- Kannada News Photo gallery Cricket photos Hardik Pandya's Idol Switch: Why Irfan Pathan Replaced by Wasim Jaffer?
ಇರ್ಫಾನ್ ಪಠಾಣ್ ಬಿಟ್ಟು ವಾಸಿಂ ಜಾಫರ್ ಹಿಂದೆ ಬಿದ್ದ ಹಾರ್ದಿಕ್ ಪಾಂಡ್ಯ
Hardik Pandya's Idol Switch: ಪ್ರಸ್ತುತ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ತಮ್ಮ ಆದರ್ಶ ವ್ಯಕ್ತಿಯನ್ನು ಬದಲಾಯಿಸಿದ್ದಾರೆ. ಬಾಲ್ಯದಿಂದಲೂ ಇರ್ಫಾನ್ ಪಠಾಣ್ ಅವರನ್ನು ತಮ್ಮ ಐಡಲ್ ಎಂದು ಪರಿಗಣಿಸಿದ್ದ ಹಾರ್ದಿಕ್, ಈಗ ವಾಸಿಂ ಜಾಫರ್ ಅವರ ಹೆಸರನ್ನು ಹೇಳಿದ್ದಾರೆ. ಇರ್ಫಾನ್ ಪಠಾಣ್ ಜೊತೆಗಿನ ಭಿನ್ನಾಭಿಪ್ರಾಯಗಳು ಮತ್ತು ಅವರ ಮೇಲಿನ ಟೀಕೆಗಳು ಈ ಬದಲಾವಣೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
Updated on: Mar 17, 2026 | 5:31 PM

ಪ್ರಸ್ತುತ ವಿಶ್ವ ಕ್ರಿಕೆಟ್‌ನ ಬೆಸ್ಟ್ ಆಲ್‌ರೌಂಡರ್ ಯಾರು ಎಂಬು ಪ್ರಶ್ನೆ ಬಂದರೆ ಅದಕ್ಕೆ ಹಲವರ ಉತ್ತರ ಹಾರ್ದಿಕ್ ಪಾಂಡ್ಯ ಎಂದಾಗಿರುವುದರಲ್ಲಿ ಅನುಮಾನವಿಲ್ಲ. ಸೀಮಿತ ಓವರ್ಗಳಲ್ಲಿ ಹಾರ್ದಿಕ್ರಂತಹ ಪರಿಣಾಮಕಾರಿ ಆಲ್‌ರೌಂಡರ್ ಮತ್ತೊಬ್ಬರಿಲ್ಲ. ಭಾರತ ತಂಡ ಎರಡೆರಡು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ಅಪಾರ. ಇಂತಹ ಹಾರ್ದಿಕ್ ಪಾಂಡ್ಯ ತನ್ನ ಆದರ್ಶ ವ್ಯಕ್ತಿಯನ್ನು ಬದಲಾಯಿಸಿದ್ದಾರೆ.

ವಾಸ್ತವವಾಗಿ ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಬಳಿ ನಿಮ್ಮ ಐಡಲ್ ಯಾರು ಎಂಬ ಪ್ರಶ್ನೆ ಕೇಳಿದರೆ ಅವರಿಂದ ಬರುತ್ತಿದ್ದ ಉತ್ತರ, ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆಗಿತ್ತು. ಹಾರ್ದಿಕ್ ಹಲವು ಬಾರಿ ಪಠಾಣ್ ಅವರ ಹೆಸರನ್ನು ಪುನರುಚ್ಚರಿಸಿದ್ದಾರೆ. ಆದರೆ ಇದೀಗ ಹಾರ್ದಿಕ್ ಅವರ ಐಡಲ್ ಬದಲಾಗಿದ್ದಾರೆ.

2015 ರಲ್ಲಿ ಕ್ರಿಕ್‌ಟ್ರಾಕರ್‌ಗೆ ನೀಡಿದ ಸಂದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಅವರು ಇರ್ಫಾನ್ ಪಠಾಣ್ ಅವರನ್ನು ತಮ್ಮ ಐಡಲ್ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಕಾರಣವನ್ನು ನೀಡಿದ್ದ ಹಾರ್ದಿಕ್, ‘ಇರ್ಫಾನ್ ಪಠಾಣ್, ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡುತ್ತಾರೆ. ಹೀಗಾಗಿ ಅವರು ಬೆಸ್ಟ್ ಸರಿಯಾದ ಆಲ್‌ರೌಂಡರ್. ಆದ್ದರಿಂದ ನಾನು ಬಾಲ್ಯದಿಂದಲೂ ಅವರನ್ನು ಅನುಸರಿಸುತ್ತಿದ್ದೇನೆ. ಅವರಂತೆಯೇ, ನಾನು ಕೂಡ ಆಲ್‌ರೌಂಡರ್. ಬರೋಡಾ ಪರ ಆಡುವಾಗ ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ’ ಎಂದಿದ್ದರು.

ಆದರೆ 11 ವರ್ಷಗಳ ನಂತರ ಅಂದರೆ 2026 ರಲ್ಲಿ, ಹಾರ್ದಿಕ್ ಪಾಂಡ್ಯ ಅವರನ್ನು ನಿಮ್ಮ ಐಡಲ್ ಯಾರು ಎಂದು ಮತ್ತೆ ಕೇಳಿದಾಗ, ಅವರ ಉತ್ತರ ವಿಭಿನ್ನವಾಗಿತ್ತು. ಈ ಬಾರಿ, ಇರ್ಫಾನ್ ಪಠಾಣ್ ಬದಲಿಗೆ, ಅವರು ವಾಸಿಂ ಜಾಫರ್ ಎಂದು ಹೆಸರಿಸಿದರು. ಬಿಸಿಸಿಐನ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಹಾರ್ದಿಕ್ ಪಾಂಡ್ಯ ಈ ಹೇಳಿಕೆ ನೀಡಿದ್ದು, ‘ದೇಶೀಯ ಕ್ರಿಕೆಟ್‌ನಲ್ಲಿ ಜಾಫರ್ ಅವರ ಸ್ಥಿರ ಪ್ರದರ್ಶನವು ಯಾವಾಗಲೂ ನನಗೆ ಸ್ಫೂರ್ತಿ ನೀಡಿದೆ’ ಎಂದು ಪಾಂಡ್ಯ ಹೇಳಿದರು.

ಈಗ ಪ್ರಶ್ನೆ ಏನೆಂದರೆ ಹಾರ್ದಿಕ್, ಇರ್ಫಾನ್ ಪಠಾಣ್ ಅವರ ಹೆಸರನ್ನು ಕೈಬಿಟ್ಟಿದ್ಯಾಕೆ ಎಂಬುದು. ಇದಕ್ಕೆ ಕಾರಣ, ಸಂದರ್ಶನವೊಂದರಲ್ಲಿ ಇರ್ಫಾನ್ ಪಠಾಣ್ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ, ಹಾರ್ದಿಕ್ ಪಾಂಡ್ಯ ಅವರ ದೂರಿನ ಆಧಾರದ ಮೇಲೆ 2025 ರ ಐಪಿಎಲ್ನಲ್ಲಿ ತಮ್ಮನ್ನು ವೀಕ್ಷಕ ವಿವರಣೆಗಾರನ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದಿದ್ದರು. ಇದು ಇಬ್ಬರ ನಡುವಿನ ಬಿರುಕುಗೆ ಕಾರಣವಾಗಿರಬಹುದು.

ಇದಕ್ಕೂ ಮೊದಲು, 2021 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸಮಯದಲ್ಲಿ, ಪಾಂಡ್ಯ ಸಹೋದರರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ದೀಪಕ್ ಹೂಡಾ ಬರೋಡಾ ತಂಡವನ್ನು ತೊರೆದಿದ್ದರು. ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಕೂಡ ದೀಪಕ್ ಹೂಡಾ ಅವರನ್ನು ಅಮಾನತುಗೊಳಿಸಿತ್ತು. ಈ ಕ್ರಮವನ್ನು ಪಠಾಣ್ ಸಹೋದರರು ತೀವ್ರವಾಗಿ ಖಂಡಿಸಿದ್ದರು.

ಈ ಘಟನೆಗಳ ಹೊರತಾಗಿ, ಇರ್ಫಾನ್ ಪಠಾಣ್ ಸಾಮಾಜಿಕ ವೇದಿಕೆಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಟೀಕಿಸಿದ್ದಾರೆ. ಬಹುಶಃ ಇದರಿಂದಾಗಿಯೇ ಹಾರ್ದಿಕ್, ಇರ್ಫಾನ್ ಪಾಂಡ್ಯ ಅವರನ್ನು ತಮ್ಮ ಆದರ್ಶ ವ್ಯಕ್ತಿ ಎಂದು ಪರಿಗಣಿಸದಿರಲು ಪ್ರಮುಖ ಕಾರಣವಾಗಿರಬಹುದು.
