World Poetry Day; ಇದು ನಾನು ಕವಿತೆ ಬರೆಯಲು ಕಲಿತ ರೀತಿ
‘ಎಲ್ಲ ಹದಿನಾರರ ಹುಚ್ಚು ಖೋಡಿ ಮನಸ್ಸಿನ ಮಂಗಾಟಗಳನ್ನೂ ಆಡುತ್ತಿದ್ದೆ. 8ನೇ ಕ್ಲಾಸಿನಲ್ಲಿ ABCD ತಿದ್ದಿದ ನಾನು ಇಂಗ್ಲಿಷ್ ಸಾಹಿತ್ಯದ ಅಭ್ಯಾಸವನ್ನು ಒಲಿಸಿಕೊಳ್ಳುವ ಭಂಡಧೈರ್ಯ ಮಾಡಿದೆ. ಆಗ ಕ್ಲಾಸಿನಲ್ಲಿ ಒಟ್ಟು ಹತ್ತು ಗಂಡು ಹುಡುಗರು, ನಾನೊಬ್ಬಳೇ ವಿದ್ಯಾರ್ಥಿನಿ. ಆದರೂ ನನ್ನ ನಿರ್ಧಾರ ಸಡಿಲಾಗಲಿಲ್ಲ. ಅಣ್ಣನೂ ಅದೇ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದು ಅವನ ಗೆಳೆಯರು ನನ್ನ ಗುರುಗಳಾದದ್ದು ಒಂದು ಹೆಚ್ಚುವರಿ ಅನುಕೂಲವಾಗಿತ್ತು.‘ ಕೃಷ್ಣಾ ಕೌಲಗಿ
‘ಗದ್ಯಂ ವದ್ಯಂ ಪದ್ಯಂ ಹೃದ್ಯಂ’ ಎಂಬ ತತ್ವವನ್ನು ಓದಿ ನಿಜವೆನಿಸಿ ಒಪ್ಪಿ ಅಪ್ಪಿಕೊಂಡದ್ದು ನಾನು. ನಮ್ಮನೆಯಲ್ಲಿ ಎಲ್ಲರಿಗೂ ಸಾಹಿತ್ಯಾಸಕ್ತಿ ನಮ್ಮಪ್ಪನ ಬಳುವಳಿ. ಎಲ್ಲರಿಗೂ ವಿಪರೀತ ಓದಿನ ಹುಚ್ಚು. ಮನೆಯಲ್ಲಿ ಎಷ್ಟೇ ಇತರ ಕೊರತೆ ಇದ್ದರೂ ಪುಸ್ತಕಗಳ ಕೊರತೆ ಇರಲಿಲ್ಲ. ತಮ್ಮ ತಮ್ಮ ಓದಿನ ಆಸಕ್ತಿಯನ್ನು ಮನೆಯವರೆಲ್ಲರೂ ತಮ್ಮ ತಮ್ಮ ಆಸಕ್ತಿಯ ಹವ್ಯಾಸಗಳಿಗಾಗಿ ಬಳಸಿಕೊಂಡರು. ನನ್ನ ತಮ್ಮ ಭಾಷಣಕ್ಕೆ ಒತ್ತು ಕೊಟ್ಟರೆ, ತಂಗಿ ‘ಸಣ್ಣ ಕಥಾ’ ಪ್ರಕಾರವನ್ನು ಆಯ್ದುಕೊಂಡಳು. ನಾನು ಕವನಕ್ಕೆ ಒಲಿದೆ. ನನ್ನ ಎಸ್ಸೆಸ್ಸೆಲ್ಸಿ ಬೀಳ್ಕೊಡುಗೆ ಸಮಾರಂಭದಲ್ಲಿ ನಾ ಬರೆದ ಕವನವೊಂದನ್ನು ನನ್ನೊಬ್ಬ ಆತ್ಮೀಯ ಗೆಳತಿ ಹಾಡಿ ಇಬ್ಬರೂ ಬೆನ್ನು ತಟ್ಟಿಸಿಕೊಂಡಾಗ ನನ್ನ ಆಶೆ ಮೊಳಕೆಯೊಡೆಯಿತು. -ಕೃಷ್ಣಾ ಕೌಲಗಿ
ಕವನ ಸಂಕಲನಗಳನ್ನು ಸಂಗ್ರಹಿಸುವುದು, ಅವುಗಳನ್ನು ಅನುಸರಿಸಿ ಕವನದ ಸಾಲುಗಳನ್ನು ಬರೆಯುವುದು, ಯಾರೋ ಒಬ್ಬರು ನೋಡಿ ಮೆಚ್ಚಿದರೆ ಕವಿಯಾಗಿಬಿಟ್ಟಂತೆ ಕನಸು ಕಾಣುವುದು, ಮುಂತಾದ ಎಲ್ಲ ‘ಹದಿನಾರರ ಹುಚ್ಚು ಖೋಡಿ ಮನಸ್ಸಿನ ಮಂಗಾಟಗಳನ್ನೂ’ ಆಡುತ್ತಿದ್ದೆ. 8ನೇ ಕ್ಲಾಸಿನಲ್ಲಿ ABCD ತಿದ್ದಿದ ನಾನು ಇಂಗ್ಲಿಷ್ ಸಾಹಿತ್ಯದ ಅಭ್ಯಾಸಕ್ಕೆ ಒಲಿಯುವ ಭಂಡಧೈರ್ಯ ಮಾಡಿದೆ. ಆಗ ಕ್ಲಾಸಿನಲ್ಲಿ ಒಟ್ಟು ಹತ್ತು ಗಂಡು ಹುಡುಗರು, ನಾನೊಬ್ಬಳೇ ವಿದ್ಯಾರ್ಥಿನಿ. ಆದರೂ ನನ್ನ ನಿರ್ಧಾರ ಸಡಿಲಾಗಲಿಲ್ಲ. ಅಣ್ಣನೂ ಅದೇ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದು ಅವನ ಗೆಳೆಯರು ನನ್ನ ಗುರುಗಳಾದದ್ದು ಒಂದು ಹೆಚ್ಚುವರಿ ಅನುಕೂಲವಾಗಿತ್ತು.
ಮನಸ್ಸಿಗೆ ಬಂದದ್ದು ಬರೆಯುವುದು. ಬರೆಯುವುದೇ ಬೇರೆ, ಬರೆಯುವುದಕ್ಕೂ ಮೊದಲು ಹೆಚ್ಚುಹೆಚ್ಚು ಓದಬೇಕು, ಅರಗಿಸಿಕೊಳ್ಳಬೇಕು, ಅನುಭವಗಳೂ ಗಟ್ಟಿ ಪಾಕವಾಗಬೇಕು ಎಂಬ ಅಂಶಗಳು ಕ್ರಮೇಣ ಅರ್ಥವಾಗತೊಡಗಿದವು. ನನ್ನ ಕಲಿಕೆ ಹಳ್ಳಿಯಲ್ಲಿ ಆದ್ದರಿಂದ ಇಂಗ್ಲೀಷ್ ತುಂಬಾ ತುಟ್ಟಿಯಾಗಿತ್ತು. ಓದಿದ್ದೆಲ್ಲವನ್ನೂ ಕನ್ನಡಕ್ಕೆ ಮನಸ್ಸಿನಲ್ಲೇ ಭಾಷಾಂತರಿಸಿಕೊಂಡು, ನನಗೆ ತಿಳಿದಂತೆ ಸದಾ ಇಂಗ್ಲಿಷಿನಲ್ಲಿ ಕಾಪಿ ಮಾಡುತ್ತಿದ್ದೆ. ನನ್ನ ಪ್ರಯತ್ನ ಪ್ರಾಮಾಣಿಕವಾಗಿತ್ತೋ, ಒಬ್ಬಳೇ ಹುಡುಗಿ ಎಂಬ ಅನುಕಂಪವೋ ಒಟ್ಟಿನಲ್ಲಿ ನನ್ನ ಆಸಕ್ತಿ ಉಸಿರು ಕಳೆದುಕೊಳ್ಳದಂತೆ ಸಹಕರಿಸಿದವು. ಮೊದಲೇ ಹೇಳಿದಂತೆ ನಾನು ಕವಿತೆಯ ಕಡೆಗೆ ಹೆಚ್ಚು ವಾಲಿದೆ. ಆದರೆ ಅದು ಸುಲಭವಲ್ಲ ಎಂಬ ಸತ್ಯ ಗೊತ್ತಿದ್ದರೂ ಹಿಂಜರಿಯಲಿಲ್ಲ. ಆಗ ಅನಾವಶ್ಯಕ ಪೈಪೋಟಿ ಇರಲಿಲ್ಲ ಎಂಬುದೊಂದು ಒಳ್ಳೆಯ ಅಂಶ. ಆಂಗ್ಲ ಕವಿ Keats ಹೇಳಿದಂತೆ, ‘poetry is a spontaneous overflow of feelings recollected in TRANQUILITY’ ಎಂಬುದನ್ನು ನಮ್ಮ ಆಂಗ್ಲ ಶಿಕ್ಷಕರು ಮನಸ್ಸಿಗೆ ನಾಟುವಂತೆ ಮಾಡಿದ್ದರಿಂದ ನನ್ನ ಕಲಿಕೆಗೂ ವೇಗವಿರಲಿಲ್ಲ. ಅಂತೂ ಪದವಿ ಮುಗಿಯುತ್ತಿದ್ದಂತೆ ಅಲ್ಪ- ಸ್ವಲ್ಪ ಕಲಿತಿದ್ದರೂ Poetic Vocabulary, ಪ್ರಾಸಬದ್ಧ ರಚನೆ, Meter, Rythm ಗಳ ಜ್ಞಾನವಿಲ್ಲದೇ ಕೆಲಸ ಸುಲಭವಿಲ್ಲ ಎಂಬುದು ನನ್ನ ಧೈರ್ಯಗುಂದಿಸಿತ್ತು. ನನಗೆ ಬಂದ ರೀತಿಯಲ್ಲಿ ಬರೆದು, ಬಲ್ಲವರಿಗೆ ತೋರಿಸಿ ಸಲಹೆ ಪಡೆಯುವುದು, ಇತರ ಭಾಷೆಗಳ ಅನುವಾದ, ಇಂಥ ಕೆಲಸವಲ್ಲದ ಕೆಲಸದಲ್ಲಿ ತೊಡಗಿಕೊಂಡು ಕ್ರಮೇಣ ಅಂಬೆಗಾಲಿಡುವುದನ್ದನು ಶುರುಮಾಡಿದೆ. ನಂತರ ಶಿಕ್ಷಕಿಯಾಗಿ ಮಕ್ಕಳಿಗೆ ಕಲಿಸುತ್ತ, ಜೊತೆಜೊತೆಗೆ ಕಲಿಯುತ್ತಾ ಈಗ ಎಡವುತ್ತ ನಡೆದೆ. ಅಷ್ಟಕ್ಕೂ ಇಂದಿಗೂ ಈ ನನ್ನ ಹವ್ಯಾಸ ನನ್ನ ಫೇಸ್ಬುಕ್ಗೆ ಸೀಮಿತವಾಗುವಷ್ಟಾದರೂ ಕೈಹಿಡಿದು ನಡೆಸಿದ್ದು ಆಕಾಶವಾಣಿ ಹಾಗೂ ‘ಸ್ವರಚಿತ ಕವನವಾಚನ’ ಕಾರ್ಯಕ್ರಮ. ನವ್ಯಪದ್ಯಗಳನ್ನು ಆಸ್ವಾದಿಸುತ್ತೇನಾದರೂ ನನ್ನ ವೈಯಕ್ತಿಕ ಆಯ್ಕೆ ಗೇಯಪದ್ಯಗಳು, ಪ್ರಾಸ-ಪ್ರಸ್ತಾರದ ಕಡೆಗೆ ಒಲವು. ನಾವು ಎಷ್ಟೇ ಹೇಳಲಿ, ಬರೆಯಲೀ, ಪ್ರತಿಯೊಬ್ಬರಿಗೂ ಅವರದೇ ಆಯ್ಕೆಯ ಸ್ವಾತಂತ್ರ್ಯವನ್ನಂತೂ ಎಂದಿಗೂ ಅಲ್ಲಗಳೆಯಲಾಗದು.
ಇದನ್ನೂ ಓದಿ : World Poetry Day; ಅದು ಅದಾಗಿಯೇ ಆದರೂ ದ್ವೀಪದೆದುರು ಹೋಳಾಗುವ ನದಿಯಂತೆ
Published On - 3:18 pm, Sun, 21 March 21