿನ ಯುವಕರು ಮದುವೆಯಾಗುವ ಮೊದಲು ವೃತ್ತಿ ಜೀವನದಲ್ಲಿ ಸದೃಡವಾಗಿ ನೆಲೆಗೊಳ್ಳುವುದು ಮುಖ್ಯ ಎಂದು ಭಾವಿಸುತ್ತಿದ್ದಾರೆ. ಇದರೊಂದಿಗೆ ವೃತ್ತಿಯತ್ತ ಸಂಪೂರ್ಣ ಗಮನಹರಿಸಿ ಆರ್ಥಿಕವಾಗಿ ನೆಲೆಯೂರಿದ ನಂತರವೇ ಮದುವೆಯಾಗಲು ಆಲೋಚಿಸುತ್ತಿದ್ದಾರೆ. ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವುದು ಮುಖ್ಯ ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಆದರೆ ಅವರು ಹಾಗೆ ನೆಲೆಗಾಣುವ ಹೊತ್ತಿಗೆ ಅವರ ವಯಸ್ಸು 30-35 ದಾಟುತ್ತಿದೆ. ಅನೇಕ ಯುವಜನತೆ ಸರಿಯಾದ ಕೆಲಸ, ಅದಾದ ನಂತರ ಯೋಗ್ಯ ಸಂಬಳದ ಜೊತೆಗೆ ಸೂಕ್ತ ಬಡ್ತಿಯನ್ನು ಪಡೆಯುವ ವೇಳೆಗೆ ವಯಸ್ಸು 35-38 ಕ್ಕೆ ಕಾಲಿಡುತ್ತಿದೆ.

ಹಾಗಂತ ಎಲ್ಲವೂ ಸುಸೂತ್ರವಾಗಿದ್ದು ಗೃಹಸ್ಥಾಶ್ರಮಕ್ಕೆ ಕಾಲಿಡಬಹುದಲ್ಲವಾ ಅಂದರೆ ನಿಜವಾದ ತೊಡರುಗಾಲು ಎದುರಾಗುವದೇ ಆಗ. ಚೆನ್ನಾಗಿ ಸೆಟಲ್​​ ಆಗಿರುವ ಈ ಜೀವನ ಘಟ್ಟದಲ್ಲಿ ಅವರು ತಮ್ಮ ಮಟ್ಟದ ಅಥವಾ ಅದಕ್ಕಿಂತ ಹೆಚ್ಚಿನ ವಧು-ವರರನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆ ಹುಡುಕಾಟದಲ್ಲಿ ಅದೃಷ್ಟ ಕೈಹಿಡಿದರೆ ಶೀಘ್ರಮೇವ ಕಲ್ಯಾಣಮಸ್ತು! ಆದರೆ ಇದು ಹಿಂದಿನ ಕಾಲದಲ್ಲಿ ಹಿರಿಯರು ನೀಡುತ್ತಿದ್ದ ಆಶೀರ್ವಚನವಾಗಿತ್ತು. ಈಗ ಕಾಳ ಬದಲಾಗಿದೆ. ಎಷ್ಟು ಜನರಿಗೆ ಈ ಅದೃಷ್ಟ ಬರುತ್ತದೆ? ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆ. ಒಳ್ಳೆ ಬಾಂಧವ್ಯ ಹುಡುಕುತ್ತಾ ಇನ್ನೂ ೨-೩ ವರ್ಷಗಳು ಕಳೆದುಬಿಡುತ್ತಿವೆ. ಈ ನಡುವೆ ಮದುವೆಯ ವಯಸ್ಸು ದಾಟಿ ಹೆರಿಗೆಯ ವಯಸ್ಸು ಬಂದುಬಿಡುತ್ತದೆ. ಆದರೆ ಅಸಲಿಗೆ ಇನ್ನೂ ಲಗ್ನವೆಂಬುದೇ ಸಾಧ್ಯವಾಗಿರುವುದಿಲ್ಲ.

Trending -Late Marriages: ಯಾವ ವಯಸ್ಸಿನಲ್ಲಿ ಏನು ಆಗಬೇಕೋ ಅದಾದರೇನೆ ಬದುಕು ಸುಂದರ ಅಲ್ಲವೇ!?

ನಮ್ಮ ಹಿರಿಯರು ಇದನ್ನೇ ಹೇಳಿದ್ದು. ಈಗಿನ ವಿದ್ಯಮಾನ/ ಪರಿಸ್ಥಿತಿಯನ್ನು ಅವಲೋಕಿಸುವ ಸಮಾಜ ವಿಜ್ಞಾನಿಗಳೂ ಇದನ್ನೇ ಹೇಳುತ್ತಿದ್ದಾರೆ. ಎಲ್ಲ ವಿಚಾರದಲ್ಲೂ ಪಾಶ್ಚಿಮಾತ್ಯ ದೇಶಗಳ ಟ್ರೆಂಡ್ ಅನುಸರಿಸುವ ನಾವು ಮದುವೆ ವಿಚಾರದಲ್ಲೂ ಅದನ್ನೇ ಮಾಡುತ್ತಿದ್ದೇವೆ ಎಂದು ಷರಾ ಬರೆದಿದ್ದಾರೆ. ತಡವಾಗಿ ಮದುವೆಗಳಾಗುವುದೇ ಈಗಿನ ಟ್ರೆಂಡ್​, ಅದೇ ಅವರ ಪುಣ್ಯ ಎಂದು ಯವಜನತೆ ಭಾವಿಸುತ್ತಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆಯನ್ನು ಹೊಂದಿರುವ ದೇಶ ನಮ್ಮದು. ಆದರೆ ಮದುವೆ ಮಾಡಿಕೊಳ್ಳಬೇಕಾದ ವಯಸ್ಸಿನಲ್ಲಿ ಮದುವೆಯಾಗದೆ ವೃತ್ತಿ ಮತ್ತು ಉದ್ಯೋಗ ಎಂದು ತೊಡಗಿಸಿಕೊಂಡರೆ ನಂತರ ಕಷ್ಟಪಟ್ಟರೂ ಪ್ರಯೋಜನವಾಗುವುದಿಲ್ಲ ಎಂಬ ಪರಿಸ್ಥಿತಿ ಎದುರಾಗಿಬಿಡುತ್ತಿದೆ.

ಇದನ್ನೂ ಓದಿ:  ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?

ಇದರಿಂದ ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಯುವಜನತೆಯ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ನಂತರ ಅಮೆರಿಕ ಮತ್ತು ಜಪಾನ್‌ನಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಾಗುವಂತೆ ಮತ್ತು ತಲೆಮಾರುಗಳ ನಡುವೆ ಅಗಾಧ ವ್ಯತ್ಯಾಸವಿರುವಂತೆ ನಮ್ಮಲ್ಲೂ ಗಂಭೀರ ಸಮಸ್ಯೆ ಎದುರಾಗಿಬಿಡುವ ಅಪಾಯವಿದೆ. ಇದು ಮಾನವ ಸಂಬಂಧಗಳ ಮೇಲೆ ಮಾತ್ರವಲ್ಲದೆ ದೇಶದ ಆರ್ಥಿಕ ಸ್ಥಿತಿಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಮುಂಧೆ ಇದು ಸಾಮಾಜಿಕ ಪಿಡುಗಾಗಿಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಹಳೆಯ ತಲೆಮಾರಿನ ವೈದ್ಯರೊಬ್ಬರು. ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ತಲೆಮಾರಿನ ಅಂತರ ಹೆಚ್ಚಾಗಲಿದ್ದು, 65 ವರ್ಷದ ತಂದೆಗೆ ಹದಿಹರೆಯದ ಮಗ-ಮಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ ಎಂದರು. ಇದೇ ಪರಿಸ್ಥಿತಿ ಬಂದರೆ… ವಯಸ್ಸಾದ ತಂದೆ ತನ್ನ ಮಗುವಿನ ಭವಿಷ್ಯಕ್ಕೆ ಏನು ಭರವಸೆ ನೀಡಬಲ್ಲರು? ಹೇಗೆ ಆಸರೆಯಾಗಬಲ್ಲರು?

ಇಲ್ಲಿ ಇನ್ನೂ ಒಂದು ವರ್ಗದ ಯುವಜನತೆ ಇದೆ. ಅನಿವಾರ್ಯವಾಗಿ ತಮ್ಮ ವೃತ್ತಿ ಬದುಕಿನಲ್ಲಿ ನೆಲೆಗಾಣಬೇಕಾದ ಅನಿವಾರ್ಯತೆ ಅವರಿಗೆ. ಕುಟುಂಬದಲ್ಲಿ ಹಿರಿಯ ದೇಖರೇಖಿ, ಪಾಲನೆ ಪೋಷಣೆಯ ಜವಾಬ್ದಾರಿಯಿದ್ದರೆ ತಮ್ಮ ಬೆನ್ನಿಗೆ ಹುಟ್ಟಿದವರಿಗೆ ಬದುಕು ಕಟ್ಟಿಕೊಡುವ ಜವಾಬ್ದಾರಿಯನ್ನೂ ಅನಿವಾರ್ಯವಾಗಿ ಸ್ವತಃ ಹೊತ್ತುಕೊಳ್ಳುತ್ತಿದ್ದಾರೆ. ಆ ಸಾಂಸಾರಿಕ ಜವಾಬ್ದಾರಿಗಳನ್ನು ಪೂರೈಸುವ ಭರದಲ್ಲಿ ತಮ್ಮ ಸಂಸಾರ ಜೀವನ ಕಮರುವ ಅಪಾಯ ಅವರ ಎದುರಿಗೇ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು.

Trending -Late Marriages: ಇದು ದುಃಸ್ಥಿತಿ! ತಡವಾಗಿ ಮದುವೆಯಾದರೆ… ಮಕ್ಕಳಾಗುತ್ತಾ?

ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ಫಲವತ್ತತೆಯ ಪ್ರಮಾಣವು ಕ್ರಮೇಣ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ 2050ರ ವೇಳೆಗೆ ಭಾರತದ ಫಲವತ್ತತೆ ಪ್ರಮಾಣ 1.29ಕ್ಕೆ ಕುಸಿಯಲಿದೆ ಎಂದು ಮಾರ್ಚ್ 2024ರಲ್ಲಿ ಬಿಡುಗಡೆಯಾದ ಲ್ಯಾನ್ಸೆಟ್ ವರದಿ ಎಚ್ಚರಿಸಿದೆ. ಇತ್ತೀಚೆಗೆ, ಚಿಕ್ಕ ಚಿಕ್ಕ ಪಟ್ಟಣಗಳಲ್ಲಿಯೂ ಫಲವತ್ತತೆ ಕೇಂದ್ರಗಳು (ಗರ್ಭಧಾರಣೆ) ಮೊಳಕೆಯೊಡೆಯುತ್ತಿವೆ. 20 ರಿಂದ 30 ವರ್ಷ ವಯಸ್ಸಿನಲ್ಲಿ ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿ ಸಾಮರ್ಥ್ಯವು ಸಾಮಾನ್ಯವಾಗಿ ಉತ್ತಮವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. 30 ದಾಟಿದರೂ ಮದುವೆಯ ಬಗ್ಗೆ ಯೋಚಿಸದ ಇಂದಿನ ಪೀಳಿಗೆಯವರು ಮುಂದೆ ತಮ್ಮ ಮಕ್ಕಳ ಬಗ್ಗೆ ಏನಂತ ಯೋಚಿಸಬಲ್ಲರು ಎಂಬುದು ವೈದ್ಯಲೋಕದ ದುಗುಡ-ಆತಂಕದ ಪ್ರಶ್ನೆಯಾಗಿದೆ. ಇತ್ತೀಚೆಗೆ 45 ವರ್ಷ ದಾಟಿದವರೂ ಐವಿಎಫ್ ಗರ್ಭಗುಡಿಗಳಿಗೆ ಎಡತಾಕುತ್ತಿದ್ದಾರೆ.

ವಿಳಂಬವಾದ ಮದುವೆಗಳು, ಒತ್ತಡದ ವೃತ್ತಿಜೀವನಗಳು ಮತ್ತು ವೃತ್ತಿಪರ ಒತ್ತಡಗಳು ಸುಮಧುರವಾಗಬೇಕಿದ್ದ ವೈಯಕ್ತಿಕ ಜೀವನವನ್ನು ಹಾಳುಮಾಡುತ್ತಿವೆ. ವಾಸ್ತವವಾಗಿ, 30 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ವಯಸ್ಸಾದಂತೆ ಫಲವತ್ತತೆ ಸಾಮರ್ಥ್ಯ ಕ್ಷೀಣಿಸುತ್ತದೆ. ಅಂತಹವರಿಗೆ ಐವಿಎಫ್ ಚಿಕಿತ್ಸೆಗೆ ಪ್ರಯತ್ನಿಸಿದರೂ ಅವಕಾಶಗಳು ಸುಧಾರಿಸುವುದಿಲ್ಲ ಎಂದು ಹಿರಿಯ ವೈದ್ಯರೊಬ್ಬರು ಕಟುವಾಸ್ತವವನ್ನು ವಿವರಿಸಿದ್ದಾರೆ. ಆದರೆ ನಗರಗಳಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಇತ್ತೀಚೆಗೆ “ಫ್ರೀಜಿಂಗ್ ಎಗ್ಸ್” ಎಂಬ ಮತ್ತೊಂದು ಹೊಸ ವಿಧಾನದತ್ತ ತಿರುಗುತ್ತಿದ್ದಾರೆ. ಆರ್ಥಿಕ ಸಮಸ್ಯೆ ಇಲ್ಲದವರಿಗೆ ಸ್ವಲ್ಪ ಮಟ್ಟಿಗೆ ಇದು ಒಳ್ಳೆಯದೇ ಆದರೂ 40ರ ನಂತರ ಮಕ್ಕಳು ಹುಟ್ಟಿದರೆ ಸಾಕಲು ತೊಂದರೆಯಾಗುತ್ತದೆ ಎಂಬ ವಾದವೂ ಇದೆ.

Trending -Late Marriages: ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತವೆ ದೈಹಿಕ ಸಮಸ್ಯೆಗಳು

ವಿಟಮಿನ್ ಡಿ, ಕ್ಯಾಲ್ಸಿಯಂ, ಕಬ್ಬಿಣಾಂಶದ ಕೊರತೆಯು ನಮ್ಮ ದೇಶದಲ್ಲಿ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಹೆಚ್ಚು ಹೆಚ್ಚು ಸಾಮಾನ್ಯವಾಗಿದೆ ಇತ್ತೀಚೆಗೆ. ವಯಸ್ಸಾದಂತೆ ಈ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತವೆ. 30-35 ವರ್ಷ ವಯಸ್ಸಿನ ಪುರುಷರಲ್ಲಿ ಆನುವಂಶಿಕ ಸಮಸ್ಯೆಗಳು ಸ್ವಾಭಾವಿಕವಾಗಿ ಕಂಡುಬರುತ್ತವೆ. ಇವುಗಳ ಜೊತೆಗೆ ಇತ್ತೀಚಿನ ದಿನಗಳಲ್ಲಿ ಬಿಪಿ, ಸಕ್ಕರೆ ಖಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅಂತಹ ಪರಿಸ್ಥಿತಿಗಳಲ್ಲಿ ಅನಾರೋಗ್ಯದ ಪೋಷಕರು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವುದು ಹೇಗೆ? ತಡವಾಗಿ ಮದುವೆ ಆಗುವುದರಿಂದ ನಂತರ ಹುಟ್ಟುವ ಮಕ್ಕಳಲ್ಲಿ ಕ್ರೋಮೋಸೋಮಲ್ ದೋಷಗಳು ಹೆಚ್ಚಾಗಿ ಕಂಡು ಬರುತ್ತವೆ ಎಂದು ಡಾ. ವೆಂಕಟೇಶ್ ಎಂಬ ಹಿರಿಯ ವೈದ್ಯರು ಎಚ್ಚರಿಸಿದ್ದಾರೆ. ಮಹಿಳೆಯರಲ್ಲಿ ಅಂಡಾಶಯದ ಮತ್ತು ಪುರುಷರಲ್ಲಿ ವೀರ್ಯಾಣು ಕೋಶಗಳು 30 ವರ್ಷದೊಳಗೆ ಆರೋಗ್ಯಕರವಾಗಿರುತ್ತವೆ. ಅಂತಹವು ಆರೋಗ್ಯಕರವಾಗಿ ಸಂಯೋಜನೆಗೊಂಡಾಗ ಮಕ್ಕಳು ಸಹ ಆರೋಗ್ಯಕರವಾಗಿ ಜನಿಸುತ್ತವೆ. ಆದರೆ ವಯಸ್ಸು ಹೆಚ್ಚಾದಂತೆ ಅವರ ಶಕ್ತಿ ಕ್ಷೀಣಿಸುತ್ತದೆ. ಪರಿಣಾಮವಾಗಿ ವೈದ್ಯರು ಹೆಳುವಂತೆ ತಡವಾಗಿ ಜನಿಸಿದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ.

Trending -Late Marriages: ಮಾನಸಿಕ ಸಮಸ್ಯೆಗಳು

ಇದರ ಪರಿಣಾಮ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಖಂಡಿತಾ ಆಗುತ್ತದೆ ಎನ್ನುತ್ತದೆ ವೈದ್ಯ ಲೋಕ. ಮುಖ್ಯವಾಗಿ ಐವಿಎಫ್ ಮೂಲಕ ಮಕ್ಕಳನ್ನು ಪಡೆದ ದಂಪತಿಗಳು.. ಇನ್ನೊಂದು ಮಗುವನ್ನು ಹೊಂದಲು ಸಿದ್ಧರಿರುವುದಿಲ್ಲ. ಅದಕ್ಕೆ ಪೂರಕವಾಗಿ ದೇಶದಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮುಖ್ಯವಾಗಿ ದಂಪತಿಗಳಿಬ್ಬರೂ ಮನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಒಂದೇ ಮಗುವಿಗೆ ಸಾಕಷ್ಟು ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಪಾಲಕರು ಹಲವು ರೀತಿಯಲ್ಲಿ ಮಗುವನ್ನು ದೈನಂದಿನ ಜೀವನದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದರೂ ಅವರ್ಯಾರೂ ತಾಯಿಯ ಸ್ಪರ್ಶ ಮತ್ತು ತಂದೆಯ ಆರೈಕೆಗೆ ಸಮನಾಗದ ಕಾರಣ ಮಗುವಿನಲ್ಲಿ ಒಂಟಿತನ ಹೆಚ್ಚಾಗುತ್ತಿದೆ. ಇಂತಹ ಸಂದರ್ಭಗಳಿಂದಾಗಿಯೇ ಮಕ್ಕಳು ಗ್ಯಾಜೆಟ್‌ಗಳತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮವಾಗಿ, ಪೋಷಕರು ಮತ್ತು ಮಕ್ಕಳ ನಡುವಿನ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತಿವೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಲೇಟ್​ ಮ್ಯಾರೇಜ್​​​ಗಳು ಹೆಚ್ಚು ಸಾಮಾನ್ಯವಾಗಿವೆ. ಆದರೆ ಇದು ಬಹಳಷ್ಟು ದುಃಖವನ್ನು ತಂದೊಡ್ಡುತ್ತಿದೆ ಎಂದು ತೋರುತ್ತದೆ. ಸಾಮಾನ್ಯವಾಗಿ 35 ರಿಂದ 45 ವರ್ಷ ವಯಸ್ಸಿನ ನಡುವೆ ಸೋ ಕಾಲ್ಡ್​​ ಯುವಜನತೆ ವೃತ್ತಿಜೀವನದಲ್ಲಿ ಅತ್ಯುತ್ತಮವಾಗಿರುತ್ತಾರೆ. ಆ ವಯಸ್ಸಿನಲ್ಲಿ ವೃತ್ತಿ ಅಥವಾ ಉದ್ಯಮದ ಜವಾಬ್ದಾರಿಗಳು ತುಂಬಾ ಹೆಚ್ಚಿರುತ್ತವೆ. ಆದರೆ 40 ವರ್ಷಕ್ಕೆ ಮದುವೆಯಾಗಿ 42-43 ವರ್ಷಕ್ಕೆ ಮಕ್ಕಳನ್ನು ಪಡೆಯುವುದು ಹೆಚ್ಚು ಕಷ್ಟಕರವಾಗಿರುತ್ತದೆ. ಅದಲ್ಲದೆ.. ನಿವೃತ್ತಿಯಾಗುವ ಹೊತ್ತಿಗೆ ಮಕ್ಕಳು ಉನ್ನತ ವ್ಯಾಸಂಗಕ್ಕೆ ಬರುತ್ತಾರೆ. ಪ್ರಸ್ತುತ ಶಿಕ್ಷಣದ ವೆಚ್ಚ ದುಬಾರಿಯಾಗಿದೆ. ಇನ್ನು ಇದೇ ಸಮಯದಲ್ಲಿ ಪಾಲಕರ ಆದಾಯ ಕಡಿಮೆಯಾಗುತ್ತದೆ. ತಮ್ಮ ಜವಾಬ್ದಾರಿಯನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಬೇಕಾದಾಗ/ನಿಭಾಯಿಸಬೇಕಾದಾಗ ವಯಸ್ಸು ಮಾತ್ರವಲ್ಲ, ಆರೋಗ್ಯವೂ ಅವರಿಗೆ ಕೈಕೊಡುತ್ತದೆ. ಜೀವನದಲ್ಲಿ ಮುಂಚಿನಿಂದಲೂ ಆರ್ಥಿಕವಾಗಿ ಸುಸ್ಥಿರವಾಗಿದ್ದರೆ, ನಿಮಗೆ ಹೆಚ್ಚಿನ ಆರ್ಥಿಕ ಸಮಸ್ಯೆಗಳಿಲ್ಲದಿರಬಹುದು, ಆದರೆ ಮಧ್ಯಮ ವರ್ಗದವರಿಗೆ ಅದು ಕಡು ಕಷ್ಟದ ದಿನಗಳಾಗುವುದು ನಿಶ್ಚಿತ.

ಈಗ ಇನ್ನೊಂದು ಆದರ್ಶಮಯ ಪರಿಸ್ಥಿತಿಯನ್ನು ಅವಲೋಕಿಸೋಣ. ಹುಡುಗನಿಗೆ 23-25 ವರ್ಷ ವಯಸ್ಸಾಗಿದ್ದು, ಹುಡುಗಿಗೆ 22-23 ವರ್ಷ ವಯಸ್ಸಾಗಿದ್ದರೆ ಅಂತಹ ಜೋಡಿ ಮದುವೆಯಾದ ಮೇಲೆಯೂ ತಮ್ಮ ವೃತ್ತಿಯಲ್ಲಿ ನಿರತರಾಗಿ ಮಕ್ಕಳನ್ನು ಪಡೆದರೆ ಮಗುವಿಗೆ 8-9 ವರ್ಷ ವಯಸ್ಸಾದಾಗ ಅವರು ತಮ್ಮ ಕೆಲಸದಲ್ಲಿಯೂ ಹೆಚ್ಚು ಸಮರ್ಥವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಅಪ್ಪ-ಅಮ್ಮ 55 ನೇ ವಯಸ್ಸನ್ನು ತಲುಪುವ ಹೊತ್ತಿಗೆ ಮಕ್ಕಳು ಬಹುತೇಕ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ. ಇನ್ನು, ಮುಂದೆ ನಿವೃತ್ತಿಯ ವೇಳೆಗೆ ಅವರು ಯಾವುದೇ ಪ್ರಮುಖ ಜವಾಬ್ದಾರಿಗಳನ್ನು ಹೊಂದಿರುವುದಿಲ್ಲ/ ಹೊರುವ ಅಗತ್ಯವೂ ಇರುವುದಿಲ್ಲ. ಅಷ್ಟೇ ಅಲ್ಲ, ಹುಡುಗ-ಹುಡುಗಿ ಮುಂಚಿತವಾಗಿ ಮದುವೆಯಾಗುವುದರಿಂದ ಇಬ್ಬರ ನಡುವೆ ತಿಳಿವಳಿಕೆ ಮೂಡಲು ಸಾಕಷ್ಟು ಸಮಯ ಸಿಗುತ್ತದೆ. ಪರಸ್ಪರ ತಮ್ಮ ಅಭ್ಯಾಸಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ತ್ವರಿತವಾಗಿ ಮಾಡಿಕೊಂಡು ಜೀವನವನ್ನು ಸರಿದೂಗಿಸಿಕೊಳ್ಳಬಹುದು.

Trending -Late Marriages: ವಿಳಂಬ ಮದುವೆಯಿಂದ ಯಾವುದಾದರೂ ಪ್ರಯೋಜನ ಇದೆಯಾ?

ಆದರೆ ಸದ್ಯದ ಪರಿಸ್ಥಿತಿಯಲ್ಲಿ ತಡವಾಗಿ ಮದುವೆ ಆಗುವುದರಿಂದ ಒಂದಷ್ಟು ಪ್ರಯೋಜನಗಳಿವೆ ಎನ್ನುತ್ತಾರೆ ಕೆಲವರು. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿಂದಾಗಿ 40 ವರ್ಷದ ನಂತರವೂ ಸುರಕ್ಷಿತವಾಗಿ ಹೆರಿಗೆಯಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವಾಸವಿದೆ. ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ನಂತರ ಸಾಕಷ್ಟು ಆರ್ಥಿಕ ಸಂಪನ್ಮೂಲಗಳು ಲಭ್ಯವಾಗಲಿವೆ. ಇದರಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಭವಿಷ್ಯವನ್ನು ನೀಡಬಹುದು ಎಂಬುದು ಅಂತಹವರ ವಾದವಾಗಿದೆ. ಈ ಹಿಂದೆ ಮದುವೆ ವಿಷಯ ಬಂದಾಗ ಹುಡುಗ ಏನು ಮಾಡ್ತಿದ್ದಾನೆ ಎಂದು ಮಾತ್ರವೇ ಕೇಳುವ ಕಾಲವಿತ್ತು. ಆತ ಉತ್ತಮ ಸಂಪಾದನೆ ಮಾಡುತ್ತಿದ್ದಾನೆ ಎಂದರೆ ಸಾಕಿತ್ತು ಮದುವೆ ಮಾಡಿಬಿಡುತ್ತಿದ್ದರು. ಪರಿಣಾಮವಾಗಿ, ಕುಟುಂಬದಲ್ಲಿ ಏಕೈಕ ಸಂಪಾದನೆ ಮೂಲವಾಗಿ ಆರ್ಥಿಕವಾಗಿ ಹೆಚ್ಚು ಸಹಾಯವಾಗುತ್ತಿರಲಿಲ್ಲ. ಆದರೆ ಈಗ ಹುಡುಗನ ಜೊತೆಗೆ ಹುಡುಗಿ ಏನು ಮಾಡುತ್ತಿದ್ದಾಳೆ ಎಂದು ಪ್ರಶ್ನಿಸುವ ಕಾಲ ಬಂದಿದೆ. ಇಬ್ಬರೂ ಕೆಲಸ ಮಾಡುತ್ತಿದ್ದರೆ ಕುಟುಂಬ ಆರ್ಥಿಕವಾಗಿ ಸ್ಥಿರತೆ ಪಡೆಯುತ್ತದೆ. ಹಾಗಂತ ವಿಳಂಬ ಮದುವೆಯಿಂದ ಹಣಕಾಸಿನ ತೊಂದರೆಗಳು ಇಲ್ಲದಿದ್ದಾಗ… ಸಹಜವಾಗಿಯೇ ಕೆಲವು ಮಾನಸಿಕ ತೊಂದರೆಗಳೂ ಎದುರಾಗುತ್ತವೆ. ಆಗ ಇಬ್ಬರೂ ದುಡಿಯುತ್ತಿದ್ದು ಸುಸ್ಥಿರ ಹಣಕಾಸಿನಿಂದಾಗಿ, ಆರೋಗ್ಯ ತಾಪತ್ರಯಗಳನ್ನು ನಿವಾರಿಸಿಇಕೊಂಡು ಸಂತೋಷವಾಗಿರಬಹುದು. ಅಲ್ಲದೆ ತಡವಾದ ಮದುವೆಗಳಿಂದಾಗಿ ಇಬ್ಬರಲ್ಲೂ ವಯಸ್ಸಿನ ವಿಷಯದಲ್ಲಿ ಕೆಲವು ಪ್ರಬುದ್ಧತೆ ಕಂಡುಬರುತ್ತದೆ. ಇದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ಸಣ್ಣಪುಟ್ಟ ವಿಷಯಕ್ಕೆಲ್ಲ ತಲೆಕೆಡಿಸಿಕೊಳ್ಲದೆ, ಹೊಂದಿಕೊಂಡ ನಂತರ ಯಾವುದೇ ತೊಂದರೆಗಳು ಎದುರಾಗುವ ಲಕ್ಷಣಗಳು ಇರುವುದಿಲ್ಲ.

ಆರ್ಥಿಕ ಸಬಲತೆ ಇದ್ದಾಗ ಮಕ್ಕಳನ್ನು ಬೆಳೆಸುವುದು ಕೂಡ ದೊಡ್ಡ ಸಮಸ್ಯೆಯಲ್ಲ ಎಂದು ಹೇಳುತ್ತಾರೆ. ಆರ್ಥಿಕ ಸ್ಥಿರತೆಯು ಆರೋಗ್ಯಕರ ಜೀವನವಕ್ಕೆ ಊರುಗೋಲಾಗುತ್ತದೆ. ಇದೆಲ್ಲದರ ಪರಿಣಾಮವಾಗಿ ವೃದ್ಧಾಪ್ಯದಲ್ಲಿಯೂ ಪರಸ್ಪರ ಇಷ್ಟಪಟ್ಟು ಹೊಂದಾಣಿಕೆಯಿಂದ ಜೀವನ ಸಾಗಿಸಲು ಹೆಚ್ಚು ಅವಕಾಶವಿರುತ್ತದೆ ಎಂಬ ಅಭಿಪ್ರಾಯವಿದೆ.

ಆದರೆ ಮದು ಎಂಬುದು ನಿಜಕ್ಕೂ ಸಂಪೂರ್ಣವಾಗಿ ವೈಯಕ್ತಿಕ ವಿಷಯವಾಗಿದೆ. ಈ ವಿಚಾರದಲ್ಲಿ ಅವರ ಭವಿಷ್ಯ, ಆರ್ಥಿಕ ಪರಿಸ್ಥಿತಿ ಮತ್ತು ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲಿ ಪರಸ್ಪರ ಹೋಲಿಕೆ ಮಾಡಲು ಸಾಧ್ಯವಿಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆ ನೆಮ್ಮದಿಯ ಜೀವನ ನಡೆಸುವುದರ ಜೊತೆಜೊತೆಗೆ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬಹುದು ಎನ್ನುತ್ತಾರೆ ಅನುಭವಸ್ಥರು.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Thu, 27 June 24

ತಾಜಾ ಸುದ್ದಿ
ಪರಿಷತ್ ನಲ್ಲಿ ಸಿದ್ದರಾಮಯ್ಯ ಮತ್ತು ಬೋಜೇಗೌಡ ನಡುವೆ ದೋಸ್ತಿ ಮಾತುಕತೆ!
ಪರಿಷತ್ ನಲ್ಲಿ ಸಿದ್ದರಾಮಯ್ಯ ಮತ್ತು ಬೋಜೇಗೌಡ ನಡುವೆ ದೋಸ್ತಿ ಮಾತುಕತೆ!
ಹಿಮದಿಂದ ಮುಚ್ಚಿಕೊಂಡ ಜಗತ್ತಿನ ಅತಿ ಎತ್ತರದ ಶಿವನ ದೇವಸ್ಥಾನ
ಹಿಮದಿಂದ ಮುಚ್ಚಿಕೊಂಡ ಜಗತ್ತಿನ ಅತಿ ಎತ್ತರದ ಶಿವನ ದೇವಸ್ಥಾನ
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಪ್ರೀತಿ ಪ್ರಾರಂಭದಲ್ಲೇ ಸೋನಲ್-ತರುಣ್ ಪ್ರೀ-ವೆಡ್ಡಿಂಗ್ ವಿಡಿಯೋ
ಪ್ರೀತಿ ಪ್ರಾರಂಭದಲ್ಲೇ ಸೋನಲ್-ತರುಣ್ ಪ್ರೀ-ವೆಡ್ಡಿಂಗ್ ವಿಡಿಯೋ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ