Navratri: ನವರಾತ್ರಿಯ 8 ಮತ್ತು 9ನೇಯ ದಿನ ಯಾವ ರೂಪದಲ್ಲಿ ಪೂಜಿಸಬೇಕು ಮತ್ತು ಯಾವ ಭಕ್ಷ್ಯ ದೇವಿಗೆ ಪ್ರಿಯ?
ಒಂಭತ್ತು ದಿನದ ನವರಾತ್ರಿಯಲ್ಲಿ ನಾವಿಂದು ಎಂಟು ಮತ್ತು ಒಂಭತ್ತನೇಯ ದಿನ ಹೇಗೆ ಪೂಜಿಸಬೇಕು ಎಂದು ಅರಿಯೋಣ. ಎಂಟನೇಯ ದಿನ-ಈ ದಿನ ಶ್ರೀದೇವಿಯನ್ನು “ನಿಶುಂಭಹಾ” ಅಥವಾ “ಮಹಾಗೌರಿ” ಎಂಬ ಹೆಸರಿನಿಂದ ಪೂಜಿಸಬೇಕು.
ಶುದ್ಧಮನಸ್ಸಿನಿಂದ ಯಾವುದೇ ಚೈತನ್ಯವನ್ನು ಪೂಜಿಸಿದರೂ ಭಗವಂತ ಅನುಗ್ರಹಿಸುತ್ತಾನೆ. ಅದರಲ್ಲೂ ಆಯಾ ದೇವತೆಯ ಪರ್ವಕಾಲದಲ್ಲಿ ಪ್ರಸ್ತುತ ರೂಪವನ್ನೇ ಪೂಜಿಸಿದರೆ ಫಲವೆಂಬುದು ದ್ವಿಗುಣವಾಗುವುದು. ಒಂಭತ್ತು ದಿನದ ನವರಾತ್ರಿಯಲ್ಲಿ ನಾವಿಂದು ಎಂಟು ಮತ್ತು ಒಂಭತ್ತನೇಯ ದಿನ ಹೇಗೆ ಪೂಜಿಸಬೇಕು ಎಂದು ಅರಿಯೋಣ.
ಎಂಟನೇಯ ದಿನ -ಈ ದಿನ ಶ್ರೀದೇವಿಯನ್ನು “ನಿಶುಂಭಹಾ” ಅಥವಾ “ಮಹಾಗೌರಿ” ಎಂಬ ಹೆಸರಿನಿಂದ ಪೂಜಿಸಬೇಕು. ನಿಶುಂಭಹಾ ಎಂದರೆ ನಿಶುಂಭನೆಂಬ ರಾಕ್ಷಸನನ್ನು ಸಂಹರಿಸಿದವಳು ಎಂದರ್ಥ. ಮಹಾಗೌರಿ ಎಂದರೆ ಅತ್ಯಂತ ಶುಭ್ರರೂಪಳು ಎಂದರ್ಥ. ಈ ರೂಪದಲ್ಲಿ ತಾಯಿಯನ್ನು ಧ್ಯಾನಿಸಿ ಅವಳ ಕುರಿತಾದ ಗೌರೀ ಅಷ್ಟಕವನ್ನು ಹೇಳಿ ಬಿಳಿಯ ಬಣ್ಣದ ಹೂವುಗಳಿಂದ ಅವಳನ್ನು ಅಲಂಕರಿಸಿ –
ಶ್ವೇತವಸ್ತ್ರಾದ್ಯಲಂಕಾರೈಭೂಷಿತಾಂ ಚ ಚತುರ್ಭುಜಾಂ |
ತ್ರಿಶೂಲಂ ಡಮರುಂ ಚೈವ ರಥಾಂಗಂ ಕುಲಿಶಂ ತಥಾ ||
ಕುಠಾರಂ ಶಂಖಮಭಯಂ ಪಾಶಶಕ್ತಿಂ ಚ ಯಷ್ಟಿಕಾಂ |
ಖೇಟಂ ಶರಾಸನಂ ಚಕ್ರಂ ಕಮಂಡಲುಧೃತಾಂ ಶುಭಾಂ ||
ಎಂಬ ಶ್ಲೋಕದಿಂದ ಧ್ಯಾನಿಸಿ ಅವಳಿಗೆ ಪ್ರಿಯವಾದ ಸರ್ವೌದನ” (ಅತ್ಯಂತ ಪರಿಮಳದಿಂದ ಕೂಡಿದ ಅನ್ನವನ್ನು ) ವನ್ನು ನೈವೇದ್ಯ ಮಾಡಬೇಕು. ಈ ದಿನ ತಿಳಿ ಬಣ್ಣದ (ಲೈಟ್ ಕಲರ್) ವಸ್ತ್ರವು ಅತ್ಯಂತ ವಿಶೇಷ.
ಒಂಭತ್ತನೇಯ ದಿನ – ಇಂದು ದೇವಿಯ ಪರ್ವಕಾಲದ ಕೊನೆಯ ರಾತ್ರಿ ಪೂಜೆ ಸಲ್ಲುವ ದಿನ . ಇಂದು ಶುಂಭಹಾ”ಅಥವಾ ಸಿದ್ಧಿಧಾತ್ರೀ ಎಂಬ ಸ್ವರೂಪದಲ್ಲಿ ಜಗತ್ತನ್ನು ಅನುಗ್ರಹಿಸುತ್ತಾಳೆ ಮತ್ತು ಶಿಷ್ಟರನ್ನು ರಕ್ಷಿಸುತ್ತಾಳೆ. ಶುಂಭಹಾ ಎಂದರೆ ಶುಂಭನೆಂಬ ರಕ್ಕಸನ ಸಂಹಾರಕಳು ಎಂದರ್ಥ. ಸಿದ್ಧಿಧಾತ್ರಿ ಅಂದರೆ ನಾವು ಯಾವುದೇ ಫಲಾಪೇಕ್ಷೆಯಿಂದ ಪೂಜಿಸಿದರೂ ಅದನ್ನು ಅನುಗ್ರಹಿಸುವವಳು ಎಂದರ್ಥ. ಅತ್ಯಂತ ಪ್ರಸನ್ನಳಾಗಿರುವ ರೂಪ. ಈ ದಿನ ಬನ್ನೀ ಮರ (ಶಮೀಮರದ) ಪೂಜೆಯನ್ನೂ ಮಾಡುತ್ತಾರೆ.
ಶಮೀಮರವನ್ನು ಈ ದಿನ ಪೂಜಿಸಿ ಅದರ ಎಲೆಯನ್ನು ಮನೆಯಲ್ಲಿಡುವುದರಿಂದ ಸರ್ವಶತ್ರು ನಾಶವಾಗಿ ಸರ್ವಶುಭಕಾರ್ಯಗಳಲ್ಲೂ ಜಯವುಂಟಾಗುವುದು. ಈ ದಿನ ತಾಯಿಗೆ ಅವಳ ಸಹಸ್ರನಾಮದಿಂದ ಪುಷ್ಪಾರ್ಚನೆ ಮಾಡಿದರೆ ಶುಭಫಲವಿದೆ. ಈ ದಿನ ಸಂಗೀತಾದಿಗಳಿಂದ, ಭಜನೆ ಕೀರ್ತನೆಗಳಿಂದ ಅವಳನ್ನು ಸ್ತುತಿಸಬೇಕು. ತುಪ್ಪದಿಂದ ವಿಶೇಷ ಸಿಹಿಯನ್ನು ಮಾಡಿ ಶ್ರೀದುರ್ಗೆಗೆ ನೈವೇದ್ಯ ಮಾಡಬೇಕು. ಸಪ್ತಶತೀ (ಚಂಡೀಪಾಠದ) ಹನ್ನೊಂದನೇಯ ಅಧ್ಯಾಯದ ಶ್ಲೋಕಗಳನ್ನು ಪಠಿಸಿರಿ. ವಿಶೇಷ ಪೂಜೆಯ ನಂತರ ಮುತ್ತೈದೆಯರಿಗೆ ಮತ್ತು ಕುಮಾರಿಯರಿಗೆ ಅರಸಿನ ಕುಂಕುಮ ನೀಡಿರಿ. ಕೊನೆಗೆ ಮನೆಯವರೆಲ್ಲಾ ಒಟ್ಟಾಗಿ “ದೇವ್ಯಪರಾಧಕ್ಷಮಾಪಣಾ ಸ್ತೋತ್ರ” ಪಠಿಸಿರಿ. ಸಾಧ್ಯವಾದಲ್ಲಿ ಯಾರಿಗಾದರು ಒಬ್ಬ ಮುತ್ತೈದೆಗೆ ಉಡಿಯನ್ನು ತುಂಬಿರಿ. ಇದರಿಂದ ಸೌಭಾಗ್ಯ ವೃದ್ಧಿಯಾಗುವುದು. ನವರಾತ್ರಿ ಎಲ್ಲರಿಗೂ ನವಜೀವನವನ್ನು ನೀಡಲಿ ಭಗವತಿಯು ಎಲ್ಲರಿಗೂ ಅನುಗ್ರಹಿಸಲಿ. ಲೋಕಾಃ ಸಮಸ್ತಾಃ ಸುಖಿನೋ ಭವಂತು”
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
kkmanasvi@gamail.com