ಭಾರತದಲ್ಲಿ ಉಡುಪಿ ಹೋಟೆಲ್ ಯಾಕಿಷ್ಟು ಫೇಮಸ್?: ಇದರ ಇತಿಹಾಸವೇನು?
History of Udupi Hotel: ನೀವು ಎಲ್ಲೇ ಪ್ರಯಾಣಿಸಿದರೂ ಕನಿಷ್ಠ ಒಂದು ಉಡುಪಿಯ ರೆಸ್ಟೊರೆಂಟ್ ಅನ್ನು ನೋಡಿಯೇ ಇರುತ್ತೀರಿ. ಇದು ಮೊದಲಿಗೆ ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ 'ಉಡುಪಿ' ಟ್ಯಾಗ್ ಅನ್ನು ಸೇರಿಸಿ ದೇಶದೆಲ್ಲೆಡೆ ವಿಸ್ತರಿಸಿಕೊಂಡಿದೆ. ಹಾಗಾದರೆ, ಈ ಉಡುಪಿ ಹೋಟೆಲ್ ಯಾಕಿಷ್ಟು ಫೇಮಸ್ ಆಗಿದೆ?.
ಉಡುಪಿ ಹೋಟೆಲ್, ಉಡುಪಿ ಗ್ರ್ಯಾಂಡ್, ನ್ಯೂ ಉಡುಪಿ ಹೋಟೆಲ್… ಹೀಗೆ ಉಡುಪಿ ಎಂಬ ಪದ ಬಳಸಿ ಇಂದು ಭಾರತದಲ್ಲಿ ಅನೇಕ ಹೋಟೆಲ್ಗಳು ಹುಟ್ಟುಕೊಂಡಿವೆ. ಭಾರತದ ಮೂಲೆ ಮೂಲೆಯಲ್ಲೂ ಈ ಹೆಸರಿನ ಹೋಟೆಲ್ಗಳಿವೆ. ಕರ್ನಾಟಕದ ಬೀದಿಗಳಿಂದ ದೆಹಲಿಯ ಟಿಫಿನ್ ಅಂಗಡಿಗಳವರೆಗೆ ಉಡುಪಿ ಹೆಸರಿನ ಹೋಟೆಲ್ಗಳಿವೆ. ನೀವು ಎಲ್ಲೇ ಪ್ರಯಾಣಿಸಿದರೂ ಕನಿಷ್ಠ ಒಂದು ಉಡುಪಿಯ ರೆಸ್ಟೊರೆಂಟ್ ಅನ್ನು ನೋಡಿಯೇ ಇರುತ್ತೀರಿ. ಇದು ಮೊದಲಿಗೆ ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ‘ಉಡುಪಿ’ ಟ್ಯಾಗ್ ಅನ್ನು ಸೇರಿಸಿ ದೇಶದೆಲ್ಲೆಡೆ ವಿಸ್ತರಿಸಿಕೊಂಡಿದೆ. ಹಾಗಾದರೆ, ಈ ಉಡುಪಿ ಹೋಟೆಲ್ ಯಾಕಿಷ್ಟು ಫೇಮಸ್ ಆಗಿದೆ?. ಈ ಹೆಸರಿಗೂ ಮಹಭಾರತಕ್ಕೂ ಏನು ಸಂಬಂಧ?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಉಡುಪಿ ಹೋಟೆಲ್ಗಳು ದೇಶದ ವಿವಿಧ ಭಾಗಗಳಿಗೆ ಹೇಗೆ ತಲುಪಿದವು ಎಂಬುದರ ಕುರಿತು ಹಲವಾರು ಕಥೆಗಳಿವೆ. ಈ ಹೆಸರು ಇಂದು ಭಾರತದಾದ್ಯಂತ ಪಸರಿಸಲು ಕಾರಣ ಮಾಲೀಕತ್ವದ ಕೊರತೆ. ಆದರೆ, ಈ ಹೋಟೆಲ್ ಅನ್ನು ಯಾರು ಪ್ರಾರಂಭಿಸಿದರು ಎಂಬುದನ್ನು ನೋಡುವ ಮೊದಲು, ಅದರ ಹಿಂದಿನ ಸಂಪ್ರದಾಯವನ್ನು ತಿಳಿದುಕೊಳ್ಳೋಣ.
ಕರ್ನಾಟಕದ ಉತ್ತರ ಭಾಗದ ಉಡುಪಿಯಲ್ಲಿ ಪ್ರಸಿದ್ಧವಾದ ಕೃಷ್ಣ ಮಠವಿದೆ. ಐತಿಹಾಸಿಕವಾಗಿ, ದೇವಾಲಯಕ್ಕೆ ಭೇಟಿ ನೀಡುವ ಎಲ್ಲಾ ಯಾತ್ರಾರ್ಥಿಗಳಿಗೆ ಅರ್ಚಕರು ಸ್ಥಳೀಯ ಅಡುಗೆ ಭಟ್ಟರ ಸಹಾಯದಿಂದ ಅನ್ನದಾನವನ್ನು (ಆಹಾರದ ನೈವೇದ್ಯ) ಒದಗಿಸುತ್ತಿದ್ದರು. ಬಾಳೆಎಲೆಯಲ್ಲಿ ಆಹಾರವನ್ನು ನೀಡುವುದು ವಾಡಿಕೆಯಾಗಿತ್ತು. ವರದಿಯ ಪ್ರಕಾರ, ಸಮಯ ಕಳೆದಂತೆ, ಉಡುಪಿಯ ಅಡುಗೆ ಭಟ್ಟರು ಸ್ಥಳಾಂತರಗೊಂಡು ತಾವು ನೆಲೆಸಿದ ಸ್ಥಳಗಳಲ್ಲಿ ಹೋಟೆಲ್ ತೆರೆದು ಇದಕ್ಕೆ ಉಡುಪಿ ಹೋಟೆಲ್ ಎಂದು ಹೆಸರಿಟ್ಟರು.
ಆದರೆ, ಉಡುಪಿಯ ರೆಸ್ಟೊರೆಂಟ್‌ಗಳ ಟ್ರೆಂಡ್ ಹೇಗೆ ಹುಟ್ಟಿತು ಎಂದು ಕೇಳಿದರೆ ಆಶ್ಚರ್ಯವಾಗಬಹುದು. ಇದಕ್ಕೆ ಉತ್ತರ ಕಡಂದಲೆ ಕೃಷ್ಣರಾವ್. ಅವರು ಉಡುಪಿ ಮೂಲದ ಸಣ್ಣ ಜಮೀನುದಾರರ ಮಗ. ಬಹಳ ಕಡಿಮೆ ಶಿಕ್ಷಣದೊಂದಿಗೆ, ಕೃಷ್ಣರಾವ್ ಅವರು ಕೃಷ್ಣ ಮಠದಲ್ಲಿ ಪರಿಚಾರಕರಾಗಿ ಸೇರಿಕೊಂಡರು. ನಂತರ ಅವರು ಮದ್ರಾಸಿಗೆ (ಇಂದಿನ ಚೆನ್ನೈ) ತೆರಳಿದರು ಮತ್ತು ಶಾರದಾ ವಿಲಾಸ್ ಬ್ರಾಹ್ಮಣರ ಹೋಟೆಲ್‌ಗೆ ಸೇರಿಕೊಂಡರು, ಅಲ್ಲಿ ಕೆಲವು ವರ್ಷಗಳ ಕಾಲ ಅಡುಗೆ ಭಟ್ಟರಾಗಿ ಕೆಲಸ ಮಾಡಿದರು. ಇವರ ಅಡುಗೆಯ ಚಾತುರ್ಯವನ್ನು ಗುರುತಿಸಿದ ಅಲ್ಲಿನ ಮಾಲೀಕರು, ಕೃಷ್ಣರಾವ್ ಅವರಿಗೆ ಹೋಟೆಲ್ ಒಂದನ್ನು ಮಾಸಿಕ ಬಾಡಿಗೆ 700 ರೂಪಾಯಿಗಳಿಗೆ ನೀಡಿದರು. ಇದಕ್ಕೆ ‘ಉಡುಪಿ ಶ್ರೀ ಕೃಷ್ಣ ವಿಲಾಸ್’ (ನ್ಯೂ ವುಡ್‌ಲ್ಯಾಂಡ್ಸ್ ಹೋಟೆಲ್ ಎಂದು ಕೂಡ ಕರೆಯಲಾಗುತ್ತದೆ) ಎಂದು ಹೆಸರಿಸಿಟ್ಟರು.
ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವನ್ನು ನೀಡಿ ಕೃಷ್ಣರಾವ್ ತಮ್ಮ ಕೈಯಿಂದ ಈ ರೆಸ್ಟೋರೆಂಟ್ ಅನ್ನು ಯಶಸ್ವಿಗೊಳಿಸಿದರು. ಕಡಿಮೆ ಕಾಸಿನಲ್ಲಿ ಆರೋಗ್ಯಕರ, ಟೇಸ್ಟಿ ಮತ್ತು ಉತ್ತಮ ಊಟಕ್ಕೆ ಮಾರುಕಟ್ಟೆಯು ಲಾಭದಾಯಕವಾಗಿತ್ತು. ಕೃಷ್ಣರಾವ್ ಅವರ ಮಗ ಕಡಂದಲೆ ಲಕ್ಷ್ಮೀನಾರಾಯಣ ರಾವ್ ಅವರು ತನ್ನ ತಂದೆ ಹೋಟೆಲ್ ಪ್ರಾರಂಭಿಸಿದ ಬಗ್ಗೆ ಹೇಳಿದ್ದು ಹೀಗೆ:
“1922 ರಲ್ಲಿ ನನ್ನ ತಂದೆ ಮದ್ರಾಸ್ಗೆ ಹೋದರು. ಅಲ್ಲಿ ಉಡುಪಿ ಹೋಟೆಲ್ ತೆರೆದು ಗುಣಮಟ್ಟದ ಆಹಾರ ನೀಡಿ ಬ್ರ್ಯಾಂಡ್ ಹೆಸರನ್ನಾಗಿ ಮಾಡಿದರು. ನಮ್ಮ ಕುಟುಂಬವು ಚೆನ್ನೈನಲ್ಲಿ ಮೊದಲ ಡ್ರೈವ್-ಇನ್-ರೆಸ್ಟೋರೆಂಟ್ ಅನ್ನು ಸಹ ಹೊಂದಿತ್ತು. ಅಲ್ಲಿಗೆ ಎಂಜಿಆರ್, ಕರುಣಾನಿಧಿ, ರಜನಿಕಾಂತ್, ಕಮಲ್ ಹಾಸನ್ ಇತರರು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಉಡುಪಿಯನ್ನು ತಮಿಳುನಾಡಿಗೆ ಪರಿಚಯಿಸುವಲ್ಲಿ ನನ್ನ ತಂದೆ ಪ್ರಮುಖ ಪಾತ್ರ ವಹಿಸಿದ್ದರು. ನನ್ನ ತಂದೆಯ ಹೋಟೆಲ್‌ಗೆ ಕೆಲಸ ಮಾಡಲು ಬಂದವರು ನಂತರ ಅಲ್ಲಿ ಸ್ವಂತವಾಗಿ ಹೋಟೆಲ್ಗಳನ್ನು ಸ್ಥಾಪಿಸಿದರು. ಚೆನ್ನೈನಲ್ಲಿ ಇಡ್ಲಿ ಮತ್ತು ದೋಸೆ ಆ ಸಮಯಕ್ಕೆ ಇದ್ದರೂ, ವಿವಿಧ ರೀತಿಯ ದೋಸೆ ವಿಶೇಷತೆಗಳು, ಗುಣಮಟ್ಟ, ಅಗ್ಗದ ಆಹಾರ ಮತ್ತು ಮನೆಯಲ್ಲಿ ಮಾಡಿದ ರುಚಿಯ ಆಹಾರವು ಉಡುಪಿ ರೆಸ್ಟೋರೆಂಟ್‌ಗಳನ್ನು ಜನಪ್ರಿಯಗೊಳಿಸಿತು” ಎಂದು ಲಕ್ಷ್ಮೀನಾರಾಯಣ ರಾವ್ ಹೇಳುತ್ತಾರೆ.
1923 ರಲ್ಲಿ, ಉಡುಪಿಯಲ್ಲಿ ಸಂಭವಿಸಿದ ದೊಡ್ಡ ಪ್ರವಾಹದಿಂದ ಕಾರ್ಮಿಕರು ಮತ್ತು ವೃತ್ತಿಪರರು ದೊಡ್ಡ ನಗರಗಳಿಗೆ ಸಾಮೂಹಿಕವಾಗಿ ವಲಸೆ ಹೋದರು. ಆ ಸಂದರ್ಭ ಕಡಿಮೆ ದರದ ಸಾರ್ವಜನಿಕ ಆಹಾರ ಸ್ಥಳಗಳಿಗೆ ಬೇಡಿಕೆ ಹೆಚ್ಚಾಯಿತು. ಈ ಬೇಡಿಕೆಯನ್ನು ಪೂರೈಸಲು ಮೈಸೂರಿನ ದಾಸಪ್ರಕಾಶ್, ಉಡುಪಿ ಶ್ರೀ ಕೃಷ್ಣ ಭವನ ಮತ್ತು ಮಾವಳ್ಳಿ ಟಿಫಿನ್ ರೂಮ್‌ಗಳಂತಹ ಹಲವಾರು ಪ್ರಮುಖ ಉಡುಪಿ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿದರು. ಮುಂಬೈ, ಮದ್ರಾಸ್, ಮೈಸೂರು ಮತ್ತು ಬೆಂಗಳೂರು ಉಡುಪಿಯಿಂದ ವಲಸೆ ಬಂದವರಿಗೆ ಪ್ರಮುಖ ಸ್ಥಳಗಳಾಗಿದ್ದು, ಅಲ್ಲಿ ಅನೇಕ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲಾಯಿತು. ಮುಂಬೈನ ಮಾಟುಂಗಾದಲ್ಲಿ, 1930 ಮತ್ತು 1940 ರ ದಶಕಗಳಲ್ಲಿ ರಾಮನಾಯಕ್ ಮತ್ತು ಕೆಫೆ ಮದ್ರಾಸ್‌ನಂತಹ ಅನೇಕ ಉಡುಪಿ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲಾಯಿತು. ನಂತರದ ದಶಕಗಳಲ್ಲಿ, ಉಡುಪಿ ರೆಸ್ಟೋರೆಂಟ್‌ಗಳು ಎಲ್ಲಾ ರಾಜ್ಯಗಳಿಗೆ ಹರಡಿತು. ಈಗ ಭಾರತದ ಮೂಲೆ ಮೂಲೆಗಳಲ್ಲಿ ಇದು ಕಂಡುಬರುತ್ತವೆ.
ಉಡುಪಿ ಹೋಟೆಲ್ ಪ್ರಸಿದ್ಧಿ ಪಡೆಯುತ್ತಿದ್ದಂತೆ ದೇಶದ ಅನೇಕ ಭಾಗಗಳಲ್ಲಿ ದಕ್ಷಿಣ ಭಾರತೀಯ ಆಹಾರವನ್ನು ತಮ್ಮ ಹೋಟೆಲ್ಗಳಲ್ಲಿ ಶುರುಮಾಡಿದವು. ಆ ದಿನಗಳಲ್ಲಿ, ಉಡುಪಿ ರೆಸ್ಟೊರೆಂಟ್ ಎಂದರೆ ಒಂದು ಸೆಟ್ ಮೆನು ಇರುತ್ತಿತ್ತು. ಅದರಲ್ಲಿ ವಿಶಿಷ್ಟವಾದ ಟಿಫಿನ್ ಐಟಮ್‌ಗಳಾದ ತಟ್ಟೆ ಇಡ್ಲಿ, ನೀರ್ ದೋಸೆ, ಪತ್ರೋಡೆ, ಗೋಳಿ ಬಜೆ ಮತ್ತು ಹಲಸಿನ ಕಡುಬು ಇರುತ್ತಿತ್ತು. ಆದರೆ, ಈಗ ವ್ಯವಸ್ಥೆ ಬದಲಾಗಿದೆ. ಆಧುನಿಕ ಉಡುಪಿ ರೆಸ್ಟೋರೆಂಟ್‌ಗಳು ಎಲ್ಲಾ ರೀತಿಯ ಪಾಕಪದ್ಧತಿಗಳನ್ನು ನೀಡುತ್ತವೆ – ಚೈನೀಸ್ ನೂಡಲ್ಸ್‌ನಿಂದ ಪಂಜಾಬಿ ಪರಾಠಗಳವರೆಗೆ, ಎಲ್ಲವನ್ನೂ ಕೊಡುತ್ತಿದೆ. ಕೆಲವರು ಈ ಹೆಸರಿನ ಹೋಟೆಲ್ನಲ್ಲಿ ಮಾಂಸಾಹಾರವನ್ನು ಬಡಿಸಲು ಪ್ರಾರಂಭಿಸಿದ್ದಾರೆ. ಉಡುಪಿಯ ಹೆಸರಿನಲ್ಲಿ ಬಾರ್‌ಗಳೂ ತೆರೆದುಕೊಂಡಿವೆ.
ಉಡುಪಿಯ ಪ್ರಸಿದ್ಧ ತಿಂಡಿ-ತಿನಿಸು:
ಮಸಾಲೆ ದೋಸೆ ಹುಟ್ಟಿದ್ದು ಉಡುಪಿಯಲ್ಲಿ ಎಂಬ ಮಾತಿದೆ. ಹಾಗೆಯೆ, ಪತ್ರೊಡೆ – ಇದನ್ನು ಕೆಸುವಿನ ಎಲೆಯಿಂದ ಮಾಡಲಾಗುತ್ತದೆ. ಮಳೆಗಾಲದ ಜನಪ್ರಿಯ ತಿನಿಸು ಇದಾಗಿದೆ. ಕೊಟ್ಟೆ ಕಡುಬು, ನೀರು ದೋಸೆ, ಶ್ಯಾವಿಗೆ ಅಥವಾ ಒತ್ತು ಶ್ಯಾವಿಗೆ, ಗೋಳಿ ಬಜೆ (ಇದನ್ನು ಮಂಗಳೂರು ಬಜೆ ಎಂದೂ ಕರೆಯುತ್ತಾರೆ), ಹಲಸಿನ ಕಡುಬು, ತಂಬುಳಿ, ಕೆಸುವಿನ ಎಲೆ ಚಟ್ನಿ.
Published On - 12:10 pm, Mon, 22 April 24