- Kannada News Photo gallery Cricket photos KL Rahul's Record 152*: DC Scores 264 vs PK in IPL 2026; Highest Indian Score!
DC vs PBKS: ದಾಖಲೆಯ 152 ರನ್..! ಕನ್ನಡಿಗ ರಾಹುಲ್ ಅಬ್ಬರಕ್ಕೆ ಹಳೆಯ ದಾಖಲೆಗಳೆಲ್ಲ ಧ್ವಂಸ
KL Rahul's Record 152*: ಐಪಿಎಲ್ 2026 ರ 35 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ದಾಖಲೆಯ 264 ರನ್ ಗಳಿಸಿತು. ಕನ್ನಡಿಗ ಕೆಎಲ್ ರಾಹುಲ್ ಕೇವಲ 67 ಎಸೆತಗಳಲ್ಲಿ ಅಜೇಯ 152 ರನ್ ಗಳಿಸಿ ಮಿಂಚಿದರು. ಇದು ಅವರ 6ನೇ ಐಪಿಎಲ್ ಶತಕವಾಗಿದ್ದು, ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಅವರ ಅದ್ಭುತ ಆಟ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣವಾಯಿತು.
Updated on: Apr 25, 2026 | 5:40 PM

ಐಪಿಎಲ್ 2026 ಟೂರ್ನಮೆಂಟ್‌ನ 35 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ದಾಖಲೆಯ 264 ರನ್ ಕಲೆಹಾಕಿದೆ. ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ಕೆಎಲ್ ರಾಹುಲ್, ಆರಂಭಿಕರಾಗಿ ಕಣಕ್ಕಿಳಿದು, ಕೊನೆಯವರೆಗೂ ಅಜೇಯರಾಗಿ ಉಳಿದು ತಮ್ಮ ಐಪಿಎಲ್ ವೃತ್ತಿಜೀವನದ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಹಾಗೆಯೇ ತಮ್ಮ ಐಪಿಎಲ್ ವೃತ್ತಿಜೀವನದ ದಾಖಲೆಯ 6ನೇ ಶತಕವನ್ನು ಪೂರೈಸಿದರು.

ತಮ್ಮ ಈ ಇನ್ನಿಂಗ್ಸ್‌ನಲ್ಲಿ 67 ಎಸೆತಗಳನ್ನು ಎದುರಿಸಿದ ರಾಹುಲ್, 16 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್ ಸಹಿತ ಅಜೇಯ 152 ರನ್ ಬಾರಿಸಿದರು. ಈ ಮೂಲಕ ರಾಹುಲ್ ಇನ್ನಿಂಗ್ಸ್ವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಈ ಮೊದಲು 145 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದ ಅಭಿಷೇಕ್ ಶರ್ಮಾ ಅವರನ್ನು ರಾಹುಲ್ ಹಿಂದಿಕ್ಕಿದರು.

ಹಾಗೆಯೇ ರಾಹುಲ್ ಐಪಿಎಲ್ನ ಇನ್ನಿಂಗ್ಸ್ವೊಂದರಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ. 165 ರನ್ಗಳ ಇನ್ನಿಂಗ್ಸ್ ಆಡಿರುವ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬ್ರೆಂಡನ್ ಮೆಕಲಮ್ ಅಜೇಯ 158 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಈ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಹರಿಸಿದ ರಾಹುಲ್ ಕೇವಲ 47 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಯಾನ್ಸನ್ ಎಸೆದ 15ನೇ ಓವರ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ 6ನೇ ಶತಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡನೇ ಶತಕವನ್ನು ದಾಖಲಿಸಿದರು.




