- Kannada News Photo gallery Cricket photos RCB Dominates PBKS in IPL 2026 Match 61; Shreyas Iyer's Poor Form Continues
PBKS vs RCB: ಸತತ 5ನೇ ಪಂದ್ಯದಲ್ಲೂ ಫೇಲ್; ಆರ್ಸಿಬಿ ವಿರುದ್ಧ ಯಶಸ್ಸಿನ ಹುಡುಕಾಟದಲ್ಲಿ ಶ್ರೇಯಸ್
Shreyas Iyer's Poor Form: ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 222 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಪಂಜಾಬ್ 199 ರನ್ ಗಳಿಸಿ ಸತತ ಆರನೇ ಸೋಲು ಅನುಭವಿಸಿತು, ಇದು ಪ್ಲೇಆಫ್ ಹಾದಿಯನ್ನು ಕಠಿಣಗೊಳಿಸಿತು. ನಾಯಕ ಶ್ರೇಯಸ್ ಅಯ್ಯರ್ ಸತತ ಐದನೇ ಪಂದ್ಯದಲ್ಲಿ ಒಂದಂಕಿ ಗಳಿಸಿ ಔಟಾಗಿದ್ದು, ಅವರ ಕಳಪೆ ಫಾರ್ಮ್ ಪಂಜಾಬ್ ಸೋಲಿಗೆ ಪ್ರಮುಖ ಕಾರಣವಾಯಿತು.
Updated on: May 17, 2026 | 8:06 PM

ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 61 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭಿಕ ಓವರ್‌ಗಳಲ್ಲಿ ಒತ್ತಡಕ್ಕೆ ಒಳಗಾಗಿ 20 ಓವರ್‌ಗಳಲ್ಲಿ ಕೇವಲ 199 ರನ್‌ಗಳಿಸಲಷ್ಟೇ ಶಕ್ತವಾಯಿತು.

ಇದು ಈ ಆವೃತ್ತಿಯಲ್ಲಿ ಪಂಜಾಬ್ ತಂಡದ ಸತತ ಆರನೇ ಸೋಲಾಗಿದ್ದು, ಪ್ಲೇಆಫ್‌ಗೆ ತಲುಪುವ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಇವತ್ತಿನ ಈ ಪಂದ್ಯದಲ್ಲಿ ಪಂಜಾಬ್ ತಂಡದ ಈ ಸೋಲಿಗೆ ಅಗ್ರ ಮೂವರು ಬ್ಯಾಟರ್ಗಳ ಕಳಪೆ ಪ್ರದರ್ಶನ ಅದರಲ್ಲೂ ನಾಯಕ ಶ್ರೇಯಸ್ ಅಯ್ಯರ್ ಅವರು ಸತತ 5ನೇ ಪಂದ್ಯದಲ್ಲಿ ಬೇಗನೇ ಔಟಾಗಿರುವುದು ತಂಡದ ಈ ಸೋಲಿಗೆ ಕಾರಣ ಎನ್ನಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಪಂದ್ಯದಲ್ಲಿ ಬಹುಬೇಗನೇ ಅಂದರೆ ಮೂರನೇ ಓವರ್ನಲ್ಲೇ ಬ್ಯಾಟಿಂಗ್ಗೆ ಬಂದ ಶ್ರೇಯಸ್ ಅಯ್ಯರ್ ಕೇವಲ 3 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ಔಟಾದರು. ಐಪಿಎಲ್ 2026 ರ ಕೊನೆಯ ಆರು ಇನ್ನಿಂಗ್ಸ್‌ಗಳಲ್ಲಿ ಶ್ರೇಯಸ್ ಅಯ್ಯರ್ 20 ರನ್ ಗಳಿಸಲು ವಿಫಲರಾಗುತ್ತಿರುವುದು ಇದು ನಾಲ್ಕನೇ ಬಾರಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಳೆದ ಐದು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಸಂಪೂರ್ಣ ವಿಫಲರಾಗಿದ್ದಾರೆ. ಆರ್ಸಿಬಿ ವಿರುದ್ಧ ಇದು ಶ್ರೇಯಸ್ ಅಯ್ಯರ್ ಅವರ ಸತತ ಐದನೇ ಸಿಂಗಲ್-ಡಿಜಿಟ್ ಔಟಾಗಿದೆ. ಅಯ್ಯರ್ ಈ ಹಿಂದಿನ ನಾಲ್ಕು ಇನ್ನಿಂಗ್ಸ್‌ಗಳಲ್ಲಿ, ಕ್ರಮವಾಗಿ 1 ರನ್, 2 ರನ್, 6 ರನ್ ಮತ್ತು 7 ರನ್ ಗಳಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಮ್ಮ ಮೊದಲ 14 ಇನ್ನಿಂಗ್ಸ್‌ಗಳಲ್ಲಿ ಶ್ರೇಯಸ್ ಅಯ್ಯರ್ ಕೇವಲ ಮೂರು ಬಾರಿ ಸಿಂಗಲ್-ಡಿಜಿಟ್ ಔಟಾಗಿದ್ದರು. ಆದರೀಗ ಶ್ರೇಯಸ್ಗೆ ಒಂದಂಕಿ ದಾಟಲು ಸಾಧ್ಯವಾಗುತ್ತಿಲ್ಲ. ಇನ್ನು ಈ ಐಪಿಎಲ್‌ನಲ್ಲಿ ಅಯ್ಯರ್ ಆಡಿರುವ 12 ಇನ್ನಿಂಗ್ಸ್‌ಗಳಲ್ಲಿ ಒಟ್ಟು 397 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More
