ಆನೆ-ಮಾವುತ ಸಂಬಂಧ, ಜನ್ಮಜನ್ಮದ ಅನುಬಂಧ ಎಂದು ಹೇಳುವ ಸಿನಿಮಾ ಕುಮ್ಕಿ
World Elephant Day: ಮಾವುತ ಮತ್ತು ಆನೆ, ಮಾವುತ ಮತ್ತು ಅವನ ಪ್ರೇಯಸಿ; ಹೀಗೆ ಮೂರು ಜೀವಗಳ ನಡುವಣ ಎರಡು ಸಂಬಂಧಗಳ ಎಳೆಗಳು ಏಕಕಾಲಕ್ಕೆ ಚಿತ್ರವನ್ನು ಮುಂದಕ್ಕೆ ಎಳೆದೊಯ್ಯುತ್ತಿರುತ್ತವೆ.
ಭಾವನೆಗಳನ್ನು ಅನುಭವಿಸುವುದರಲ್ಲಿ, ನೆನಪು ಮತ್ತು ಆಲೋಚನಾ ಕ್ರಮದಲ್ಲಿ ಮನುಷ್ಯನಿಗೆ ಅತ್ಯಂತ ಸಮೀಪದಲ್ಲಿರುವ ಪ್ರಾಣಿ ಆನೆ. ಜೀವಮಾನವಿಡೀ ಆನೆಯೊಂದಿಗೆ ಒಡನಾಟ ಇಟ್ಟುಕೊಳ್ಳುವ ಮಾವುತರನ್ನು ಆನೆಯು ತನ್ನ ಜೀವದಷ್ಟು ಪ್ರೀತಿಸುತ್ತದೆ. ಆನೆ-ಮಾವುತರ ಸಂಬಂಧಗಳ ಬಗ್ಗೆ, ಮಾವುತ ಮೃತಪಟ್ಟ ದುಃಖದಲ್ಲಿ ಆನೆಯು ಕೃಶವಾದ ಬಗ್ಗೆ, ಆಹಾರ ತ್ಯಜಿಸಿ ತೀರಿಹೋದ ಬಗ್ಗೆ ಸಾಕಷ್ಟು ಕಥೆಗಳಿವೆ.
ಆನೆ-ಮಾವುತರ ಒಡನಾಟವನ್ನು ಹೊಸ ಕಾಲಘಟ್ಟಕ್ಕೆ ತಕ್ಕಂತೆ ಕಟ್ಟಿಕೊಡುವ ಅಪರೂಪದ ಸಿನಿಮಾ ಕುಮ್ಕಿ. 2012ರಲ್ಲಿ ತೆರೆಕಂಡ ಪ್ರಭು ಸಾಲೊಮನ್ ನಿರ್ದೇಶನಕ ‘ಕುಮ್ಕಿ’ ಚಿತ್ರವನ್ನು ನೆನಪಿಸಿಕೊಳ್ಳಲು ಇಂದು (ಆಗಸ್ಟ್ 12) ವಿಶ್ವ ಆನೆಗಳ ದಿನ ಎನ್ನುವುದು ಒಂದು ನೆಪವಷ್ಟೇ. ಕುಮ್ಕಿ ಎನ್ನುವುದೂ ಕೂಡ ಏಕಕಾಲಕ್ಕೆ ಕಾಡಾನೆ ಮತ್ತು ಸಾಕಾನೆಗಳನ್ನು ಸಂಬೋಧಿಸುವ, ಒಟ್ಟಾರೆ ಆನೆಗಳ ಜಗತ್ತಿಗೆ ಅತ್ಯಂತ ಹತ್ತಿರವಾದ ಪಾರಿಭಾಷಿತ ಪದ. ಕಾಡಾನೆಗಳ ಕಾಟದಿಂದ ಜನರನ್ನು ಕಾಪಾಡುವ ಆನೆಗಳಿಗೆ ಕುಮ್ಕಿ ಆನೆಗಳು ಎನ್ನುತ್ತಾರೆ.
2 ತಾಸು 28 ನಿಮಿಷದ ಕುಮ್ಕಿ ಚಿತ್ರದಲ್ಲಿ ಆನೆಯು ಫ್ರೇಮಿನಲ್ಲಿಲ್ಲದ ದೃಶ್ಯಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಿನಿಮಾ ನೋಡಿ ವರ್ಷಗಳೇ ಉರುಳಿದರೂ ಅದು ಕಟ್ಟಿಕೊಟ್ಟ ದೃಶ್ಯಾನುಭವಗಳು ಮನಸ್ಸಿನಾಳದಲ್ಲಿ ಬೆಚ್ಚಗೆ ಉಳಿದುಬಿಡುತ್ತವೆ. ಆನೆಯೆಂಬುದು ಈ ಸಿನಿಮಾದಲ್ಲಿ ಒಂದು ಪಾತ್ರ ಮಾತ್ರವೇ ಅಲ್ಲ, ಹತ್ತಾರು ಅರ್ಥಗಳನ್ನು ಧ್ವನಿಸುವ, ನೂರಾರು ಭಾವನೆಗಳನ್ನು ಅಭಿವ್ಯಕ್ತಿಸುವ ಗಟ್ಟಿ ಪ್ರತೀಕ.
ಕೇರಳದ ಪಟ್ಟಣವೊಂದರಲ್ಲಿ ಧಾರ್ಮಿಕ ಸಮಾರಂಭಗಳಿಗೆ ಆನೆಯನ್ನು ಕರೆದೊಯ್ದು ಜೀವನ ಮಾಡುತ್ತಿದ್ದ ಮಾವುತ ಬೊಮ್ಮನ್ (ವಿಕ್ರಮ್ ಪ್ರಭು) ಅನಿವಾರ್ಯ ಕಾರಣಗಳಿಂದ ಕಾಡಾನೆಗಳನ್ನು ಓಡಿಸಲು ಹಳ್ಳಿಯೊಂದಕ್ಕೆ ಹೋಗುತ್ತಾನೆ. ತನಗಾಗಲೀ, ತನ್ನ ಆನೆ ಮಾಣಿಕಮ್ಗಾಗಲಿ ಕಾಡಾನೆಗಳನ್ನು ಎದುರಿಸುವ ತರಬೇತಿ ಇಲ್ಲ ಎಂದು ಗೊತ್ತಿದ್ದೂ ದೊಡ್ಡ ಸಾಹಸವೊಂದಕ್ಕೆ ಕೈಹಾಕುತ್ತಾನೆ. ಆನೆಯೊಂದಿಗೆ ತಲುಪಿದ ಕಾಡಿನ ಸೆರಗಿನ ಹಳ್ಳಿಯಲ್ಲಿ ಸಿಕ್ಕ ರಾಜೋಚಿತ ಸ್ವಾಗತ, ಮರ್ಯಾದೆ, ಅಲ್ಲಿನ ಜನರು ತೋರಿಸುವ ಗೌರವ ಆ ಮಾವುತನಲ್ಲಿ ಹೆಮ್ಮೆ ಮೂಡಿಸುತ್ತದೆ.
ಆ ಊರಿನ ಜನರಿಗೆ ಕಾಡಾನೆಯೊಂದು ಕಾಡುತ್ತಿರುತ್ತದೆ. ಆ ಕಾಡಾನೆಯ ಅಗಾಧ ಬಲ ಮತ್ತು ತನ್ನ ಆನೆಗೆ ಅದನ್ನು ಎದುರಿಸುವ ಸಾಮರ್ಥ್ಯವಿಲ್ಲ ಎಂಬುದು ಅರಿವಾದ ನಂತರ ಮಾವುತ ಆ ಊರು ಬಿಡಬೇಕು ಎಂದುಕೊಳ್ಳುತ್ತಾನೆ. ಆದರೆ ಅಷ್ಟರಲ್ಲಿ ಆ ಊರಿನ ಮುಖ್ಯಸ್ಥನ ಮಗಳು ಅಲ್ಲಿ (ಲಕ್ಷ್ಮೀ ಮೆನನ್) ಎಂಬಾಕೆಗೆ ಬೊಮ್ಮನ್ ಮನಸೋತಿರುತ್ತಾನೆ. ಪ್ರೀತಿಗೆ ಕಟ್ಟುಬಿದ್ದು, ಅದೇ ಊರಿನಲ್ಲಿ ಉಳಿದುಕೊಂಡರೂ ತನ್ನ ಆನೆಗೆ ಕುಮ್ಕಿ ತರಬೇತಿ ಕೊಡಲು, ಎತ್ತರದ ಕಾವಲು ಅಟ್ಟಣಿಗೆ ಕಟ್ಟಿಕೊಂಡು ಎಚ್ಚರಿಕೆಯಿಂದ ಇರಲು ಪ್ರಯತ್ನಿಸುತ್ತಾನೆ.
ಇದನ್ನೂ ಓದಿ: ತನ್ನ ಸೊಂಡಿಲಿನ ಕೌಶಲ ಪ್ರದರ್ಶಿಸುತ್ತಾ ತುಂಟಾಟ ಮಾಡಿದ ಈ ಆನೆ ಮರಿ
ಮಾವುತ ಮತ್ತು ಆನೆ, ಮಾವುತ ಮತ್ತು ಅಲ್ಲಿ; ಹೀಗೆ ಮೂರು ಜೀವಗಳ ನಡುವಣ ಎರಡು ಸಂಬಂಧಗಳ ಎಳೆಗಳು ಏಕಕಾಲಕ್ಕೆ ಚಿತ್ರವನ್ನು ಮುಂದಕ್ಕೆ ಎಳೆದೊಯ್ಯುತ್ತಿರುತ್ತವೆ. ದೈತ್ಯ ಶಕ್ತಿಯ ಕಾಡಾನೆ ಕೊಂಬನ್ನನ್ನು ಪಳಗಿದ ನಾಡಾನೆ ಮಾಣಿಕಮ್ ಮಣಿಸಿದನೇ? ಮಾವುತ ಬೊಮ್ಮನ್ಗೆ ಅವನ ಪ್ರೀತಿ ದಕ್ಕಿತೆ? ಎನ್ನುವ ಪ್ರಶ್ನೆಗಳಿಗೆಲ್ಲಾ ಚಿತ್ರ ನೋಡಿಯೇ ಉತ್ತರ ಪಡೆದುಕೊಳ್ಳಿ. ಕ್ಲೈಮ್ಯಾಕ್ಸ್ನಲ್ಲಿ ಸತ್ತು ಹೋಗಿದೆ ಎಂದುಕೊಂಡಿದ್ದ ಸಾಕಾನೆ ಮೇಲೆದ್ದು ಬಂದು ತನ್ನ ಮಾವುತನ ಜೀವ ಕಾಪಾಡುವ ದೃಶ್ಯ ಬಹುಕಾಲ ಕಾಡುವುದಂತೂ ನಿಜ.
ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸಿರುವ, ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಎನ್ನುವ ಮಾತಿಗೆ ತಕ್ಕಂತೆ ಚಿತ್ರಕತೆಯಿದೆ. ಸದಾ ಮಾವುತನ ಜೊತೆಗಿರುವ ತಂಬಿ ರಾಮಯ್ಯ, ಅಸ್ವಿನ್ ಅವರ ಪಾತ್ರಗಳು ನಗೆಯುಕ್ಕಿಸುತ್ತವೆ. ಆನೆಯು ಕಳ್ಳತನ ಮಾಡುವುದು, ಅದನ್ನು ಕಂಡು ಮಾವುತ ಸೆಟಗೊಂಡು ಅದಕ್ಕೆ ಠೂ ಬಿಡುವುದು, ಆನೆ ತನ್ನ ಮಾವುತನನ್ನು ಹುಡುಕಿಕೊಂಡು ಊರ ತುಂಬಾ ಅಲೆಯುವುದು; ಹೀಗೆ ಹಲವು ಆಪ್ತ ಎನಿಸುವ ದೃಶ್ಯಗಳು ಸಿನಿಮಾದಲ್ಲಿವೆ.
ಸಿನಿಮಾಟೊಗ್ರಫಿ ದೃಷ್ಟಿಯಿಂದ ನೋಡಿದರೆ ಇದೊಂದು ದೃಶ್ಯಕಾವ್ಯ. ಇಬ್ಬನಿಯಲ್ಲಿ ಅದ್ದಿ ತೆಗೆದ, ಇದ್ದಕ್ಕಿದ್ದಂತೆ ಮಳೆ ಸುರಿಯುವ ಕಾಡಂಚಿನ ಹಳ್ಳಿ, ಜಲಪಾತ, ನೀರಿನ ಮೇಲೆ ಸೂರ್ಯನ ಕಿರಣಗಳ ಆಟವನ್ನು ಕಥೆಗೆ ಪೂರಕವಾಗುವಂತೆ ಸೆರೆಹಿಡಿಯುವುದು ಹುಡುಗಾಟದ ಮಾತಲ್ಲ. ಆನೆ-ಮಾವುತ ಮತ್ತು ಇತರೆಲ್ಲ ಪಾತ್ರವರ್ಗಗಳಂತೆ ಪ್ರಕೃತಿಯೂ ಈ ಚಿತ್ರದ ಪ್ರಧಾನ ಅಂಶ ಎಂಬುದನ್ನು ಛಾಯಾಗ್ರಾಹಕ ಎಂ.ಸುಕುಮಾರ್ ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿದ್ದಾರೆ.
ಮನಸ್ಸು ಮುಟ್ಟುವ ಹಿನ್ನೆಲೆ ಸಂಗೀತ, ಗುನುಗಬೇಕೆನ್ನುವ ಹಾಡುಗಳು, ಶಕ್ತ ಸಂಭಾಷಣೆ, ಪಾತ್ರಗಳಿಗೆ ಜೀವ ತುಂಬಿರುವ ನಟರು, ಆನೆಗೂ ಮನಸ್ಸಿದೆ ಎಂಬುದನ್ನು ಸಾರಿ ಹೇಳುವಂತೆ ನಟಿಸಿರುವ ಆನೆ ಮಾಣಿಕಮ್.. ಎಲ್ಲವೂ ಒಂದಕ್ಕಿಂತ ಮತ್ತೊಂದು ಮೇಟಿ ಎನಿಸುತ್ತವೆ. ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಆನೆಯನ್ನು ಮುಖ್ಯ ಭೂಮಿಕೆಯಲ್ಲಿ ತಂದ ಚಿತ್ರಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ಅರ್ಹತೆಯಿರುವ ಚಿತ್ರ ಕುಮ್ಕಿ.
ಅಂದಹಾಗೆ ಈ ಚಿತ್ರ ಯುಟ್ಯೂಬ್ನಲ್ಲಿ ಲಭ್ಯವಿದೆ, ಅಮೆಜಾನ್ನಲ್ಲೂ ಇದೆ. ನೀವೂ ಒಮ್ಮೆ ನೋಡಿ, ಮಕ್ಕಳಿಗೂ ತೋರಿಸಿ.
ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ನಿರ್ಲಕ್ಷಿಸಿ ದೊಡ್ಡ ಅಪಾಯವನ್ನೇ ಆಹ್ವಾನಿಸಿತಾ ಕರ್ನಾಟಕ.. ಒಳಸುಳಿ ಏನು?
ವಿವರ ಚಿತ್ರ: ಕುಮ್ಕಿ ಭಾಷೆ: ತಮಿಳು ನಿರ್ದೇಶನ, ಚಿತ್ರಕತೆ: ಪ್ರಭು ಸಾಲೊಮನ್ ತಾರಾಗಣ: ವಿಕ್ರಮ್ ಪ್ರಭು, ಲಕ್ಷ್ಮೀ ಮೆನನ್, ತಂಬಿ ರಾಮಯ್ಯ, ಅಸ್ವಿನ್ ರಾಜ ಸಿನಿ ಛಾಯಾಗ್ರಹಣ: ಎ.ಸುಕುಮಾರ್ ಸಂಗೀತ: ಡಿ.ಇಮ್ಮನ್ ಸಂಕಲನ: ಎಲ್.ವಿ.ಕೆ.ದಾಸ್ ಮನ್ನಣೆ: ಸೌತ್ ಫಿಲ್ಮ್ಫೇರ್ ಅವಾರ್ಡ್ ಸೇರಿ ಹಲವು ಪುರಸ್ಕಾರಗಳು