AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಕುಶಲಕರ್ಮಿಗಳು, 90 ದಿನಗಳು, 2000 ಗಂಟೆಗಳ ಶ್ರಮ: ಮುಖೇಶ್​ ಅಂಬಾನಿ ಪುತ್ರಿಯ ನವರಾತ್ರಿ ಉಡುಗೆಯ ವಿಶೇಷತೆ ಇಲ್ಲಿದೆ

ಅಂಬಾನಿ ಕುಟುಂಬದ 'ಸ್ವದೇಶ್' ಮತ್ತು ಖ್ಯಾತ ಡಿಸೈನರ್ 'ತೊರಾನಿ' ಸಹಯೋಗದಲ್ಲಿ ಮೂಡಿಬಂದ ಇಶಾ ಅಂಬಾನಿಯ ರಾಧಾ-ಕೃಷ್ಣ ಪ್ರೇರಿತ ನವರಾತ್ರಿ ಉಡುಗೆ ಸದ್ಯ ಫ್ಯಾಷನ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದೆ. ಒಟ್ಟು 10 ನುರಿತ ಕುಶಲಕರ್ಮಿಗಳು, 90 ದಿನಗಳ ನಿರಂತರ ಚಿತ್ರಕಲೆ ಹಾಗೂ 2000 ಗಂಟೆಗಳಿಗೂ ಅಧಿಕ ಕಾಲದ ಪರಿಶ್ರಮದಿಂದ ಈ ಸುಂದರ ಉಡುಗೆ ಸಿದ್ಧಗೊಂಡಿದೆ. ಕಲಂಕರಿ ಮತ್ತು ಪಟಚಿತ್ರ ಕಲೆಗಳ ಅದ್ಭುತ ಸಂಗಮವಿರುವ ಈ ಕಸ್ಟಮ್ ಮೇಡ್ ಉಡುಗೆಯ ವಿಶೇಷತೆ, ಇದರ ಹಿಂದಿರುವ ಸ್ಫೂರ್ತಿದಾಯಕ ಕಥೆ ಹಾಗೂ ಭಾರತೀಯ ಕರಕುಶಲತೆಯ ಹೆಮ್ಮೆಯ ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲಿದೆ.

10 ಕುಶಲಕರ್ಮಿಗಳು, 90 ದಿನಗಳು, 2000 ಗಂಟೆಗಳ ಶ್ರಮ: ಮುಖೇಶ್​ ಅಂಬಾನಿ ಪುತ್ರಿಯ ನವರಾತ್ರಿ ಉಡುಗೆಯ ವಿಶೇಷತೆ ಇಲ್ಲಿದೆ
ಇಶಾ ಅಂಬಾನಿಯ ನವರಾತ್ರಿ ಉಡುಪು Image Credit source: instagram/toraniofficial
ಅಕ್ಷತಾ ವರ್ಕಾಡಿ
|

Updated on:Oct 16, 2026 | 11:05 AM

Share

ಮುಂಬೈ: ಭಾರತೀಯ ಸಾಂಸ್ಕೃತಿಕ ಪರಂಪರೆ, ಸಾಂಪ್ರದಾಯಿಕ ಕರಕುಶಲತೆ ಮತ್ತು ಸ್ಥಳೀಯ ಕಲಾವಿದರ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ‘ಸ್ವದೇಶ್’ (Swadesh) ವೇದಿಕೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಅಂಬಾನಿ ಕುಟುಂಬವು ಇತ್ತೀಚೆಗೆ ಅದ್ಧೂರಿಯಾಗಿ ನವರಾತ್ರಿ ಹಬ್ಬದ ಅಂಗವಾಗಿ ಪಾರ್ಟಿಯನ್ನು ಆಯೋಜಿಸಿತ್ತು. ಬಾಲಿವುಡ್‌ನ ದಿಗ್ಗಜರು ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಎಲ್ಲರ ಗಮನ ಸೆಳೆದಿದೆ. ಆದರೆ, ಈ ಎಲ್ಲಾ ಆಕರ್ಷಣೆಗಳ ನಡುವೆ ಇಶಾ ಅಂಬಾನಿ ಧರಿಸಿದ್ದ ರಾಧಾ-ಕೃಷ್ಣ ಪ್ರೇರಿತ ವಿಶೇಷ ಕಸ್ಟಮ್ ಮೇಡ್ ಉಡುಗೆ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದು, ಸಮಾರಂಭದ ಮುಖ್ಯ ಕೇಂದ್ರಬಿಂದುವಾಗಿತ್ತು.

ಕರಕುಶಲತೆಯ ಅದ್ಭುತ ಸಂಗಮ ಮತ್ತು ಅಪಾರ ಶ್ರಮ:

ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ‘ತೊರಾನಿ’ (Torani) ಮತ್ತು ‘ಸ್ವದೇಶ್’ ಸಹಯೋಗದಲ್ಲಿ ಈ ವಿಶೇಷ ಉಡುಗೆಯನ್ನು ತಯಾರಿಸಲಾಗಿದೆ. ತಾಯಿ ನೀತಾ ಅಂಬಾನಿಯ ಆಭರಣಗಳೊಂದಿಗೆ ಇಶಾ ಈ ಉಡುಗೆಯನ್ನು ಧರಿಸಿ ಕಂಗೊಳಿಸಿದ್ದಾರೆ. ಜೊತೆಗೆ ‘ಟೊನೊಟೊ’ (Tonoto) ಬ್ರ್ಯಾಂಡ್‌ ನ ಆಳವಾದ ನೀಲಿ, ಕೆಂಪು, ಹಸಿರು ಮತ್ತು ಹಳದಿ ಬಣ್ಣಗಳ ಸುಂದರವಾದ ಕಸ್ಟಮ್ ಪರಂದಿ (Parandi) ಈ ಉಡುಗೆಗೆ ಮತ್ತಷ್ಟು ಮೆರುಗು ನೀಡಿತು.

ಈ ಉಡುಗೆಯ ತಯಾರಿಕೆಯ ಹಿಂದೆ ದೊಡ್ಡ ಶ್ರಮವೇ ಅಡಗಿದೆ ಎಂಬುದನ್ನು ‘ತೊರಾನಿ’ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದೆ. ಒಟ್ಟು 10 ಕುಶಲಕರ್ಮಿಗಳು ಈ ಉಡುಗೆಯ ನಿರ್ಮಾಣದಲ್ಲಿ ನಿರತರಾಗಿದ್ದರು. ಹಸ್ತಚಿತ್ರಕಲೆಗಾಗಿ 90 ದಿನಗಳಿಗೂ ಅಧಿಕ ಸಮಯ ಹಿಡಿದಿದ್ದು, ಅಂದಾಜು 2,000 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಪಟ್ಟು ಈ ಕರಕುಶಲತೆಯನ್ನು ಪೂರ್ಣಗೊಳಿಸಲಾಗಿದೆ.

ಕಲಂಕರಿ ಮತ್ತು ಪಟಚಿತ್ರ ಕಲೆಯ ಮೋಡಿ:

ಈ ಶುದ್ಧ ರೇಷ್ಮೆ (Pure Silk) ಉಡುಗೆಯಲ್ಲಿ ಆಂಧ್ರಪ್ರದೇಶದ ಪ್ರಸಿದ್ಧ ‘ಕಲಂಕರಿ’ (Kalamkari) ಮತ್ತು ಒಡಿಶಾದ ಪರಂಪರೆಯ ‘ಪಟಚಿತ್ರ’ (Pattachitra) ಕಲೆಗಳೆರಡೂ ಸುಂದರವಾಗಿ ಸಂಗಮಿಸಿವೆ. ಲಂಗದ ಪ್ರತಿ ಕಳಿಯ ಮೇಲೂ, ಚೋಲಿ ಹಾಗೂ ದುಪಟ್ಟಾದ ಮೇಲೆ ರಾಧಾ-ಕೃಷ್ಣರ ರಾಸಲೀಲೆಯ ದೃಶ್ಯಗಳನ್ನು ಕಲಾತ್ಮಕವಾಗಿ ಬಿಡಿಸಲಾಗಿದೆ. ಈ ಚಿತ್ರಗಳ ಸುತ್ತಲೂ ಜರ್ಡೋಸಿ ಕಲೆ, ಫ್ರೆಂಚ್ ನಾಟ್ಸ್, ಮುತ್ತು, ಮಿರರ್ ವರ್ಕ್ ಮತ್ತು ಸುಂದರವಾದ ಕುಣಿಕೆಗಳನ್ನು (Tassels) ಅಳವಡಿಸಲಾಗಿದೆ. ಪ್ರತಿಯೊಂದು ಎಸಳಿನ ಕೆಲಸದಲ್ಲೂ ಕಲಾವಿದರ ತಾಳ್ಮೆ, ಜ್ಞಾನ ಮತ್ತು ಅಪಾರ ಪ್ರೀತಿ ಅಡಗಿದೆ ಎಂದು ತೊರಾನಿ ತಿಳಿಸಿದ್ದಾರೆ.

ನವರಾತ್ರಿಯ ಉತ್ಸಾಹ, ಗರ್ಭಾದ ಲಯ, ಒಟ್ಟಾಗಿ ನೃತ್ಯ ಮಾಡುವ ಭಾವನೆ ಹಾಗೂ ದೇವಿಯ ಧೈರ್ಯ ಮತ್ತು ಮೃದುತ್ವವನ್ನು ಈ ಉಡುಗೆ ಬಿಂಬಿಸಬೇಕು ಎಂಬುದು ನಮ್ಮ ಆಶಯವಾಗಿತ್ತು ಎಂದು ಡಿಸೈನರ್ ತಿಳಿಸಿದ್ದಾರೆ. ಸೆಲೆಬ್ರಿಟಿ ಸ್ಟೈಲಿಸ್ಟ್ ಅನೈತಾ ಶ್ರಾಫ್ ಅದಾಜಾನಿಯಾ ಅವರೊಂದಿಗೆ ಸೇರಿ ಈ ವಿನ್ಯಾಸವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: ದುರ್ಗಾ ದೇವಿಯ ಕೈಯಲ್ಲಿರುವ ಆಯುಧಗಳ ರಹಸ್ಯವೇನು? ತ್ರಿಶೂಲದಿಂದ ಚಕ್ರದವರೆಗೆ ಎಲ್ಲದರ ಮಹತ್ವ ಇಲ್ಲಿದೆ!

2018 ರ ನೆನಪು ಹಾಗೂ ಸುಂದರ ಬಾಂಧವ್ಯದ ಕಥೆ:

ಈ ಉಡುಗೆಯ ಹಿಂದೆ ಒಂದು ಸುಂದರವಾದ ವೈಯಕ್ತಿಕ ನೆನಪಿನ ಕಥೆಯೂ ಇದೆ ಎಂದು ಡಿಸೈನರ್ ತೊರಾನಿ ಹಂಚಿಕೊಂಡಿದ್ದಾರೆ. 2018 ರಲ್ಲಿ ತನಗೆ 25 ವರ್ಷ ವಯಸ್ಸಾಗಿದ್ದಾಗ, ಒಂದು ಸಣ್ಣ ಗ್ಯಾರೇಜ್‌ನಲ್ಲಿ ತಮ್ಮ ‘ತೊರಾನಿ’ ಬ್ರ್ಯಾಂಡ್‌ ಅನ್ನು ಕಟ್ಟುತ್ತಿರುವುದಾಗಿ ಅವರು ಸ್ಮರಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಇಶಾ ಅಂಬಾನಿ ಮೊದಲು ತಮ್ಮ ಮುದ್ರಿತ ಕುರ್ತಾಗಳನ್ನು (Printed kurtas) ಗುರುತಿಸಿ ಮೆಚ್ಚಿಕೊಂಡಿದ್ದರು.

ಅವರ ಆ ನಂಬಿಕೆ ತನ್ನಲ್ಲಿ ಶಾಶ್ವತವಾಗಿ ಉಳಿಯಿತು ಎಂದು ತಿಳಿಸಿರುವ ತೊರಾನಿ, ವರ್ಷಗಳ ನಂತರ ಅನೇಕ ಜನರ ಕೈಗಳ ಕರಕುಶಲತೆಯ ಮೂಲಕ ಆ ಪ್ರೀತಿಗೆ ಮರುಳುವುದು ತನಗೆ ಅತ್ಯಂತ ಅರ್ಥಪೂರ್ಣವೆನಿಸುತ್ತದೆ ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಇದು ಕೇವಲ ಭಾರತೀಯ ಕಲೆಯ ಸಂಭ್ರಮಾಚರಣೆ ಮಾತ್ರವಲ್ಲದೆ, ದೀರ್ಘಕಾಲದ ಬಾಂಧವ್ಯದ ಸಂಕೇತವೂ ಹೌದು ಎಂದು ಅವರು ತಿಳಿಸಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:02 am, Fri, 16 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More