International Mother Language Day | ವಿಶ್ವ ಮಾತೃಭಾಷೆ ದಿನದ ಇತಿಹಾಸ ಹಾಗೂ ಪ್ರಾಮುಖ್ಯತೆ ಏನು?

International Mother Language Day 2021: ವಿಶ್ವ ಮಾತೃಭಾಷೆ ದಿನದ ಈ ವರ್ಷದ ಶೀರ್ಷಿಕೆ ‘Fostering multilingualism for inclusion in education and society‘. ಈ ಉದ್ದೇಶ ಶಿಕ್ಷಣ ಮತ್ತು ನಿತ್ಯಜೀವನದಲ್ಲಿ ಮಾತೃಭಾಷೆಯ ಬಳಕೆಗೆ ಒತ್ತು ನೀಡುವುದನ್ನು ಹೇಳುತ್ತದೆ.

  • TV9 Web Team
  • Published On - 11:34 AM, 21 Feb 2021
International Mother Language Day | ವಿಶ್ವ ಮಾತೃಭಾಷೆ ದಿನದ ಇತಿಹಾಸ ಹಾಗೂ ಪ್ರಾಮುಖ್ಯತೆ ಏನು?
ವಿಶ್ವ ಮಾತೃಭಾಷಾ ದಿನ (ಕೃಪೆ: ಯುನೆಸ್ಕೊ ಟ್ವಿಟರ್ ಹ್ಯಾಂಡಲ್)

ವಿಶ್ವ ಮಾತೃಭಾಷೆ ದಿನವನ್ನು (International Mother Language Day) ಪ್ರತೀವರ್ಷ ಫೆಬ್ರವರಿ 21ರಂದು ಆಚರಿಸಲಾಗುತ್ತದೆ. ಯುನೆಸ್ಕೊ (United Nations Educational, Scientific and Cultural Organization- UNESCO) 1999ರಲ್ಲಿ ಮಾತೃಭಾಷೆಯ ವಿಚಾರವನ್ನು ಪ್ರಸ್ತಾಪಿಸಿತು. ಅದರಂತೆ, 2000ನೇ ಇಸವಿಯ ಬಳಿಕ ಜಾಗತಿಕವಾಗಿ ವಿಶ್ವ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಮಾತೃಭಾಷೆ ದಿನದ ಈ ವರ್ಷದ ಶೀರ್ಷಿಕೆ ‘Fostering multilingualism for inclusion in education and society’ ಅಂದರೆ, ‘ಸೇರ್ಪಡೆಗಾಗಿ ಶಿಕ್ಷಣ ಮತ್ತು ಸಮಾಜದಲ್ಲಿ ಬಹುಭಾಷಿಕತೆಯನ್ನು ಬೆಳೆಸುವುದು’. ಈ ಉದ್ದೇಶ ಶಿಕ್ಷಣ ಮತ್ತು ನಿತ್ಯಜೀವನದಲ್ಲಿ ಮಾತೃಭಾಷೆಯ ಬಳಕೆಗೆ ಒತ್ತು ನೀಡುವುದನ್ನು ಹೇಳುತ್ತದೆ.

UNESCO ನಿರ್ದೇಶಕರಾದ ಔಡ್ರಿ ಅಝೌಲೆ ವಿಶ್ವ ಮಾತೃಭಾಷಾ ದಿನದ ಬಗ್ಗೆ ನೀಡಿದ ಸಂದೇಶದಲ್ಲಿ, ‘ವಿಶ್ವದ ಶೇ. 40ಕ್ಕೂ ಹೆಚ್ಚು ಜನರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುತ್ತಿಲ್ಲ. ಇದರಿಂದ ಅವರ ಕಲಿಕೆಗೂ, ತಮ್ಮ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೂ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಗೂ ಧಕ್ಕೆಯಾಗುತ್ತದೆ’ ಎಂದು ಹೇಳಿದ್ದಾರೆ.

ವಿಶ್ವ ಮಾತೃಭಾಷಾ ದಿನದ ಇತಿಹಾಸ ಗೊತ್ತೇ?
1952ರಲ್ಲಿ ಬಾಂಗ್ಲಾದೇಶ (ಆಗಿನ ಪಾಕಿಸ್ತಾನ) ಬಹುದೊಡ್ಡ ಭಾಷಾ ಆಂದೋಲನಕ್ಕೆ ಸಾಕ್ಷಿಯಾಯಿತು. ಢಾಕಾದಲ್ಲಿ ಬಾಂಗ್ಲಾದ ಜನರು ಭಾಷಾ ಹಕ್ಕಿಗಾಗಿ ಚಳುವಳಿ ನಡೆಸಿದರು. ಈ ಆಂದೋಲನಕ್ಕೆ ಕಾರಣವಾದದ್ದು ಪಾಕಿಸ್ತಾನದ ಭಾಷಾನೀತಿ.

ಬ್ರಿಟಿಷರ ಆಳ್ವಿಕೆ ಮುಕ್ತಾಯವಾದ ಬಳಿಕ, ಭಾರತ-ಪಾಕಿಸ್ತಾನ ದೇಶ ವಿಭಜನೆಯಾಗಿ ಸ್ವತಂತ್ರ ರಾಷ್ಟ್ರ ರಚನೆಯಾಯಿತು. ಅದರಂತೆ, ಈಗಿನ ಬಾಂಗ್ಲಾದೇಶ ಅಂದು ಪಾಕಿಸ್ತಾನದ ಜತೆ ಸೇರಿಕೊಂಡು ಒಂದೇ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಪಡೆದ ನಂತರ ಪಾಕಿಸ್ತಾನ ಉರ್ದು ಭಾಷೆಯನ್ನು ರಾಷ್ಟ್ರಭಾಷೆಯಾಗಿ ಘೋಷಿಸಿಕೊಂಡಿತು. ಆದರೆ, ಪಾಕ್​ನ ಈ ನಿರ್ಧಾರ ಪೂರ್ವ ಪಾಕಿಸ್ತಾನಕ್ಕೆ (ಇಂದಿನ ಬಾಂಗ್ಲಾದೇಶ) ಹಿತ ಎನಿಸಲಿಲ್ಲ. ಬಾಂಗ್ಲಾದೇಶದ ಜನರ ಮಾತೃಭಾಷೆ ಬಾಂಗ್ಲಾ ಆಗಿದ್ದರಿಂದ ಉರ್ದು ಮಾತೃಭಾಷೆ ಎಂದು ಒಪ್ಪಲು ಅವರು ತಯಾರಿರಲಿಲ್ಲ.

ಬಾಂಗ್ಲಾ ಭಾಷೆಯನ್ನು ಕೂಡ ಅಧಿಕೃತ ಭಾಷೆ ಎಂದು ಸ್ವೀಕರಿಸುವಂತೆ ಪೂರ್ವ ಪಾಕಿಸ್ತಾನದ ಜನರು ಹೋರಾಟಕ್ಕಿಳಿದರು. 1952ರಲ್ಲಿ ಢಾಕಾದ ಕಾಲೇಜು ವಿದ್ಯಾರ್ಥಿಗಳು ಭಾಷಾ ಆಂದೋಲನ ಕೈಗೊಂಡರು. ಬಳಿಕ, 1956ರಲ್ಲಿ ಬಾಂಗ್ಲಾ ಜನರ ಹೋರಾಟಕ್ಕೆ ಮಣಿದ ಪಾಕ್, ಬಾಂಗ್ಲಾ ಭಾಷೆಗೆ ಕೂಡ ಅಧಿಕೃತ ಭಾಷಾ ಸ್ಥಾನಮಾನ ನೀಡಿತು.

ಫೆಬ್ರವರಿ 29, 1956ರಲ್ಲಿ ಬೆಂಗಾಲಿ ಭಾಷೆಯನ್ನು ಪಾಕಿಸ್ತಾನದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸಲಾಯಿತು. ನಂತರ, 1971ರಲ್ಲಿ ಬಾಂಗ್ಲಾ ವಿಮೋಚನೆ ಮೂಲಕ, ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರ ರಚನೆಯಾಯಿತು. ಜತೆಗೆ, ಬೆಂಗಾಲಿ ಭಾಷೆಯು ಬಾಂಗ್ಲಾದೇಶದ ಅಧಿಕೃತ ರಾಷ್ಟ್ರಭಾಷೆ ಎಂದು ಕರೆಸಿಕೊಂಡಿತು.

ಇದನ್ನೂ ಓದಿ: Kannada: ಔದಾರ್ಯ ಇರಬೇಕು.. ಆದ್ರೆ ನಮ್ಮ ಮಾತೃಭಾಷೆ ಕನ್ನಡವನ್ನೇ ಕುಂಠಿತಗೊಳಿಸುವಷ್ಟೂ ಇರಬಾರ್ದು -ಸಿದ್ದರಾಮಯ್ಯ

ಇನ್ನು ಮಾತೃಭಾಷೆಯಲ್ಲಿಯೂ ಎಂಜಿನಿಯರಿಂಗ್ ವ್ಯಾಸಂಗ..! ಯಾವಾಗಿಂದ ಆರಂಭ?