Impact of Jealousy: ಮತ್ತೊಬ್ಬರ ಏಳಿಗೆ ನೋಡಿ ಅಸೂಯೆ ಪಡಬಾರದು ಯಾಕೆ ಗೊತ್ತಾ? ಕಾರಣ ಇಲ್ಲಿದೆ
ಮತ್ತೊಬ್ಬರ ಯಶಸ್ಸು ಅಥವಾ ಏಳಿಗೆಯ ಬಗ್ಗೆ ಅಸೂಯೆ ಪಡುವುದು ನಮ್ಮ ದೇಹದ ಧನಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಸಮಯವನ್ನು ವ್ಯರ್ಥ ಮಾಡುತ್ತದೆ. ಇಂತಹ ಮನೋಭಾವ ನಮ್ಮ ಪ್ರಗತಿಗೆ ಮಾರಕ. ದುರ್ಯೋಧನನ ಉದಾಹರಣೆ ತೋರಿಸುವಂತೆ, ಅಸೂಯೆ ವಿನಾಶಕ್ಕೆ ಕಾರಣವಾಗುತ್ತದೆ. ಬದಲಿಗೆ, ಇತರರ ಏಳಿಗೆಯನ್ನು ಪ್ರಶಂಸಿಸಿ, ನಮ್ಮ ಶ್ರಮ ಮತ್ತು ಸಾಧನೆಯ ಮೇಲೆ ಕೇಂದ್ರೀಕರಿಸುವುದು ಉತ್ತಮ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೇರಲು ಆತನ ಮನಸ್ಸತ್ವ, ಸಾಧನೆ, ಪರಿಶ್ರಮ, ಮನಸ್ಸಿನ ಭಾವನೆಗಳು ಮತ್ತು ಶ್ರದ್ಧಾಭಕ್ತಿಗಳು ಪ್ರಮುಖ ಕಾರಣಗಳಾಗಿವೆ. ಇವುಗಳ ಮೇಲೆ ಪರಿಪೂರ್ಣ ಗಮನವಿಟ್ಟಾಗ ಯಶಸ್ಸು ದೊರೆಯುತ್ತದೆ. ಆದರೆ, ಇತ್ತೀಚಿನ ಸಮಾಜದಲ್ಲಿ ಬೇರೆಯವರ ಅಭಿವೃದ್ಧಿ, ಶ್ರೇಯಸ್ಸು, ಕೀರ್ತಿ ಮತ್ತು ಹೆಸರು ಕಂಡಾಗ ಅವರಿಗೆ ತೊಂದರೆ ಕೊಡಬೇಕು ಅಥವಾ ಅವರನ್ನು ಹಾಳು ಮಾಡಬೇಕು ಎನ್ನುವ ಮನಸ್ಸತ್ವಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಇನ್ನೊಬ್ಬರ ಸಂಪಾದನೆ, ಕೀರ್ತಿ ಅಥವಾ ಏಳಿಗೆ ನೋಡಿ ಅಸೂಯೆ ಪಟ್ಟಾಗ ಅಥವಾ ವ್ಯಥೆ ಪಟ್ಟಾಗ ಅದರ ಪ್ರಭಾವ ನಮ್ಮ ಮೇಲೆ ನಕಾರಾತ್ಮಕವಾಗಿ ಬೀರುತ್ತದೆ. ಇದು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ, ದೇಹದ ಧನಾತ್ಮಕ ಶಕ್ತಿಗಳನ್ನು ಕುಂದಿಸುತ್ತದೆ ಮತ್ತು ದೈವಬಲವನ್ನು ಕಡಿಮೆ ಮಾಡುತ್ತದೆ. ಬೇರೆಯವರ ನಾಶವನ್ನು ಬಯಸಿದಾಗ, ಆ ನಕಾರಾತ್ಮಕ ಭಾವನೆಗಳು ನಮ್ಮ ದೇಹದಲ್ಲಿನ 72 ಸಾವಿರ ನಾಡಿಗಳಲ್ಲಿ ವಿಷ ತುಂಬಿದಂತೆ. ಹಾಗಾಗಿ ಯಾರ ಏಳಿಗೆಯ ವಿಚಾರದಲ್ಲಿಯೂ ಅಸೂಯೆ ಪಡಬಾರದು.
ಮಹಾಭಾರತದ ದುರ್ಯೋಧನನ ಉದಾಹರಣೆ ಇದಕ್ಕೆ ಸೂಕ್ತ. ಎಲ್ಲ ಸಂಪತ್ತು ಮತ್ತು ಸಾಮ್ರಾಜ್ಯವಿದ್ದರೂ, ಕೇವಲ ಐದು ಪಾಂಡವರ ಬಗ್ಗೆ ಹೆಚ್ಚು ಚಿಂತೆ ಮಾಡಿ, ನಕಾರಾತ್ಮಕವಾಗಿ ಯೋಚಿಸಿದ್ದರಿಂದ ದುರ್ಯೋಧನನು ತನ್ನ ಇಡೀ ಸಾಮ್ರಾಜ್ಯ, ವಂಶ ಮತ್ತು ಕುಟುಂಬವನ್ನೇ ನಾಶ ಮಾಡಿಕೊಂಡ. ಇದು ಅಸೂಯೆಯ ಪರಿಣಾಮಕ್ಕೆ ಉತ್ತಮ ನಿದರ್ಶನ.
ಇದಕ್ಕೆ ವಿರುದ್ಧವಾಗಿ, ನಾವು ಮೆಚ್ಚುಗೆ ವ್ಯಕ್ತಪಡಿಸಿದಾಗ, ಶುಭಾಶಯ ಕೋರಿದಾಗ, ಸಂತೋಷ ವ್ಯಕ್ತಪಡಿಸಿದಾಗ ಅಥವಾ “ನಿಮಗೆ ಒಳ್ಳೆಯದಾಗಲಿ” ಎಂದು ಸಕಾರಾತ್ಮಕ ಭಾವನೆಯಿಂದ ಹೇಳಿದಾಗ, ನಮ್ಮಲ್ಲಿನ ನಕಾರಾತ್ಮಕ ಶಕ್ತಿಗಳು ಬೇಗ ಹೊರಟುಹೋಗಿ ಧನಾತ್ಮಕ ಶಕ್ತಿಗಳು ಆವರಿಸಿಕೊಳ್ಳುತ್ತವೆ. ಭಗವಂತ ನಮಗೂ ಅವಕಾಶಗಳನ್ನು ನೀಡುತ್ತಾನೆ. ಯಾರಾದರೂ ತಪ್ಪು ರೀತಿಯಿಂದ ಯಶಸ್ಸು ಗಳಿಸುತ್ತಿದ್ದರೂ, ಅಂತಹ ಯಶಸ್ಸು ತಕ್ಷಣ ಫಲ ನೀಡಿದರೂ, ಮುಂದಿನ ದಿನಗಳಲ್ಲಿ ಅದು ಅವರಿಗೆ ವಿಷವಾಗಿ ಪರಿಣಮಿಸಿ ರಿವರ್ಸ್ ಆಗುತ್ತದೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ನಮ್ಮ ಜೀವನದಲ್ಲಿ ಕಷ್ಟಪಟ್ಟು ದುಡಿಯುವುದು (“ಕಾಯಕವೇ ಕೈಲಾಸ”), ನಮ್ಮ ಗುರಿ, ಸಾಧನೆ ಮಾಡುವ ಛಲ, ಅಟ ಮತ್ತು ಶ್ರಮ ಇವು ಇದ್ದಾಗ ಮಾತ್ರ ಮನುಷ್ಯನಿಗೆ ಏಳಿಗೆ ಸಾಧ್ಯ. ಸಮಾಜದಲ್ಲಿ ಮೂರು ವರ್ಗದ ಜನರಿರುತ್ತಾರೆ: ಕಷ್ಟಪಟ್ಟು ದುಡಿದು ಸಾಧಾರಣ ಜೀವನ ನಡೆಸುವವರು, ಸ್ವಲ್ಪ ಕಷ್ಟಪಟ್ಟು ಕಾಲಕ್ಕೆ ತಕ್ಕಂತೆ ಜೀವನ ಸಾಗಿಸುವವರು, ಮತ್ತು ಕಷ್ಟಪಡದೆಯೇ ಎಲ್ಲವನ್ನು ಪಡೆಯುವವರು. ಆದರೆ ಕಷ್ಟಪಡದೆ ಪಡೆದ ಸಂಪತ್ತು ಕೊನೆಯ ವ್ಯಕ್ತಿಯಲ್ಲಿ ಉಳಿಯುವುದಿಲ್ಲ.
ಒಂದೇ ತರಗತಿಯಲ್ಲಿ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ರೀತಿ ಪಾಠ ಮಾಡಿದರೂ, ಕೆಲವು ವಿದ್ಯಾರ್ಥಿಗಳು ಸೂಕ್ಷ್ಮತೆಯಿಂದ ಗ್ರಹಿಸುತ್ತಾರೆ, ಕೆಲವರು ಮಧ್ಯಮವಾಗಿ, ಮತ್ತೆ ಕೆಲವರು ನಿರ್ಲಕ್ಷಿಸುತ್ತಾರೆ. ಹೀಗಾಗಿ, ಆ ವಿದ್ಯಾರ್ಥಿಗಳಲ್ಲೇ ಡಾಕ್ಟರ್, ಇಂಜಿನಿಯರ್, ರೈತ, ವ್ಯಾಪಾರಿ, ದೇಶಕ್ಕೆ ಕೀರ್ತಿ ತರುವವರು ಆಗುತ್ತಾರೆ. ಪಾಠ ಒಂದೇ ಆದರೂ, ಸ್ವೀಕಾರ ಮಾಡುವವರ ಮೇಲೆ ಅದರ ಪ್ರಭಾವ ಬೀರುತ್ತದೆ. ಆದ್ದರಿಂದ, ಯಾವುದೇ ವಿಷಯದಲ್ಲಿ ಬೇರೆಯವರ ಬಗ್ಗೆ ಅಸೂಯೆ ಪಡುವುದು, ವ್ಯಥೆ ಪಡುವುದು ಅಥವಾ ಕೆಟ್ಟ ಮಾತುಗಳನ್ನಾಡುವುದು ನಮ್ಮ ಪಂಚಭೂತಗಳ ದೇಹಕ್ಕೆ ಹಾನಿಕರ. ನಾವು ಸಕಾರಾತ್ಮಕವಾಗಿ ಯೋಚಿಸೋಣ, ಶುಭಾಶಯ ಕೋರೋಣ ಮತ್ತು ನಮಗೆ ಬೇಕಾದ ಸ್ಥಾನಕ್ಕೆ ತಲುಪಲು ಪ್ರಯತ್ನ ಪಡೋಣ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Wed, 22 April 26




