Krishna Janmashtami: ಮನೆಯಲ್ಲಿ ಸದಾ ಸಮೃದ್ಧಿ ನೆಲೆಸಲು ಕೃಷ್ಣ ಜನ್ಮಾಷ್ಟಮಿಯಂದು ಈ ಕೆಲಸ ಮಾಡಿ
ಕೃಷ್ಣ ಜನ್ಮಾಷ್ಟಮಿಯು ಮನೆಯಲ್ಲಿ ಸಮೃದ್ಧಿ, ಸಂತೋಷ ತರುವ ಪವಿತ್ರ ದಿನ. ಈ ಶುಭ ಸಂದರ್ಭದಲ್ಲಿ ದೇವರ ಕೃಪೆಗೆ ಪಾತ್ರರಾಗಲು ಸರಳ ವಿಧಾನಗಳಿವೆ. ಶ್ರೀಕೃಷ್ಣನಿಗೆ ಬೆಣ್ಣೆ ಮತ್ತು ಕಲ್ಲುಸಕ್ಕರೆ ನೈವೇದ್ಯ, ಮಂತ್ರ ಜಪ, ತುಳಸಿ ಪೂಜೆ ಹಾಗೂ ಲಡ್ಡು ಗೋಪಾಲನಿಗೆ ಜೂಲಾ ಸೇವೆ ಮಾಡುವುದರಿಂದ ಮನೆಯಲ್ಲಿ ಶಾಂತಿ, ಐಶ್ವರ್ಯ ನೆಲೆಸಿ, ಸಕಲ ಕಾರ್ಯಗಳಲ್ಲೂ ಯಶಸ್ಸು ಸಿಗುವುದು ನಿಶ್ಚಿತ.

ಸನಾತನ ಧರ್ಮದಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಶ್ರೀಕೃಷ್ಣನ ಜನ್ಮದಿನವನ್ನು ದೇಶಾದ್ಯಂತ ಅತ್ಯಂತ ಸಡಗರ-ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಈ ಶುಭ ದಿನದಂದು ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ, ಸುಂದರ ಅಲಂಕಾರಗಳೊಂದಿಗೆ ಲಡ್ಡು ಗೋಪಾಲನನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಪೂಜಿಸಲಾಗುತ್ತದೆ. ಜನ್ಮಾಷ್ಟಮಿಯಂದು ಲಡ್ಡು ಗೋಪಾಲನಿಗೆ ಅಭಿಷೇಕ ಮಾಡಿ ಪೂಜಿಸುವುದರಿಂದ ಹಾಗೂ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಲು ಅನುಸರಿಸಬೇಕಾದ ೪ ಪ್ರಮುಖ ಹಂತಗಳು ಇಲ್ಲಿವೆ:
ಶ್ರೀಕೃಷ್ಣನಿಗೆ ಪ್ರಿಯವಾದ ಬೆಣ್ಣೆ ಮತ್ತು ಕಲ್ಲುಸಕ್ಕರೆ ನೈವೇದ್ಯ:
ಜನ್ಮಾಷ್ಟಮಿಯಂದು ಶ್ರೀಕೃಷ್ಣನನ್ನು ಮೆಚ್ಚಿಸಲು ಅತ್ಯಂತ ಸರಳ ಮತ್ತು ಶ್ರೇಷ್ಠ ಮಾರ್ಗವೆಂದರೆ ಬೆಣ್ಣೆ ಮತ್ತು ಕಲ್ಲುಸಕ್ಕರೆ ನೈವೇದ್ಯ ಅರ್ಪಿಸುವುದು. ಬಾಲಕೃಷ್ಣನಿಗೆ ಬೆಣ್ಣೆ ಎಂದರೆ ಅಪಾರ ಪ್ರೀತಿ. ಪೂಜೆಯ ಸಮಯದಲ್ಲಿ ಶ್ರೀಕೃಷ್ಣನ ವಿಗ್ರಹದ ಮುಂದೆ ಭಕ್ತಿಯಿಂದ ಬೆಣ್ಣೆ-ಕಲ್ಲುಸಕ್ಕರೆಯನ್ನು ನೈವೇದ್ಯವಾಗಿರಿಸಿ ಪ್ರಾರ್ಥಿಸಬೇಕು. ಪೂಜೆಯ ನಂತರ ಈ ಪ್ರಸಾದವನ್ನು ಕುಟುಂಬದ ಸದಸ್ಯರಿಗೆ ಹಂಚಿ, ನೀವೂ ಸ್ವೀಕರಿಸುವುದರಿಂದ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ.
ಕೃಷ್ಣ ಮಂತ್ರಗಳ ಜಪ ಮತ್ತು ಮನಶ್ಶಾಂತಿ:
ಜನ್ಮಾಷ್ಟಮಿಯ ಪವಿತ್ರ ದಿನದಂದು ಶ್ರೀಕೃಷ್ಣನ ಮಂತ್ರಗಳನ್ನು ಜಪಿಸುವುದು ಅತ್ಯಂತ ಫಲಪ್ರದ. ವಿಶೇಷವಾಗಿ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮಂತ್ರ ಪಠಣವು ಮನಸ್ಸಿಗೆ ಶಾಂತಿಯನ್ನು ನೀಡುವುದಲ್ಲದೆ, ಪವಿತ್ರವಾದ ಭಕ್ತಿ ವಾತಾವರಣವನ್ನು ಸೃಷ್ಟಿಸಿ ಕುಟುಂಬದಲ್ಲಿ ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ
ಮನೆಯಲ್ಲಿ ತುಳಸಿ ಗಿಡದ ಸ್ಥಾಪನೆ ಮತ್ತು ಪೂಜೆ:
ವಿಷ್ಣುವಿನ ಸ್ವರೂಪವಾದ ಶ್ರೀಕೃಷ್ಣನಿಗೆ ತುಳಸಿ ಎಂದರೆ ಅತ್ಯಂತ ಪ್ರಿಯ. ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ಹೊಸ ತುಳಸಿ ಗಿಡವನ್ನು ನೆಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಸಂಜೆ ವೇಳೆಯಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಿ ಪೂಜಿಸುವುದರಿಂದ ಶ್ರೀಕೃಷ್ಣನ ಆಶೀರ್ವಾದದೊಂದಿಗೆ ಲಕ್ಷ್ಮೀ ದೇವಿಯ ಕೃಪೆಯೂ ಲಭಿಸಿ, ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ.
ಲಡ್ಡು ಗೋಪಾಲನಿಗೆ ತೊಟ್ಟಿಲು ಸೇವೆ:
ಜನ್ಮಾಷ್ಟಮಿಯಂದು ಬಾಲಕೃಷ್ಣ ಅಂದರೆ ಲಡ್ಡು ಗೋಪಾಲನಿಗೆ ಪಂಚಾಮೃತ ಅಭಿಷೇಕ ಮಾಡಿ, ಹೊಸ ವಸ್ತ್ರಗಳನ್ನು ತೊಡಿಸಿ, ಸುಂದರವಾದ ತೊಟ್ಟಿಲಿನಲ್ಲಿರಿಸಿ ತೂಗಾಡುವುದು ವಿಶೇಷ ಆಚರಣೆಯಾಗಿದೆ. ಕೃಷ್ಣನ ಬಾಲ ರೂಪವನ್ನು ಪ್ರೀತಿಯಿಂದ ತೊಟ್ಟಿಲಿನಲ್ಲಿ ತೂಗಾಡುವುದರಿಂದ ಶ್ರೀಮನ್ನಾರಾಯಣ ಮತ್ತು ಲಕ್ಷ್ಮೀ ದೇವಿಯ ಅನುಗ್ರಹ ದೊರೆತು, ಮನೆಯಲ್ಲಿ ನೆಮ್ಮದಿ ಹಾಗೂ ಸಕಲ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




