ಧಾರವಾಡ: ಒಂದೇ ಮನೆಯಲ್ಲಿ 3000 ಗೊಂಬೆಗಳ ಪ್ರತಿಷ್ಠಾಪನೆ
ನವರಾತ್ರಿ ಹಬ್ಬದ ನಿಮಿತ್ತ ಧಾರವಾಡ ನಗರದ ಕೆಐಎಡಿಬಿ ಕಾಲನಿಯಲ್ಲಿರುವ ಚಂದ್ರಿಕಾ ಕಟ್ಟಿ ಎಂಬುವರ ಮನೆಯಲ್ಲಿ 3 ಸಾವಿರ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಚಂದ್ರಿಕಾ ಅವರು ಕಳೆದ 27 ವರ್ಷಗಳಿಂದ ಗೊಂಬೆಗಳ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ.
Updated on: Oct 06, 2024 | 8:02 PM

ನವರಾತ್ರಿ ಹಬ್ಬವನ್ನು ಹಳೇ ಮೈಸೂರು ಭಾಗ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ನವರಾತ್ರಿಗೆ ಹಳೇ ಮೈಸೂರು ಭಾಗದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಈ ಆಚರಣೆ ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಆದರೆ, ಧಾರವಾಡದ ಮನೆಯೊಂದರಲ್ಲಿ 3000 ಗೊಂಬೆಗಳನ್ನು ಕೂರಿಸಲಾಗಿದೆ.

ಧಾರವಾಡ ನಗರದ ಕೆಐಎಡಿಬಿ ಕಾಲನಿಯಲ್ಲಿರುವ ಚಂದ್ರಿಕಾ ಕಟ್ಟಿ ಎಂಬುವರ ಮನೆಯಲ್ಲಿ 3 ಸಾವಿರ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ. ದಾವಣಗೆರೆ ಮೂಲದ ಚಂದ್ರಿಕಾ ಅವರು ಕಳೆದ 27 ವರ್ಷಗಳಿಂದ ಗೊಂಬೆಗಳ ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ.

ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಆಯಾ ಗೊಂಬೆಗಳ ಮೂಲಕವೇ ಪ್ರಸ್ತುತಪಡಿಸುವ ಪ್ರಯತ್ನ ಮಾಡಲಾಗಿದೆ. ಮಣ್ಣು, ಪೇಪರ್, ಮರ, ಹಿತ್ತಾಳೆ, ಕಂಚು, ಹತ್ತಿ, ಬಟ್ಟೆ ಹಾಗೂ ಮಧುರೈ ಮಣ್ಣಿನಿಂದ ತಯಾರಿಸಿದ ಗೊಂಬೆಗಳನ್ನು ಇಡಲಾಗಿದೆ.

ಒಂದಿಷ್ಟು ಗೊಂಬೆಗಳನ್ನು ಬೇರೆ ಕಡೆಯಿಂದ ತರಿಸಿದ್ದರೆ, ಹಲವಾರು ಗೊಂಬೆಗಳನ್ನು ಕುಟುಂಬದವರೆಲ್ಲ ಸೇರಿ ತಯಾರಿಸಿದ್ದಾರೆ. ಪಟ್ಟದ ಗೊಂಬೆಗಳು, ನವದುರ್ಗೆಯರು, ಮೈಸೂರು ಜಂಬು ಸವಾರಿ ಚಿತ್ರಣ, ನಾಗರಿಕತೆ ಬೆಳೆದು ಬಂದ ವಿಧಾನ, ಸ್ವಾತಂತ್ರ್ಯ ಹೋರಾಟಗಾರರು, ರಾವಣ ದರ್ಬಾರ್ ಹೀಗೆ ಇಡೀ ಗೊಂಬೆಗಳ ಜಗತ್ತೇ ಚಂದ್ರಿಕಾ ಅವರ ಮನೆಯಲ್ಲಿ ಅನಾವರಣಗೊಂಡಿದೆ. ಒಟ್ಟು 3000 ಗೊಂಬೆಗಳನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಪೂರ್ವಜರಿಂದ ನಡೆದುಕೊಂಡು ಬಂದಿರುವ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನು ತಾವಿರುವ ಊರು ಬಿಟ್ಟು ಬೇರೆ ಕಡೆ ಬಂದರೂ ಚಂದ್ರಿಕಾ ಅವರು ಪಾಲಿಸುತ್ತಿದ್ದಾರೆ. ಗೊಂಬೆಗಳನ್ನು ತಯಾರಿಸಲು ಕುಟುಂಬ ಒಂದೂವರೆ ತಿಂಗಳು ಶ್ರಮ ಹಾಕಿದೆ.

ಉತ್ತರ ಕರ್ನಾಟಕದಲ್ಲಿ ಗೊಂಬೆ ಪ್ರತಿಷ್ಠಾಪನೆ ಹೊಸತು ಆಗಿದ್ದು, ಜನರು ಕುತೂಹಲದಿಂದಲೇ ಆಗಮಿಸಿ ವೀಕ್ಷಿಸುತ್ತಿದ್ದಾರೆ. ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿರುವುದು ಶ್ಲಾಘನೀಯವಾಗಿದೆ.

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.
Read More




