National Doctors’ Day 2022: ಇಂದು ರಾಷ್ಟ್ರೀಯ ವೈದ್ಯರ ದಿನ; ನೀವು ತಿಳಿಯಬೇಕಾದ ಮುಖ್ಯ ಅಂಶಗಳು ಇಲ್ಲಿವೆ

ರೋಗಿಗಳನ್ನು ಗುಣಪಡಿಸಲು ತಮ್ಮ ಬದುಕನ್ನೇ ಮುಡಿಪಾಗಿ ಇಡುವ ಬಹುತೇಕ ವೈದ್ಯರು ಸಮಾಜಕ್ಕಾಗಿ ಖಾಸಗಿ ಸುಖ-ಸಂತೋಷಗಳನ್ನು ತ್ಯಾಗ ಮಾಡುತ್ತಾರೆ.

National Doctors’ Day 2022: ಇಂದು ರಾಷ್ಟ್ರೀಯ ವೈದ್ಯರ ದಿನ; ನೀವು ತಿಳಿಯಬೇಕಾದ ಮುಖ್ಯ ಅಂಶಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 01, 2022 | 9:17 AM

ವೈದ್ಯರು ಎಂದರೆ ಜೀವ ಉಳಿಸುವ ದೇವರಿದ್ದಂತೆ. ಸತತ ಪರಿಶ್ರಮ ಮತ್ತು ದಣಿವರಿಯದ ಕಾರ್ಯತತ್ಪರತೆಗೆ ವೈದ್ಯರು ಮತ್ತೊಂದು ಹೆಸರು. ವೈದ್ಯರನ್ನು ಜನರು ದೇವರ ನಂತರ ಇರುವ ನಮ್ಮ ಹಿತೈಷಿ ಎಂದೇ ಗೌರವಿಸುತ್ತಾರೆ. ಕೊರೊನಾ ಪಿಡುಗು ದೇಶವನ್ನು ಆವರಿಸಿದ್ದಾಗ ವೈದ್ಯರ ಪ್ರಾಮುಖ್ಯತೆ ಹಿಂದೆಂದಿಗಿಂತಲೂ ಹೆಚ್ಚು ಚೆನ್ನಾಗಿ ಮನವರಿಕೆಯಾಯಿತು. ಭಾರತದಲ್ಲಿ ಪ್ರತಿ ವರ್ಷವೂ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸುವ ಮೂಲಕ ವೈದ್ಯರ ಕೊಡುಗೆಯನ್ನು ನೆನೆದು, ಗೌರವಿಸಲಾಗುತ್ತದೆ.

ಭಾರತೀಯ ವೈದ್ಯಕೀಯ ಸಂಸ್ಥೆಯು (Indian Medical Association – IMA) ಜುಲೈ 1, 1991ರಂದು ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಿತು. ಡಾಕ್ಟರ್ ಬಿಧನ್ ಚಂದ್ರ ರಾಯ್ ಅವರ ಜನನ ಮತ್ತು ಮರಣ ದಿನವೂ ಇಂದೇ ಬರುವುದು ವಿಶೇಷ. ಅವರ ಗೌರವಾರ್ಥ ಜುಲೈ 1ರಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವೈದ್ಯರಾಗಿದ್ದ ರಾಯ್, ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿಯೂ ಆಗಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ತಜ್ಞರು, ಸುಧಾರಣಾ ವಾದಿ, ಸಾಮಾಜಿಕ ಕಾರ್ಯಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಅವರಿಗೆ 1961ರಲ್ಲಿ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ರಾಯ್ ಅವರ ಸ್ಮರಣಾರ್ಥ ಭಾರತೀಯ ವೈದ್ಯಕೀಯ ಸಂಸ್ಥೆಯು ‘ಬಿ.ಸಿ.ರಾಯ್ ರಾಷ್ಟ್ರೀಯ ಪುರಸ್ಕಾರ’ವನ್ನೂ ನೀಡುವ ಮೂಲಕ ವೈದ್ಯಕೀಯ, ವಿಜ್ಞಾನ, ತತ್ವಜ್ಞಾನ, ಸಾರ್ವಜನಿಕ ವಿದ್ಯಮಾನ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು ಗೌರವಿಸುತ್ತದೆ. ಪ್ರತಿವರ್ಷ ಜುಲೈ 1ರಂದು ರಾಷ್ಟ್ರಪತಿಗಳು ಈ ಪುರಸ್ಕಾರವನ್ನು ಪ್ರದಾನ ಮಾಡುತ್ತಾರೆ.

ವಿಶ್ವದ ವಿವಿಧೆಡೆ ಜನಸೇವೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಪರಿಶ್ರಮವನ್ನೂ ಈ ದಿನದಂದು ಗೌರವಿಸಲಾಗುತ್ತದೆ. ನಮ್ಮ ಸಮಾಜದಲ್ಲಿ ವೈದ್ಯರು ಅತಿಮುಖ್ಯ ಪಾತ್ರ ನಿರ್ವಹಿಸುತ್ತಾರೆ. ರೋಗಿಗಳನ್ನು ಗುಣಪಡಿಸಲು ತಮ್ಮ ಬದುಕನ್ನೇ ಮುಡಿಪಾಗಿ ಇಡುವ ಬಹುತೇಕ ವೈದ್ಯರು ಸಮಾಜಕ್ಕಾಗಿ ಖಾಸಗಿ ಸುಖ-ಸಂತೋಷಗಳನ್ನು ತ್ಯಾಗ ಮಾಡುತ್ತಾರೆ.

ಭಾರತದ, ಕರ್ನಾಟಕದ ಎಲ್ಲ ಸಹೃದಯ ವೈದ್ಯರಿಗೆ, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada