BBL 11: ಬಿಬಿಎಲ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತೀಯ ಮೂಲದ ವೇಗಿ
Gurinder Sandhu: ಭಾರತೀಯ ಮೂಲದ ಗುರಿಂದರ್ ಸಂಧು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಪರ 2 ಏಕದಿನ ಆಡಿರುವ ಸಂಧು ಇದೀಗ ಬಿಬಿಎಲ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
Updated on:Jan 07, 2022 | 12:14 AM

ಬಿಗ್ ಬ್ಯಾಷ್ ಲೀಗ್ನ 38 ನೇ ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ತಂಡದ ವಿರುದ್ದ ಸಿಡ್ನಿ ಥಂಡರ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದು ಭಾರತೀಯ ಮೂಲದ ವೇಗಿ ಗುರಿಂದರ್ ಸಂಧು.

ಕ್ವೀನ್ಸ್‌ಲ್ಯಾಂಡ್‌ನ ಕರಾರಾ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡ ನಿಧಾನಗತಿಯ ಆರಂಭ ಪಡೆಯಿತು. ಇದಾಗ್ಯೂ 15 ಓವರ್ ವೇಳೆಗೆ ನೂರರ ಗಡಿದಾಟಿದ್ದ ಪರ್ತ್ ತಂಡಕ್ಕೆ ಆಘಾತ ನೀಡುವಲ್ಲಿ ಸಂಧು ಯಶಸ್ವಿಯಾದರು.

16 ನೇ ಓವರ್ನಲ್ಲಿ ನಾಯಕ ಆಷ್ಟನ್ ಟರ್ನರ್, ಆರೋನ್ ಹಾರ್ಡಿ ಮತ್ತು ಲಾರಿ ಇವಾನ್ಸ್ ವಿಕೆಟ್ ಉರುಳಿಸುವ ಮೂಲಕ ಗುರಿಂದರ್ ಸಂಧು ಹೊಸ ಇತಿಹಾಸ ಬರೆದರು. ಏಕೆಂದರೆ ಈ ಹಿಂದೆ 2 ಬಾರಿ ಆಸ್ಟ್ರೇಲಿಯನ್ ದೇಶೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದಿದ್ದ ಸಂಧು, ಇದೀಗ ಬಿಬಿಎಲ್ನಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶೇಷ ದಾಖಲೆಗೆ ಪಾತ್ರರಾದರು.

ಅಷ್ಟೇ ಅಲ್ಲದೆ 4 ಓವರ್ನಲ್ಲಿ ಕೇವಲ 22 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಪರಿಣಾಮ ಪರ್ತ್ ಸ್ಕಾಚರ್ಸ್ ತಂಡವು 18 ಓವರ್‌ಗಳಲ್ಲಿ ಕೇವಲ 133 ರನ್ ಗಳಿಸಲಷ್ಟೇ ಶಕ್ತರಾದರು.

ಈ ಗುರಿಯನ್ನು ಬೆನ್ನತ್ತಿದ ಸಿಡ್ನಿ ಥಂಡರ್ ತಂಡವು ಮಳೆಯ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 135 ರನ್ಗಳ ಟಾರ್ಗೆಟ್ ಪಡೆಯಿತು. 17 ಓವರ್ನಲ್ಲಿ 4 ವಿಕೆಟ್ ನಷ್ಟದೊಂದಿಗೆ ಈ ಗುರಿಯನ್ನು ಮುಟ್ಟುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಭಾರತೀಯ ಮೂಲದ ಗುರಿಂದರ್ ಸಂಧು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಪರ 2 ಏಕದಿನ ಆಡಿರುವ ಸಂಧು ಇದೀಗ ಬಿಬಿಎಲ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.

ಗುರಿಂದರ್ ಸಂಧು
Published On - 8:25 pm, Thu, 6 January 22

TV9 Kannada
Read More



