Navratri 2023,Day 2: ದೇವಿ ಬ್ರಹ್ಮಚಾರಿಣಿಯ ಹಿನ್ನಲೆ ತಿಳಿದಿದೆಯಾ? ಈ ದಿನದ ಮಂತ್ರ, ಪೂಜಾ ಮಹತ್ವದ ಬಗ್ಗೆ ತಿಳಿದುಕೊಳ್ಳಿ
ಬ್ರಹ್ಮಚಾರಿಣಿಯು ಸತಿ ಮತ್ತು ಪಾರ್ವತಿ ದೇವಿಯ ಅವಿವಾಹಿತ ರೂಪವಾಗಿದ್ದು ನವರಾತ್ರಿಯ ಎರಡನೇ ದಿನ ಈ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ದುರ್ಗಾ ಮಾತೆಯ ಭಕ್ತರು ಶಾಂತಿ, ಸಮೃದ್ಧಿ, ಬಯಕೆ ನೆರವೇರಿಕೆಯನ್ನು ಪಡೆಯಲು ಮತ್ತು ಆತ್ಮಸಾಕ್ಷಾತ್ಕಾರಕ್ಕಾಗಿ ದೇವಿಯನ್ನು ಬೇಡುತ್ತಾರೆ. ಹಾಗಾದರೆ ಬ್ರಹ್ಮಚಾರಿಣಿ ದೇವಿಯ ಹಿನ್ನಲೆ ಮತ್ತು ಪೂಜಾ ಮಹತ್ವದ ಬಗ್ಗೆ ತಿಳಿದುಕೊಳ್ಳಿ.

ಎರಡನೇ ದಿನ ದುರ್ಗೆಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯು ಸತಿ ಮತ್ತು ಪಾರ್ವತಿ ದೇವಿಯ ಅವಿವಾಹಿತ ರೂಪವಾಗಿದ್ದು ಈಕೆ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲವನ್ನು ಹಿಡಿದಿರುವ ದುರ್ಗೆಯಾಕಾರವನ್ನು ನೀವು ಕಾಣಬಹುದು. ಬ್ರಹ್ಮಚಾರಿಣಿ ಎಂಬ ಹೆಸರು ಎರಡು ಪದಗಳಿಂದ ಬಂದಿದೆ. ‘ಬ್ರಹ್ಮ’ ಎಂದರೆ ತಸ್ಸು, ‘ಚಾರಿಣಿ’ ಎಂದರೆ ಕಟ್ಟಾ ಸ್ತ್ರೀ ಅನುಯಾಯಿ. ಹಾಗಾಗಿ ಈ ದಿನ ಬ್ರಹ್ಮಚಾರಿಣಿಯ ಆರಾಧನೆ ಮಾಡುವುದರಿಂದ ಸದಾಚಾರ, ಸಂಯಮಗಳು ಪ್ರಾಪ್ತಿಯಾಗುತ್ತವೆ ಎಂಬ ಪ್ರತೀತಿ ಇದೆ.
ಎರಡನೇ ದಿನದ ಹಿನ್ನೆಲೆಯೇನು?
ದಕ್ಷಮಹಾರಾಜನ ಮಗಳಾದ ಸತೀ ದೇವಿ ಯಜ್ಞದ ಬೆಂಕಿಗೆ ಆಹುತಿಯಾದ ನಂತರ, ಪರ್ವತಗಳ ರಾಜನಾದ ಹಿಮವಾನನ ಮಗಳಾಗಿ ಪಾರ್ವತಿ ಜನಿಸುತ್ತಾಳೆ. ಹಾಗಾಗಿ ಇವಳನ್ನು ಹೇಮವತಿ ಎಂದೂ ಕರೆಯಲಾಗುತ್ತದೆ. ಬಳಿಕ ಈಕೆ ಯೌವನಾವಸ್ಥೆಗೆ ಬಂದಾಗ ನಾರದ ಮುನಿಯ ಸಲಹೆಯಂತೆ, ಹಿಂದಿನ ಜನ್ಮದಲ್ಲಿ ಪತಿಯಾಗಿದ್ದ ಈಶ್ವರನನ್ನು ಮತ್ತೆ ವರಿಸಲು ತಪಸ್ಸಿನ ಹಾದಿ ಹಿಡಿದು ಭಕ್ತಿಯಿಂದ ಅತ್ಯಂತ ಕಠಿಣ ತಪಸ್ಸನ್ನು ಅನುಸರಿಸುತ್ತಾಳೆ. ಅನೇಕ ವರ್ಷಗಳವರೆಗೂ ಆಹಾರ ಮತ್ತು ನೀರಿಲ್ಲದೇ ತಪಸ್ಸನ್ನು ಮಾಡಿ “ಅಪರ್ಣಾ”, “ಉಮಾ” ಎಂಬೆಲ್ಲಾ ಹೆಸರುಗಳಿಂದ ಪ್ರಖ್ಯಾತಳಾಗುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿತು ಎಂದು ನಂಬಲಾಗಿದೆ. ಅವಳ ತಪಸ್ಸಿಗೆ ಕೊನೆಯಲ್ಲಿ ಬ್ರಹ್ಮನು ಪ್ರತ್ಯಕ್ಷನಾಗಿ’ ಇದುವರೆಗೂ ಯಾರೂ ಮಾಡದಂತಹ ಕಠಿಣ ತಪಸ್ಸನ್ನು ಮಾಡಿದ್ದಕ್ಕಾಗಿ ಆಕೆಗೆ, ಈ ಜನ್ಮದಲ್ಲಿ ಶಿವನನ್ನೇ ಪತಿಯಾಗಿ ಪಡೆಯುವೆ’ ಎಂದು ಆಶೀರ್ವದಿಸುತ್ತಾನೆ. ಬಳಿಕ ಅವಳ ತಪಸ್ಸಿಗೆ ಈಶ್ವರನೂ ಮೆಚ್ಚಿ ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.
ಎರಡನೇ ದಿನದ ಪೂಜಾ ಮಹತ್ವವೇನು?
ಈ ದಿನ ದೇವಿಗೆ ತಪ್ಪದೇ ಮಲ್ಲಿಗೆ ಹೂವನ್ನು ಅರ್ಪಿಸುವುದು ತುಂಬಾ ಉತ್ತಮ. ಜೊತೆಗೆ ತುಪ್ಪದ ದೀಪ ಬೆಳಗಿಸಿ ಶ್ರೀ ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ದೇವಿಯ ಆಶೀರ್ವಾದ ಲಭಿಸುತ್ತದೆ. ಜೊತೆಗೆ ಈ ದಿನ ಬ್ರಹ್ಮಚಾರಿಣಿ ಮಂತ್ರವನ್ನು ಕೂಡ ಓದಬೇಕು, ಆಗ ದೇವಿ ಸಂತುಷ್ಟಳಾಗಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ನೈವೇದ್ಯವನ್ನು ಅರ್ಪಿಸಿ ಆರತಿ ಮಾಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಅದರಲ್ಲಿಯೂ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡುವುದರಿಂದ ದೇವಿ ಸಂತುಷ್ಟಳಾಗುತ್ತಾಳೆ ಎಂಬ ನಂಬಿಕೆ ಇದೆ. ಅದರಲ್ಲಿಯೂ ನಿಷ್ಕಲ್ಮಷ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸುವುದರಿಂದ ಬೇಡಿದ ವರಗಳನ್ನು ಕರುಣಿಸ್ತಾಳೆ. ಜೊತೆಗೆ ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ ಎಂಬ ಪ್ರತೀತಿ ಇದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಕೆಲಸದಲ್ಲೂ ನೆಮ್ಮದಿ ದೊರೆಯುವುದು ಎಂಬ ನಂಬಿಕೆ ಇದೆ.
ಇದನ್ನೂ ಓದಿ: ನವರಾತ್ರಿ ಮೊದಲ ದಿನ ದೇವಿ ಶೈಲಪುತ್ರಿಯನ್ನು ಪೂಜಿಸುವುದರಿಂದ ಸಿಗುವ ಫಲಗಳೇನು? ಈ ದೇವಿಯ ಹಿನ್ನೆಲೆಯೇನು? ತಿಳಿದುಕೊಳ್ಳಿ
ಬ್ರಹ್ಮಚಾರಿಣಿ ದೇವಿಯ ಅನುಗ್ರಹ ಪಡೆಯಲು ಯಾವ ಮಂತ್ರವನ್ನು ಜಪಿಸಬೇಕು?
– ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
– ದಧನಾಕಾರ ಪದ್ಮಭಯಂ ಅಕ್ಷಮಾಲಾ ಕಮಂಡಲಂ, ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ
-ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
– ಹ್ರೀಂ ಶ್ರೀ ಅಂಬಿಕಾಯೈ ನಮಃ
– ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
-ತಪಶ್ಚಾರಿಣಿ ತ್ವಂಹೀ ತಾಪತ್ರಯಾ ನಿವಾರಿಣಿಂ ಬ್ರಹ್ಮರೂಪಧಾರಾ ಬ್ರಹ್ಮಚಾರಿಣೀ ನಮಾಮ್ಯಹಂ ಶಂಕರಪ್ರಿಯ ತ್ವಂಹೀ ಭುಕ್ತಿ- ಮುಕ್ತಿ ದ್ಯಾಯಿನೀ ಶಾಂತಿದಾ ಜ್ಞಾನದಾ ಬ್ರಹ್ಮಚಾರಿಣೀ ಪ್ರಣಮಾಮ್ಯಹಂ
-ಓಂ ಬ್ರಹ್ಮಚಾರಿಯೈ ನಮಃ
-ದಾದಹಾನ ಕರ್ಪದಮ ಅಭಯಾಮಸ್ಕಮಲ ಕಾಮದಲು ದೇವಿ ಪ್ರಸಿದತು ಮಯಿ ಬ್ರಹ್ಮಚಾರಿಣಿಯಂತಮ
ಮತ್ತಷ್ಟು ಅಧ್ಯಾತ್ಮದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: