ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ: ಡಾ. ಮಂಜುನಾಥ್
ನರೇಂದ್ರ ಮೋದಿಯವರು ಇಂದು (ಜೂ.09) ಸಂಜೆ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಹೆಚ್ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಸಂಸದ ಡಾ. ಮಂಜುನಾಥ್ ಹೇಳಿದರು.
ನವದೆಹಲಿ/ಬೆಂಗಳೂರು, ಜೂನ್ 09: ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha Constituency) ಸ್ಪರ್ಧಿಸಿ ಭರ್ಜರಿ ಗೆದ್ದಿರುವ ಮಾಜಿ ಮುಖ್ಯಮಂತ್ರಿ, ಸಂಸದ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಬಿಜೆಪಿ ನೂತನ ಸಂಸದ ಡಾ.ಮಂಜುನಾಥ್ (Dr. Manjunath) ಹೇಳಿದರು. ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿಯವರು ಸಚಿವರಾಗುತ್ತಿರುವುದು ಖುಷಿ ತಂದಿದೆ. ಜೆಡಿಎಸ್ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದೆ ಎಂದರು.
ಕುಮಾರಣ್ಣ ಮಂತ್ರಿ ಆಗುತ್ತಿರುವುದು ಖುಷಿ ಕೊಡುತ್ತಿದೆ: ಕಾಶಪ್ಪನವರ್
ಕೇಂದ್ರ ಸರ್ಕಾರದಲ್ಲಿ ಕುಮಾರಣ್ಣ ಮಂತ್ರಿ ಆಗುತ್ತಿರುವುದು ಬಹಳ ಖುಷಿ ಕೊಡುತ್ತಿದೆ. ಕರ್ನಾಟಕ ಜನತೆ ತುಂಬಾ ಖುಷಿ ಪಡುತ್ತಾರೆ. ಅಭಿವೃದ್ದಿ ದೃಷ್ಟಿಯಿಂದ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಜೆಡಿಎಸ್ ಭಾಗಿಯಾಗುತ್ತಿರುವುದು ಐತಿಹಾಸಿಕ. ಕಾಂಗ್ರೆಸ್ನವರು ದೋಖಾ ಮಾಡಿ ಸರ್ಕಾರ ಮಾಡಿದ್ದಾರೆ. ಸರ್ಕಾರ ವಿಸರ್ಜನೆ ಮಾಡಿ ಬರುತ್ತಾರಾ ಅವರು. ಕಾಂಗ್ರೆಸ್ ಜನರಿಗೆ ಸುಳ್ಳು ಹೇಳಿ, ಗಿಮಕ್ ಮಾಡಿ ಸರ್ಕಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಬಂಡಪ್ಪ ಕಾಶಪ್ಪನವರ್ ಹೇಳಿದರು.
ಇದನ್ನೂ ಓದಿ: ಕೇಂದ್ರದಲ್ಲಿ ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ, ಕೊಡದಿದ್ದರೂ ಬೇಜಾರಿಲ್ಲ: ನಿಖಿಲ್ ಕುಮಾರಸ್ವಾಮಿ
ಸಂಸದ ಹೆಚ್ಡಿ ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಸಂಸತ್ತು ಪ್ರವೇಶಿಸಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಅವರು ಇದಕ್ಕೂ ಮುನ್ನ ಕನಕಪುರ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿದ್ದರು. ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎರಡನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದರು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಕೇಂದ್ರದಲ್ಲಿ ಸಚಿವರಾಗುತ್ತಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಅವರು ಈಗಾಗಲೆ ದೆಹಲಿಯಲ್ಲಿದ್ದು, ಇಂದು ಸಂಜೆ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇರುವುದರಿಂದಲೇ ಕುಮಾರಸ್ವಾಮಿ ಪತ್ನಿ ಅನಿತಾ, ಪುತ್ರ ನಿಖಿಲ್, ಸೊಸೆ ರೇವತಿ ದೆಹಲಿಗೆ ತೆರಳಿದ್ದಾರೆ.
ಇನ್ನು, ಕೇಂದ್ರ ಸರ್ಕಾರದಲ್ಲಿ ರಾಜ್ಯದ 3 ರಿಂದ 4 ಜನರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಅಥವಾ ರಮೇಶ್ ಜಿಗಜಿಣಗಿ ಅವರು ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 am, Sun, 9 June 24