- Kannada News Photo gallery Cricket photos CSK IPL 2026 Shocker: Ayush Mahatre Out, Akash Madhwal Replaces Injured Batter
IPL 2026: ಆಯುಷ್ ಮ್ಹಾತ್ರೆ ಬದಲಿಗೆ ಸಿಎಸ್ಕೆ ತಂಡ ಸೇರಿಕೊಂಡ ಯುವ ವೇಗಿ
CSK IPL 2026 Shocker: 2026ರ ಐಪಿಎಲ್ನಲ್ಲಿ ಸಿಎಸ್ಕೆ ತಂಡಕ್ಕೆ ಗಾಯದ ಆಘಾತ ಮುಂದುವರಿದಿದೆ. ಯುವ ಬ್ಯಾಟ್ಸ್ಮನ್ ಆಯುಷ್ ಮ್ಹಾತ್ರೆ ಗಾಯದಿಂದಾಗಿ ಇಡೀ ಸೀಸನ್ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಆಕಾಶ್ ಮಧ್ವಾಲ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮಧ್ವಾಲ್ ತಮ್ಮ ಉತ್ತಮ ಬೌಲಿಂಗ್ ಪ್ರದರ್ಶನಗಳ ಮೂಲಕ ಐಪಿಎಲ್ನಲ್ಲಿ ಹೆಸರು ಮಾಡಿದ್ದಾರೆ.
Updated on: Apr 23, 2026 | 4:50 PM

2026 ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಅದರಲ್ಲೂ ತಂಡದ ಯುವ ಬ್ಯಾಟ್ಸ್ಮನ್ ಆಯುಷ್ ಮ್ಹಾತ್ರೆ ಗಾಯದಿಂದಾಗಿ ಇಡೀ ಸೀಸನ್ನಿಂದ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದರ ನಡುವೆ ಸಿಎಸ್ಕೆ ಫ್ರಾಂಚೈಸಿ ಆಯುಷ್ ಮ್ಹಾತ್ರೆ ಬದಲಿಯಾಗಿ ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಆಯುಷ್ ಮ್ಹಾತ್ರೆ ಮಂಡಿರಜ್ಜು ಸೆಳೆತಕ್ಕೆ ಒಳಗಾದರು. ಪರಿಣಾಮವಾಗಿ, ಅವರು ಐಪಿಎಲ್ನಿಂದ ಹೊರಗುಳಿಯಬೇಕಾಗಿದೆ. ಇದೀಗ ಅವರ ಬದಲಿ ಆಟಗಾರನನ್ನು ಸಿಎಸ್ಕೆ ಘೋಷಿಸಿದೆ. ಅಚ್ಚರಿಯ ಸಂಗತಿಯೆಂದರೆ ಬ್ಯಾಟರ್ ಆಗಿದ್ದ ಆಯುಷ್ ಮ್ಹಾತ್ರೆ ಬದಲಿಗೆ ಯುವ ವೇಗದ ಬೌಲರ್ನನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಯುಷ್ ಮ್ಹಾತ್ರೆ ಬದಲಿಗೆ ವೇಗದ ಬೌಲರ್ ಆಕಾಶ್ ಮಧ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಮಧ್ವಾಲ್ ಬಲಗೈ ವೇಗದ ಬೌಲರ್ ಆಗಿದ್ದು, ಈ ಹಿಂದೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ (2023 ಮತ್ತು 2024) ಮತ್ತು ರಾಜಸ್ಥಾನ್ ರಾಯಲ್ಸ್ (2025) ಪರ ಆಡಿದ್ದಾರೆ. ಇಲ್ಲಿಯವರೆಗೆ, ಅವರು 17 ಐಪಿಎಲ್ ಪಂದ್ಯಗಳನ್ನು ಆಡಿದ್ದು, 23 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಮಧ್ವಾಲ್ ಅವರ ಅತ್ಯಂತ ಸ್ಮರಣೀಯ ಪಂದ್ಯವೆಂದರೆ 2023 ರ ಆವೃತ್ತಿಯ ಎಲಿಮಿನೇಟರ್ ಪಂದ್ಯ. ಈ ಪಂದ್ಯದಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 3.3 ಓವರ್ಗಳಲ್ಲಿ 5 ರನ್ಗಳಿಗೆ 5 ವಿಕೆಟ್ಗಳನ್ನು ಕಬಳಿಸಿದ್ದರು. ಈ ಪ್ರದರ್ಶನವು ಐಪಿಎಲ್ ಪ್ಲೇಆಫ್ಗಳಲ್ಲಿ ಆಡದ ಆಟಗಾರನ ಅತ್ಯುತ್ತಮ ಅಂಕಿಅಂಶಗಳಾಗಿದ್ದು, ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಂದುಕೊಟ್ಟಿತ್ತು.

2023 ರ ಐಪಿಎಲ್ನಲ್ಲಿ ಅವರು ಆಡಿದ್ದ 8 ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ಕಬಳಿಸಿದ್ದರು. 2024 ರಲ್ಲಿ ಆಡಿದ್ದ 5 ಪಂದ್ಯಗಳಲ್ಲಿ 5 ವಿಕೆಟ್ಗಳನ್ನು ಉರುಳಿಸಿದ್ದ ಆಕಾಶ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ 4 ಪಂದ್ಯಗಳಲ್ಲಿ 4 ವಿಕೆಟ್ಗಳನ್ನು ಕಬಳಿಸಿದ್ದರು. ಡೆತ್ ಓವರ್ಗಳಲ್ಲಿ ಪರಿಣಾಮಕಾರಿ ಎನಿಸಿಕೊಂಡಿರುವ ಆಕಾಶ್, ಈ ಆವೃತ್ತಿಯ ಉಳಿದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ.




