- TV9 Kannada Photo gallery Cricket photos Harshit Rana Returns for IND vs AFG ODI: Kohli, Pandya Out, Rain Threatens Opener
IND vs AFG: ಮೊದಲ ಏಕದಿನ ಪಂದ್ಯದ ನಡುವೆ ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ
Harshit Rana Returns for IND vs AFG ODI: ಭಾರತ-ಅಫ್ಘಾನಿಸ್ತಾನ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಗಾಯದಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಈ ನಡುವೆ, ಯುವ ವೇಗಿ ಹರ್ಷಿತ್ ರಾಣಾ ಮೂರನೇ ಏಕದಿನ ಪಂದ್ಯದ ವೇಳೆಗೆ ತಂಡವನ್ನು ಸೇರಿಕೊಳ್ಳುವ ಮೂಲಕ ಟೀಂ ಇಂಡಿಯಾಗೆ ಸಮಾಧಾನ ತಂದಿದ್ದಾರೆ. ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿದ್ದಾರೆ.
Updated on: Jun 13, 2026 | 6:13 PM

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಮಳೆಯಿಂದಾಗಿ ಮೊದಲ ಏಕದಿನ ಪಂದ್ಯ ತಡವಾಗಿ ಆರಂಭವಾಯಿತು. ಈ ನಡುವೆ ಟೀಂ ಇಂಡಿಯಾಗೆ ಸಮಾಧಾನಕರ ಸುದ್ದಿಯೊಂದು ಸಿಕ್ಕಿದೆ. ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ಯುವ ವೇಗಿ ಹರ್ಷಿತ್ ರಾಣಾ ಇಷ್ಟರಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ (PC-PTI).

ವಾಸ್ತವವಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತ ತಂಡ ಎರಡು ಪ್ರಮುಖ ಹಿನ್ನಡೆಗಳನ್ನು ಅನುಭವಿಸಿತ್ತು. ವಿರಾಟ್ ಕೊಹ್ಲಿ ಸ್ನಾಯು ಸೆಳೆತದಿಂದಾಗಿ ಇಡೀ ಸರಣಿಯಿಂದ ಹೊರಗುಳಿದಿದ್ದರು. ಅವರ ಬದಲಿಯಾಗಿ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು (PC-PTI).

ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಗಾಯದ ಕಾರಣದಿಂದಾಗಿ ಸರಣಿಯಿಂದ ಹಿಂದೆ ಸರಿದಿದ್ದಾರೆ. ಆದಾಗ್ಯೂ ಮಂಡಳಿಯು ಅವರ ಬದಲಿ ಆಟಗಾರನನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಈ ನಡುವೆ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಹರ್ಷಿತ್ ರಾಣಾ ಏಕದಿನ ತಂಡವನ್ನು ಸೇರಬಹುದು ಎಂದು ವರದಿಯಾಗಿದೆ (PC-PTI).

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಜೂನ್ 20 ರಂದು ಚೆನ್ನೈನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಹರ್ಷಿತ್ ರಾಣಾ ತಂಡವನ್ನು ಕೂಡಿಕೊಳ್ಳಬಹುದು. ಆದಾಗ್ಯೂ ಹಾರ್ದಿಕ್ ಬದಲಿಯಾಗಿ ಆಟಗಾರನನ್ನು ಆಯ್ಕೆ ಮಾಡುವ ಬಗ್ಗೆ ಆಯ್ಕೆದಾರರು ಇನ್ನೂ ಯೋಚಿಸಿಲ್ಲ ಎಂದು ವರದಿಯಾಗಿದೆ (PC-PTI).

ಪ್ರಸ್ತುತ ಹರ್ಷಿತ್ ರಾಣಾ ದಿನಕ್ಕೆ ಒಂಬತ್ತು ರಿಂದ ಹತ್ತು ಓವರ್ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ತಮ್ಮ ವೇಗವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಹಾಗೆಯೇ ಬ್ಯಾಟಿಂಗ್ನಲ್ಲೂ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಜೂನ್ 17 ರೊಳಗೆ ಅವರು ಸಿಒಇಯಿಂದ ಹಸಿರು ನಿಶಾನೆ ಪಡೆಯುವ ನಿರೀಕ್ಷೆಯಿದ್ದು, ನಂತರ ನೇರವಾಗಿ ಚೆನ್ನೈನಲ್ಲಿ ತಂಡವನ್ನು ಸೇರಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ (PC-PTI).

ಮೊಣಕಾಲಿನ ಗಾಯದಿಂದಾಗಿ ಹರ್ಷಿತ್ ರಾಣಾ 2026 ರ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದರು. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಬಹಳ ದಿನಗಳ ನಂತರ, ಹರ್ಷಿತ್ ಟೀಂ ಇಂಡಿಯಾಕ್ಕೆ ಮರಳಲಿದ್ದಾರೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೂ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಏಷ್ಯನ್ ಗೇಮ್ಸ್ ತಂಡದ ಭಾಗವೂ ಆಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಜೊತೆಗೆ ಹರ್ಷಿತ್ ರಾಣಾ ಅವರನ್ನು ಬ್ಯಾಕಪ್ ಪೇಸ್ ಆಲ್ರೌಂಡರ್ ಆಗಿ ಬೆಳೆಸಲು ಬಿಸಿಸಿಐ ಪ್ರಯತ್ನಿಸುತ್ತಿದೆ (PC-PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



