Naivedya: ದೇವರಿಗೆ ನೈವೇದ್ಯವು ಏಕೆ? ಮತ್ತು ಹೇಗಿರಬೇಕು?
ಪ್ರಕೃತಿಯಿಂದ ನಾವು ಏನನ್ನೇ ಪಡೆಯುವುದಿದ್ದರೂ ಅದನ್ನು ಪರಮಾತ್ಮನಿಗೆ ಅರ್ಪಿಸಬೇಕು. ಆದರೆ ತಿನ್ನದ ದೇವರಿಗೇಕೆ ನೈವೇದ್ಯ ಯಾಕೆ ಎಂದು ಪ್ರಶ್ನಿಸುವವರೂ ಇದ್ದಾರೆ. ದೇವರು ತಿನ್ನುವುದಿಲ್ಲ ನಿಜ. ಆದರೆ ಸಮರ್ಪಣೆಯ ಭಾವ ಬೇಕು. ಆಗಲೇ ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುವುದು.
ದೇವರಿಗೆ ಮಾಡುವ ಹದಿನಾರು ಉಪಚಾರಗಳಲ್ಲಿ ನೈವೇದ್ಯವೂ ಒಂದು. ಇದು ಪೂಜೆಯ ಕೊನೆಯ ಭಾಗದಲ್ಲಿ ಬರುವ ಕ್ರಿಯೆ. ಈ ನೈವೇದ್ಯವನ್ನು ಏಕೆ ಮಾಡಬೇಕು ಮತ್ತು ಹೇಗಿರಬೇಕು? ಎಂಬ ಕುತೂಹಲ, ಕುಹಕಗಳು ಹಲವರಲ್ಲಿ ಇರಬಹುದು.
ಮನುಷ್ಯ, ಪ್ರಾಣಿ, ಪಕ್ಷಿಗಳು ಹುಟ್ಟಿದ ಅನಂತರ ಬೆಳವಣಿಗೆಯನ್ನು ಹೊಂದುವುದು ಆಹಾರದಿಂದ. ಈ ಆಹಾರವು ಪ್ರಕೃತಿಯಿಂದ ನಮಗೆ ಸಿಗುವ ಅಪೂರ್ವ ಸಂಪತ್ತು. ಜೀವಿಗಳು ತಿನ್ನುವ ಆಹಾರವು ಪ್ರಕೃತಿಯಿಂದ ಬರಬೇಕು. ಭೂಮಿಯಿಂದ ಬಾರದ ವಸ್ತುವನ್ನು ಯಾರೂ ತಿನ್ನುವುದಿಲ್ಲ. ಈ ಭೂಮಿ ಯಾರದು ಎಂದರೆ, ದೇವರದ್ದು. ಹಾಗಾಗಿ ಪ್ರಕೃತಿಯಿಂದ ನಾವು ಏನನ್ನೇ ಪಡೆಯುವುದಿದ್ದರೂ ಅದನ್ನು ಪರಮಾತ್ಮನಿಗೆ ಅರ್ಪಿಸಬೇಕು. ಇದನ್ನು ಕೃತಜ್ಞತೆ ಎನ್ನುವರು. ಸ್ಮರಣೆ ಬೇಕು. ಕೃತಜ್ಞತೆಯ ಮುಖ್ಯ ಭಾಗವೇ ನೈವೇದ್ಯ. ತಿನ್ನದ ದೇವರಿಗೇಕೆ ನೈವೇದ್ಯ ಎಂಬ ಪ್ರಶ್ನೆ ಬರಬಹುದು. ದೇವರು ತಿನ್ನುವುದಿಲ್ಲ ನಿಜ. ಆದರೆ ಸಮರ್ಪಣೆಯ ಭಾವವು ಬೇಕು. ಅದಾದಾಗ ಮಾತ್ರ ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುವುದು, ಜೀರ್ಣವಾದುದ್ದು ಧಾತುಗಳಾಗುವುದು.
ಇದನ್ನೂ ಓದಿ: Mercury in Leo 2023: ಜುಲೈ 25 ಸಿಂಹ ರಾಶಿಯಲ್ಲಿ ಬುಧ ಸಂಕ್ರಮಣ -ಅದು ಯಾವ ರಾಶಿ ಮೇಲೆ, ಏನೆಲ್ಲಾ ಪ್ರಭಾವ ಬೀರುತ್ತದೆ?
ನೈವೇದ್ಯವು ನಾವು ಯಾವುದನ್ನು ತಿನ್ನಬೇಕೋ ಅದನ್ನು ದೇವರಿಗೆ ಸಮರ್ಪಿಸುವುದು ಒಂದು ವಿಧಾನವಾದರೆ, ಇನ್ನೊಂದು ವಿಧಾನ ದೇವರಿಗೆ ಸಮರ್ಪಿತವಾದುದನ್ನು ತಾನು ತಿನ್ನುವುದು. ಇದರಲ್ಲಿ ಎರಡನೆಯದು ಉತ್ತಮವೆಂದೇ ಹೇಳಬೇಕು. ದೇವರಿಗೆ ಯಾವುದು ಪ್ರಿಯ ಎನ್ನುವುದನ್ನು ಅರಿತು ಅದನ್ನು ಸಮರ್ಪಿಸಿ ನಾವು ತಿಂದರೆ ಅದು ಪ್ರಸಾದವಾಗಿ ಮನಸ್ಸನ್ನು ಪ್ರಶಾಂತವಾಗಿರಿಸುತ್ತದೆ.
ನೈವೇದ್ಯವು ಹೇಗಿರಬೇಕು? ಯಾವುದಾಗಿರಬೇಕು?
ಕೃಷ್ಣನ ಪ್ರಕಾರ, ಪತ್ರ, ಪುಷ್ಪ, ಫಲ, ಪಾನೀಯ ಇವುಗಳಲ್ಲಿ ಯಾವುದನ್ನೂ ಭಕ್ತಿಯಿಂದ ಕೊಟ್ಟರೆ ನಾನು ಸ್ವೀಕರಿಸುತ್ತೇನೆ ಎನ್ನುತ್ತಾನೆ. ಇದು ಭಕ್ತಿಯ ವಿಚಾರವಾದರೆ ದೇವರಿಗೆ ಎಂತಹ ವಸ್ತುಗಳನ್ನು ಸಮರ್ಪಿಸಬಹುದು ಎನ್ನುವುದು ದೊಡ್ಡ ಪಟ್ಟಿಯೇ ಇದ್ದರೂ ಕೆಲಸವನ್ನು ಗಮನಿಸಬಹುದಾದ, ಮಾಡಬಹುದಾದ ವಿಚಾರವಾಗಿದೆ.
ಸಸಿತೇನ ಸಶುದ್ಧೇನ
ಪಾಯಸೇನ ಸಸರ್ಪಿಷಾ |
ಸಿತೋದನಂ ಸಕದಲೀ
ದಧ್ಯಾದೈಶ್ಚ ನಿವೇದಯೇತ್ ||
ಬಿಳಿಯಾದ, ಶುದ್ಧವಾದ ಪಾಯಸ, ತುಪ್ಪದಿಂದ, ಬಿಳಿಯ ಅನ್ನ, ಬಾಳೆ ಹಣ್ಣು, ಮೊಸರು ಇವುಗಳನ್ನು ದೇವರಿಗೆ ಸಮರ್ಪಿಸಬೇಕು. ಇದು ದೇವರಿಗೆ ನೈವೇದ್ಯವನ್ನು ನೀಡುವ ವಿಧಾನವಾಗಿದೆ.
ನೈವೇದ್ಯಕ್ಕೆ ಪಾತ್ರೆ ಯಾವುದಿರಬೇಕು?
ನೈವೇದ್ಯವು ಎಷ್ಟು ಪ್ರಶಸ್ತ ಹಾಗೂ ಶುದ್ಧವೋ ಅದನ್ನು ಹಾಕುವ ಪಾತ್ರೆಯೂ ಕೂಡ ಹಾಗೆಯೇ ಇರಬೇಕು. ಆಗ ಮಾತ್ರ ನೈವೇದ್ಯ ಮಾಡಿದ ವಸ್ತುವಿನ ಶುದ್ಧತೆಯು ಉಳಿಯುತ್ತದೆ. ಇಲ್ಲವಾದರೆ ಶುದ್ಧವಾದ ಹಾಲು ಹುಳಿಯನ್ನು ಹಿಂಡಿದ ಪಾತ್ರೆಯಲ್ಲಿ ಇದ್ದಂತಾಗುವುದು. ಶುದ್ಧವಾದ ನೈವೇದ್ಯವು ಸುವರ್ಣ ಅಥವಾ ರಜತ ಪಾತ್ರದಲ್ಲಿ ಇದ್ದರೆ ಶ್ರೇಷ್ಠ ಎನಿಸಿಕೊಳ್ಳುವುದು. ತಾಮ್ರ ಅಥವಾ ಶಿಲಾಪಾತ್ರೆಗಳು, ಕಮಲದ ಎಲೆಯಿಂದ ಮಾಡಿದ ಮಾಡಿದ ಪಾತ್ರೆ ಅಥವಾ ಮಣ್ಣಿನ ಪಾತ್ರೆಗಳು ನೈವೇದ್ಯಕ್ಕೆ ಉತ್ತಮವಾದುದಾಗಿದೆ.
ಹೀಗೆ ದೇವರಿಗೆ ಸಮರ್ಪಿಸುವ ವಸ್ತುಗಳು ಉತ್ತಮವಾಗಿರಬೇಕು. ಕಾಣದ ದೇವರಿಗೇಕೆ ಇಷ್ಟಲ್ಲ ಸಡಗರ ಎಂದರೆ ಯದ್ಭಾವಂ ತದ್ಭವತಿ. ಯಾವ ರೀತಿಯಲ್ಲಿ ನಮ್ಮ ಭಾವವಿರುವುದೋ ನಮಗೂ ಅದೇ ಆಗುತ್ತದೆ. ಶುದ್ಧ ಭಾವದಿಂದ, ಶುಭಭಾವದಿಂದ ಅರ್ಚಿಸಿದರೆ ನೀಡಿದವರಿಗೂ ಶುಭವೇ ಸಿಗುವುದು.
ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ