- Kannada News Photo gallery PUC/SSLC Exam Stress: Dr. Parameshwara's Letter Eases Student Anxiety, Parental Pressure
ಪರೀಕ್ಷೆ ಭಯ ಬೇಡ, ಧೈರ್ಯದಿಂದ ಮುನ್ನುಗ್ಗಿ: ವಿದ್ಯಾರ್ಥಿಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಶೇಷ ಪತ್ರ
ಮಾರ್ಚ್ ಪರೀಕ್ಷೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಭಯ ನಿವಾರಿಸಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪತ್ರ ಬರೆದಿದ್ದಾರೆ. ಪೋಷಕರು ಅಂಕಗಳ ಒತ್ತಡ ಹೇರದೆ ಮಕ್ಕಳಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ. "ಶಿಕ್ಷಣವು ಸಮಾನತೆ ಹಾಗೂ ಸ್ವಾಭಿಮಾನಕ್ಕೆ ಅಸ್ತ್ರ" ಎಂದು ಹೇಳಿರುವ ಸಚಿವರು, ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಈ ಪತ್ರ ಬರೆಯಲಾಗಿದೆ.
Updated on: Feb 26, 2026 | 2:04 PM

ಮಾರ್ಚ್ ತಿಂಗಳಿನಿಂದ ಆರಂಭವಾಗಲಿರುವ ಪಿಯುಸಿ ಮತ್ತು ಎಸ್ಎಸ್ಎಲ್‍ಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಲ್ಲಿ ಮನೆಮಾಡಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಲು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿಶೇಷ ಪತ್ರ ಬರೆದು ಧೈರ್ಯ ತುಂಬಿದ್ದಾರೆ.

"ಸಮಾನತೆ ಹಾಗೂ ಸ್ವಾಭಿಮಾನಕ್ಕೆ ಶಿಕ್ಷಣವೇ ಅಸ್ತ್ರ" ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳನ್ನು ನೆನಪಿಸಿರುವ ಸಚಿವರು, ಶಿಕ್ಷಣದ ಮೂಲಕ ಬದುಕು ರೂಪಿಸಿಕೊಳ್ಳಲು ಕರೆ ನೀಡಿದ್ದಾರೆ.

"ಸೋಲು ಅಂತ್ಯವಲ್ಲ, ಯಶಸ್ಸು ಅಂತಿಮವಲ್ಲ, ವಿಫಲತೆ ಅಂತ್ಯವಲ್ಲ; ಧೈರ್ಯವೇ ನಿಜವಾದ ವಿಜಯ" ಎಂದು ಹೇಳುವ ಮೂಲಕ ಮಕ್ಕಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಲು ಯತ್ನಿಸಿದ್ದಾರೆ.

ಮಕ್ಕಳ ಮೇಲೆ ಅಂಕಗಳ ಒತ್ತಡ ಹೇರಬೇಡಿ. ಅವರ ಪ್ರಯತ್ನಕ್ಕೆ ಬೆಂಬಲ ನೀಡಿ, ಅವರ ಬೆನ್ನೆಲುಬಾಗಿ ನಿಲ್ಲಿ," ಎಂದು ಪೋಷಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ತ್ರಿವಿಧ ದಾಸೋಹಿಗಳ ನಾಡಿನ (ಸಿದ್ದಗಂಗಾ ಕ್ಷೇತ್ರ) ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿರಲಿ ಮತ್ತು ಎಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಒತ್ತಡದಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದನ್ನು ಗಮನಿಸಿ, ಅವರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಜಿಲ್ಲೆಯ ಪ್ರತಿಯೊಬ್ಬ ಪಿಯುಸಿ ವಿದ್ಯಾರ್ಥಿಗೂ ತಲುಪುವಂತೆ ಈ ಪತ್ರ ಬರೆಯಲಾಗಿದೆ.