IPL 2023: ಕೊನೆಯ ಪಂದ್ಯ RCB ಪಾಲಿಗೆ ಪ್ಲಸ್ ಪಾಯಿಂಟ್
IPL 2023 Kannada: ಇನ್ನುಳಿದ 2 ಸ್ಥಾನಗಳಿಗಾಗಿ ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವೆ ನೇರ ಪೈಪೋಟಿ ಇದೆ. ಹೀಗಾಗಿಯೇ ಅಂತಿಮವಾಗಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ತಂಡಗಳಾವುವು ಎಂಬುದೇ ಈಗ ಕುತೂಹಲ.
Updated on: May 20, 2023 | 10:06 PM

IPL 2023: ಐಪಿಎಲ್ ಸೀಸನ್ 16 ರಲ್ಲಿ ಪ್ಲೇಆಫ್ ಹಂತಕ್ಕೇರುವ ತಂಡಗಳಾವುವು ಎಂಬುದೇ ಈಗ ಕುತೂಹಲ. ಏಕೆಂದರೆ ಇದುವರೆಗಿನ ಪಂದ್ಯಗಳ ಬಳಿಕ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿರುವುದು ಕೇವಲ 2 ತಂಡಗಳು ಮಾತ್ರ.

ಅದರಂತೆ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇಆಫ್ಸ್ ಆಡುವುದು ಖಚಿತವಾಗಿದೆ. ಆದರೆ ಇನ್ನುಳಿದ 2 ಸ್ಥಾನಗಳಿಗಾಗಿ ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವೆ ನೇರ ಪೈಪೋಟಿ ಇದೆ. ಹೀಗಾಗಿಯೇ ಅಂತಿಮವಾಗಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ತಂಡಗಳಾವುವು ಎಂಬುದೇ ಈಗ ಕೌತುಕವಾಗಿ ಮಾರ್ಪಟ್ಟಿದೆ.

ಈ ಎಲ್ಲಾ ಪೈಪೋಟಿಗಳ ನಡುವೆ ಆರ್ಸಿಬಿ ಪಾಲಿಗೆ ಅದೃಷ್ಟವಂತು ಖುಲಾಯಿಸಿದೆ. ಅದೇನೆಂದರೆ ಲೀಗ್ ಹಂತದ ಕೊನೆಯ ಪಂದ್ಯವಾಡುತ್ತಿರುವುದು. ಅಂದರೆ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆದ್ದರೆ 17 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವುದು ಖಚಿತ.

ಹೀಗಾದ್ರೆ 4ನೇ ಸ್ಥಾನಕ್ಕೆ ಮಾತ್ರ ಪೈಪೋಟಿ ಕಂಡು ಬರಲಿದೆ. ಅದು ಕೂಡ ಕೊನೆಯ 2 ಪಂದ್ಯಗಳಲ್ಲಿ ಎಂಬುದು ವಿಶೇಷ. ಇಲ್ಲಿ ಲೀಗ್ ಹಂತದ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಎಸ್ಆರ್ಹೆಚ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೇರಲಿದೆ.

ಆದರೆ ಇದರ ಬೆನ್ನಲ್ಲೇ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಜಯ ಸಾಧಿಸಿದರೆ ಮಾತ್ರ ಸಾಲುವುದಿಲ್ಲ. ಬದಲಾಗಿ ಮುಂಬೈ ಇಂಡಿಯನ್ಸ್ಗಿಂತ ಉತ್ತಮ ನೆಟ್ ರನ್ ರೇಟ್ ಪಡೆಯಬೇಕಾಗುತ್ತದೆ.

ಏಕೆಂದರೆ ಉಭಯ ತಂಡಗಳು 16 ಪಾಯಿಂಟ್ಸ್ಗಳಿಸುವುದರಿಂದ ನಾಲ್ಕನೇ ಸ್ಥಾನಕ್ಕೆ ನೆಟ್ ರನ್ ರೇಟ್ ಅನ್ನು ಪರಿಗಣಿಸಬೇಕಾಗಿ ಬರಬಹುದು. ಈ ವೇಳೆ ಮುಂಬೈ ಇಂಡಿಯನ್ಸ್ಗಿಂತ ಆರ್ಸಿಬಿ ಉತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಬಹುದು.

ಇಲ್ಲಿ ಆರ್ಸಿಬಿ ಪಾಲಿನ ಅದೃಷ್ಟವೆಂದರೆ ಲೀಗ್ ಹಂತದ ಕೊನೆಯ ಪಂದ್ಯವಾಡುತ್ತಿರುವುದು. ಅಂದರೆ ಮುಂಬೈ ಇಂಡಿಯನ್ಸ್ಗಿಂತ ಉತ್ತಮ ನೆಟ್ ರನ್ ರೇಟ್ ಪಡೆಯಲು ಆರ್ಸಿಬಿ ಕೊನೆಯ ಪಂದ್ಯದಲ್ಲಿ ನಿರ್ದಿಷ್ಟ ಟಾರ್ಗೆಟ್ ಹೊಂದಿಸಿಕೊಳ್ಳಬಹುದು. ಉದಾಹರಣೆಗೆ...ಇಂತಿಷ್ಟು ಓವರ್ಗಳಲ್ಲಿ ಪಂದ್ಯ ಮುಗಿಸಿದರೆ ಮುಂಬೈಗಿಂತ ಆರ್ಸಿಬಿ ತಂಡದ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಸಿಗಲಿದೆ.

ಈ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದು ಗುಜರಾತ್ ಟೈಟಾನ್ಸ್ಗೆ ಸೋಲುಣಿಸಿ ಮುಂಬೈ ಇಂಡಿಯನ್ಸ್ ಅನ್ನು ಹಿಂದಿಕ್ಕಿ ಆರ್ಸಿಬಿಗೆ ಪ್ಲೇಆಫ್ ಪ್ರವೇಶಿಸುವ ಸುವರ್ಣಾವಕಾಶವಿದೆ. ಅದರಲ್ಲೂ ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ಆರ್ಸಿಬಿ ಪಾಲಿಗೆ ಸಿಕ್ಕ ಮತ್ತೊಂದು ಪ್ಲಸ್ ಪಾಯಿಂಟ್.

ಅಂದರೆ ಆರ್ಸಿಬಿ ಪಾಲಿನ ನಿರ್ಣಾಯಕ ಪಂದ್ಯವು ಲೀಗ್ ಹಂತದ ಕೊನೆಯ ಪಂದ್ಯವಾಗಿದ್ದು, ಅದರ ಜೊತೆಗೆ ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದ ಅಂತಿಮ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯ ಸಾಧಿಸಿ ಪ್ಲೇಆಫ್ ಪ್ರವೇಶಿಸುವುದನ್ನು ಎದುರು ನೋಡಬಹುದು.

TV9 Kannada
Read More



