- TV9 Kannada Photo gallery Cricket photos Vaibhav Sooryavanshi: 15 Year Old Set for India Debut, Eying Sachin's Historic Mark
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ವೈಭವ್ ಅಲ್ಲ..!
Vaibhav Sooryavanshi: 15 ವರ್ಷದ ವೈಭವ್ ಸೂರ್ಯವಂಶಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಸಚಿನ್ ತೆಂಡೂಲ್ಕರ್ ಅವರ 37 ವರ್ಷ ಹಳೆಯ ಅತಿ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ಮುರಿಯಲಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ವೈಭವ್ ಸಿದ್ಧರಾಗಿದ್ದಾರೆ.
Updated on: Jun 24, 2026 | 9:17 PM

ಭಾರತದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ 15 ವರ್ಷದ ವೈಭವ್ ಅವರನ್ನು ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಗೆ ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ವೈಭವ್ ಸೂರ್ಯವಂಶಿ ಈ ಪ್ರವಾಸದಲ್ಲಿ ಆಡುವ XI ನಲ್ಲಿ ಅವಕಾಶ ಪಡೆದರೆ ಭಾರತ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ (PC-PTI).

ವಾಸ್ತವವಾಗಿ ಅತ್ಯಂತ ಕಿರಿಯ ವಯಸ್ಸಿಗೆ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರನೆಂಬ ದಾಖಲೆಯನ್ನು ವೈಭವ್ ಬರೆಯಲು ಹೊರಟಿದ್ದಾರೆ. ಇಷ್ಟು ವರ್ಷ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಆದಾಗ್ಯೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ಮುರಿಯಲು ವೈಭವ್ಗೆ ಸಾಧ್ಯವಾಗುವುದಿಲ್ಲ (PC-PTI).

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ವೈಭವ್ ಸೂರ್ಯವಂಶಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಭಾರತ ಪರ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ದಾಖಲೆಯು ಪ್ರಸ್ತುತ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ (PC-PTI).

ಸಚಿನ್ ತೆಂಡೂಲ್ಕರ್ ಅವರು 1989 ರಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದಾಗ ಅವರಿಗೆ 16 ವರ್ಷ ಮತ್ತು 205 ದಿನ ವಯಸ್ಸಾಗಿತ್ತು. ಇದೀಗ 15 ನೇ ವಯಸ್ಸಿನಲ್ಲಿ ಮೈದಾನಕ್ಕೆ ಇಳಿಯುವ ಮೂಲಕ, ವೈಭವ್ ಸಚಿನ್ ಅವರ 37 ವರ್ಷಗಳ ಹಳೆಯ ಭಾರತೀಯ ದಾಖಲೆಯನ್ನು ಮುರಿಯಲಿದ್ದಾರೆ (PC-PTI).

ವೈಭವ್ ಭಾರತದ ಅತ್ಯಂತ ಕಿರಿಯ ಆಟಗಾರನಾಗಬಹುದಾದರೂ, ಪೂರ್ಣ ಸದಸ್ಯ ರಾಷ್ಟ್ರಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆ ಪಾಕಿಸ್ತಾನದ ಹಸನ್ ರಜಾ ಬಳಿ ಇದೆ. 1996 ರಲ್ಲಿ ಮುಲ್ತಾನ್‌ನಲ್ಲಿ ಜಿಂಬಾಬ್ವೆ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದಾಗ ಹಸನ್ ರಜಾ ಕೇವಲ 14 ವರ್ಷ ಮತ್ತು 227 ದಿನಗಳ ವಯಸ್ಸಿನವರಾಗಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪೂರ್ಣ ಸದಸ್ಯ ರಾಷ್ಟ್ರಕ್ಕಾಗಿ ಆಡಿಲ್ಲ. ವೈಭವ್ ಸೂರ್ಯವಂಶಿ ಈಗ 15 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರು ಹಸನ್ ರಜಾ ಅವರ ವಿಶ್ವ ದಾಖಲೆಯನ್ನು ಮುರಿಯುವ ಸಾಧ್ಯತೆ ಕಡಿಮೆ (PC-PTI).




