Thanjavur Brihadeeswara Temple: ಸಾವಿರ ವರ್ಷಗಳಷ್ಟು ಹಳೆಯ ಈ ದೇವಾಲಯದಲ್ಲಿ ಅಡಗಿದೆ ಊಹಿಸಲೂ ಆಗದಷ್ಟು ವಿಸ್ಮಯ

ವಿಸ್ಮಯಗಳ ಭಂಡಾರ ತಂಜಾವೂರಿನ ಬೃಹದೀಶ್ವರ ದೇವಾಲಯ. ಇದು ಬೆಣಚು ಕಲ್ಲಿನಿಂದ ನಿರ್ಮಾಣಗೊಂಡ ವಿಶ್ವದ ಏಕೈಕ ದೇಗುಲ. ಸಾವಿರ ವರ್ಷಗಳ ಇತಿಹಾಸ ಹೊಂದಿರುವ, 216 ಅಡಿ ಎತ್ತರವಿರುವ ಈ ದೇವಾಲಯವನ್ನು ಅಡಿಪಾಯ ಇಲ್ಲದೆ ಕಟ್ಟಲಾಗಿದೆ. ಗೋಪುರದ ಮೇಲ್ಭಾಗದಲ್ಲಿ ಕೂರಿಸಿರುವ 80 ಟನ್ ತೂಕದ ಕಲ್ಲು ಆಧಾರವಿಲ್ಲದೇ ನಿಂತಿರೋದು ದೇವರ ಲೀಲೆ ಎನ್ನಲಾಗುತ್ತೆ. ಇಲ್ಲಿ ಪಾತಾಳ ಲೋಕಕ್ಕೆ ದಾರಿ ಇದೆ. ರಹಸ್ಯ ಕೋಣೆಯಲ್ಲಿ ಕೇರಳದ ಅನಂತ ಪದ್ಮನಾಭನನ್ನೇ ಮೀರಿಸುವ ಸಂಪತ್ತಿದೆ. ವಾಸ್ತು ಶಿಲ್ಪದ ಮೂಲಕ ಚಕಿತಗೊಳಿಸಿರುವ ಈ ದೇವಾಲಯವು ಹಲವು ವಿಸ್ಮಯಗಳನ್ನು ತನ್ನ ಮಡಿಲಲ್ಲಿ ಅಡಗಿಸಿಟ್ಟುಕೊಂಡಿದೆ. ಇದರ ವಿವರ ಇಲ್ಲಿ ಓದಿ.

Thanjavur Brihadeeswara Temple: ಸಾವಿರ ವರ್ಷಗಳಷ್ಟು ಹಳೆಯ ಈ ದೇವಾಲಯದಲ್ಲಿ ಅಡಗಿದೆ ಊಹಿಸಲೂ ಆಗದಷ್ಟು ವಿಸ್ಮಯ
ತಂಜಾವೂರಿನ ಬೃಹದೀಶ್ವರ ದೇವಾಲಯ
Follow us
ಆಯೇಷಾ ಬಾನು
|

Updated on: Aug 20, 2024 | 2:28 PM

ಜಗತ್ತಿನಲ್ಲಿ ಶಿವನನ್ನು ಪೂಜಿಸುವ ಲಕ್ಷಾಂತರ ದೇವಾಲಯಗಳನ್ನು ನೀವು ನೋಡಿರುತ್ತೀರಾ. ಆದರೆ ಇದು ಅಂತಿಂತ ದೇವಸ್ಥಾನವಲ್ಲ. ಕುತೂಹಲ, ಚಮತ್ಕಾರಿಕ, ಊಹೆಗೂ ಮೀರಿದ ವಿಸ್ಮಯವನ್ನು ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿದೆ. ಎಷ್ಟೇ ಆಧುನೀಕರಣ ಆದರೂ ಈ ವಿಸ್ಮಯವನ್ನು ಭೇದಿಸಲಾಗಿಲ್ಲ. ಸಂಶೋಧಕರಿಗೆ, ಇತಿಹಾಸ ತಜ್ಞರಿಗೆ ಈ ದೇವಸ್ಥಾನವೊಂದು ಜ್ಞಾನ ಭಂಡಾರವಾಗಿದೆ.

ಈ ದೇವಾಲಯದ ನೆರಳು ಭೂಮಿ ಮೇಲೆ ಬೀಳಲ್ಲ

ಅದು ಸಾವಿರ ವರ್ಷಗಳಷ್ಟು ಹಳೆಯ ದೇವಸ್ಥಾನ. ಕಾವೇರಿ ನದಿಯ ತಟದಲ್ಲಿ ಪರ್ವತದಂತೆ ಎದ್ದು ನಿಂತಿದೆ. ಅಡಿಪಾಯವಿಲ್ಲದೆ (ಫೌಂಡೇಶನ್​) ತನ್ನ ನೆರಳನ್ನೂ ಭೂಮಿಗೆ ಸೋಕಿಸದೆ, 216 ಅಡಿ ಎತ್ತರವಿರುವ ಬೃಹತ್​ ಆಕಾರದಲ್ಲಿರುವ ಈ ದೇವಸ್ಥಾನವು ತನ್ನ ಅಮೋಘ ವಾಸ್ತುಶಿಲ್ಪ, ಕೆತ್ತನೆಗಳಿಂದ ಇಂದಿಗೂ ಲಕ್ಷಾಂತರ ಜನರನ್ನು ಸೆಳೆಯುತ್ತಿದೆ. ಆಧುನಿಕ ಆರ್ಕಿಟೆಕ್ಚರ್​​​ಗಳಿಗೆ ಇಂದಿಗೂ ಅದೊಂದು ವಿಸ್ಮಯದ ಗೂಡಾಗಿದೆ. ಹತ್ತಾರು ಆರ್ಕಿಟೆಕ್ಚರುಗಳು ದಿನಾಲೂ ಈ ದೇವಸ್ಥಾನವನ್ನು ಎಡತಾಕುತ್ತಿರುತ್ತಾರೆ. ಅದೆಷ್ಟು ಸಲ ಇಲ್ಲಿ ಪ್ರವಾಹ ಬಂದಿದೆಯೋ, ಅದೆಷ್ಟು ರಾಜ, ಮಹಾರಾಜರು ಇದರ ಮೇಲೆ ದಾಳಿ ಮಾಡಿದ್ದಾರೋ… ಆದರೆ ಈ ದೇವಸ್ಥಾನದ ಯಾವ ಭಾಗವೂ ಕುಸಿದಿಲ್ಲ. ವಿಶ್ವದ ಏಕೈಕ ಏಕ ಶಿಲಾ ಶಿವ ಲಿಂಗ, ಹಾಗೂ ಪ್ರಪಂಚದ 2ನೇ ಏಕ ಶಿಲಾ ನಂದಿಯನ್ನು ಇಲ್ಲಿ ನೋಡಬಹುದು.

ಹೌದು, ನಾನು ಇಷ್ಟೊತ್ತು ಹೇಳಿದ್ದು ಬೆಂಗಳೂರಿನಿಂದ ಕೇವಲ 390 ಕಿಲೋ ಮೀಟರ್ ದೂರದಲ್ಲಿರುವ ತಂಜಾವೂರಿನ ಬೃಹದೀಶ್ವರ ದೇವಾಲಯದ ಬಗ್ಗೆ. ಇದು ತಮಿಳುನಾಡಿನಲ್ಲಿದೆ. ಕಾವೇರಿ ನದಿಯ ತಟದಲ್ಲಿರುವ ತಂಜಾವೂರಿನ ಬೃಹದೀಶ್ವರ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇದು ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯ. ಇದನ್ನು ಪೆರಿಯ ಕೋವಿಲ್, ರಾಜರಾಜೇಶ್ವರ ದೇವಸ್ಥಾನ ಮತ್ತು ರಾಜರಾಜೇಶ್ವರಂ ಎಂದೂ ಕರೆಯುತ್ತಾರೆ. ಇಲ್ಲಿ ಪರಶಿವನನ್ನು ರಾಜರಾಜೇಶ್ವರಂ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಮರಾಠರು ಈ ದೇವಾಲಯವನ್ನು ಬೃಹದೀಶ್ವರ ದೇವಾಲಯವೆಂದು ಕರೆದರು. ಇದು ಭಾರತದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಚೋಳರ ಕಾಲದ ದ್ರಾವಿಡ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ. ಜೊತೆಗೆ UNESCO ವಿಶ್ವ ಪರಂಪರೆಯ ತಾಣದ ಭಾಗವಾಗಿದೆ. ಈ ದೇವಸ್ಥಾನದಲ್ಲಿ ನೂರಾರು ಕುತೂಹಲಕಾರಿ ಸಂಗತಿಗಳಿವೆ. ಅದನ್ನು ಇಲ್ಲಿ ನಿಮ್ಮ ಮುಂದೆ ಒಂದೊಂದಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದೇನೆ.

ಚೋಳರ ರಾಜಧಾನಿಯಾಗಿದ್ದ ತಂಜಾವೂರು

ದಕ್ಷಿಣ ಭಾರತದ ಅತ್ಯಂತ ಪುರಾತನ ರಾಜವಂಶವಾಗಿರುವ ಚೋಳರ ಬಗ್ಗೆ ಮಹಾಭಾರತದ ಸಭಾ ಪರ್ವ ಮತ್ತು ಭೀಷ್ಮ ಪರ್ವಗಳಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ ಮೆಗಸ್ತಾನೀಸನ ಬರಹಗಳು, ಅಶೋಕನ ಶಾಸನಗಳಲ್ಲೂ ಚೋಳರ ಬಗೆಗಿನ ಉಲ್ಲೇಖಗಳನ್ನು ನಾವು ಗಮನಿಸಬಹುದು. ತಮಿಳು ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ ಮೂರು ಪ್ರಮುಖ ರಾಜ ವಂಶಗಳಾದ ಚೋಳ, ಚೇರ ಮತ್ತು ಪಾಂಡ್ಯರಲ್ಲಿ ಚೋಳರು ಅತ್ಯಂತ ಪ್ರಸಿದ್ದರಾದವರು. ತಂಜಾವೂರು ಇವರ ಪ್ರಭುತ್ವದ ಕೇಂದ್ರವಾಗಿತ್ತು. ಕ್ರಿ.ಶ. 9ನೇ ಶತಮಾನದಿಂದ 13ನೇ ಶತಮಾನದ ವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಚೋಳರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಚೋಳರ ಆರಾಧ್ಯ ದೈವ ಶಿವ. ಎರಡು ರೂಪಗಳಲ್ಲಿ ಶಿವನನ್ನು ಇವರು ಪೂಜಿಸುತ್ತಿದ್ದರು. ಲಿಂಗ ಹಾಗೂ ನಟರಾಜನ ರೂಪದಲ್ಲಿ ಹೆಚ್ಚಾಗಿ ಪೂಜಿಸುತ್ತಿದ್ದರು. ಇವರ ಕಾಲದಲ್ಲಿ ಶೈವ ಮತ್ತು ವೈಷ್ಣವ ಪಂತಗಳೆರೆಡೂ ಪ್ರಗತಿ ಕಂಡಿವೆ. ಚೋಳರು ಮಹಾ ಕಲಾಭಿಮಾನಿಗಳು. ಇವರು ದ್ರಾವಿಡ ವಾಸ್ತುಶಿಲ್ಪದ ಪರಮ ಪೋಷಕರು. ಇವರ ದೇವಾಲಯಗಳಲ್ಲಿ ಆವರಣಕ್ಕೆ ಮಹಾದ್ವಾರ ಉಳ್ಳ ಗೋಪುರಗಳು, ಕೆತ್ತನೆಗಳುಳ್ಳ ಕಂಬಗಳಿಂದ ಕೂಡಿದ ಸಭಾಂಗಣ ಅಥವಾ ಮಂಟಪ, ಗೋಪುರಗಳು, ಅರ್ಧ ಮಂಟಪ, ವಿಮಾನ ಗೋಪುರ, ಸಭಾ ಮಂಟಪ, ಅಂತರಾಳ ಗರ್ಭಗುಡಿಗಳು ಚೋಳ ದೇವಾಲಯಗಳ ಮುಖ್ಯ ರಚನೆಗಳು. ಇವರ ದೇವಾಲಯಗಳು ಶಿಖರಗಳು, ಕಲಶಗಳನ್ನು ಹೊಂದಿರುತ್ತವೆ.

thousand year old Thanjavur Brihadeeswara Temple history and miracles detail information tamil nadu kannada news

ತಂಜಾವೂರು ಬೃಹದೀಶ್ವರ ದೇವಸ್ಥಾನ

ವಿಶೇಷವಾಗಿ ರಾಜರಾಜ ಮತ್ತು ಒಂದನೇ ರಾಜೇಂದ್ರನ ಕಾಲದಲ್ಲಿ ಚೋಳರ ಕಲೆ ಉತ್ತುಂಗ ಶಿಖರವನ್ನು ತಲುಪಿತ್ತು. ತಂಜಾವೂರಿನ ಬೃಹದೀಶ್ವರ ಮತ್ತು ಗಂಗೈಕೊಂಡ ಚೋಳಪುರಂಗಳ ಭವ್ಯ ಶಿವಾಲಯಗಳು ಇದಕ್ಕೆ ಉದಾಹರಣೆ. ಇನ್ನು ಚೋಳರ ಕಾಲದ ಶಿಲ್ಪಿಗಳು ತಾಮ್ರ ಮತ್ತು ಕಂಚಿನ ವಿಗ್ರಹಗಳನ್ನು ಹೆಚ್ಚಾಗಿ ನಿರ್ಮಿಸುತ್ತಿದ್ದರು. ತಂಜಾವೂರಿನಲ್ಲಿ ಬೃಹದೀಶ್ವರ ದೇವಾಲಯದ ಜೊತೆಗೆ ನಾನಾ ದೇವಾಲಯಗಳಲ್ಲಿ ಚೋಳರ ಅದ್ಭುತ ಕಲಾಸಕ್ತಿಯನ್ನು ಕಾಣಬಹುದು.

ಸಾವಿರ ವರ್ಷಗಳಷ್ಟು ಹಳೆಯದಾದರೂ ಮೈ ಮರೆಸುವ ವಾಸ್ತುಶಿಲ್ಪ!

ಭಾರತದ ಪುರಾತನ ದೇವಸ್ಥಾನಗಳಲ್ಲೊಂದಾದ ಬೃಹದೀಶ್ವರ ದೇವಸ್ಥಾನ ತನ್ನ ಅತ್ಯದ್ಭುತ ವಾಸ್ತುಶಿಲ್ಪ, ಕೆತ್ತನೆಗಳಿಂದ ಕೋಟ್ಯಾಂತರ ಭಕ್ತರು, ದೇಶವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ಬೃಹದೀಶ್ವರ ದೇವಸ್ಥಾನವನ್ನು ಬಹಳ ಬಹಳ ಲೆಕ್ಕಾಚಾರದಿಂದ ಕರಾರುವಕ್ಕಾಗಿ ಕಟ್ಟಲಾಗಿದೆ. ರಾಜ ರಾಜ ಚೋಳ (ಅರುಳ್ಮೋಝ್ಹಿವರಂ) ಈ ದೇವಾಲಯವನ್ನು ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ. ಈ ದೇವಾಲಯವನ್ನು ಕ್ರಿಸ್ತ ಪೂರ್ವ 1003 ಮತ್ತು 1010 ರ ಸುಮಾರಿಗೆ 5 ವರ್ಷಗಳಲ್ಲಿ ನಿರ್ಮಿಸಲಾಯಿತೆಂದು ಹೇಳಲಾಗುತ್ತದೆ.

ಈ ದೇವಾಲಯವನ್ನು ಕಟ್ಟುವಾಗ ರಾಜ ರಾಜ ಚೋಳನು ದೇವಾಲಯದ ವಾಸ್ತುಶಿಲ್ಪಿಗೆ ಒಂದು ಪ್ರಶ್ನೆ  ಕೇಳಿದನಂತೆ… ಎಂದಾದರೂ, ಈ ದೇವಾಲಯ ನೆಲಕ್ಕೆ ಬಿದ್ದೀತೇ? ಎಂಬುದಾಗಿ. ಇದಕ್ಕೆ ಉತ್ತರಿಸಿದ ವಾಸ್ತುಶಿಲ್ಪಿ ʻದೇವಸ್ಥಾನವೇಕೆ? ಎಂದಿಗೂ ಈ ದೇವಸ್ಥಾನದ ನೆರಳೂ ಕೂಡ ನೆಲದ ಮೇಲೆ ಅಥವಾ ನಿಮ್ಮ ಮೇಲೆ ಬೀಳದುʼ ಎಂದನಂತೆ. ಅದರಂತೆಯೇ, ಇಂದಿಗೂ ಕೂಡ ಈ ದೇವಸ್ಥಾನದ ನೆರಳು ಭೂಮಿಯ ಮೇಲೆ ಬಿದ್ದಿಲ್ಲ. ಆ ರೀತಿಯಲ್ಲಿ ಲೆಕ್ಕಾಚಾರದಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ಕನಸಲ್ಲಿ ಬಂದು ದೇವಾಲಯ ನಿರ್ಮಾಣಕ್ಕೆ ಆಜ್ಞೆ

ರಾಜ ರಾಜ ಚೋಳನು ಯುದ್ಧ ಮಾಡಿ ಶ್ರೀಲಂಕಾವನ್ನು ಗೆದ್ದ ಬಳಿಕ ರಾಜನ ಕನಸಲ್ಲಿ ಬೃಹತ್ ದೇವಾಲಯ ನಿರ್ಮಿಸುವ ಆಜ್ಞೆ ಆಗುತ್ತೆ. ಅದರಂತೆಯೇ ಈ ತಂಜಾವೂರು ದೇವಾಲಯವನ್ನು ನಿರ್ಮಿಸಲಾಗಿದೆ. ತನ್ನ ಕನಸಿನಂತೆ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಆಧಾರವಾಗಿಟ್ಟುಕೊಂಡು ಈ ದೇವಾಲಯವನ್ನು ನಿರ್ಮಿಸಿದ್ದಾನೆ. ಇನ್ನು ಕೆಲ ಮೂಲಗಳ ಪ್ರಕಾರ ರಾಜ ಈ ದೇವಾಲಯವನ್ನು ನಿರ್ಮಿಸಿದ ನಂತರ ಅಲ್ಲೇ ಮರಣ ಹೊಂದಿದನೆಂದು ಹೇಳಲಾಗಿದೆ.

ಇನ್ನು ಕೆಲ ಮೂಲಗಳ ಪ್ರಕಾರ, ರಾಜ ರಾಜ ಚೋಳನು ಯುದ್ಧ ಮಾಡಿ ಶ್ರೀಲಂಕಾ ರಾಜನನ್ನು ಸೋಲಿಸುತ್ತಾನೆ. ಆಗ ರಾಜ ರಾಜ ಚೋಳನ ಕೈ ಸೇರಬೇಕಾಗುತ್ತೆ ಎಂದು ಶ್ರೀಲಂಕಾ ರಾಜನ ಹೆಣ್ಣುಮಕ್ಕಳಲ್ಲಿ ಒಬ್ಬಳು ತಪ್ಪಿಸಿಕೊಂಡು ಓಡಿ ಹೋಗುತ್ತಾಳೆ. ಬಳಿಕ ಈಕೆ ರಾಜ ರಾಜ ಚೋಳನ ಅಭಿಮಾನವನ್ನು, ನಂಬಿಕೆಯನ್ನು ಗಳಿಸಿ ಆತನಿಂದಲೇ ಉನ್ನತ ಹುದ್ದೆಯನ್ನು ಪಡೆದು ದೇವಾಲಯದ ಕೆಲಸದಲ್ಲಿ ರಾಜನೊಂದಿಗೆ ಕೈಜೋಡಿಸಿ ಬಳಿಕ ರಾಜನನ್ನು ಹತ್ಯೆಗೈಯುತ್ತಾಳೆಂದು ಹೇಳಲಾಗುತ್ತೆ. ಆದರೆ ಇಂದಿಗೂ ಕೂಡ ರಾಜ ರಾಜ ಚೋಳನ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ.

ಚಕಿತಗೊಳಿಸುವ ಬೃಹದೀಶ್ವರ ದೇವಾಲಯದ ವಾಸ್ತು ಶಿಲ್ಪ

ಒಂದನೇ ರಾಜ ರಾಜ ಚೋಳನ ಕಾಲದ ಈ ದೇವಾಲಯವು ಕ್ರಿ.ಶ. 1010ರಲ್ಲಿ ನಿರ್ಮಾಣಗೊಂಡಿತು ಎನ್ನಲಾಗಿದೆ. ಈ ದೇವಸ್ಥಾನವನ್ನು ಇಂಟರ್ಲಾಕ್ ಸಿಸ್ಟಮ್ ಅಂದರೆ ಯಾವುದೇ ಸಿಮೆಂಟ್, ಮಣ್ಣು ಬಳಸದೆ ಒಂದು ಕಲ್ಲನ್ನು ಮತ್ತೊಂದು ಕಲ್ಲಿಗೆ ಜೋಡಿಸಿ ಲಾಕ್ ಮಾಡುವ ಮೂಲಕ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನ 13 ದೇವಾಲಯಗಳನ್ನು ಹೊಂದಿದೆ. ಈ ದೇವಾಲಯವು 500 ಅಡಿ ಉದ್ದದ ಹಾಗೂ 250 ಅಡಿ ಅಗಲದ ಪ್ರಾಂಗಣದ ಮೇಲೆ ನಿಂತಿದೆ. 216 ಅಡಿ ಎತ್ತರವಾಗಿದೆ. ಇದರ ಪ್ರವೇಶ ದ್ವಾರದ ಎರಡು ಕಡೆಗಳಲ್ಲಿ ನಿರ್ಮಿಸಿರುವ ದ್ವಾರಪಾಲಕರ ವಿಗ್ರಹಗಳು ಸಂದರ್ಶಕರನ್ನು ಆರಂಭದಲ್ಲಿಯೇ ಆಕರ್ಷಿಸುತ್ತವೆ. ಈ ದೇವಾಲಯದಲ್ಲಿ ಅರ್ಧ ಮಂಟಪ, ಮಹಾಮಂಟಪ ಮತ್ತು ನಂದಿ ಮಂಟಪಗಳಿವೆ. ಇವುಗಳ ಸುತ್ತಲೂ 35 ಪುಟ್ಟ ಗುಡಿಗಳ ಪ್ರಾಕಾರ ಇದೆ.

20 ಟನ್ ಭಾರವಿರುವ ಏಕಶಿಲಾ ನಂದಿ

ಗರ್ಭಗುಡಿಯಲ್ಲಿರುವ ಶಿವಲಿಂಗ, ಬೃಹದೀಶ್ವರ ಎಂಬ ಹೆಸರಿಗೆ ತಕ್ಕಂತೆ 29 ಅಡಿ ಎತ್ತರದ ಲಿಂಗವಿದೆ. ಹಾಗೂ ಸುಮಾರು 8.7 ಮೀಟರು ದಪ್ಪವಾಗಿದೆ. ಇದು ವಿಶ್ವದ ಅತಿ ದೊಡ್ಡ ಶಿವಲಿಂಗವಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ನಂದಿಯ ಬೃಹತ್ ವಿಗ್ರಹವಿದೆ. ವೇದಿಕೆಯ ಮೇಲೆ ಗರ್ಭಗುಡಿಯತ್ತ ಮುಖ ಮಾಡಿ ಸ್ಥಾಪಿಸಲಾದ ಇದು ಸುಮಾರು 20 ಟನ್ ಭಾರವಿದೆ. ಸುಮಾರು 16 ಅಡಿ ಉದ್ದ ಮತ್ತು 13 ಅಡಿ ಎತ್ತರವಾಗಿದೆ. ಈ ನಂದಿ ವಿಶ್ವದ ಎರಡನೇ ಅತಿ ದೊಡ್ಡ ಏಕಶಿಲಾ ನಂದಿಯಾಗಿದೆ. ಮೊದಲನೆಯದು ಲೇಪಾಕ್ಷಿಯಲ್ಲಿದೆ. ಭಾರತದ ದೇವಾಲಯಗಳಲ್ಲೇ ಅತ್ಯಂತ ವಿಸ್ತಾರವಾದ ಹಾಗೂ ಅತ್ಯಂತ ಎತ್ತರವಾದ ಈ ದೇವಾಲಯ ದಕ್ಷಿಣ ಭಾರತದ ಕಲಾ ಬೆಳವಣಿಗೆಯ ಮೈಲಿಗಲ್ಲಾಗಿದ್ದು, ದೇವಾಲಯ ನಿರ್ಮಾಣದ ಇತಿಹಾಸದಲ್ಲಿ ಕಲಾ ಮತ್ತು ವಾಸ್ತುಶಿಲ್ಪದ ಅಮೋಘ ಸಾಧನೆಯ ಪ್ರತೀಕವಾಗಿದೆ ಎಂದು ಕಲಾ ಇತಿಹಾಸಕಾರ ಪರ್ಸಿ ಬ್ರೌನ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

thousand year old Thanjavur Brihadeeswara Temple history and miracles detail information tamil nadu kannada newsತಂಜಾವೂರು ಬೃಹದೀಶ್ವರ ದೇವಸ್ಥಾನ

ಪಿರಮಿಡ್ ಆಕಾರದ ಗೋಪುರದ ಮೇಲೆ 80 ಟನ್ ತೂಕದ ಗುಮ್ಮಟ ನಿಂತಿರುವಿದೇ ವಿಸ್ಮಯ

ಈ ದೇವಾಲಯದ ಆಕರ್ಷಣೀಯ ಅಂಶ ಎಂದರೆ ಗರ್ಭಗುಡಿಯ ಮೇಲಿರುವ ಉತ್ಕೃಷ್ಟ ವಿಮಾನ (ಗೋಪುರ). ಭಾರತದಲ್ಲಿರುವ ಗೋಪುರಗಳಲ್ಲಿ ಇದು ಅತ್ಯಂತ ಎತ್ತರವಾದದ್ದು, ಪಿರಮಿಡ್​ನ ಆಕಾರದಲ್ಲಿರುವ ಇದು 216 ಅಡಿಗಳಷ್ಟು ಎತ್ತರವಿದೆ. ಈ ಗೋಪುರ 13 ಅಂತಸುಗಳನ್ನು ಹೊಂದಿದ್ದು ಗುಮ್ಮಟದೊಂದಿಗೆ ಮುಕ್ತಾಯವಾಗಿದೆ. ಏಕಶಿಲೆಯ ಗುಮ್ಮಟ 25 ಅಡಿಗಳು ಎತ್ತರವಿದ್ದು 80 ಟನ್ ಗಳಷ್ಟು ತೂಕವಿದೆ. ಪ್ರದಕ್ಷಿಣಾ ಪಥದ ಒಳಗೋಡೆಯ ಮೇಲೆ ಸುಂದರ ಭಿತ್ತಿ ಚಿತ್ರಗಳನ್ನು ಬಿಡಿಸಲಾಗಿದೆ. ಆದರೆ 13 ಅಂತಸ್ತಿನ ಗೋಪುರದ ಮೇಲೆ 80 ಟನ್ (80 ಸಾವಿರ) ತೂಕವಿರುವ ಗೊಮ್ಮಟವನ್ನು ಕೂರಿಸಿದ್ದು ಹೇಗೆ ಎಂಬುದು ಇಂದಿಗೂ ಕುತೂಹಲಕರವಾಗಿದೆ.

ಇನ್ನು ಕೆಲ ಇತಿಹಾಸಕಾರರು ಹೇಳುವಂತೆ ಮಣ್ಣಿನ ಬಿಡ್ಜ್ ನಿರ್ಮಿಸಿ ಸುಮಾರು 3 ಸಾವಿರ ಆನೆಗಳ ಸಹಾಯದಿಂದ ಗೊಮ್ಮಟ ಕೂರಿಸಲಾಗಿದ್ದು ಶಿವನ ಲೀಲೆಯಿಂದ ಅದು ಬೀಳದೆ ನಿಂತಿದೆ ಎನ್ನಲಾಗುತ್ತೆ.

ವಿಶ್ವದ ಮೊದಲ ಸಂಪೂರ್ಣ ಗ್ರಾನೈಟ್‌ ರಚನೆಯ ದೇವಾಲಯ

ಈ ದೇವಾಲಯ ನಿರ್ಮಾಣದ ಮತ್ತೊಂದು ವಿಶೇಷವೆಂದರೆ ಈ ದೇವಾಲಯವನ್ನು ಸಂಪೂರ್ಣವಾಗಿ ಗ್ರಾನೈಟ್‌ನಿಂದ (ಬೆಣಚು ಕಲ್ಲು) ನಿರ್ಮಿಸಲಾಗಿದ್ದು, ಇದು ವಿಶ್ವದ ಮೊದಲ ಸಂಪೂರ್ಣ ಗ್ರಾನೈಟ್‌ ರಚನೆಯ ದೇವಾಲಯವಾಗಿದೆ. ಈ ದೇವಾಲಯದ ನಿರ್ಮಾಣಕ್ಕೆ ಸುಮಾರು 1,30,000 ಟನ್‌ಗಳಷ್ಟು ಗ್ರಾನೈಟನ್ನು ಬಳಸಲಾಗಿದೆ ಎನ್ನಲಾಗಿದೆ. ಇದರಲ್ಲಿ ಅಚ್ಚರಿಯ ವಿಷಯವೆಂದರೆ ತಂಜಾವೂರು ಸುತ್ತಮುತ್ತ ಎಲ್ಲಿಯೂ ಗ್ರಾನೈಟ್‌ ಕಲ್ಲು ಕಡಿಯುವ ಸ್ಥಳಗಳಿಲ್ಲ. ಸುಮಾರು 100 ಕಿಮೀ ಆಸುಪಾಸಿನಲ್ಲೂ ಅಂತಹ ಜಾಗ ಸಿಗಲ್ಲ. ಹಾಗಾದರೆ, ಸಾವಿರ ವರ್ಷಗಳ ಹಿಂದೆ ದೂರದೂರಿನಿಂದ ಇಂತಹ ಶಿಲೆಗಳನ್ನು ಇಲ್ಲಿಗೆ ಹೇಗೆ ತಂದಿರಬಹುದು ಎಂಬುವುದು ಈಗಲೂ ತಿಳಿದುಬಂದಿಲ್ಲ.

ಈ ದೇವಾಲಯದ ಗೋಡೆಗಳ ಮೇಲೆ ತಮಿಳು ಮತ್ತು ಗ್ರಂಥ ಲಿಪಿಗಳನ್ನು ನಾವು ಕಾಣಬಹುದು. ಈ ಲಿಪಿಗಳಲ್ಲಿ ಅಲ್ಲಿನ ಸಾಹಿತ್ಯ, ರಾಜನ ಕುರಿತು ಮಾಹಿತಿ, ಇತರರು ದೇವಾಲಯಕ್ಕೆ ನೀಡಿದ ಕೊಡುಗೆಗ ಕುರಿತು ಉಲ್ಲೇಖಿಸಲಾಗಿದೆ.

thousand year old Thanjavur Brihadeeswara Temple history and miracles detail information tamil nadu kannada news

ಕ್ರಿ.ಶ.1030ರಲ್ಲಿ 1ನೇ ರಾಜರಾಜನ ಮಗನಾದ 1ನೇ ರಾಜೇಂದ್ರನಿಂದ ಹೊಸ ರಾಜಧಾನಿಯಲ್ಲಿ ಗಂಗೈಕೊಂಡ ಚೋಳಪುರಂ ದೇವಾಲಯವನ್ನು ಬೃಹದೀಶ್ವರ ದೇವಾಲಯವನ್ನು ಅನುಸರಿಸಿ ಕಟ್ಟಲಾಗಿದೆ. ತಂಜಾವೂರು ಹಾಗೂ ಗಂಗೈಕೊಂಡ ಚೋಳ ಪುರಂನ ದೇವಾಲಯಗಳ ಗೋಪುರಗಳನ್ನು ಕುರಿತು ಇತಿಹಾಸಕಾರ ಪರ್ಸಿ ಬ್ರೌನ್ ಹೀಗೆ ಹೇಳಿದ್ದಾರೆ: ಇವೆರಡೂ ಚೋಳರ ಮೇರುಕೃತಿಗಳಾಗಿವೆ. ತಂಜಾವೂರಿನ ದೇವಾಲಯ ಶಕ್ತಿಯ ಸಂಕೇತವಾದರೆ, ಗಂಗೈಕೊಂಡ ಚೋಳಪುರಂನ ದೇವಾಲಯ ಸೊಬಗಿನ ಸೌಂದರ್ಯದ ನಿಧಿಯಾಗಿದೆ ಎಂದಿದ್ದಾರೆ. ಈ ಬಗ್ಗೆ ಇತಿಹಾಸ ಪುಸ್ತಕಗಳಲ್ಲಿ ಉಲ್ಲೇಖಗಳನ್ನು ನಾವು ಕಾಣಬಹುದು.

ರಹಸ್ಯವನ್ನು ಮಡಿಲಲ್ಲಿಟ್ಟಿಕೊಂಡಿರುವ ನಿಗೂಢ ದೇವಾಲಯ

ಅಚ್ಚರಿ ಎಂದರೆ ಈ ದೇಗುಲದ ನೆಲಮಾಳಿಗೆಯಲ್ಲಿ ಒಂದು ನಿಗೂಢ ವಸ್ತು ಇದೆ. ಅದರಿಂದ ಬೆಳಕು ಹೊರಸೂಸುತ್ತದೆ. ಆದರೆ ಇದು ಪ್ರತಿದಿನ ನೋಡಲು ಸಿಗುವುದಿಲ್ಲ. ಈ ಚಮತ್ಕಾರ ನಡೆಯೋದು ಕೇವಲ ಕಾರ್ತಿಕ ಪೂರ್ಣಿಮೆ ದಿನ. ಆ ವಿಸ್ಮಯ ನೋಡಿದ್ರೆ ಕೋಹಿನೂರ್ ವಜ್ರವೋ, ಶಮಂತಕಮಣಿಯೋ ಫಳ ಫಳ ಎಂದು ಹೊಳೆಯುತ್ತಿದೆ ಎಂದು ಅನಿಸುವಂತಿರುತ್ತದೆ. ಇಲ್ಲಿರುವ ಹೊಳೆಯುವ ವಸ್ತು ಯಾವುದು ಎನ್ನುವುದನ್ನು ಘಟಾನುಘಟಿ ವಿಜ್ಞಾನಿಗಳ ಕೈಯಲ್ಲೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ಇಲ್ಲಿನ ಕೋಣೆಯಲ್ಲಿದೆಯಂತೆ ಪದ್ಮನಾಭನನ್ನೇ ಮೀರಿಸುವಷ್ಟು ಸಂಪತ್ತು?

ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯ ಎನಿಸಿಕೊಂಡಿರುವ ಪದ್ಮನಾಭ ದೇವಸ್ಥಾನವನ್ನೇ ಮೀರಿಸುವಷ್ಟು ಸಂಪತ್ತು ಬೃಹದೀಶ್ವರ ದೇವಾಲಯದ ರಹಸ್ಯ ಕೋಣೆಗಳಲ್ಲಿವೆ ಎಂಬುವುದು ಕೆಲವರ ವಾದ. ಈ ಸಂಪತ್ತನ್ನು ವಾಸುಕಿ ನಾಗ ಕಾಪಾಡುತ್ತಿದೆ ಎನ್ನಲಾಗುತ್ತದೆ. ಸಾಕ್ಷಾತ್ ವಾಸುಕಿಯೇ ಈ ಪುಣ್ಯ ಕ್ಷೇತ್ರ ಕಾಯುತ್ತಿರೋ ಕ್ಷೇತ್ರಪಾಲಕ.

80 ಎಕರೆ ವಿಸ್ತೀರ್ಣದ ಈ ದೇವಾಲಯದಲ್ಲಿ ಅನೇಕ ರಹಸ್ಯ ಸ್ಥಳಗಳಿವೆ. ಇಲ್ಲಿರುವ ಒಂದೊಂದು ರಹಸ್ಯ ಕೋಣೆಯಲ್ಲೂ ಲೆಕ್ಕವಿಲ್ಲದಷ್ಟು ಬಂಗಾರವಿದೆ ಎನ್ನಲಾಗುತ್ತೆ. ಇನ್ನು ಇಲ್ಲಿರುವ ರಹಸ್ಯ ಬಾಗಿಲುಗಳು ಪಾತಾಳ ಲೋಕಕ್ಕೆ ದಾರಿ ತೋರಿಸುತ್ತವೆ ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಇಲ್ಲಿನ ಬಹುತೇಕ ಎಲ್ಲಾ ಬಾಗಿಲುಗಳು ಸದಾ ಮುಚ್ಚಿರುತ್ತವೆ.

ಇನ್ನು ಇಲ್ಲಿನ ಮತ್ತೊಂದು ಆಶ್ಚರ್ಯ ಅಂದ್ರೆ, ಶಿವಲಿಂಗದ ಮೇಲೆ ಬೀಳುವ ಸರ್ಪದ ನೆರಳು. ಈ ದೇವಾಲಯದ ಒಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಗರ್ಭಗುಡಿಯಲ್ಲಿರುವ 12 ಅಡಿ ಎತ್ತರದ ಶಿವಲಿಂಗವು ಐದು ಹೆಡೆ ಸರ್ಪದ ನೆರಳಿನಲ್ಲಿ ಕಂಗೊಳಿಸುತ್ತದೆ.

2010ಕ್ಕೆ ಸಾವಿರ ವರ್ಷ ಪೂರೈಸಿದ ಬೃಹದೀಶ್ವರ ದೇವಸ್ಥಾನ

2010ರಲ್ಲಿ ಈ ದೇವಾಲಯ ಸಾವಿರ ವರ್ಷ ಪೂರೈಸಿದ ಹಿನ್ನೆಲೆ ತಮಿಳುನಾಡು ಸರ್ಕಾರವು ಭರತನಾಟ್ಯಂ ಯಜ್ಞವನ್ನು ಆಯೋಜಿಸಿತ್ತು. ಈ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ಪದ್ಮಾ ಸುಬ್ರಹ್ಮಣ್ಯ ನಡೆಸಿಕೊಟ್ಟಿದ್ದರು. ದೆಹಲಿ, ಮುಂಬೈ, ಪುಣೆ, ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ಸಿಂಗಾಪೂರ, ಮಲೇಷ್ಯ ಮತ್ತು ಅಮೆರಿಕಾದಿಂದ ಸುಮಾರು 10 ಸಾವಿರ ನೃತ್ಯ ಕಲಾವಿದರು ಬಂದು ತಮ್ಮ ಸೇವೆ ಸಲ್ಲಿಸಿದ್ದರು.

ಸಮಾಜ ಸುಧಾರಣೆಯಲ್ಲಿ ದೇವಾಲಯಗಳ ಪಾತ್ರ

ಚೋಳರ ಕಾಲದಲ್ಲಿ ದೇವಾಲಯಗಳು ಮಹತ್ವದ ಪಾತ್ರವನ್ನು ವಹಿಸುತ್ತಿದ್ದವು. ದೇವಾಲಯಗಳು ಸಂಪತ್ತಿನ ಕೇಂದ್ರಗಳಾಗಿದ್ದವು. ತಂಜಾವೂರಿನ ದೇವಾಲಯಕ್ಕೆ 500 ಪೌಂಡ್ ಸುವರ್ಣ, 150 ಪೌಂಡ್ ಹರಳುಗಳು ಹಾಗೂ 600 ಪೌಂಡ್ ಬೆಳ್ಳಿ ಬೇರೆ ಬೇರೆ ರಾಜರುಗಳಿಂದ ತೆರಿಗೆಯಾಗಿ, ಕಾಣಿಕೆ, ಉಡುಗೊರೆಯಾಗಿ ಬರುತ್ತಿತ್ತು. ಜೊತೆಗೆ ನೂರಾರು ಗ್ರಾಮಗಳಿಂದ ದೇವಾಲಯಗಳಿಗೆ ಆದಾಯ ಬರುತ್ತಿತ್ತು. ದೇವಾಲಯಗಳು ಮನರಂಜನಾ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದವು. ದೇವಾಲಯಗಳಲ್ಲಿ ಮನರಂಜನೆಗಾಗಿಯೇ 400 ಸ್ತ್ರೀಯರು (ದೇವದಾಸಿಯರು), 212 ಪರಿಚಾರಕರು, ಸೇವಕರು ಇರುತ್ತಿದ್ದರು. 57 ಸಂಗೀತಗಾರರು ಹಾಗೂ ಶಾಸ್ತ್ರಗಳನ್ನು ಓದುವವರನ್ನು ತಂಜಾವೂರಿನ ದೇವಾಲಯ ನೇಮಿಸಿಕೊಂಡಿತ್ತು. ಸಾವಿರಾರು ಕೆಲಸಗಾರರನ್ನು ನೇಮಿಸಿ ಯೋಗ್ಯ ರೀತಿಯಲ್ಲಿ ಎಲ್ಲಾ ಕೆಲಸಗಳು ನಡೆಯುವಂತೆ ಆಗಿನ ರಾಜ ನೋಡಿಕೊಂಡಿದ್ದ. ಧನ ಸಂಗ್ರಹ, ವಿದ್ಯಾಭ್ಯಾಸ, ಬಡವರಿಗೆ ಅನ್ನ ದಾಸೋಹದಂತಹ ಕಾರ್ಯಗಳು ಕೂಡ ಈ ಬೃಹದೀಶ್ವರ ದೇವಾಲಯದಲ್ಲಿ ನಡೆಯುತ್ತಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.

ಚೋಳರ ಚಿತ್ರಕಲೆ

ಚೋಳರಿಗೆ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಇತ್ತು. ಹೀಗಾಗಿ ಇವರ ಕಾಲದಲ್ಲಿ ಇದಕ್ಕೆ ಪ್ರೋತ್ಸಾಹ ಕೂಡ ಹೆಚ್ಚಾಗಿ ಸಿಕ್ಕಿದೆ. ಶಿವಪುರಾಣ ಕಥೆಗಳು ಅವರ ಚಿತ್ರಕಲೆಯ ಸಾರ. ಅವರ ಚಿತ್ರಕಲೆಯನ್ನು ತಂಜಾವೂರಿನ ಬೃಹದೀಶ್ವರ ದೇವಾಲಯದಲ್ಲಿ ಕಾಣಬಹುದು. ಗರ್ಭಗುಡಿಯ ಪ್ರದಕ್ಷಿಣ ಪಥದ ಸುತ್ತ ಧಾರ್ಮಿಕ ಜೀವನಕ್ಕೆ ಸಂಬಂಧಿಸಿದ ಚಿತ್ರ ಕಲೆಗಳಿವೆ. ಇಲ್ಲಿ ಶಿವನ ಒಡ್ಡೋಲಗ, ತ್ರಿಪುರಾಂತಕ, ಪ್ರಾಣಿ ಪಕ್ಷಿಗಳ ವರ್ಣ ಚಿತ್ರಗಳಿವೆ. ವಿಜಯಲಯ ಚೋಳೇಶ್ವರ ದೇವಾಲಯದಲ್ಲಿ ನಟರಾಜ, ಮಹಾಕಾಳಿ ಚಿತ್ರಗಳಿವೆ. ತಂಜಾವೂರಿನ ಪೈಟಿಂಗ್ಸ್​ಗಳಿಗೆ ಅದರದೇ ಆದ ಮಹತ್ವವಿದೆ. ಇವರ ಚಿತ್ರಕಲೆಗಳಲ್ಲಿ ಚಿನ್ನದ ಲೇಪನಗಳನ್ನು ಕಾಣಬಹುದು. ಬೃಹದೀಶ್ವರ ದೇವಸ್ಥಾನದಲ್ಲಿರುವ ಚಿತ್ರಕಲೆಗಳಲ್ಲಿರುವ ಚಿನ್ನವನ್ನು ಕದಿಯುವ ಪ್ರಯತ್ನ ನಡೆದಿರುವುದು ಕಣ್ಣಿಗೆ ಕಾಣಿಸುತ್ತೆ.

ಇನ್ನು ಹೆಚ್ಚಾಗಿ ಇವರ ಕಾಲದಲ್ಲಿ ಮೂರ್ತಿಗಳನ್ನು ಮಾಡಲು ಶಿಲೆ ಹಾಗೂ ಲೋಹಗಳನ್ನು ಬಳಸಲಾಗುತ್ತಿತ್ತು. ವಿಭಿನ್ನ ಭಂಗಿಯಲ್ಲಿರುವ ಶಿವ, ಬ್ರಹ್ಮ, ವಿಷ್ಣು, ಲಕ್ಷ್ಮಿ, ಭೂದೇವಿ, ರಾಮ ಹಾಗೂ ಸೀತೆಯರ ಮೂರ್ತಿಗಳನ್ನು ಕಾಣಬಹುದು. ಈ ಎಲ್ಲಾ ಅಂಶಗಳನ್ನು ಗ್ರಹಿಸಿ ಇತಿಹಾಸಕಾರ ಡಾ. ಸತೀಶ್ ಚಂದ್ರರವರು, 8ನೇ ಶತಮಾನದಿಂದ 12ನೇ ಶತಮಾನದವರೆಗೆ ದಕ್ಷಿಣ ಭಾರತದಲ್ಲಿ ರಾಜಕೀಯ ಐಕ್ಯತೆಯನ್ನು ಮಾತ್ರವಲ್ಲದೇ, ಸಾಂಸ್ಕೃತಿಕ ಬೆಳವಣಿಗೆಗೂ ಪ್ರಖ್ಯಾತವಾಗಿರುವುದನ್ನು ಕಾಣಬಹುದು. ಅಲ್ಲದೇ ಚೋಳರ ಕಾಲ ದಕ್ಷಿಣ ಭಾರತದ ಚರಿತ್ರೆಯಲ್ಲಿ ಅತ್ಯಂತ ಸುಭಿಕ್ಷ, ಜನಪ್ರಿಯ ಕಾಲಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಪ್ರೀಮಿಯಂ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು