33 ವರ್ಷಗಳಿಂದ ಬೆದರಿಕೆಯ ಕರಿ ನೆರಳು; ಸಲ್ಮಾನ್ ರಶ್ದಿಯ ಪುಸ್ತಕ ವಿವಾದವಾಗಿದ್ದೇಕೆ?

Salman Rushdie ದಿ ಸೈಟಾನಿಕ್ ವರ್ಸಸ್ ಬಿಡುಗಡೆಗೂ ಮುನ್ನವೇ ಸಂಪಾದಕೀಯ ಸಲಹೆಗಾರರು ವಿವಾದದ ಸಾಧ್ಯತೆಯನ್ನು ಸೂಚಿಸಿದ್ದರು. ಆದರೆ ವಿವಾದಗಳು ಹೊಸದಲ್ಲ ಎಂದಿದ್ದ ರಶ್ದಿ ಮತ್ತು ಪ್ರಕಾಶನ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

33 ವರ್ಷಗಳಿಂದ ಬೆದರಿಕೆಯ ಕರಿ ನೆರಳು; ಸಲ್ಮಾನ್ ರಶ್ದಿಯ ಪುಸ್ತಕ ವಿವಾದವಾಗಿದ್ದೇಕೆ?
ಸಲ್ಮಾನ್ ರಶ್ದಿ
Rashmi Kallakatta

|

Aug 16, 2022 | 8:00 AM

ಬೂಕರ್ ಪ್ರಶಸ್ತಿ ವಿಜೇತ, ಖ್ಯಾತ ಲೇಖಕ ಸಲ್ಮಾನ್ ರಶ್ದಿಯವರು (Salman Rushdie) ನ್ಯೂಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಲು ವೇದಿಕೆಯಲ್ಲಿದ್ದಾಗ ನ್ಯೂಜೆರ್ಸಿಯ ಹಾದಿ ಮತಾರ್(24) ಎಂಬಾತ ಇರಿದಿದ್ದಾನೆ. ಗಂಭೀರ ಗಾಯಗೊಂಡ ರಶ್ದಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು ಭಾನುವಾರ ವೆಂಟಿಲೇಟರ್ ತೆರವು ಮಾಡಿದ್ದು,ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಕುಟುಂಬ ಹೇಳಿದೆ . ವಿವಾದಿತ ಲೇಖಕ ಸಲ್ಮಾನ್ ರಶ್ದಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಸುದ್ದಿಗಳು ಬರುತ್ತಿದ್ದಂತೆ ಅವರ ಬರವಣಿಗೆ ಮತ್ತು ಪುಸ್ತಕಗಳು ಮತ್ತೊಮ್ಮೆ ಚರ್ಚೆಯಾಗುತ್ತಿವೆ. ಭಾರತೀಯ ಮೂಲದ ಈ ಬ್ರಿಟಿಷ್ ಬರಹಗಾರ 14 ಕಾದಂಬರಿಗಳನ್ನು ಬರೆದಿದ್ದಾರೆ. ಮಿಡ್‌ನೈಟ್ಸ್ ಚಿಲ್ಡ್ರನ್ (midnight’s children), ಭಾರತೀಯ ಇತಿಹಾಸದ ಒಂದು ಭಾಗವನ್ನು  ಹೇಳುವ ಈ ಪುಸ್ತಕ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪುಸ್ತಕ ಸಿನಿಮಾ ಆದಾಗಲೂ ಹಲವು ವಿವಾದಗಳು ಎದುರಾದವು. ಆದರೆ ರಶ್ದಿಯವರ ವಿವಾದಿತ ಕೃತಿ ಎನ್ನುವುದು – ‘ದಿ ಸೈಟಾನಿಕ್ ವರ್ಸಸ್’. ಈ ಪುಸ್ತಕವು ಬಿಡುಗಡೆಯಾದಾಗ ಅನೇಕ ದೇಶಗಳಲ್ಲಿ ನಿಷೇಧಕ್ಕೊಳಗಾಗಿಯಿತು. ಸೆಪ್ಟೆಂಬರ್ 1988 ಇದು ಬಿಡುಗಡೆಯಾದಾಗ ರಶ್ದಿ ಅವರಿಗೆ ಪ್ರಾಣ ಬೆದರಿಕೆ ಕೂಡ ಬಂದಿತ್ತು. ನ್ಯೂಯಾರ್ಕ್‌ನಲ್ಲಿ ಚೂರಿ ಇರಿತಕ್ಕೆ ಕಾರಣ 33 ವರ್ಷಗಳ ಹಿಂದಿನ ಇದೇ ಬೆದರಿಕೆ ಎಂದು ಹೇಳಲಾಗುತ್ತದೆ. ಇರಾನ್‌ನ ಸರ್ವೋಚ್ಚ ನಾಯಕ ರಶ್ದಿಗೆ ಒಡ್ಡಿದ್ದ ಬೆದರಿಕೆಯಾಗಿತ್ತು ಅದು.

ಖೊಮೇನಿಯ ಫತ್ವಾ
1989 ರ ಪ್ರೇಮಿಗಳ ದಿನದಂದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿ ಸಲ್ಮಾನ್ ರಶ್ದಿಯನ್ನು ಕೊಲ್ಲಲು ಫತ್ವಾ ಹೊರಡಿಸಿದ್ದನು. ‘ದಿ ಸೈಟಾನಿಕ್ ವರ್ಸಸ್’ ಪುಸ್ತಕದಲ್ಲಿ ಧರ್ಮನಿಂದೆ ಮಾಡಲಾಗಿದೆ. ಹಾಗಾಗಿ ರಶ್ದಿಯವನ್ನು ಕಂಡಲ್ಲಿ ಕೊಂದು ಹಾಗಿ ಎಂದು ಖೊಮೇನಿ ಆದೇಶ ಹೊರಡಿಸಿದ್ದು. ರಶ್ದಿಯನ್ನು ಕೊಂದವರಿಗೆ ಸ್ವರ್ಗ ಸಿಗುತ್ತದೆ ಎಂದು ಖೊಮೇನಿ ರೇಡಿಯೊದಲ್ಲಿ ಇರಾನ್ ಜನರಿಗೆ ಕರೆ ನೀಡಿದ್ದ . ಈ ಫತ್ವಾ ಬ್ರಿಟನ್ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರಿತು. ಆಧುನಿಕ ಸಾಹಿತ್ಯದಲ್ಲಿ ದಿ ಸೈಟಾನಿಕ್ ವರ್ಸಸ್​​ನಷ್ಟು ವಿವಾದ ಸೃಷ್ಟಿಸಿದ ಕಾದಂಬರಿ ಮತ್ತೊಂದಿಲ್ಲ ಎಂದು ಹೇಳಬಹುದು. ಭಾರತ ಸೇರಿದಂತೆ 13 ಕ್ಕೂ ಹೆಚ್ಚು ದೇಶಗಳಲ್ಲಿ ಪುಸ್ತಕವನ್ನು ನಿಷೇಧಿಸಲಾಗಿದೆ. ತಲೆಮರೆಸಿಕೊಂಡಿರಲು ಇಷ್ಟವಿಲ್ಲ ಎಂದು ಹಲವು ಬಾರಿ ಹೇಳಿದ್ದ ಸಲ್ಮಾನ್ ರಶ್ದಿ ಆಮೇಲೆ ಅದನ್ನೇ ಮಾಡಬೇಕಾಗಿ ಬಂತು. ಖೊಮೇನಿ ಫೆಬ್ರವರಿ 14, 1989 ರಂದು ರಶ್ದಿ ಮರಣದಂಡನೆಗೆ ಆದೇಶಿಸಿದ್ದು, ಇರಾನ್ ಪ್ರತಿ ವರ್ಷ ಫತ್ವಾವನ್ನು ನವೀಕರಿಸುತ್ತಲೇ ಇತ್ತು. ಇರಾನ್ 2005 ರಲ್ಲಿ ಫತ್ವಾವನ್ನು ಹಿಂತೆಗೆದುಕೊಂಡಿತು. ಆದರೆ ರಶ್ದಿಗೆ ಭದ್ರತೆಯನ್ನು ಹಿಂಪಡೆದಿರಲಿಲ್ಲ. ಸೈಟಾನಿಕ್ ಬಿಡುಗಡೆಯಾದಾಗ ರಶ್ದಿಗೆ 41 ವರ್ಷ ವಯಸ್ಸು. ಈಗ ಅವರಿಗೆ 75ರ ಹರೆಯ. ರಶ್ದಿಯವರ ನಾಲ್ಕನೇ ಪುಸ್ತಕವಾಗಿದೆ ದಿ ಸೈಟಾನಿಕ್ ವರ್ಸಸ್.

ಪುಸ್ತಕ ಮಳಿಗೆಗಳ ಮೇಲೆ ದಾಳಿ
ಸಲ್ಮಾನ್ ರಶ್ದಿ ಹುಟ್ಟಿದ್ದು ಮುಂಬೈನಲ್ಲಿ. ಲಂಡನ್ ಗೆ ವಲಸೆ ಬಂದ ರಶ್ದಿ ಅವರು ತಮ್ಮ ಕಾದಂಬರಿ ‘ದಿ ಮಿಡ್ ನೈಟ್ ಚಿಲ್ಡ್ರನ್’ ಮೂಲಕ ಜಗತ್ಪ್ರಸಿದ್ಧರಾದರು. ಈ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಕೂಡ ಲಭಿಸಿದೆ. ಅಮೆರಿಕಾ ಪ್ರವಾಸಕ್ಕೆ ತಯಾರಿ ನಡೆಸುತ್ತಿರುವಾಗ, ಸೈಟಾನಿಕ್ ವರ್ಸಸ್ ಪುಸ್ತಕ ವಿವಾದವಾಗಿ ಅವರಿಗೆ ಕೊಲೆ ಬೆದರಿಕೆಗಳು ಬರತೊಡಗಿದವು. ಆನಂತರ ಅವರು ತಲೆಮರೆಸಿಕೊಂಡರು. ರಶ್ದಿ ಅವರಿಗೆ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಭದ್ರತೆ ಒದಗಿಸಿದ್ದರು. ಆಗ ಪುಸ್ತಕ ಮಾರುತ್ತಿದ್ದ ಪುಸ್ತಕ ಮಳಿಗೆಗಳ ಮೇಲೂ ದಾಳಿ ನಡೆಸಲಾಗಿತ್ತು. ಅನುವಾದಕರ ಹತ್ಯೆಗೆ ಯತ್ನಗಳೂ ನಡೆದಿತ್ತು.

ವಿವಾದಗಳು
ದಿ ಸೈಟಾನಿಕ್ ವರ್ಸಸ್ ಬಿಡುಗಡೆಗೂ ಮುನ್ನವೇ ಸಂಪಾದಕೀಯ ಸಲಹೆಗಾರರು ವಿವಾದದ ಸಾಧ್ಯತೆಯನ್ನು ಸೂಚಿಸಿದ್ದರು. ಆದರೆ ವಿವಾದಗಳು ಹೊಸದಲ್ಲ ಎಂದಿದ್ದ ರಶ್ದಿ ಮತ್ತು ಪ್ರಕಾಶನ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬೂಕರ್ ಪ್ರಶಸ್ತಿಯನ್ನು ಗೆದ್ದಿರುವ ಮಿಡ್‌ನೈಟ್ಸ್ ಚಿಲ್ಡ್ರನ್‌ನಲ್ಲಿ ತುರ್ತುಪರಿಸ್ಥಿತಿಯನ್ನು ಕಟುವಾಗಿ ಟೀಕಿಸಿದ್ದರಿಂದ ಇಂದಿರಾ ಗಾಂಧಿಗೂ ಸಿಟ್ಟು ಬಂದಿತ್ತು. ಮೂರನೆಯ ಪುಸ್ತಕ ಪಾಕಿಸ್ತಾನದ ರಾಜಕೀಯ ಪರಿಸ್ಥಿತಿಯನ್ನು ಟೀಕಿಸಿತು. ಇದು ಹಲವು ವಿವಾದಗಳಿಗೂ ಕಾರಣವಾಗಿತ್ತು. ಆದರೆ ನಾಲ್ಕನೇ ಪುಸ್ತಕವು ತನ್ನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ರಶ್ದಿ ಭಾವಿಸಿರಲಿಲ್ಲ. ಪುಸ್ತಕವು ಆರಂಭದಲ್ಲಿ ಹೆಚ್ಚು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಆದರೆ ಕ್ರಮೇಣ ಇದರ ವಿರುದ್ಧ ವಿರೋಧ ವ್ಯಕ್ತವಾಗತೊಡಗಿತು.ಈ ಪುಸ್ತಕವನ್ನು ಸೆಪ್ಟೆಂಬರ್ 26, 1988 ರಂದು ಬಿಡುಗಡೆ ಮಾಡಲಾಯಿತು.ಅಕ್ಟೋಬರ್ 5 ರಂದು ಭಾರತದಲ್ಲಿ ನಿಷೇಧಿಸಲಾಯಿತು. ಪುಸ್ತಕ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತು. ಪುಸ್ತಕವನ್ನು ಹಿಂಪಡೆಯುವಂತೆ ಬೆದರಿಕೆ ಜತೆಗೆ ಪ್ರಕಾಶಕರಿಗೊ ಒತ್ತಾಯಿಸಲಾಯಿತು. ನವೆಂಬರ್ 1988 ರಲ್ಲಿ ಬಾಂಗ್ಲಾದೇಶ, ಸುಡಾನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿಯೂ ಈ ಪುಸ್ತಕವನ್ನು ನಿಷೇಧಿಸಲಾಯಿತು. ಡಿಸೆಂಬರ್‌ನಲ್ಲಿ ಪುಸ್ತಕದ ವಿರುದ್ಧ ಭಾರೀ ಸಾರ್ವಜನಿಕ ಪ್ರತಿಭಟನೆಗಳು ನಡೆದಿದ್ದವು. ಪುಸ್ತಕದ ಪ್ರತಿಗಳನ್ನು ಸುಟ್ಟು ಹಾಕಲಾಯಿತು. ಅನೇಕ ನಗರಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳು ನಡೆಯಿತು. 1989 ರಲ್ಲಿ,ಪುಸ್ತಕವು ಅಮೆರಿಕಾದಲ್ಲಿ ಬಿಡುಗಡೆಯಾದಾಗ ವಿವಾದವು ತೀವ್ರವಾಯಿತು. ಇದರ ಬೆನ್ನಲ್ಲೇ ಇರಾನ್ ನಾಯಕ ಫತ್ವಾ ಹೊರಡಿಸಿದಾಗ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಗ್ರಂಥಾಲಯಗಳ ಮೇಲೆ ಬಾಂಬ್ ದಾಳಿ ನಡೆಯಿತು. ಅನೇಕ ಸಂಸ್ಥೆಗಳು ವಿತರಣೆಯನ್ನು ನಿಲ್ಲಿಸಿದವು. ಅನೇಕ ದೇಶಗಳು ಪುಸ್ತಕವನ್ನು ನಿಷೇಧಿಸಿದ್ದು ಅದನ್ನು ಸಾಗಿಸುವುದನ್ನು ಅಪರಾಧವೆಂದು ಪರಿಗಣಿಸಿವೆ. ಆದರೂ ಪುಸ್ತಕ ಮಾರಾಟದಲ್ಲಿ ದಾಖಲೆ ಏರಿಕೆಯಾಯಿತು. ಅಲ್ಪಾವಧಿಯಲ್ಲಿಯೇ ಅಮೆರಿಕದಲ್ಲಿಯೇ 7.5 ಲಕ್ಷ ಪ್ರತಿಗಳು ಮಾರಾಟವಾದವು. ಈ ಎಲ್ಲ ಬೆಳವಣಿಗೆ ಆಗುತ್ತಿರುವಾಗ ರಶ್ದಿಯವರು ತಮ್ಮ ಪುಸ್ತಕವನ್ನು ಸುಟ್ಟು ಹಾಕುವುದಕ್ಕಾಗಿ ಖರೀದಿಸಿದವರಿಗೆ ಧನ್ಯವಾದ ತಿಳಿಸಿದ್ದರು.

ನಿಷೇಧದ ವಿರುದ್ಧ ಧ್ವನಿಗಳು
ರಾಜೀವ್ ಗಾಂಧಿ ಸರ್ಕಾರವು ರಶ್ದಿಯವರ ಸೈಟಾನಿಕ್ ವರ್ಸಸ್ ಅನ್ನು ಭಾರತದಲ್ಲಿ ನಿಷೇಧಿಸಿತು. ಆದರೆ ನಂತರ ಅನೇಕ ಜನರು ನಿಷೇಧದ ವಿರುದ್ಧ ದನಿಯೆತ್ತಿದರು. ರಾಜೀವ್ ಗಾಂಧಿಯವರ ನಿರ್ಧಾರ ತಪ್ಪು ಎಂದು ಕಾಂಗ್ರೆಸ್​​ನ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದರು. ದಿ ಸೈಟಾನಿಕ್ ವರ್ಸಸ್  ಭಾರತದಲ್ಲಿ ನಿಷೇಧಕ್ಕೊಳಗಾದಾಗ ಅದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಸ್ಪಷ್ಟವಾಗಿತ್ತು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಕೂಡ ಹೇಳಿದ್ದರು.

ಇದನ್ನೂ ಓದಿ

ತಲೆಮರೆಸಿಕೊಂಡು ಬದುಕುವ ಬದುಕು ಬೇಡ
ವರ್ಷಗಟ್ಟಲೆ ತಲೆಮರೆಸಿಕೊಂಡು ಬದುಕಿ ಬೇಸತ್ತಿರುವುದಾಗಿ ಸ್ವತಃ ರಶ್ದಿಯೇ ಹೇಳಿದ್ದಾರೆ. 13 ವರ್ಷಗಳ ಕಾಲ ಪೊಲೀಸ್ ಕಾವಲಿನಲ್ಲಿ ಜೀವನ ನಡೆಸಲಾಯಿತು. ದಿ ಸೈಟಾನಿಕ್ ವರ್ಸಸ್ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಎಂದಿದ್ದ ರಶ್ದಿ ಶಾಂತಿಯುತ ಜೀವನ ನನ್ನ ದೊಡ್ಡ ಆಸೆ ಎಂದಿದ್ದರು. ಹಳೆಯ ಸಂಗತಿಗಳೆಲ್ಲ ಹಳೇದು. ಈಗ ಭಾರತದಲ್ಲಿ ಕ್ರೂರ ಮತೀಯವಾದವಿದೆ. ಭಾರತ ಎಲ್ಲರಿಗೂ ಸೇರಿದ್ದು ಎಂಬ ಭಾವನೆ ಈಗ ಇಲ್ಲ ಎಂದಿದ್ದರು ರಶ್ದಿ.ಆದರೆ ರಶ್ದಿ ಭಾರತದಲ್ಲಿ ಭರವಸೆ ಕಳೆದುಕೊಂಡಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ನೀಡಿದ ಭರವಸೆ ಚಿಕ್ಕದಲ್ಲ, ಕಾಲೇಜು ವಿದ್ಯಾರ್ಥಿಗಳು ಕೋಮುವಾದದ ವಿರುದ್ಧ ಹೋರಾಡಬೇಕು. ವರ್ಷಗಳ ಹಿಂದೆ ಅವರು ತುರ್ತು ಪರಿಸ್ಥಿತಿಯನ್ನು ಮಿಡ್ ನೈಟ್ (ಮಧ್ಯರಾತ್ರಿ) ಎಂದು ವಿವರಿಸಿದರು. ತಲೆಮರೆಸಿಕೊಂಡಿದ್ದ ತನ್ನ ಜೀವನದಲ್ಲಿ ರಶ್ದಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಅಪರೂಪ. ಆದರೆ ಅವರು ಕಳೆದ ಒಂದು ದಶಕದಿಂದ ಬರವಣಿಗೆಯಲ್ಲಿ ಸಕ್ರಿಯರಾಗಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada