- TV9 Kannada Photo gallery Cricket photos India's 8 Cricket Debutants: Performance Review of New Stars in 50 Days
50 ದಿನಗಳಲ್ಲಿ 8 ಆಟಗಾರರು ಟೀಂ ಇಂಡಿಯಾ ಪರ ಪಾದಾರ್ಪಣೆ; ಎಲ್ಲರ ಪ್ರದರ್ಶನ ಹೇಗಿದೆ?
India's 8 Cricket Debutants: ಕಳೆದ 50 ದಿನಗಳಲ್ಲಿ ಟೀಂ ಇಂಡಿಯಾದ 8 ಆಟಗಾರರು ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಮಾನವ್ ಸುತಾರ್ ಟೆಸ್ಟ್ನಲ್ಲಿ ಮಿಂಚಿದರೆ, ವೈಭವ್ ಸೂರ್ಯವಂಶಿ 15 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಅರ್ಧಶತಕ ಗಳಿಸಿ ದಾಖಲೆ ಬರೆದಿದ್ದಾರೆ. ಹೊಸ ಮುಖಗಳಾದ ಹರ್ಷ್ ದುಬೆ, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್, ಸೂರ್ಯಂಶ್ ಶೆಡ್ಗೆ, ಅಶೋಕ್ ಶರ್ಮಾ ಮತ್ತು ಯಶ್ ಠಾಕೂರ್ ಅವರ ಪ್ರದರ್ಶನಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.
Updated on: Jul 26, 2026 | 3:19 PM

ಕಳೆದ 50 ದಿನಗಳಲ್ಲಿ ಟೀಂ ಇಂಡಿಯಾ ಪರ ಮೂರು ಮಾದರಿಗಳಲ್ಲಿ ಒಟ್ಟು 8 ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಟೆಸ್ಟ್ನಲ್ಲಿ ಒಬ್ಬರು, ಏಕದಿನದಲ್ಲಿ ಮೂವರು ಮತ್ತು ಟಿ20ಕ್ರಿಕೆಟ್ನಲ್ಲಿ ಐವರು ಆಟಗಾರರು ಪಾದಾರ್ಪಣೆ ಮಾಡಿದ್ದಾರೆ. ಪ್ರಸ್ತುತ, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಇಬ್ಬರು ಆಟಗಾರರು ಪಾದಾರ್ಪಣೆ ಮಾಡಿದ್ದಾರೆ. ಹಾಗಿದ್ದರೆ ಈ 8 ಆಟಗಾರರ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ(PC-BCCI)..

ಮಾನವ್ ಸುತಾರ್: ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾನವ್ ಸುತಾರ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ 33 ರನ್ಗಳಿಗೆ 6 ವಿಕೆಟ್ ಪಡೆದಿದ್ದ ಮಾನವ್ ಎರಡನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಪಡೆದರು(PC-PTI).

ಹರ್ಷ್ ದುಬೆ ಅಫ್ಘಾನಿಸ್ತಾನ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಆಡಿದ ಎರಡು ಪಂದ್ಯಗಳಲ್ಲಿ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆದರೆ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹರ್ಷ್ ನಾಲ್ಕು ವಿಕೆಟ್ಗಳನ್ನು ಕಬಳಿಸಿದರು(PC-PTI).

ಅಫ್ಘಾನಿಸ್ತಾನ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಗುರ್ನೂರ್ ಬ್ರಾರ್ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ 27 ರನ್ಗಳಿಗೆ 3 ವಿಕೆಟ್ಗಳು(PC-PTI).

ಪ್ರಿನ್ಸ್ ಯಾದವ್ ಟಿ20 ಮತ್ತು ಏಕದಿನ ಎರಡರಲ್ಲೂ ಪಾದಾರ್ಪಣೆ ಮಾಡಿದ್ದಾರೆ. ಆಡಿರುವ 6 ಟಿ20ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ಪಡೆದಿರುವ ಪ್ರಿನ್ಸ್, ಏಕದಿನ ಕ್ರಿಕೆಟ್ನಲ್ಲಿ ಆಡಿರುವ 3 ಪಂದ್ಯಗಳಲ್ಲಿ 4 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ 56 ರನ್ಗಳಿಗೆ 2 ವಿಕೆಟ್ಗಳು(PC-PTI).

ಸೂರ್ಯಂಶ್ ಶೆಡ್ಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಿದರು. ಆಡಿದ 2 ಪಂದ್ಯಗಳಲ್ಲಿ 8 ರನ್ ಕಲೆಹಾಕಿದ್ದಲ್ಲದೆ 5 ಓವರ್ ಬೌಲಿಂಗ್ ಮಾಡಿದರಾದರೂ ಒಂದೇ ಒಂದು ವಿಕೆಟ್ ಪಡೆಯಲಿಲ್ಲ(PC-PTI).

15 ವರ್ಷದ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಪ್ರವಾಸದ ಎರಡನೇ ಟಿ20ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಇದುವರೆಗೆ ಆಡಿರುವ 5 ಟಿ20ಪಂದ್ಯಗಳಲ್ಲಿ 211.32 ರ ಸ್ಟ್ರೈಕ್ ರೇಟ್ನಲ್ಲಿ 112 ರನ್ ಗಳಿಸಿದ್ದಾರೆ. ಹಾಗೆಯೇ ಜಿಂಬಾಬ್ವೆ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ(PC-PTI).

ಜಿಂಬಾಬ್ವೆ ವಿರುದ್ಧದ ಮೊದಲ ಟಿ20ಪಂದ್ಯದಲ್ಲಿ ಅಶೋಕ್ ಶರ್ಮಾ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯದ ಅಶೋಕ್ಗೆ ಎರಡನೇ ಪಂದ್ಯದಲ್ಲಿ ಅವಕಾಶ ನೀಡಲಿಲ್ಲ(PC-PTI).

ಜಿಂಬಾಬ್ವೆ ವಿರುದ್ಧದ ಎರಡನೇ ಟಿ20ಪಂದ್ಯದಲ್ಲಿ ಯಶ್ ಠಾಕೂರ್ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರು. ಅಶೋಕ್ ಶರ್ಮಾ ಬದಲಿಗೆ ಸಿಕ್ಕ ಅವಕಾಶವನ್ನು ಯಶ್ ಸದುಪಯೋಗಪಡಿಸಿಕೊಂಡರು(PC-PTI).




