- Kannada News Photo gallery Cricket photos How many matches India need to win to qualify for WTC Final?
WTC ಫೈನಲ್ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
Team India: ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಟಿ20 ವಿಶ್ವಕಪ್ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಎರಡು ಟ್ರೋಫಿಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಮುಂದಿರುವುದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್. ಈ ಚಾಂಪಿಯನ್ಶಿಪ್ನ ಫೈನಲ್ಗೇರಲು ಭಾರತದ ಪಾಲಿಗೆ ಮುಂದಿನ ಪಂದ್ಯಗಳು ನಿರ್ಣಾಯಕ.
Updated on: Mar 17, 2026 | 9:24 AM

2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ ಲೆಕ್ಕಾಚಾರಗಳು ಶುರುವಾಗಿದೆ. ಅದರಲ್ಲೂ ಪ್ರಸ್ತುತ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾಗೆ ಮುಂದಿನ 9 ಮ್ಯಾಚ್ಗಳು ನಿರ್ಣಾಯಕ. ಅಂದರೆ ಈ ಒಂಭತ್ತು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಬಹುದು.

ಟೀಮ್ ಇಂಡಿಯಾ ಈವರೆಗೆ ಆಡಿದ 9 ಪಂದ್ಯಗಳಲ್ಲಿ 4 ಗೆಲುವು, 4 ಸೋಲು ಹಾಗೂ 1 ಡ್ರಾ ಸಾಧಿಸಿದೆ. ಈ ಮೂಲಕ ಶೇಕಡಾವಾರು 48.15% ಅಂಕಗಳೊಂದಿಗೆ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇತ್ತ ಫೈನಲ್ ಆಡಲು ಅರ್ಹತೆ ಪಡೆಯಬೇಕಿದ್ದರೆ ಟಾಪ್-2 ನಲ್ಲಿ ಕಾಣಿಸಿಕೊಳ್ಳಬೇಕು. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡುತ್ತವೆ. ಅದರಂತೆ ಇದೀಗ 6ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಮುಂದೆ ಇನ್ನೂ 9 ಪಂದ್ಯಗಳಿವೆ.

ಈ 9 ಪಂದ್ಯಗಳಲ್ಲಿ ಭಾರತ ತಂಡವು ಕನಿಷ್ಠ 7 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಲೇಬೇಕು. ಏಳು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ ಶೇಕಡಾವಾರು ಅಂಕ 62.96% ಗೆ ತಲುಪುತ್ತದೆ. ಈ ಮೂಲಕ ಇತರೆ ತಂಡಗಳನ್ನು ಹಿಂದಿಕ್ಕಿ ಫೈನಲ್ ಹಾದಿಯನ್ನು ಸುಲಭಗೊಳಿಸಬಹುದು.

ಇನ್ನು ಟೀಮ್ ಇಂಡಿಯಾ ಉಳಿದ 9 ಮ್ಯಾಚ್ಗಳಲ್ಲಿ ಎಲ್ಲಾ ಪಂದ್ಯಗಳನ್ನು ಅಥವಾ 8 ಮ್ಯಾಚ್ಗಳನ್ನು ಗೆದ್ದುಕೊಂಡರೆ ನೇರವಾಗಿ ಫೈನಲ್‌ಗೇರಲಿದೆ. ಅಂದರೆ 9 ರಲ್ಲಿ 7 ಪಂದ್ಯ ಗೆದ್ದರೂ ಕೆಲ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಇತ್ತ 8 ಮ್ಯಾಚ್ಗಳನ್ನು ಗೆದ್ದುಕೊಂಡರೆ 64% ರಿಂದ 65% ಅಂಕಗಳನ್ನು ಪಡೆದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.

ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ಭಾರತ ತಂಡದ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತವರಿನಲ್ಲಿ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಹಾಗೆಯೇ ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧ ತಲಾ 2 ಪಂದ್ಯಗಳನ್ನಾಡಬೇಕಿದೆ.

ಇಲ್ಲಿ ಶ್ರೀಲಂಕಾ ಹಾಗೂ ನ್ಯೂಝಿಲೆಂಡ್ ತಂಡಗಳನ್ನು ಅವರ ನೆಲದಲ್ಲಿ ಎದುರಿಸಬೇಕಿರುವುದು ಟೀಮ್ ಇಂಡಿಯಾ ಮುಂದಿರುವ ದೊಡ್ಡ ಸವಾಲು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಿಂದ ಗೆಲ್ಲುವುದು ಕೂಡ ಕಷ್ಟಸಾಧ್ಯ ಎಂದೇ ಹೇಳಬಹುದು. ಹೀಗಾಗಿ ನವೆಂಬರ್ವರೆಗೆ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಲೆಕ್ಕಾಚಾರ ಮುಂದುವರೆಯಲಿದೆ ಎನ್ನಬಹುದು.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




