ಸುಶಾಂತ ಸಾವು: ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ದೆಹಲಿ ‘ವಕೀಲ’ನ ಬಂಧನ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತು ನೂರಾರು ಸುಳ್ಳು ಸುದ್ದಿಗಳನ್ನು ಹಲವಾರು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬುತ್ತಿದ್ದ ಮತ್ತು ತಾನೊಬ್ಬ ವಕೀಲ ಎಂದು ಹೇಳಿಕೊಳ್ಳುತ್ತಿದ್ದ ವಿಭೋರ್ ಆನಂದ್ ಹೆಸರಿನ ದೆಹಲಿ ನಿವಾಸಿಯನ್ನು ಮುಂಬೈ ಪೊಲೀಸರು ಗುರುವಾರದಂದು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಸುಶಾಂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವುಗಳ ನಡುವೆ ಸಂಬಂಧವಿದೆಯೆಂದು ಹೇಳುವ ಹಲವಾರು ಸುದ್ದಿಗಳನ್ನು ಆನಂದ್ ಸೋಶಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡಿದ್ದ. ಅಷ್ಟು ಮಾತ್ರವಲ್ಲದೆ, ಸಾವುಗಳ […]
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತು ನೂರಾರು ಸುಳ್ಳು ಸುದ್ದಿಗಳನ್ನು ಹಲವಾರು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬುತ್ತಿದ್ದ ಮತ್ತು ತಾನೊಬ್ಬ ವಕೀಲ ಎಂದು ಹೇಳಿಕೊಳ್ಳುತ್ತಿದ್ದ ವಿಭೋರ್ ಆನಂದ್ ಹೆಸರಿನ ದೆಹಲಿ ನಿವಾಸಿಯನ್ನು ಮುಂಬೈ ಪೊಲೀಸರು ಗುರುವಾರದಂದು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಸುಶಾಂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವುಗಳ ನಡುವೆ ಸಂಬಂಧವಿದೆಯೆಂದು ಹೇಳುವ ಹಲವಾರು ಸುದ್ದಿಗಳನ್ನು ಆನಂದ್ ಸೋಶಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡಿದ್ದ. ಅಷ್ಟು ಮಾತ್ರವಲ್ಲದೆ, ಸಾವುಗಳ ಹಿಂದೆ, ಬಾಲಿವುಡ್ ನಟ ಅರ್ಬಾಜ್ ಖಾನ್ ಕೈವಾಡವಿದೆ ಎಂದು ಸಹ ಆನಂದ್ ಸುದ್ದಿ ಹರಿಬಿಟ್ಟಿದ್ದ. ಖಾನ್, ಈ ಸ್ವಯಂಘೋಷಿತ ವಕೀಲನ ವಿರುದ್ಧ ಕೇಸೊಂದನ್ನು ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ, ಯುಟ್ಯೂಬ್ನಲ್ಲಿ ಹೆಚ್ಚು ಸಕ್ರಿಯನಾಗಿರುತ್ತಿದ್ದ ಆನಂದ್, ಸುಶಾಂತ್ ಸಾವಿಗೆ ನೂರೆಂಟು ಕಾರಣಗಳನ್ನು ಉಲ್ಲೇಖಿಸುತ್ತಾ, ತನ್ನ ಪ್ರತಿ ವಿಡಿಯೊದಲ್ಲಿ ಮುಂಬೈ ಪೊಲೀಸರನ್ನು ಅವಹೇಳನ ಮಾಡುತ್ತಿದ್ದ ಮತ್ತು ಕೇಸನ್ನು ಬಗೆಹರಿಸಿಸುವುದು ಅವರಿಗೆ ಸಾಧ್ಯವಿಲ್ಲ ಎಂದು ಹೇಳುತ್ತಿದ್ದ.
ಮುಂಬೈ ಪೊಲೀಸ ಮೂಲಗಳ ಪ್ರಕಾರ, ಸುಶಾಂತ್ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತ ಜೂನ್ 14 ರಂದು ಲಭ್ಯವಿರುವ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 80,000ಕ್ಕೂ ಅಧಿಕ ನಕಲಿ ಖಾತೆಗಳು ಹುಟ್ಟಿಕೊಂಡು ಮುಂಬೈ ಪೊಲೀಸ್ ವ್ಯವಸ್ಥೆಯನ್ನು ಹೀಯಾಳಿಸುತ್ತಿವೆ. ಆ ಎಲ್ಲ ಖಾತೆಗಳ ಸೃಷ್ಟಿಕರ್ತರನ್ನು ಶೋಧಿಸಿ ಅವರ ವಿರುದ್ಧ ಕೇಸುಗಳನ್ನು ದಾಖಲಿಸುವಂತೆ ಮಹಾನಗರದ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಸೈಬರ್ ಸೆಲ್ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ.