RCB vs LSG: ಯಾರಿಗೆ ಸಿಗಲಿದೆ ಚಾನ್ಸ್?
IPL 2026 RCB vs LSG: ಐಪಿಎಲ್ನ 50ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕಾಗಿ ಆರ್ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಅದರಲ್ಲೂ ಮುಖ್ಯವಾಗಿ ಆರಂಭಿಕ ಜೋಡಿ ಬದಲಾಗುವ ಸಾಧ್ಯತೆಯಿದೆ.
Updated on: May 06, 2026 | 1:53 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಲಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಆರ್ಸಿಬಿ ತಂಡದ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ ಅಲಭ್ಯರಾಗಲಿದ್ದಾರೆ. (PC: IPL)

ಫಿಲ್ ಸಾಲ್ಟ್ ಅವರ ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಇಂಗ್ಲೆಂಡ್ಗೆ ಮರಳಿದ್ದಾರೆ. ಅಲ್ಲದೆ ಇಲ್ಲಿಯೇ ಚಿಕಿತ್ಸೆ ಮುಂದುವರೆಸಲಿರುವ ಅವರು ಸಂಪೂರ್ಣ ಫಿಟ್ ಆದ ಬಳಿಕ ಭಾರತಕ್ಕೆ ಹಿಂತಿರುಗಲಿದ್ದಾರೆ. ಹೀಗಾಗಿ ಆರ್ಸಿಬಿ ತಂಡದ ಮುಂದಿನ ಕೆಲ ಪಂದ್ಯಗಳಲ್ಲಿ ಸಾಲ್ಟ್ ಕಾಣಿಸಿಕೊಳ್ಳುವುದಿಲ್ಲ. (PC: IPL)

ಇತ್ತ ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಕಳೆದ ಕೆಲ ಪಂದ್ಯಗಳಲ್ಲಿ ಆರ್ಸಿಬಿ ಪರ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಆಡಿದ ಮೂರು ಇನಿಂಗ್ಸ್ಗಳಲ್ಲಿ ಬೆಥೆಲ್ ಕಲೆಹಾಕಿರುವುದು ಕೇವಲ 39 ರನ್ಗಳು ಮಾತ್ರ. ಅಲ್ಲದೆ ಪವರ್ಪ್ಲೇನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸಲಿದ್ದಾರೆಯೇ ಎಂಬುದೇ ಪ್ರಶ್ನೆ. (PC: IPL)

ಏಕೆಂದರೆ ಆರ್ಸಿಬಿ ತಂಡದಲ್ಲಿ ಪ್ರಾಪರ್ ಓಪನರ್ ಆಗಿ ಜೋರ್ಡನ್ ಕಾಕ್ಸ್ ಇದ್ದಾರೆ. ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಕಾಕ್ಸ್ ಈ ಹಿಂದೆ ದಿ ಹಂಡ್ರೆಡ್ ಲೀಗ್ ಹಾಗೂ ಇಂಟರ್ನ್ಯಾಷನಲ್ ಟಿ20 ಲೀಗ್ಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. (PC: IPL)

ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಈವರೆಗೆ 165 ಇನಿಂಗ್ಸ್ ಆಡಿರುವ ಜೋರ್ಡನ್ ಕಾಕ್ಸ್ ಬರೋಬ್ಬರಿ 4045 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಸ್ಫೋಟಕ ಶತಕ ಹಾಗೂ 21 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರ ನಡುವೆ ಅವರು 341 ಫೋರ್ ಹಾಗೂ 161 ಸಿಕ್ಸ್ಗಳನ್ನು ಸಹ ಸಿಡಿಸಿದ್ದಾರೆ. (PC: IPL)

ಹೀಗಾಗಿಯೇ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್ಮೆಂಟ್ ಜೋರ್ಡನ್ ಕಾಕ್ಸ್ ಅವರನ್ನು ಕಣಕ್ಕಿಳಿಸಲಿದ್ದಾರಾ ಎಂಬುದೇ ಕುತೂಹಲ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಕಾಕ್ಸ್ ಒಂದೇ ಒಂದು ಪಂದ್ಯವಾಡಿಲ್ಲ. ಇತ್ತ ಸಿಕ್ಕ ಅವಕಾಶಗಳಲ್ಲಿ ಬೆಥೆಲ್ ವಿಫಲರಾಗಿದ್ದು, ಹೀಗಾಗಿ ಕಾಕ್ಸ್ ಅವರನ್ನು ಕಣಕ್ಕಿಳಿಸಿ ಆರ್ಸಿಬಿ ಪ್ರಯೋಗ ನಡೆಸುವ ಸಾಧ್ಯತೆಯಿದೆ. (PC: RCB)




