ಶಿವರಾತ್ರಿಯನ್ನು ಹೇಗೆ ಆಚರಿಸಬೇಕು..? ಏಕೆ ಆಚರಿಸಬೇಕು..?

ಹಿಂದೂ ಸಂಪ್ರದಾಯದ ಪ್ರಕಾರ, ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಮಾಘ ಮಾಸ, ಕೃಷ್ಣ ಪಕ್ಷದ, ತ್ರಯೋದಶಿಯಂದು ಬಂದಿರುವ ಈ ಶಿವರಾತ್ರಿ ಹಬ್ಬ ಶಿವಭಕ್ತರ ಪಾಲಿಗೆ ಅತ್ಯಂತ ವಿಶೇಷ. ಶಿವರಾತ್ರಿಯಂದು ದಿನವಿಡೀ ಪೂಜೆ ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ. ಶಿವರಾತ್ರಿ ಹಬ್ಬ ಎಲ್ಲಾ ಹಬ್ಬಗಳಿಗಿಂತ ಅತ್ಯಂತ ವಿಶೇಷ. ಯಾಕಂದ್ರೆ ಶಿವರಾತ್ರಿ ಹಬ್ಬ ಎಲ್ಲಾ ಹಬ್ಬಗಳಂತೆ ಭಕ್ಷ್ಯ ಭೋಜನಗಳನ್ನು ಮಾಡದೇ ದಿನವಿಡೀ ಉಪವಾಸ ಮಾಡಲಾಗುತ್ತೆ. ಜೊತೆಗೆ ಬೇರೆ ಹಬ್ಬಗಳಂತೆ ದೇವರಿಗೆ ಹಗಲಿನಷ್ಟೇ ಪೂಜೆ ನಡೆಯುವುದಿಲ್ಲ. […]

ಶಿವರಾತ್ರಿಯನ್ನು ಹೇಗೆ ಆಚರಿಸಬೇಕು..? ಏಕೆ ಆಚರಿಸಬೇಕು..?
Follow us
ಸಾಧು ಶ್ರೀನಾಥ್​
|

Updated on:Feb 21, 2020 | 4:20 PM

ಹಿಂದೂ ಸಂಪ್ರದಾಯದ ಪ್ರಕಾರ, ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಮಾಘ ಮಾಸ, ಕೃಷ್ಣ ಪಕ್ಷದ, ತ್ರಯೋದಶಿಯಂದು ಬಂದಿರುವ ಈ ಶಿವರಾತ್ರಿ ಹಬ್ಬ ಶಿವಭಕ್ತರ ಪಾಲಿಗೆ ಅತ್ಯಂತ ವಿಶೇಷ. ಶಿವರಾತ್ರಿಯಂದು ದಿನವಿಡೀ ಪೂಜೆ ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ. ಶಿವರಾತ್ರಿ ಹಬ್ಬ ಎಲ್ಲಾ ಹಬ್ಬಗಳಿಗಿಂತ ಅತ್ಯಂತ ವಿಶೇಷ. ಯಾಕಂದ್ರೆ ಶಿವರಾತ್ರಿ ಹಬ್ಬ ಎಲ್ಲಾ ಹಬ್ಬಗಳಂತೆ ಭಕ್ಷ್ಯ ಭೋಜನಗಳನ್ನು ಮಾಡದೇ ದಿನವಿಡೀ ಉಪವಾಸ ಮಾಡಲಾಗುತ್ತೆ. ಜೊತೆಗೆ ಬೇರೆ ಹಬ್ಬಗಳಂತೆ ದೇವರಿಗೆ ಹಗಲಿನಷ್ಟೇ ಪೂಜೆ ನಡೆಯುವುದಿಲ್ಲ.

ಶಿವರಾತ್ರಿಯಂದು ರಾತ್ರಿಯ ಹೊತ್ತು ಶಿವಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ ಇದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭದಿನವೇ ಈ ಶಿವರಾತ್ರಿ ಎನ್ನಲಾಗುತ್ತೆ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ, ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಅನ್ನೋ ನಂಬಿಕೆಯೂ ಇದೆ.

ಶಿವರಾತ್ರಿಯಂದು ಕೈಲಾಸವಾಸಿ ಶಿವನಿಗೆ ಕೋಟಿ ಕೋಟಿ ಭಕ್ತರು ಪೂಜಿಸಿ, ಭಜಿಸುತ್ತಾರೆ. ಶಂಭೋ ಶಂಕರನನ್ನು ನೆನೆದು ಪುನೀತರಾಗ್ತಾರೆ. ನಿರಾಭರಣ-ನಿರ್ಗುಣ-ನಿರಾಕಾರನಾದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ಭಕ್ತಿಯಿಂದ ಪ್ರಾರ್ಥಿಸಿ, ಉಪವಾಸ, ಜಾಗರಣೆ ಮಾಡಿದ್ರೆ ಆತನ ಸಂಪೂರ್ಣ ಕೃಪೆ ಪ್ರಾಪ್ತಿಯಾಗುತ್ತೆ ಅಂತಾ ಪುರಾಣಗಳು ಹೇಳುತ್ತವೆ. ಸಾಮಾನ್ಯವಾಗಿ ಶಿವರಾತ್ರಿ ಹಬ್ಬ ಚತುರ್ದಶಿಯಲ್ಲಿ ಬರುತ್ತೆ.

ಆದರೆ ಈ ವರ್ಷ ಶಿವರಾತ್ರಿ ಹಬ್ಬ ತ್ರಯೋದಶಿಯ ಕೊನೆಯಲ್ಲಿ ಬಂದಿರುವುದು ವಿಶೇಷ. ಯಾಕಂದ್ರೆ ಚತುರ್ದಶಿ ಶಿವರೂಪವಾದ್ರೆ, ತ್ರಯೋದಶಿ ಶಕ್ತಿರೂಪ ಎನ್ನಲಾಗುತ್ತೆ. ಹಾಗಾಗಿ ಈ ಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ, ನಿಯಮಾನುಸಾರ ಮಾಡಿದ್ರೆ ಶಿವನ ಕೃಪೆಯೊಂದಿಗೆ ಶಕ್ತಿದೇವಿಯ ಅನುಗ್ರಹವೂ ಪ್ರಾಪ್ತಿಯಾಗುತ್ತೆ. ಶಿವಭಕ್ತರು ದೇಶ, ವಿದೇಶ ಸೇರಿದಂತೆ ಜಗತ್ತಿನಾದ್ಯಂತ ಇದ್ದಾರೆ. ಹಾಗಾಗಿ ಎಲ್ಲೆಡೆ ಈ ಶಿವರಾತ್ರಿ ಹಬ್ಬವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತೆ.

ಶಿವ ಪುರಾಣಗಳ ಪ್ರಕಾರ, ಶಿವನಿಗೆ ಪ್ರಿಯವಾದ ಈ ದಿನ ಭಕ್ತಿಯಿಂದ ಆತನ ಬಳಿ ಏನೇ ಬೇಡಿದ್ರೂ ಅದನ್ನು ಕರುಣಿಸ್ತಾನೆ ಅನ್ನೋ ನಂಬಿಕೆ ಇದೆ. ಅದ್ರಲ್ಲೂ ವಿಶೇಷವಾಗಿ ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡ್ತಾ ಶಿವನನ್ನು ಪ್ರಾರ್ಥಿಸಿದ್ರೆ ಮನೋಕಾಮನೆಗಳು ಈಡೇರುತ್ತವೆ ಅಂತಾ ಹೇಳಲಾಗುತ್ತೆ. ಅಷ್ಟಕ್ಕೂ ಶಿವರಾತ್ರಿ ಹಬ್ಬವನ್ನು ನಿಯಮಾನುಸಾರವಾಗಿ ಆಚರಿಸಿದ್ರೆ ಮತ್ತಷ್ಟೂ ವಿಶೇಷ ಫಲಗಳನ್ನು ಪಡೆಯಬಹುದು ಅಂತಾ ಧರ್ಮಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ರೆ ಶಿವರಾತ್ರಿ ಹಬ್ಬವನ್ನು ಆಚರಿಸೋದು ಹೇಗೆ?

ಶಿವರಾತ್ರಿ ಹಬ್ಬದ ಆಚರಣೆಗಳು: 1.ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಸ್ನಾನ ಮಾಡಿ. 2.ಗಂಗಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಸ್ನಾನ ಮಾಡಿದ್ರೆ ಒಳ್ಳೇದು. 3.ಮನೆಯಲ್ಲಿ ಕೈಲಾಸಯಂತ್ರ ರಚಿಸಿ, ಶಿವನ ಪೂಜೆ ಮಾಡಿ. 4.ಶಿವನಿಗೆ ಅತಿ ಪ್ರಿಯವಾದ ಬಿಲ್ವಪತ್ರೆಗಳನ್ನು ಅರ್ಪಿಸಿ. 5.ತಿಲಗಿ ಪುಷ್ಪ, ಕೆಂಪು ಹೂಗಳಿಂದ ಶಿವಲಿಂಗವನ್ನು ಅಲಂಕಾರ ಮಾಡಿ. 6.ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿ. 7.ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡಿ. 8.ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆ ಮಾಡಿ. 9.ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ 11 ಬಾರಿ ಪಠಿಸಿ. 10.ಊಟ ಮಾಡದೆ ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಮಾಡಬಹುದು. 11.ಸಾಧ್ಯವಾದರೆ, ದಿನವಿಡೀ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸ ಮಾಡಿ. 12.ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ, ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಿ. 13.ಇಡೀ ರಾತ್ರಿ ಶಿವ ದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ಮಾಡಿ. 14.ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ.

ಪುರಾಣಗಳ ಪ್ರಕಾರ, ಶಿವ ಎಲ್ಲಾ ಜೀವರಾಶಿಗಳನ್ನು ಪೊರೆಯುತ್ತಾನೆ, ಆಡಂಬರಗಳಿಂದ ಮುಕ್ತನಾಗಿದ್ದಾನೆ. ಆತ ಆಭರಣ ಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನುಟ್ಟು, ಸ್ಮಶಾನದಲ್ಲಿ ವಾಸಿಸುವ ಶಿವ ಅತ್ಯಂತ ಸರಳ ಹಾಗೂ ಅಮೋಘ ಶಕ್ತಿ ಹೊಂದಿದ್ದಾನೆ. ಯಾರಾದರೂ ಸರಳತೆ, ಪ್ರಾಮಾಣಿಕತೆ ಹಾಗೂ ನಿಷ್ಕಲ್ಮಶ ಮನಸ್ಸಿನಿಂದ ಛಲಬಿಡದೆ ಶಿವನ ಧ್ಯಾನ ಮಾಡಿದ್ರೆ ಆತ ಪ್ರಸನ್ನನಾಗ್ತಾನೆ ಎನ್ನಲಾಗುತ್ತೆ. ಸಾಧನೆಯ ದ್ಯೋತಕ, ಧ್ಯಾನಪ್ರಿಯ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಹಾಗೂ ವಿಶ್ವಾಸ ಭರಿತರಾಗಿ ಶಿವರಾತ್ರಿಯಂದು ಧ್ಯಾನ ಮಾಡಬೇಕು ಎನ್ನಲಾಗುತ್ತೆ. ಇಂತಹ ಶಿವರಾತ್ರಿಗೆ ಅನೇಕ ಪೌರಾಣಿಕ ಕಥೆಗಳೂ ಇವೆ.

ಶಿವರಾತ್ರಿಯ ಹಿಂದಿರೋ ಪೌರಾಣಿಕ ಕಥೆಗಳು: 1.ಶಿವಪುರಾಣದ ಪ್ರಕಾರ, ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಅನ್ನೋ ವಿಷಯಕ್ಕೆ ವಾಗ್ವಾದ ನಡೆಯುತ್ತೆ. ಆಗ ಶಿವ ಮಧ್ಯ ಪ್ರವೇಶಿಸಿ, ತನ್ನ ಮೂಲವನ್ನು ಕಂಡು ಹಿಡಿಯಲು ಬ್ರಹ್ಮ, ವಿಷ್ಣುವಿಗೆ ಸೂಚಿಸ್ತ್ತಾನೆ. ಆದ್ರೆ, ಅವರಿಬ್ಬರು ಶಿವನ ಮೂಲವನ್ನು ಕಂಡು ಹಿಡಿಯುವಲ್ಲಿ ವಿಫಲರಾಗ್ತಾರೆ. ಬ್ರಹ್ಮ ಮೋಸದಿಂದ ಕೇತಕಿ ಪುಷ್ಪದ ಸಹಾಯದಿಂದ ಸುಳ್ಳು ಹೇಳಿರ್ತಾನೆ. ಇದನ್ನರಿತ ಶಿವ, ಬ್ರಹ್ಮನಿಗೆ ಯಾರೂ ಪೂಜಿಸಬಾರದು ಅಂತಾ ಶಾಪ ನೀಡಿ, ತಾನು ಲಿಂಗರೂಪ ತಾಳುತ್ತಾನೆ. ಇದೇ ಕಾರಣಕ್ಕೆ ಶಿವರಾತ್ರಿಯನ್ನು ಆಚರಿಸಲಾಗುತ್ತೆ ಎನ್ನಲಾಗುತ್ತೆ.

2.ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವನ್ನು ಶಿವರಾತ್ರಿ ಹಬ್ಬವನ್ನಾಗಿ ಆಚರಿಸಲಾಗುತ್ತೆ ಅಂತಾ ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನಾಮ ಪಠಿಸಿ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾಗಿದ್ದಾಳೆ ಅನ್ನೋ ಪ್ರತೀತಿ ಇದೆ.

3.ಶಿವ ರುದ್ರತಾಂಡವ ಆಡಿದ ದಿನದಂದೇ ಶಿವರಾತ್ರಿ ಆಚರಿಸಲಾಗುತ್ತೆ ಎನ್ನಲಾಗುತ್ತೆ.

4.ಪುರಾಣಗಳ ಪ್ರಕಾರ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರಮಥನ ನಡೆದು ಕಾರ್ಕೋಟಕ ವಿಷ ಉದ್ಭವಿಸುತ್ತೆ. ನಂತರ ಆ ವಿಷವನ್ನು ಶಿವ ಕುಡಿಯುತ್ತಾನೆ. ಕಾರ್ಕೋಟಕ ವಿಷ ಶಿವನ ಗಂಟಲೊಳಗೆ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಿದ್ದಳಂತೆ. ಇದೇ ಕಾರಣಕ್ಕೆ ಶಿವಭಕ್ತರು ಶಿವರಾತ್ರಿಯಂದು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸ್ತ್ತಾರೆ ಅಂತಾ ಪುರಾಣಗಳಲ್ಲಿ ಉಲ್ಲೇಖವಾಗಿದೆ.

5.ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ಶಿವರಾತ್ರಿ ದಿನ ಅಂತಾ ಕೆಲ ಪುರಾಣಗಳು ಹೇಳುತ್ತವೆ.

6.ಶಿವ ಪುರಾಣಗಳ ಪ್ರಕಾರ, ಸಂಕಷ್ಟದಲ್ಲಿದ್ದ ಚಂದ್ರದೇವನನ್ನು ರಕ್ಷಿಸಿ, ಶಿವ ತನ್ನ ಜಡೆಯಲ್ಲಿ ಆತನನ್ನು ಇರಿಸಿಕೊಂಡು, ಅಭಯವನ್ನು ನೀಡಿದ್ದು ಇದೇ ಶಿವರಾತ್ರಿಯಂದು ಅಂತಾ ಹೇಳಲಾಗುತ್ತೆ.

7.ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯ ಪ್ರಕಾರ, ಸಂಕಷ್ಟದಲ್ಲಿದ್ದ ಬೇಡನೊಬ್ಬ ಆಕಸ್ಮಿಕವಾಗಿ ಬಿಲ್ವಪತ್ರೆಗಳನ್ನು ಕಿತ್ತುಹಾಕಬೇಕಾದ್ರೆ, ಕೆಳಗಡೆಯಿದ್ದ ಶಿವಲಿಂಗದ ಮೇಲೆ ಅವು ಬೀಳುತ್ತವೆ. ಆ ಬೇಡ ಅಂದು ರಾತ್ರಿಯಿಡೀ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಅರ್ಪಿಸಿದನೆಂದು ಶಿವ ಆತನಿಗೆ ಅಭಯ ನೀಡಿ ಕಷ್ಟಗಳನ್ನೆಲ್ಲಾ ಪರಿಹರಿಸ್ತಾನೆ. ಅಂದಿನಿಂದ ಶಿವಭಕ್ತರು ಶಿವರಾತ್ರಿಯನ್ನು ಪೂಜಿಸಲು ಆರಂಭಿಸಿದ್ರು ಎನ್ನಲಾಗುತ್ತೆ. ಶಿವರಾತ್ರಿ ಆಚರಿಸೋದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.

ಶಿವರಾತ್ರಿ ಆಚರಣೆಯ ಹಿಂದಿರೋ ವೈಜ್ಞಾನಿಕ ಕಾರಣ: 1.ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಕಾಲ ವ್ಯತ್ಯಾಸಕ್ಕೆ ನಮ್ಮ ದೇಹ ಹೊಂದಿಕೊಳ್ಳಬೇಕಾಗುತ್ತೆ. ಚಳಿಗಾಲ ಮುಗಿದು ಬೇಸಿಗೆ ಕಾಲ ಪ್ರಾರಂಭವಾಗುವ ಈ ಸಮಯದಲ್ಲಿ, ಚಳಿಗಾಲ ಉತ್ತುಂಗದಲ್ಲಿದ್ದು, ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತೆ. ಇಂದು ಸೂರ್ಯನ ಶಾಖ ಕಡಿಮೆ ಇದ್ದು, ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತೆ. ಈ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗಿ, ಉಸಿರಾಟದ ತೊಂದರೆಯಾಗುವ ಸಾಧ್ಯತೆ ಇರುತ್ತೆ. ಹೀಗಾಗೇ ಶಿವರಾತ್ರಿ ಆಚರಣೆ ಬಂದಿದೆ ಅಂತಾ ವೈಜ್ಞಾನಿಕವಾಗಿ ಹೇಳಲಾಗುತ್ತೆ.

2.ಶಿವರಾತ್ರಿಯಂದು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ ಎನ್ನಲಾಗುತ್ತೆ. ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ಮಾಡಿದ್ರೆ, ಬಿಲ್ವ ಪತ್ರೆಯ ಮೂಲಕ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತೆ. ಇದಿಷ್ಟೇ ಅಲ್ಲದೇ, ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುತ್ತೆ. ಶಿವನ ಲಿಂಗವು ಕಲ್ಲಿನದಾಗಿದ್ದು, ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಯಾಕಂದ್ರೆ ಶಿವಲಿಂಗವನ್ನು ವಿಶಿಷ್ಟ ಕಲ್ಲಿನಿಂದ ಮಾಡಲಾಗುತ್ತೆ ಎನ್ನಲಾಗುತ್ತೆ.

3.ಶಿವನನ್ನು ಪೂಜಿಸುವ ದೇಗುಲ, ವಾಸ್ತು ಪ್ರಕಾರವಾಗಿ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು, ಅದನ್ನು ಶಿವ ಶಕ್ತಿಯೆಂದೂ ಕರೆಯಲಾಗುತ್ತೆ. ಇಲ್ಲಿ ಮಂತ್ರಗಳನ್ನು ಪಠಿಸ್ತ್ತಾ, ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡಿದ್ರೆ, ಸುತ್ತಮುತ್ತಲೆಲ್ಲಾ ಹೆಚ್ಚಿನ ಶಕ್ತಿ ಬರುತ್ತೆ ಅನ್ನೋ ನಂಬಿಕೆ ಇದೆ.

ಹೀಗೆ ಮಾಘ ಮಾಸ ಕೃಷ್ಣ ಪಕ್ಷದ ಈ ದಿನ ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ, ಶಿವನ ಕೃಪೆಗೆ ಪಾತ್ರರಾಗುವ ಶುಭ ದಿನವಿದು. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದ್ರೆ, ನಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತಿಯಾಗುತ್ತೆ ಅನ್ನೋದು ಭಕ್ತರ ಬಲವಾದ ನಂಬಿಕೆ.

Published On - 4:08 pm, Fri, 21 February 20