- Kannada News Photo gallery Cricket photos IPL 2026: SRH Signs U19 Star RS Ambrish as Shivam Mavi's Replacement
IPL 2026: 42 ಪಂದ್ಯಗಳ ನಂತರ ಸನ್‌ರೈಸರ್ಸ್ ತಂಡಕ್ಕೆ ಅಂಬ್ರಿಶ್ ಆಗಮನ
IPL 2026: ಐಪಿಎಲ್ 2026 ಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಯುವ ಆಲ್‌ರೌಂಡರ್ ಆರ್‌ಎಸ್ ಅಂಬ್ರಿಶ್ ಸೇರ್ಪಡೆಯಾಗಿದ್ದಾರೆ. ಶಿವಂ ಮಾವಿ ಗಾಯಗೊಂಡ ಕಾರಣ ಅವರ ಬದಲಿಗೆ ಅಂಬ್ರಿಶ್‌ಗೆ ಅವಕಾಶ ದೊರೆತಿದೆ. ಅಂಡರ್-19 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಅಂಬ್ರಿಶ್ ಬೌಲಿಂಗ್‌ನಲ್ಲಿ ಮಿಂಚಿದ್ದರು. ಐಪಿಎಲ್‌ನಲ್ಲಿ ಅವರ ಚೊಚ್ಚಲ ಟಿ20 ಪಂದ್ಯ ಆಡುವ ನಿರೀಕ್ಷೆಯಿದ್ದು, ಕೂಚ್ ಬೆಹಾರ್ ಟ್ರೋಫಿ ವಿಜೇತ ನಾಯಕನಾಗಿ ಗಮನ ಸೆಳೆದಿದ್ದಾರೆ.
Updated on: May 01, 2026 | 7:33 PM

ಐಪಿಎಲ್ 2026 ರಲ್ಲಿ ಸೋಲು ಗೆಲುವಿನ ಸಮಾನ ರುಚಿ ನೋಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಬಂದ ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ಬೀಗುತ್ತಿದೆ. ಈ ನಡುವೆ ಈ ತಂಡಕ್ಕೆ ಹೊಸ ಆಟಗಾರನ ಆಗಮನವಾಗಿದೆ. ಆ ಆಟಗಾರನ ಹೆಸರು ಆರ್‌ಎಸ್ ಅಂಬ್ರಿಶ್.

ವಾಸ್ತವವಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ, ವೇಗಿ ಶಿವಂ ಮಾವಿ ಬದಲಿಗೆ ಆರ್‌ಎಸ್ ಅಂಬ್ರಿಶ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅಂಬ್ರಿಶ್ ಒಬ್ಬ ಆಲ್‌ರೌಂಡರ್ ಆಗಿದ್ದು, ಬಲಗೈ ಮಧ್ಯಮ ವೇಗಿ ಮತ್ತು ಎಡಗೈ ಬ್ಯಾಟ್ಸ್‌ಮನ್ ಆಗಿದ್ದಾರೆ. ಆರ್‌ಎಸ್ ಅಂಬ್ರಿಶ್ ಅಂಡರ್ -19 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಭಾಗವಾಗಿದ್ದರು.

ಅಂಡರ್ -19 ವಿಶ್ವಕಪ್‌ನಲ್ಲಿ ಅವರು ತಮ್ಮ ಬೌಲಿಂಗ್‌ನಿಂದ ಎಲ್ಲರ ಹೃದಯ ಗೆದ್ದಿದ್ದ ಅಂಬ್ರಿಶ್, ಆಡಿದ 7 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದರು. ತಮಿಳುನಾಡಿನವರಾಗಿರುವ ಅಂಬ್ರಿಶ್ ಕಳೆದ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಕೇವಲ ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 43 ರನ್ ಜೊತೆಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.

ಕುತೂಹಲಕಾರಿಯಾಗಿ, ಅಂಬ್ರಿಶ್ ಇನ್ನೂ ಟಿ20 ಪಂದ್ಯವನ್ನು ಆಡಿಲ್ಲ. ಐಪಿಎಲ್‌ನಲ್ಲಿ ಅವಕಾಶ ಸಿಕ್ಕರೆ , ಅದು ಅವರ ಚೊಚ್ಚಲ ಟಿ20 ಪಂದ್ಯವಾಗಲಿದೆ. ಶಿವಂ ಮಾವಿ ತೊಡೆಸಂದು ಗಾಯದಿಂದ ಬಳಲುತ್ತಿದ್ದ ಕಾರಣ ಅಂಬ್ರಿಶ್, 30 ಲಕ್ಷ ರೂ ಮೂಲ ಬೆಲೆಯೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ.

ಅಂಬ್ರಿಶ್, ಕೂಚ್ ಬೆಹಾರ್ ಟ್ರೋಫಿಯಲ್ಲಿ ತಮಿಳುನಾಡು ತಂಡವನ್ನು ಮುನ್ನಡೆಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಅಂಬ್ರಿಶ್ ನಾಯಕತ್ವದಲ್ಲಿ, ತಮಿಳುನಾಡು 33 ವರ್ಷಗಳ ನಂತರ ಕೂಚ್ ಬೆಹಾರ್ ಟ್ರೋಫಿಯನ್ನು ಗೆದ್ದುಕೊಂಡಿತು. ಇದೀಗ ಸನ್‌ರೈಸರ್ಸ್ ತಂಡವನ್ನು ಸೇರಿಕೊಂಡಿರುವ ಅಂಬ್ರಿಶ್‌ಗೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುತ್ತದ ಎಂಬುದನ್ನು ಕಾದುನೋಡಬೇಕಿದೆ.




