- TV9 Kannada Photo gallery 2026 Asian Games: Yashveer (Silver), Rohit (Bronze) Shine in Javelin for India
ಏಷ್ಯನ್ ಗೇಮ್ಸ್: ನೀರಜ್ ಇಲ್ಲದೆಯೇ ಜಾವೆಲಿನ್ನಲ್ಲಿ ಬೆಳ್ಳಿ, ಕಂಚು ಗೆದ್ದ ಭಾರತ
2026ರ ಏಷ್ಯನ್ ಕ್ರೀಡಾಕೂಟದ 10ನೇ ದಿನ ಭಾರತೀಯ ಕ್ರೀಡಾಪಟುಗಳಿಗೆ ಸ್ಮರಣೀಯವಾಯಿತು. ದೇಶವು ಒಟ್ಟು 8 ಪದಕಗಳನ್ನು (4 ಬೆಳ್ಳಿ, 4 ಕಂಚು) ಗೆದ್ದಿತು. ನೀರಜ್ ಚೋಪ್ರಾ ಗೈರಿನಲ್ಲೂ, ಜಾವೆಲಿನ್ ಎಸೆತದಲ್ಲಿ ಯಶ್ವೀರ್ ಸಿಂಗ್ ಬೆಳ್ಳಿ ಹಾಗೂ ರೋಹಿತ್ ಯಾದವ್ ಕಂಚು ಗೆದ್ದು ಭಾರತಕ್ಕೆ ಹೆಮ್ಮೆ ತಂದರು. ಮೂವರು ಬಾಕ್ಸರ್ಗಳು ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದರು, ಇದು ಭಾರತೀಯ ಕ್ರೀಡಾಪಟುಗಳ ಅಮೋಘ ಸಾಧನೆ.
Updated on: Sep 28, 2026 | 9:52 PM

2026 ರ ಏಷ್ಯನ್ ಕ್ರೀಡಾಕೂಟದ 10ನೇ ದಿನದಂದು ಭಾರತೀಯ ಕ್ರೀಡಾಪಟುಗಳಿಗೆ ವಿಶೇಷ ದಿನವಾಗಿತ್ತು. ಭಾರತೀಯ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಎಂಟು ಪದಕಗಳನ್ನು (ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚು) ಗೆದ್ದರೆ, ಮೂವರು ಬಾಕ್ಸಿಂಗ್ ಕ್ರೀಡಾಪಟುಗಳು ಸೆಮಿಫೈನಲ್ ತಲುಪುವ ಮೂಲಕ ಪದಕಗಳನ್ನು ಖಚಿತಪಡಿಸಿಕೊಂಡರು(PC-PTI).

ಜಾವೆಲಿನ್ ಎಸೆತದಲ್ಲಿ ಪ್ರಾಬಲ್ಯ ಸಾಧಿಸಿದ ಯಶ್ವೀರ್ ಸಿಂಗ್ ಮತ್ತು ರೋಹಿತ್ ಯಾದವ್ (ಜಾವೆಲಿನ್ ಥ್ರೋ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡರು. ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಯಶ್ವೀರ್ ಸಿಂಗ್ ಬೆಳ್ಳಿ ಪದಕ ಗೆದ್ದರೆ, ಭಾರತದವರೇ ಆದ ರೋಹಿತ್ ಯಾದವ್ ಕಂಚಿನ ಪದಕ ಗೆದ್ದರು(PC-PTI).

ವಾಸ್ತವವಾಗಿ ಗಾಯದ ಕಾರಣದಿಂದಾಗಿ ನೀರಜ್ ಚೋಪ್ರಾ 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲಿಲ್ಲ. ಆದ್ದರಿಂದ, ಜಾವೆಲಿನ್ ಎಸೆತದಲ್ಲಿ ಪದಕಗಳನ್ನು ಗೆಲ್ಲುವ ಜವಾಬ್ದಾರಿ ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಅವರ ಹೆಗಲ ಮೇಲೆ ಬಿತ್ತು. ಇಬ್ಬರೂ ಈ ಜವಾಬ್ದಾರಿಯನ್ನು ಅದ್ಭುತವಾಗಿ ಪೂರೈಸಿ, ಭಾರತಕ್ಕೆ ಎರಡು ಪದಕಗಳನ್ನು ಗೆದ್ದುಕೊಟ್ಟರು(PC-PTI).

ಯಶ್ವೀರ್ ಸಿಂಗ್ ಅಂತಿಮ ಪ್ರಯತ್ನದಲ್ಲಿ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದರೆ, ರೋಹಿತ್ ಯಾದವ್ ಕಂಚಿನ ಪದಕ ಗೆದ್ದರು. ಯಶ್ವೀರ್ ತಮ್ಮ ಅಂತಿಮ ಪ್ರಯತ್ನದಲ್ಲಿ 85.72 ಮೀಟರ್ ಎಸೆಯುವ ಮೂಲಕ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಪ್ರಭಾವಶಾಲಿ ಥ್ರೋ ಅವರಿಗೆ ಎರಡನೇ ಸ್ಥಾನ ಮತ್ತು ಬೆಳ್ಳಿ ಪದಕವನ್ನು ಖಚಿತಪಡಿಸಿತು(PC-PTI).

ಉಳಿದಂತೆ ಚಿನ್ನದ ಪದಕವು ಶ್ರೀಲಂಕಾದ ಅಥ್ಲೀಟ್ ರುಮೇಶ್ ಪತಿರಾಜ್ ಅವರಿಗೆ ದಕ್ಕಿತು. ಅವರು ತಮ್ಮ ಅಂತಿಮ ಪ್ರಯತ್ನದಲ್ಲಿ 88.55 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡರು. ರುಮೇಶ್ ಪತಿರಾಜ್ ಈ ಹಿಂದೆ 2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು. ಆ ಆವೃತ್ತಿಯಲ್ಲಿ ನೀರಜ್ ಚೋಪ್ರಾ ಬೆಳ್ಳಿ ಗೆದ್ದರೆ, ಯಶ್ವೀರ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು(PC-PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



