ಹೋರಾಟಕ್ಕೆ ಏಕಿಷ್ಟು ನಿರಾಸಕ್ತಿ: ಕನ್ನಡಿಗರ ಹೋರಾಟ ಹಾದಿಯ ಅವಲೋಕನ
ಕರ್ನಾಟಕದಲ್ಲಿ ವರ್ಷಗಳ ಹಿಂದೆ ನಡೆದ ಚಳವಳಿ ಮತ್ತು ಇಂದಿನ ಹೋರಾಟಗಳನ್ನು ಗಮನಿಸಿದರೆ ಸಂಘಟಿತ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಆದರೆ ಇದೇ ರೀತಿಯ ಹೋರಾಟಗಳೇ ನಾಡು- ನುಡಿಯನ್ನು ಜೀವಂತವಾಗಿರಿಸಿದ್ದು ಎಂಬುದನ್ನು ಅಲ್ಲಗೆಳೆಯುವಂತಿಲ್ಲ.
ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ನಡೆಸಿದ ಬಂದ್ಗೆ ಸಿಕ್ಕಿದ್ದು ನೀರಸ ಪ್ರತಿಕ್ರಿಯೆ. ರಾಜ್ಯವ್ಯಾಪಿ ಬಂದ್ ಕರೆ ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಯಿತು. ಜನಜೀವನ ಎಂದಿನಂತೆ ಇತ್ತು. ಅಂದಹಾಗೆ ಮೊನ್ನೆಯ ಬಂದ್ ನಡೆದದ್ದು ಯಾಕೆ ಎಂದು ಇನ್ನೊಮ್ಮೆ ಯೋಚಿಸಿನೋಡಿ.
ಇಲ್ಲೇ ಬೆಂಗಳೂರಿನಲ್ಲಿರುವ ಕೆಲ ಪರರಾಜ್ಯಗಳವರಲ್ಲಿ ‘ಪ್ರತಿಯೊಂದಕ್ಕೂ ಕನ್ನಡಿಗರು ಹೋರಾಟ ಮಾಡ್ತಾರಪ್ಪ’ ಎನ್ನುವ ಮನೋಭಾವ ಬಂದಿದೆ. ಇಂಥ ಹೋರಾಟಗಳು ಅನಿವಾರ್ಯ, ಹೀಗೆ ನಾವು ದನಿ ಎತ್ತಿದ ಕಾರಣದಿಂದಲೇ ಇಂದಿಗೂ ಬೆಂಗಳೂರಿನಲ್ಲಿ ಇಷ್ಟರಮಟ್ಟಿಗೆ ಕನ್ನಡ ಉಳಿದಿದೆ ಎನ್ನುವುದು ಕನ್ನಡಿಗರ ಮನದಮಾತು.
ಕಾವೇರಿ ಜಲ ವಿವಾದ, ಗಡಿವಿವಾದ, ಹಿಂದಿ ಹೇರಿಕೆ ಹೀಗೆ ಕನ್ನಡಿಗರನ್ನು ಒಂದೊಂದು ಕಾಲಕ್ಕೆ ಒಂದೊಂದು ಸಮಸ್ಯೆಗಳು ಬಾಧಿಸುತ್ತಲೇ ಇವೆ. ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನಗಳು ವಿಫಲವಾದಾಗ ಪ್ರತಿಭಟನೆಯ ಹಾದಿ, ಬಂದ್ ಕರೆ ಅನಿವಾರ್ಯವಾಗುತ್ತದೆ. ಬಂದ್ ಮಾಡಿ ಏನು ಪ್ರಯೋಜನ. ಅಂಥದ್ದೇನು ಸಮಸ್ಯೆ ಇದೆ ನಮಗೀಗ ಎಂದು ಕೇಳುವವರೇನೂ ಕಡಿಮೆ ಇಲ್ಲ ಬಿಡಿ.
ಯಾವುದೇ ರಾಜ್ಯ ಆಗಿರಲಿ ನಾಡು-ನುಡಿಯ ವಿಷಯಕ್ಕೆ ಧಕ್ಕೆ ಬಂದಾಗ ದನಿಯೆತ್ತಲೇ ಬೇಕು. ಅದು ಅನಿವಾರ್ಯ. ಅದು ಗಡಿ ವಿವಾದವೇ ಆಗಿರಲಿ ಅಥವಾ ಜಲ ವಿವಾದವೇ ಆಗಿರಲಿ ನಮಗೆ ಬೇಕಾದುದನ್ನು ಪಡೆಯಲು ನಾವು ಮೌನ ಮುರಿಯಲೇ ಬೇಕು.
ಕರ್ನಾಟಕ ಸಾಕಷ್ಟು ಚಳವಳಿಗಳ ಇತಿಹಾಸವುಳ್ಳ ರಾಜ್ಯ. ಬೌದ್ಧಿಕ ಹಾಗೂ ಭೌತಿಕವಾಗಿ ಕರ್ನಾಟಕವನ್ನು ಏಕೀಕರಣ ಮಾಡುವಲ್ಲಿ ಈ ಚಳವಳಿಗಳು ಪ್ರಧಾನ ಪಾತ್ರ ವಹಿಸಿಕೊಂಡಿವೆ. ಆದಾಗ್ಯೂ, ಏಕೀಕರಣದ ನಂತರದ ಚಳವಳಿಗಳ ರೂಪ ಮತ್ತು ರೀತಿ ಭಿನ್ನವಾಗಿತ್ತು. ವಿವಿಧ ಪ್ರದೇಶಗಳಲ್ಲಿನ ಭಾಷೆ, ಸಂಸ್ಕೃತಿಯೇ ವಿಭಿನ್ನವಾಗಿರುವ ಕಾರಣ ಹೋರಾಟದ ರೀತಿಗಳೂ ಭಿನ್ನವಾಗಿದ್ದವು. ಕನ್ನಡಿಗರು ಸಂಘಟಿತರಾಗುವ ಅನಿವಾರ್ಯ ಪರಿಸ್ಥಿತಿಯೂ ನಿರ್ಮಾಣಗೊಂಡಿತ್ತು.
ಕರ್ನಾಟಕದ ಗಡಿಭಾಗಗಳ ಸಮಸ್ಯೆಗಳ ಬಗ್ಗೆ ಹೇಳುವುದಾದರೆ ಇಲ್ಲಿನ ಚಳವಳಿಗಳು ಕನ್ನಡ ಬೆಳೆಸಿ ಉಳಿಸುವ ನಿಟ್ಟಿನಲ್ಲಿ ಮಾಡಿದ್ದವುಗಳಾಗಿವೆ. ನೆರೆಯ ರಾಜ್ಯಗಳೊಂದಿಗೆ ಅನ್ಯೋನ್ಯವಾಗಿದ್ದರೂ ಕನ್ನಡದ ಮೇಲೆ ಇತರ ಭಾಷೆಯ ಹೇರಿಕೆ, ಕನ್ನಡಿಗರ ಮೇಲೆ ಇತರ ಭಾಷಿಕರ ದಬ್ಬಾಳಿಕೆ ನಡೆದಾಗ ಕನ್ನಡಿಗರು ಎಚ್ಚೆತ್ತು ಹೋರಾಟ ನಡೆಸಿದ್ದಾರೆ. ಗಡಿಭಾಗದ ಜಿಲ್ಲೆಗಳ ವಿಷಯ ಒಂದೆಡೆಯಾದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಪ್ರಾಬಲ್ಯ ಕಡಿಮೆಯಾಗುತ್ತಿದ್ದಂತೆ ಹುಟ್ಟಿಕೊಂಡ ಸಮಸ್ಯೆಗಳು ಹಲವಾರು. ಹಾಗಾಗಿಯೇ ಬೆಂಗಳೂರಿನಲ್ಲಿ ಕನ್ನಡ ಚಳವಳಿ ಸಂಘಟಿತ ರೂಪ ಪಡೆದುಕೊಂಡಿತು.
ಚಳವಳಿ ನಡೆದು ಬಂದ ದಾರಿ…
ಕರ್ನಾಟಕದ ಇತಿಹಾಸದಲ್ಲಿಯೇ ಗೋಕಾಕ್ ಚಳವಳಿ ಒಂದು ಮೈಲಿಗಲ್ಲು. 1980ರ ದಶಕದಲ್ಲಿ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಮೊದಲಾದ ಬೇಡಿಕೆಗಳ ಬಗ್ಗೆ ಕವಿ ವಿ.ಕೃ. ಗೋಕಾಕ್ ವರದಿ ಸಿದ್ಧಪಡಿಸಿದ್ದರು. ಇದಕ್ಕೆ ಇತರ ಭಾಷಾ ವ್ಯಾಸಾಂಗದವರು ವಿರೋಧ ಮಾಡಿದಾಗ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು ಎಂದು ಕನ್ನಡಿಗರು ನಡೆಸಿದ ಚಳವಳಿಯೇ ಗೋಕಾಕ್ ಚಳವಳಿ. ಭಾಷೆಯ ವಿಚಾರಕ್ಕೆ ಬಂದಾಗ ಗೋಕಾಕ್ ಚಳವಳಿಯ ಸಂಘಟಿತ ಹೋರಾಟಗಳು ನಮಗೆ ಮಾದರಿಯಾಗುತ್ತದೆ.
ಚಳವಳಿಗಳ ಭಾಗವಾದ ಸಿನಿಮಾರಂಗ
ಚಳವಳಿಗಳಲ್ಲಿ, ಕನ್ನಡಪರ ಹೋರಾಟಗಳಲ್ಲಿ ನಮ್ಮ ಸಿನಿಮಾರಂಗ ಮಹತ್ತರ ಪಾತ್ರವನ್ನು ವಹಿಸಿದೆ. ಡಾ. ರಾಜ್ಕುಮಾರ್ ಭಾಗವಹಿಸಿದ ನಂತರ ಗೋಕಾಕ್ ಚಳವಳಿ ಯಾವ ರೀತಿ ಸಕ್ರಿಯವಾಯಿತು ಎಂಬುದು ನಮಗೆ ತಿಳಿದಿದೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳಿಗಂತ ಪರಭಾಷಾ ಸಿನಿಮಾಗಳಿಗೆ ಪ್ರಾತಿನಿಧ್ಯ ಜಾಸ್ತಿಯಾದಾಗ ಮ. ರಾಮಮೂರ್ತಿ, ಅ.ನ.ಕೃ ಮೊದಲಾದವರು ಪ್ರತಿಭಟನೆ ನಡೆಸಿದ್ದರು. ಡಾ. ರಾಜ್ಕುಮಾರ್, ಜಿ.ವಿ. ಅಯ್ಯರ್, ಬಾಲಕೃಷ್ಣ, ನರಸಿಂಹ ರಾಜು ಅವರನ್ನೊಳಗೊಂಡ ಕನ್ನಡ ಚಲನಚಿತ್ರ ಕಲಾವಿದರ ಸಂಘ ಅಸ್ತಿತ್ವಕ್ಕೆ ಬಂತು. ಈ ಸಂಘಟನೆಯ ಅಡಿಯಲ್ಲಿ ಅನೇಕ ಸಿನಿಮಾ ನಿರ್ಮಾಣವಾಯಿತು. ಕನ್ನಡದ ಅಸ್ಮಿತೆಗಾಗಿರುವ ಕಾರ್ಯಗಳೂ, ಪ್ರತಿಭಟನೆಗಳೂ ನಡೆದು ಇಲ್ಲೊಂದು ಭರವಸೆಯ ವಾತಾವರಣ ನಿರ್ಮಾಣವಾಯಿತು.
ಕಾವೇರಿ ಜಲ ವಿವಾದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ವಿವಾದಕ್ಕೆ ಶತಮಾನಗಳ ಹಿನ್ನೆಲೆಯಿದೆ. ಕಾವೇರಿ ನದಿ ನೀರು ಹಂಚಿಕೆ ಕುರಿತು 6 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧಿಕರಣ 2007ರ ಫೆ.5ರಂದು ಕಾವೇರಿ ನದಿ ಪಾತ್ರದಲ್ಲಿ 740 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 419 ಟಿಎಂಸಿ ನೀರು ತಮಿಳುನಾಡಿಗೆ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪಾಂಡಿಚೇರಿಗೆ 7 ಟಿಎಂಸಿ ಮತ್ತು 4 ಟಿಎಂಸಿ ನೀರು ಸಮುದ್ರಕ್ಕೆ ಹರಿಯುಲು ಬಿಡುವಂತೆ ಅಂತಿಮ ತೀರ್ಪು ನೀಡಿತ್ತು. 2007 ಫೆ.5ರಲ್ಲಿ ಹೊರಡಿಸಿದ್ದ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಬಿದ್ದಿದ್ದು 6 ವರ್ಷಗಳ ಬಳಿಕ. ಅಂದರೆ 2013 ಫೆ. 20ರಂದು. ಅಂದಿನಿಂದ ಇಂದಿನ ವರೆಗೆ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕನ್ನಡಿಗರು ಹೋರಾಟ ಮಾಡಿಕೊಂಡೇ ಬಂದಿದ್ದಾರೆ.
ಹಿಂದಿ ಹೇರಿಕೆ ವಿರುದ್ಧ ಮುಂದುವರಿದ ಹೋರಾಟ ಭಾಷಾವಾರು ಪ್ರಾಂತ್ಯಗಳಾಗಿ ದೇಶವನ್ನು ವಿಂಗಡಿಸಿದರೂ ಇಂದಿಗೂ ಕೇಂದ್ರ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರಿಕೆ ಮಾಡುತ್ತಲೇ ಇದೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟಗಳು ಸಕ್ರಿಯವಾಗಿವೆ. ಈ ಹೋರಾಟದ ಫಲವಾಗಿ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಅಳವಡಿಸಿದ್ದ ಹಿಂದಿ ನಾಮಫಲಕಗಳು ತೆರವಾಯಿತು.
ಗಾಂಚಾಲಿ ಬಿಡಿ ಕನ್ನಡ ಮಾತಾಡಿ ಬೆಂಗಳೂರು ಎಂದರೆ ಹತ್ತು ಹಲವು ಭಾಷೆಗಳ ಸಂಗಮ ಭೂಮಿ. ಬದುಕು ಕಟ್ಟಿಕೊಳ್ಳುವವರ ಕರ್ಮಭೂಮಿಯಾದ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವರ ಸಂಖ್ಯೆ ಕ್ಷೀಣಿಸುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇಲ್ಲಿ ಸೃಷ್ಟಿಯಾಗಿದೆ. ಕನ್ನಡದವರೇ ಕನ್ನಡ ಮಾತನಾಡಲು ಹಿಂಜರಿಯುತ್ತಿರುವಾಗ ಗಾಂಚಾಲಿ ಬಿಡಿ ಕನ್ನಡ ಮಾತಾಡಿ ಎಂಬ ವಾಕ್ಯ ಕನ್ನಡಿಗರನ್ನು ಸದಾ ಎಚ್ಚರದಿಂದ ಇರುವಂತೆ ಮಾಡುತ್ತಿದೆ.
ಕನ್ನಡ ಗೊತ್ತಿಲ್ಲ ಎಂದು ಹೇಳುವವರಿಗೆ ಉತ್ಸಾಹಿ ಯುವಕರ ತಂಡಗಳು ಕನ್ನಡ ಕಲಿಸುತ್ತಿವೆ. ಇದೇ ರೀತಿ ಹಲವಾರು ಸಂಸ್ಥೆಗಳು ನಾಡು- ನುಡಿ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿವೆ. ಕನ್ನಡ ನುಡಿ ಹಕ್ಕುಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಡಬ್ಬಿಂಗ್, ಕನ್ನಡದಲ್ಲಿ ಗ್ರಾಹಕ ಸೇವೆ, ಕನ್ನಡ ಕಲಿಕೆಗಾಗಿ ಹೋರಾಟ ಮತ್ತು ಕನ್ನಡದಲ್ಲಿ ಆಡಳಿತಕ್ಕಾಗಿರುವ ಹೋರಾಟಗಳು ನಡೆದಿವೆ. ಕನ್ನಡ ಧ್ವಜ ಹಿಡಿದುಕೊಂಡು ರಸ್ತೆ ತಡೆಯೊಡ್ಡಿ ಪ್ರತಿಭಟನೆ ನಡೆಸುವ ಮೂಲಕ ಹೋರಾಟ ಮಾಡುವುದಲ್ಲದೆ ಸಾಮಾಜಿಕ ತಾಣಗಳಲ್ಲಿಯೂ ಅಭಿಯಾನಗಳನ್ನು ಕೈಗೊಂಡು ಕನ್ನಡದ ಉಳಿವಿಗಾಗಿ ಹೋರಾಟ ಮಾಡುವ ಕನ್ನಡಾಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಹೋರಾಟ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಪದೇಪದೇ ಮರಾಠಿ ಭಾಷಿಗರು ಮತ್ತು ಕನ್ನಡಿರ ನಡುವೆ ತಿಕ್ಕಾಟ ನಡೆಯುತ್ತವೇ ಇದೆ. ಗಡಿಜಿಲ್ಲೆಗಳಲ್ಲಿ ಇದು ಸಾಮಾನ್ಯ ವಿಷಯ ಎಂದು ಇದನ್ನು ನಿರ್ಲಕ್ಷಿಸುವಂತಿಲ್ಲ. ಕರ್ನಾಟಕ ಏಕೀಕರಣದ ನಂತರ ಹುಟ್ಟಿಕೊಂಡ ಭಾಷಾ ಸಮಸ್ಯೆಗಳಿಗೆ ಇಲ್ಲಿಯವರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂಬುದಕ್ಕೆ ಮುಖ್ಯ ಕಾರಣ ರಾಜ್ಯದ ರಾಜಕೀಯ ನಿಲುವು ಅಂತಾರೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ವೆಂಕಪ್ಪ ಚಂದರಗಿ.
ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾಗಿ 8 ವರ್ಷಗಳಾಯಿತು. ಗಡಿ ಜಿಲ್ಲೆ ಅಭಿವೃದ್ಧಿಯಾಗಬೇಕು, ಉತ್ತರ ಕರ್ನಾಟಕದ ಸವಾಲುಗಳಿಗೆ ಪರಿಹಾರವಾಗಬೇಕು ಎನ್ನುವ ಉದ್ದೇಶದೊಂದಿಗೆ ಇಲ್ಲಿ ಸುವರ್ಣ ಸೌಧ ನಿರ್ಮಾಣವಾಗಿದ್ದರೂ ಅಲ್ಲಿ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ. ಬೆಳಗಾವಿಯನ್ನು ಶಕ್ತಿ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಸುವರ್ಣ ಸೌಧ ತಲೆ ಎತ್ತಿದರೂ ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಗಡಿನಾಡ ಜನರ ಹಿತಕಾಯುವ ಗಡಿ ಸಂರಕ್ಷಣಾ ಆಯೋಗ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರ ಇರುವುದು ಬೆಂಗಳೂರಿನಲ್ಲಿ. ಪ್ರಾಧಿಕಾರದಲ್ಲಿರುವವರಿಗೆ ಗಡಿಜಿಲ್ಲೆಗಳ ಬಗ್ಗೆ ಗೊತ್ತಿರಬೇಕು. ಆದರೆ ಅಲ್ಲಿರುವವರಿಗೆ ಈ ಬಗ್ಗೆ ಏನೂ ಗೊತ್ತಿಲ್ಲ. ನಮ್ಮಲ್ಲಿ ಗಡಿ ಉಸ್ತುವಾರಿ ಸಚಿವರು ಕೂಡಾ ಇಲ್ಲ. ಒಂದಡೆ ಎಂಇಎಸ್ ವಿರುದ್ಧ ಹೋರಾಟ ನಡೆಸಬೇಕಾದ ಪರಿಸ್ಥಿತಿ, ಇನ್ನೊಂದೆಡೆ ರಾಜ್ಯ ಸರ್ಕಾರದ ಮುಂದೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿರುವ ಹೋರಾಟ. ನಾವು ಕರ್ನಾಟಕದ ಯಾವುದೇ ಭಾಗವನ್ನು ಬಿಟ್ಟು ಕೊಡುವುದಿಲ್ಲ. ಅಖಂಡ ಕರ್ನಾಟಕ ಎಂದು ರಾಜಕಾರಣಿಗಳು ಹೇಳಿಕೆ ಕೊಡುತ್ತಾರೆ. ಅದು ಬಿಟ್ಟರೆ ಗಡಿ ಜಿಲ್ಲೆಯ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸುವುದಿಲ್ಲ. ರಾಜಕಾರಣಕ್ಕಾಗಿ ಮರಾಠಿಗರ ಔಲೈಕೆ ನಡೆಯುತ್ತಿದೆ. ಹಾಗಾಗಿ ನಮಗೆ ಹೋರಾಟ ಅನಿವಾರ್ಯ ಆಗಿ ಬಿಟ್ಟಿದೆ ಅಂತಾರೆ ಚಂದರಗಿ.
ಮರಾಠ ಅಭಿವೃದ್ಧಿ ನಿಗಮಕ್ಕೆ ವಿರೋಧ ವಾರಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಘೋಷಿಸಿ ₹50 ಕೋಟಿ ಅನುದಾನ ನೀಡಿತ್ತು. ಸರ್ಕಾರದ ಈ ನಡೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಬಂದ್ ಗೆ ಕರೆ ನೀಡಿದ್ದವು. ಬಂದ್ ದಿನ ಕನ್ನಡ ಪರ ಸಂಘಟನೆಗಳು ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾಗಲೇ ಧಾರವಾಡದಲ್ಲಿ ಮರಾಠ ಸಮುದಾಯವರು ವಿಜಯೋತ್ಸವ ಆಚರಣೆ ಮಾಡಿದ್ದರು. ಇದೇ ರೀತಿ ಗದಗದಲ್ಲಿಯೂ ಮರಾಠಿಗರು ಶಿವಾಜಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದರು.
ಕರ್ನಾಟಕದಲ್ಲಿ ವರ್ಷಗಳ ಹಿಂದೆ ನಡೆದ ಚಳವಳಿ ಮತ್ತು ಇಂದಿನ ಹೋರಾಟಗಳನ್ನು ಗಮನಿಸಿದರೆ ಸಂಘಟಿತ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಅವರೇನೋ ಮಾಡ್ತಾರೆ ನಮಗ್ಯಾಕೆ ಬಿಡಿ ಎಂಬ ಧೋರಣೆಯಿಂದ ಹೋರಾಟಗಳನ್ನು ನಿರ್ಲಕ್ಷಿಸುವ ಜನರೇ ಹೆಚ್ಚು. ಆದರೆ ಇದೇ ರೀತಿಯ ಹೋರಾಟಗಳೇ ನಾಡು- ನುಡಿಯನ್ನು ಜೀವಂತವಾಗಿರಿಸಿದ್ದು ಎಂಬುದನ್ನು ಅಲ್ಲಗೆಳೆಯುವಂತಿಲ್ಲ.
-ರಶ್ಮಿ ಕೆ.