- Kannada News Photo gallery Cricket photos Sai Sudharsan's Century: RCB Sets Unwanted IPL Record vs GT in IPL 2026 Match 34
RCB vs GT: ಅತಿ ಹೆಚ್ಚು ಶತಕಗಳು; ಅನಗತ್ಯ ದಾಖಲೆ ಬರೆದ ಆರ್‌ಸಿಬಿ
RCB Sets Unwanted IPL Record: ಐಪಿಎಲ್ 2026 ರ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ ಆರ್‌ಸಿಬಿ ವಿರುದ್ಧ ಅದ್ಭುತ ಶತಕ ಸಿಡಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ ಆರ್‌ಸಿಬಿ ತಂಡಕ್ಕೆ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಶತಕಗಳನ್ನು ಬಿಟ್ಟುಕೊಟ್ಟ ತಂಡ ಎಂಬ ಅನಗತ್ಯ ದಾಖಲೆ ತಂದೊಡ್ಡಿತು. ಇದು ಸುದರ್ಶನ್ ಅವರ ಮೂರನೇ ಐಪಿಎಲ್ ಶತಕವಾಗಿದ್ದು, ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಡಿ ತಲುಪಿದ ಸಾಧನೆ ಮಾಡಿದ್ದಾರೆ.
Updated on: Apr 24, 2026 | 10:06 PM

ಐಪಿಎಲ್ 2026 ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಯುವ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅದ್ಭುತ ಶತಕ ಬಾರಿಸುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಆದರೆ ಸುದರ್ಶನ್ ಶತಕ ಬಾರಿಸಲು ಅನುವು ಮಾಡಿಕೊಟ್ಟ ಆರ್‌ಸಿಬಿ ಐಪಿಎಲ್‌ನಲ್ಲಿ ಬೇಡದ ದಾಖಲೆಯೊಂದನ್ನು ತನ್ನ ಖಾತೆಗೆ ಹಾಕಿಕೊಂಡಿತು.

ಸಾಯಿ ಸುದರ್ಶನ್ ಆರ್‌ಸಿಬಿ ವಿರುದ್ಧ 58 ಎಸೆತಗಳಲ್ಲಿ 100 ರನ್ ಗಳಿಸಿದರು. ಅವರ ಈ ಶತಕದ ಇನ್ನಿಂಗ್ಸ್ನಲ್ಲಿ 11 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಿಟ್ಟುಕೊಟ್ಟ ತಂಡವೆಂಬ ಅನಗತ್ಯ ದಾಖಲೆಗೆ ಕೊರಳೊಡ್ಡಿದೆ.

ಸಾಯಿ ಸುದರ್ಶನ್ ಅವರ ಶತಕವು ಆರ್‌ಸಿಬಿ ವಿರುದ್ಧ ಆಟಗಾರನೊಬ್ಬ ಕಲೆಹಾಕಿದ 15ನೇ ಶತಕವಾಗಿದೆ. ಈ ಮೂಲಕ ಆರ್‌ಸಿಬಿ, ಅತಿ ಹೆಚ್ಚು ಶತಗಳನ್ನು ಹೊಡಿಸಿಕೊಂಡ ತಂಡಗಳ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ 14 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಲಾ 11 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿವೆ.

ಸಾಯಿ ಸುದರ್ಶನ್ ಬಗ್ಗೆ ಹೇಳುವುದಾದರೆ, ಇದು ಅವರ ಮೂರನೇ ಐಪಿಎಲ್ ಶತಕವಾಗಿದೆ. ಗಮನಾರ್ಹವಾಗಿ, ಸಾಯಿ ಸುದರ್ಶನ್ 2024 ರಿಂದ ಪ್ರತಿ ಆವೃತ್ತಿಯಲ್ಲೂ ತಲಾ ಒಂದು ಶತಕವನ್ನು ಬಾರಿಸಿದ್ದಾರೆ. ಹಾಗೆಯೇ ಈ ಶತಕದೊಂದಿಗೆ ಅವರು ಐಪಿಎಲ್‌ನಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2,000 ರನ್‌ಗಳನ್ನು ತಲುಪಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.




