Updated on: Nov 02, 2024 | 2:19 PM
ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನೀಡಿದ ಬಿಗ್ ಆಫರ್ ಅನ್ನು ತಿರಸ್ಕರಿಸಿ ಪಂತ್ ಹರಾಜಿನಲ್ಲಿ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ. ರಿಷಭ್ ಅವರ ಇಂತಹದೊಂದು ನಿರ್ಧಾರದ ಹಿಂದಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎನ್ನಲಾಗುತ್ತಿದೆ.
ಏಕೆಂದರೆ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆಗೂ ಮುನ್ನ ರಿಷಭ್ ಪಂತ್ ಹಾಗೂ ಮಹೇಂದ್ರ ಸಿಂಗ್ ಭೇಟಿಯಾಗಿದ್ದಾರೆ. ಇದನ್ನು ಸಿಎಸ್ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಖಚಿತಪಡಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ದೊಡ್ಡ ಸುದ್ದಿಯೊಂದು ಹೊರಬೀಳಲಿದೆ ಎಂದು ಸುಳಿವು ನೀಡಿದ್ದಾರೆ.
ಖಾಸಗಿ ಚಾನೆಲ್ವೊಂದರ ಸಂವಾದದಲ್ಲಿ ಮಾತನಾಡಿದ ಸುರೇಶ್ ರೈನಾ, ನಾನು ಎಂಎಸ್ ಧೋನಿ ಅವರನ್ನು ಭೇಟಿಯಾದಾಗ, ರಿಷಬ್ ಪಂತ್ ಕೂಡ ಅಲ್ಲಿ ಹಾಜರಿದ್ದರು. ಅಲ್ಲದೆ ಇಬ್ಬರು ದೊಡ್ಡ ವಿಷಯವೊಂದರ ಬಗ್ಗೆ ಚರ್ಚಿಸಿದ್ದರು. ಹೀಗಾಗಿ ಏನೋ ದೊಡ್ಡ ಬದಲಾವಣೆಯಂತು ಆಗಲಿದೆ ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
ಈ ಬದಲಾವಣೆಯೊಂದಿಗೆ ಪ್ರಮುಖ ಆಟಗಾರೊಬ್ಬರು ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುರೇಶ್ ರೈನಾ ಸುಳಿವು ನೀಡಿದ್ದಾರೆ. ಅತ್ತ ಧೋನಿ-ಪಂತ್ ಭೇಟಿಯನ್ನು ಪ್ರಸ್ತಾಪಿಸಿ ಹೊಸ ಆಟಗಾರ ಸಿಎಸ್ಕೆಗೆ ಬರಲಿದ್ದಾರೆ ಎಂದಿರುವ ಕಾರಣ, ರಿಷಭ್ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇದೇ ಕಾರಣದಿಂದಾಗಿಯೇ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಪಂತ್ ಅವರನ್ನು ಸಿಎಸ್ಕೆ ಫ್ರಾಂಚೈಸಿಯು ದೊಡ್ಡ ಮೊತ್ತಕ್ಕೆ ಖರೀದಿಸುವುದು ಬಹುತೇಕ ಖಚಿತ ಎನ್ನಬಹುದು. ಅಲ್ಲದೆ ಮುಂಬರುವ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪಂತ್ ಮುನ್ನಡೆಸಿದರೂ ಅಚ್ಚರಿಪಡಬೇಕಿಲ್ಲ.