Updated on: Nov 03, 2022 | 8:45 AM
ನಟ ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಯಶಸ್ಸಿನ ನಂತರದಲ್ಲಿ ರಿಷಬ್ ಅವರು ದಣಿವಯರಿಯದೆ ನಾನಾ ಕಡೆಗಳಿಗೆ ತೆರಳಿ ಸಕ್ಸಸ್ ಮೀಟ್ ಮಾಡುತ್ತಿದ್ದಾರೆ.
ಈಗ ರಿಷಬ್ ಶೆಟ್ಟಿ ಅವರು ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ರಿಷಬ್ ಶೆಟ್ಟಿ ದಂಪತಿ ಜತೆ ನಟ ಪ್ರಮೋದ್ ಶೆಟ್ಟಿ ಕೂಡ ಇದ್ದರು.
ಮಂಜುನಾಥ ಸ್ವಾಮಿಯ ದರ್ಶನ ಪಡೆದ ತಂಡ ನಂತರ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿತು. ಇತ್ತೀಚೆಗೆ ವಿರೇಂದ್ರ ಹೆಗ್ಗಡೆ ಅವರು ‘ಕಾಂತಾರ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
‘ಕಾಂತಾರ’ ಸಿನಿಮಾ ಚಿತ್ರೀಕರಣ ಶುರುವಾಗುವುದಕ್ಕೂ ಮೊದಲು ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಬಂದಿದ್ದರು. ಸಿನಿಮಾ ಟ್ರೇಲರ್ ರಿಲೀಸ್ ಸಂದರ್ಭದಲ್ಲೂ ಇಲ್ಲಿಗೆ ಬಂದು ಆಶೀರ್ವಾದ ಪಡೆದಿದ್ದರು.
‘ಕಾಂತಾರ’ ಸಿನಿಮಾ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಅಬ್ಬರಿಸುತ್ತಿದೆ. ಈ ಚಿತ್ರ ಬಾಲಿವುಡ್ನಲ್ಲೇ ಸುಮಾರು 50 ಕೋಟಿ ರೂ. ಬಿಸ್ನೆಸ್ ಮಾಡಿದೆ.