ACT 2024: 8 ಗೋಲುಗಳಿಂದ ಭಾರತ ಜಯಭೇರಿ: ಸೆಮೀಸ್ಗೆ ಎಂಟ್ರಿ
Asian Champions Trophy 2024: ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಮುಂದಿನ ಪಂದ್ಯದಲ್ಲಿ ಭಾರತ ತಂಡವು ಸೌತ್ ಕೊರಿಯಾ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಸೆಪ್ಟೆಂಬರ್ 14 ರಂದು ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ತನ್ನ ಮೂರನೇ ಪಂದ್ಯದಲ್ಲೂ ಭಾರತ ತಂಡ ಜಯಭೇರಿ ಬಾರಿಸಿದೆ. ಹುಲುನ್ಬುಯಿರ್ನಲ್ಲಿನ ಮೊಕಿ ಟ್ರೈನಿಂಗ್ ಬೇಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 8-1 ಅಂತರದಿಂದ ಬಗ್ಗು ಬಡಿದು ಟೀಮ್ ಇಂಡಿಯಾ ಸೆಮಿಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದ ಮೊದಲ ಸುತ್ತಿನಲ್ಲೇ ಮೇಲುಗೈ ಸಾಧಿಸಿದ ಟೀಮ್ ಇಂಡಿಯಾ ಇಡೀ ಪಂದ್ಯವನ್ನು ಏಕಪಕ್ಷೀಯವಾಗಿಸುವಲ್ಲಿ ಯಶಸ್ವಿಯಾದರು.
ಪಂದ್ಯದ 3ನೇ ನಿಮಿಷದಲ್ಲಿ ರಾಜ್ ಕುಮಾರ್ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅರ್ಜೀತ್ ಸಿಂಗ್ ಹುಂಡಾಲ್ 6ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಜುಗರಾಜ್ ಸಿಂಗ್ 7ನೇ ಗೋಲು ದಾಖಸಿದರು.
ಇನ್ನು 22ನೇ ನಿಮಿಷದಲ್ಲಿ ನಾಯನ ಹರ್ಮನ್ಪ್ರೀತ್ ಸಿಂಗ್ ಭಾರತಕ್ಕೆ ಮೂರನೇ ಯಶಸ್ಸು ತಂದುಕೊಟ್ಟರೆ, 25ನೇ ಮತ್ತು 33ನೇ ನಿಮಿಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಗೋಲು ಬಾರಿಸುವ ಮೂಲಕ ರಾಜ್ ಕುಮಾರ್ ಹ್ಯಾಟ್ರಿಕ್ ಸಾಧನೆ ಮಾಡಿದರು.
ಇದಾದ ಬಳಿಕ 39ನೇ ನಿಮಿಷದಲ್ಲಿ ಅರ್ಜೀತ್ ಸಿಂಗ್ ಹುಂಡಾಲ್ 2ನೇ ಗೋಲು ದಾಖಲಿಸಿದರು. ಇದರ ಬೆನ್ನಲ್ಲೇ ಉತ್ತಮ್ ಸಿಂಗ್ ಅವರ ಹಾಕಿ ಸ್ಟಿಕ್ನೊಂದಿಗೆ 40ನೇ ನಿಮಿಷದಲ್ಲಿ ಗೋಲು ದಾಖಲಾಯಿತು. ಈ ಮೂಲಕ ಮಲೇಷ್ಯಾ ವಿರುದ್ಧ 8-1 ಅಂತರದಿಂದ ಗೆದ್ದು ಟೀಮ್ ಇಂಡಿಯಾ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಭಾರತಕ್ಕೆ ಹ್ಯಾಟ್ರಿಕ್ ಗೆಲುವು:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿನ ಫಾರ್ಮ್ ಅನ್ನು ಮುಂದುವರೆಸಿರುವ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು 3-0 ಅಂತರದಿಂದ ಸೋಲಿಸಿದ್ದ ಟೀಮ್ ಇಂಡಿಯಾ, ಆ ಬಳಿಕ ಜಪಾನ್ ವಿರುದ್ಧದ ಪಂದ್ಯವನ್ನು 5-1 ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಮಲೇಷ್ಯಾ ತಂಡವನ್ನು 8-1 ಅಂತರದಿಂದ ಬಗ್ಗು ಬಡಿದಿದೆ. ಈ ಮೂಲಕ ಒಟ್ಟು 9 ಅಂಕಗಳನ್ನು ಕಲೆಹಾಕಿ ಸೆಮಿಫೈನಲ್ಗೆ ಪ್ರವೇಶಿಸಿದೆ.
ಭಾರತ vs ಪಾಕ್ ಮುಖಾಮುಖಿ:
ಹ್ಯಾಟ್ರಿಕ್ ಗೆಲುವುಗಳೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಿರುವ ಭಾರತ ತಂಡವು ಗುರುವಾರ ಸೌತ್ ಕೊರಿಯಾ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಸೆಪ್ಟೆಂಬರ್ 14 ರಂದು ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯದೊಂದಿಗೆ ಭಾರತ ತಂಡದ ಲೀಗ್ ಸುತ್ತು ಮುಗಿಯಲಿದೆ. ಹೀಗಾಗಿ ಸೆಮಿಫೈನಲ್ಗೂ ಮುನ್ನ ಪಾಕ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.