ದೀಪದ ಕೆಳಗೆ ಕತ್ತಲೆ ಅಂತಾರೆ! ಆದರೆ ಮಣ್ಣಿನ ದೀಪ ತಯಾರಿಸುವವರ ಬಾಳು ಇನ್ನೂ ಭಾರಿ ಕಗ್ಗತ್ತಲೆಯಲ್ಲಿ.. ಏನಿದು ವಿಷಾದದ ಸಂಗತಿ?

ಇದು ದೀಪಾವಳಿ ಕಳಕಳಿ - ದೀಪಾವಳಿ ಬಂದಿದೆ. ಮೊಬೈಲ್ ಬಿಟ್ಟು ನಿಮ್ಮ ನಗರ ಊರು ಕೇರಿಗಳಲ್ಲಿ ಒಂದು ಸುತ್ತು ಹಾಕಿ. ಈ ಓಡಾಟದ ನಡುವೆ ಮಣ್ಣಿನ ಕೆಲಸ ಮಾಡುತ್ತಿರುವ ಕುಂಬಾರರನ್ನು ಹುಡುಕಿ. ಅವರ ಜೊತೆ ಮಾತನಾಡಿ. ಈ ಬಾರಿ ದೀಪಾವಳಿಗೆ ಅವರಿಂದಲೇ ಮಣ್ಣಿನ ದೀಪ ಖರೀದಿಸಿ. ನಿಮ್ಮ ಸ್ನೇಹಿತರಿಗೂ ಖರೀದಿಸಲು ತಿಳಿಯ ಹೇಳಿ -ಆದರೆ ಖಂಡಿತಾ ಅವರ ಬಳಿ ಚೌಕಾಸಿ ಮಾತ್ರ ಮಾಡಬೇಡಿ.

ದೀಪದ ಕೆಳಗೆ ಕತ್ತಲೆ ಅಂತಾರೆ! ಆದರೆ ಮಣ್ಣಿನ ದೀಪ ತಯಾರಿಸುವವರ ಬಾಳು ಇನ್ನೂ ಭಾರಿ ಕಗ್ಗತ್ತಲೆಯಲ್ಲಿ.. ಏನಿದು ವಿಷಾದದ ಸಂಗತಿ?
ದೀಪದ ಕೆಳಗೆ ಕತ್ತಲೆ ಅಂತಾರೆ; ಆದರೆ ಮಣ್ಣಿನ ದೀಪ ತಯಾರಿಸುವವರ ಬಾಳು ಇನ್ನೂ ಭಾರಿ ಕಗ್ಗತ್ತಲೆಯಲ್ಲಿ
Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on: Nov 11, 2023 | 2:47 PM

ದೀಪದ ಕೆಳಗೆ ಕತ್ತಲೆ ಅಂತಾ ಅದ್ಯಾವ ಪುಣ್ಯಾತ್ಮ ಬರೆದನೋ ಗೊತ್ತಿಲ್ಲ. ಆತ ಯಾರು ಅಂತಾ ಗೊತ್ತಾಗಿದ್ದರೆ ದೀಪದ ಕೆಳಗೆ ಕತ್ತಲೆ ಮಣ್ಣಿನ ದೀಪ ತಯಾರಿಸುವವರ ಬಾಳಿನಲ್ಲಿ ಕಗ್ಗತ್ತಲೆ ಅಂತಾನೂ ಬರೆಸಬಹುದಾಗಿತ್ತು. ಹೌದು ಇವತ್ತು ಮಣ್ಣಿನ ದೀಪ ಮಾಡುವವರನ್ನು ನಾವು ಬೂದು ಗಾಜು ಹಾಕಿ ಹುಡುಕಬೇಕು. ಮೊದಲು ಈ ರೀತಿ ಇರಲಿಲ್ಲ. ಪ್ರತಿ ಗ್ರಾಮದಲ್ಲಿ ಕುಂಬಾರರ ಕುಟುಂಬ ಇರುತಿತ್ತು. ವರ್ಷ ಪೂರ್ತಿ ಮಣ್ಣಿನ ಮಡಕೆ, ಮಣ್ಣಿನ ಕುಡಿಕೆ, ಮಣ್ಣಿನ ತಟ್ಟೆ ಮಾಡುತ್ತಿದ್ದ ಅವರು ದೀಪಾವಳಿ ಬಂತೆಂದರೆ ಸಾಕು ರಾಶಿಗಟ್ಟಲೇ ದೀಪಗಳನ್ನು ಮಾಡುತ್ತಿದ್ದರು. ಊರಿನ ಪ್ರತಿ ಮನೆಯವರು ಆ ದೀಪ ಖರೀದಿ ಮಾಡುತ್ತಿದ್ದರು. ಗ್ರಾಮದ ಪ್ರತಿ ಮನೆ ಮುಂದೆ ಇದೇ ಮಣ್ಣಿನ ದೀಪ ಬೆಳಗುತ್ತಿದ್ದವು.

ಮಣ್ಣಿನ ದೀಪ ಮಾಡುವ ಕೆಲಸ ನಾವು ನೀವು ನೋಡಿದಷ್ಟು, ಅಂದುಕೊಂಡಷ್ಟು ಸುಲಭವಲ್ಲ. ಅರೆ ನನಗೆ ಇದು ಹೇಗೆ ಗೊತ್ತು ಅನ್ನೋ ನಿಮ್ಮ ಅನುಮಾನವನ್ನು ನಾನು ಮೊದಲು ಬಗೆಹರಿಸಿ ಬಿಡುತ್ತೇನೆ‌. ಇಲ್ಲಿ ನಾನು ಬರೆಯುತ್ತಿರುವುದು ನನ್ನ ಸ್ವಂತ ಅನುಭವ. ಇದು ಕೇವಲ ನನ್ನೊಬ್ಬನ ಅನುಭವ ಮಾತ್ರವಲ್ಲ. 70 ಹಾಗೂ 80ರ ದಶಕದಲ್ಲಿ ಹುಟ್ಟಿದ ಬಹುತೇಕ ಎಲ್ಲರ ಅನುಭವಕ್ಕೆ ಖಂಡಿತವಾಗಿಯೂ ಇದು ಬಂದೇ ಬಂದಿರುತ್ತದೆ. ಮಕ್ಕಳು ನಗರದಲ್ಲಿ ಹುಟ್ಟಿ ಬೆಳೆದಿದ್ದರೂ ಕನಿಷ್ಠ ಬೇಸಿಗೆ ರಜೆ, ದಸರಾ ರಜೆಗೆ ಹಳ್ಳಿ ಕಡೆ ಮುಖ ಮಾಡುತ್ತಿದ್ದ ಕಾಲವದು. ಆಗ ನಾನು ಕಂಡಿದ್ದಕ್ಕೆ, ಈಗ ಅಕ್ಷರದ ರೂಪ ನೀಡಿದ್ದೇನೆ ಅಷ್ಟೇ. ನಮ್ಮ ತಂದೆ ತಾಯಿಯ ಊರು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನಾಗವಾರ ಗ್ರಾಮ. ಪ್ರತಿ ಬೇಸಿಗೆ ರಜೆಗೆ ನಾನು ಊರಿಗೆ ಹೋಗುತ್ತಿದೆ. ನಮ್ಮ ಮನೆಯ ಹಿಂದೆಯೇ ಕುಂಬಾರರ ಕುಟುಂಬ ವಾಸವಾಗಿತ್ತು. ನಾನು ರಜೆಗೆ ಊರಿಗೆ ಹೋದಾಗಲೆಲ್ಲ ಅಲ್ಲಿ ಹೋಗಿ ಕುಳಿತು ಬಿಡುತ್ತಿದ್ದೆ. ನನಗೆ ಅವರು ಮಡಕೆ ಮಾಡುವುದನ್ನು ನೋಡುವ ಹುಚ್ಚು. ಅವರು ಮೊದಲು ದೂರದ ಊರಿನಿಂದ ಮಣ್ಣನ್ನು ಹೊತ್ತು ತರತ್ತಿದ್ದರು. ಅದನ್ನು ಸೂಕ್ತವಾಗಿ ಹದ ಮಾಡಿಕೊಳ್ಳುತ್ತಿದ್ದರು. ‌ನಂತರ ಮಣ್ಣು ಉಂಡೆಯ ರೂಪ ತಾಳಿದಾಗ ಚಕ್ರಕ್ಕೆ ಹಾಕಿ ತಿರುಗಿಸಿ ತಮ್ಮ ಬೆರಳಿನಿಂದಲೇ ಅದಕ್ಕೆ ಅಂದ ಚೆಂದದ ಆಕರ್ಷಕ ರೂಪ ಆಕಾರ ನೀಡುತ್ತಿದ್ದರು. ಆ ಮಣ್ಣು ಅವರ ಕೈಯಲ್ಲಿ ರೂಪಗೊಳ್ಳುತ್ತಿದ್ದ ಪರಿ ನಿಜಕ್ಕೂ ಅದ್ಬುತ. ಅವರ ಕೈ ಚಲಿಸಿದಂತೆ ಅದು ಆಕರ್ಷಕ ರೂಪ‌ ಪಡೆದುಕೊಳ್ಳುತ್ತಿತ್ತು. ಅದನ್ನು ನೋಡೋದೆ ಕಣ್ಣಿಗೆ ಹಬ್ಬವಾಗಿತ್ತು. ಅವರಲ್ಲಿ ಕಲಾವಿದನನ್ನು ಮೀರಿಸುವ ನೈಪುಣ್ಯತೆ ಇರುತಿತ್ತು. ಇಂಜಿನಿಯರ್‌ಗೆ ಸರಿ ಸಮನಾದ ಚಾಕಚಕ್ಯತೆ ಕಾಣುತಿತ್ತು. ಬಿಲ್ಲುಗಾರನಿಗಿಂತಲೂ ಹೆಚ್ಚು ಏಕಾಗ್ರತೆ ಅವರಲ್ಲಿರುತಿತ್ತು. ಅಬ್ಬಾ… ಒಟ್ಟಾರೆ ಅದು ಅವರಿಗೆ ದೈವದತ್ತವಾಗಿ ಒಲಿದ ಶ್ರಮದ ಕಾಯಕವಾಗಿತ್ತು.

ಇಷ್ಟೆಲ್ಲಾ ಆದ ಮೇಲೆ ಅತ್ಯಾಕರ್ಷಕ ಕಲಾಕೃತಿ ಸಿದ್ದವಾಗುತ್ತಿತ್ತು. ನಂತರ ಬಿಳಿ ಕಲ್ಲು, ಹಾಗೂ ಮರದ ತುಂಡನ್ನು ಬಳಸಿ ಅದನ್ನು ನುಣುಪುಗೊಳಿಸಿ ಬಿಸಿಲಿಗಿಟ್ಟು ಒಣಗಿಸುತ್ತಿದ್ದರು. ಹದವಾಗಿ ಒಣಗಿದ ಮಡಕೆ ವಸ್ತುಗಳನ್ನು ಬೆಂಕಿಯಲ್ಲಿ ಸುಡತ್ತಿದ್ದರು. ಕಟ್ಟಿಗೆ, ತೆಂಗಿನ ಗರಿ ಬಳಸಿ ಮಡಿಕೆಯನ್ನು ಸುಡಲಾಗುತ್ತಿತ್ತು. ಸ್ವಲ್ಪ ಯಾಮಾರಿದರೂ ಮಾಡಿದ ಕೆಲಸ ಮಣ್ಣು ಪಾಲಾಗುತಿತ್ತು. ಇಷ್ಟೆಲ್ಲಾ ಆದ ಮೇಲೆ ನಾವು ಉಪಯೋಗಿಸುತ್ತಿದ್ದ ಮಣ್ಣಿನ ದಿನಬಳಕೆ ವಸ್ತುಗಳು ಸಿದ್ದವಾಗುತ್ತಿದ್ದವು. ಅದಕ್ಕೆ ಅಲ್ವೇ ತಿಳಿದವರು ಹೇಳಿದ್ದು ಕುಂಬಾರನಿಗೆ ಬರುಷ ದೊಣ್ಣೆಗೆ ನಿಮಿಷ ಅಂತಾ.

ಇದು ಮಣ್ಣಿ‌ ವಸ್ತುಗಳ ತಯಾರಿಕೆಯ ಹಿನ್ನೆಲೆ. ಇದೆಲ್ಲಾ ಈಗ ಇತಿಹಾಸದ ಪುಟ ಸೇರುವತ್ತ ದಾಪುಗಾಲಿಟ್ಟಿದೆ. ಈಗ ಈ ಲೇಖನ ಬರೆದ ಮುಖ್ಯ ಉದ್ದೇಶ ಅಳಿದುಳಿದಿರುವ ಈ ಕಲೆ. ಈ ಸಮುದಾಯದವರನ್ನು ಉಳಿಸುವ ಮಹತ್ತರ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ನಾನೇನು ನಿಮಗೆ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ. ಮಣ್ಣಿನ ಲೋಟದಲ್ಲಿ ನೀರು ಕುಡಿಯಿರಿ. ಮಣ್ಣಿನ ಅದು ಬಳಸಿ ಮಣ್ಣಿನ ಇದು ಬಳಸಿ ಅಂತಾ ಹೇಳುತ್ತಿಲ್ಲ. ದೀಪಾವಳಿ ಹತ್ತಿರ ಬಂದಿದೆ. ನಿಮ್ಮ ನಗರ ಊರು ಕೇರಿಗಳಲ್ಲಿ ಒಂದು ಸುತ್ತು ಹಾಕಿ. ( ಕಡ್ಡಾಯವಾಗಿ ಮೊಬೈಲ್ ಬಿಟ್ಟು ) ನಿಮ್ಮ ಯಾಂತ್ರಿಕ ಜೀವನದಲ್ಲಿ ಇದ್ದು ಇಲ್ಲದಂತಾಗಿರುವ ಅನೇಕ ಸ್ಥಳಗಳನ್ನು ಕಣ್ತುಂಬಿಕೊಳ್ಳಿ. ಈ ಓಡಾಟದ ನಡುವೆ ಮಣ್ಣಿನ ಕೆಲಸ ಮಾಡುತ್ತಿರುವ ಕುಂಬಾರರನ್ನು ಹುಡುಕಿ. ಅವರ ಜೊತೆ ಮಾತನಾಡಿ. ಅವರಿಗೊಂದು ಧೈರ್ಯ ಹೇಳಿ. ಅವರಿಂದಲೇ ಈ ಬಾರಿ ದೀಪಾವಳಿಗೆ ಮಣ್ಣಿನ ದೀಪ ಖರೀದಿಸಿ. ನಿಮ್ಮ ಸ್ನೇಹಿತರಿಗೂ ಖರೀದಿಸಲು ತಿಳಿ ಹೇಳಿ. ಆದರೆ ಖಂಡಿತಾ ಅವರ ಬಳಿ ಚೌಕಾಸಿ ಮಾತ್ರ ಮಾಡಬೇಡಿ. ನಾನಾಗಲೇ ಹೇಳಿದಂತೆ ಅವರದ್ದು ಶ್ರಮದ ಕೆಲಸ. ಕುಟುಂಬದ ಹೆಸರಿಗಾಗಿ ಕುಲ ಕಸುಬಿನ ಉಳಿವಿಗಾಗಿ ನಡೆಸುತ್ತಿರುವ ಕಾಯಕ. ಆದ್ದರಿಂದ ಅವರ ಜೊತೆ ನಾವು ಕೈ ಜೋಡಿಸೋಣ. ಈ ಬಾರಿ ದೀಪಾವಳಿಗೆ ಮಣ್ಣಿನ ದೀಪವೇ ಮನೆಗೆ ಬರಲಿ. ಅದರಲ್ಲೇ ಹಣತೆ ಬೆಳಗಲಿ. ಅಜ್ಞಾನವೆಂಬ ಕತ್ತಲೆ ಓಡಿಸಿ. ಸುಜ್ಞಾನವೆಂಬ ಬೆಳಕು ಪಸರಿಸಿ. ಈ ಮೂಲಕ ಮನೆ, ಮನಗಳಲ್ಲಿ ಶಾಂತಿ‌ ನೆಮ್ಮದಿ ನೆಲೆಸಲಿ. ನಾಡು ಸುಭೀಕ್ಷವಾಗಿರಲಿ.

Also read: ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವ ಎಲ್ಲ ಪೋಷಕರು ತಿಳಿದುಕೊಳ್ಳಬೇಕಾದ ವಿಚಾರ ಇದು, ಎಚ್ಚರ ಎಚ್ಚರ ಎಚ್ಚರ!

ಕೊನೆಯದಾಗಿ ನಮ್ಮ ಹಬ್ಬಗಳು ಮೂಢನಂಬಿಕೆ ಅಥವಾ ಆಡಂಬರದ ಆಚರಣೆಯಲ್ಲ. ಅದು ಆರ್ಥಿಕ ಸಮತೋಲನದ ತಕ್ಕಡಿ. ನಿಮಗೆ ನೆನೆಪಿದೆಯಾ ? ಹಿಂದೆ ನಮ್ಮ ಮನೆಗಳಲ್ಲಿ ದೀಪಗಳಿದ್ದರೂ ಹಬ್ಬಕ್ಕೆ ಹೊಸ ದೀಪವನ್ನು ಖರೀದಿಸಲಾಗುತ್ತಿತ್ತು. ರಾಶಿ ರಾಶಿ ಬಳೆಗಳಿದ್ದರೂ ಹಬ್ಬಕ್ಕೆ ಹೊಸ ಬಳೆಗಳೇ ಸದ್ದು ಮಾಡಬೇಕಿತ್ತು. ಕಪಾಟಿನ ತುಂಬ ಬಟ್ಟೆಗಳು ತುಂಬಿ ತುಳುಕುತ್ತಿದ್ದರೂ ನಮ್ಮೂರ ದರ್ಜಿ ರೇಷ್ಮೆ ಲಂಗ ದಾವಣಿ ಹೊಲಿದು ಕೊಡಲೇಬೇಕಿತ್ತು. ಈ ರೀತಿಯ ಸಾವಿರಾರು ಉದಾಹರಣೆಗಳ ಉದ್ದೇಶ ಒಂದೇ. ಯಾವುದೇ ಸ್ವಾರ್ಥ ಅಸೂಯೆ ದ್ವೇಷವಿಲ್ಲದೆ ಹಬ್ಬದ ನೆಪದಲ್ಲಿ ಕುಂಬಾರ ಬಳೆಗಾರ ನೇಕಾರ ದರ್ಜಿ ವರ್ತಕ ಹೀಗೆ ಇತ್ಯಾದಿ ಇತ್ಯಾದಿಗಳ ಜೀವನ ರೂಪಿಸುವುದು. ಎಷ್ಟು ಚೆಂದ ಅಲ್ಲವೇ ನಮ್ಮ ಹಬ್ಬಗಳ ಆಚರಣೆ ? ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲರಿಗೂ ದೀಪದ ಹಬ್ಬ ದೀಪಾವಳಿ ಒಳಿತು ಮಾಡಲಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ