‘ನಮ್ಮ ಬ್ಯಾಟ್ ಬಳಸಬೇಡಿ’; ಬಾಂಗ್ಲಾ ಆಟಗಾರರೊಂದಿಗಿನ ಒಪ್ಪಂದ ಮುರಿದ ಭಾರತೀಯ ಬ್ಯಾಟ್ ಕಂಪನಿ
BCCI vs BCB Dispute: ಭಾರತ-ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ಭಿನ್ನಾಭಿಪ್ರಾಯ ತೀವ್ರಗೊಂಡಿದೆ. ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರ ನಿಷೇಧದ ನಂತರ, ಎಸ್‌ಜಿ ಬ್ಯಾಟ್ ಕಂಪನಿ ಬಾಂಗ್ಲಾದೇಶ ಆಟಗಾರರೊಂದಿಗಿನ ಪ್ರಾಯೋಜಕತ್ವ ರದ್ದುಗೊಳಿಸಿದೆ. ಮುಸ್ತಾಫಿಜುರ್ ಅವರನ್ನು ಐಪಿಎಲ್‌ನಿಂದ ಹೊರಗಿಟ್ಟಿದ್ದರಿಂದ ಹುಟ್ಟಿಕೊಂಡ ಈ ವಿವಾದ, ಟಿ20 ವಿಶ್ವಕಪ್ ಸ್ಥಳಾಂತರದ ಬಾಂಗ್ಲಾದೇಶದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸುವುದರೊಂದಿಗೆ ಹೊಸ ತಿರುವು ಪಡೆದಿದೆ.

ಏಟಿಗೆ ಎದುರೇಟು ನೀಡುವುದನ್ನು ಭಾರತೀಯರಿಗೆ ಹೊಸದಾಗಿ ಕಲಿಸಿಕೊಡಬೇಕಿಲ್ಲ. ಅದರಲ್ಲೂ ಕ್ರಿಕೆಟ್ ವಿಚಾರಕ್ಕೆ ಬಂದರೆ ಭಾರತೀಯರ ಮುಂದೆ ನಿಲ್ಲುವವರಿಲ್ಲ. ಹೀಗಿರುವಾಗ ವಿಶ್ವ ಕ್ರಿಕೆಟ್ನ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐನ (BCCI) ಎದುರು ಹಾಕಿಕೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (BCB) ಸಂಕಷ್ಟದ ದಿನಗಳು ಆರಂಭವಾಗಿವೆ ಎನ್ನಬಹುದು. ಬಾಂಗ್ಲಾದೇಶದಲ್ಲಿ ಐಪಿಎಲ್ (IPL) ಪ್ರದರ್ಶನವನ್ನು ನಿಷೇಧಿಸಿದ ನಂತರ, ಅಲ್ಲಿನ ಬ್ಯಾಟ್ಸ್‌ಮನ್‌ಗಳು ಇನ್ನು ಮುಂದೆ ಭಾರತದ ಪ್ರಮುಖ ಬ್ಯಾಟ್ ತಯಾರಿಕಾ ಕಂಪನಿಯಾದ ಎಸ್‌ಜಿ ತಯಾರಿಸಿದ ಬ್ಯಾಟ್‌ಗಳನ್ನು ಬಳಸದಂತೆ ನಿಷೇಧ ಹೇರಲಾಗಿದೆ. ವರದಿಗಳ ಪ್ರಕಾರ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರೊಂದಿಗಿನ ಒಪ್ಪಂದವನ್ನು ಎಸ್‌ಜಿ ಕೊನೆಗೊಳಿಸಲು ನಿರ್ಧರಿಸಿದೆ.
ಒಪ್ಪಂದ ಮುರಿದ ಭಾರತೀಯ ಬ್ಯಾಟ್ ಕಂಪನಿ
ಬಾಂಗ್ಲಾದೇಶದ ಅನೇಕ ಬ್ಯಾಟ್ಸ್‌ಮನ್‌ಗಳು ಎಸ್‌ಜಿ ಬ್ಯಾಟ್‌ಗಳನ್ನು ಬಳಸುತ್ತಾರೆ. ಅದರಲ್ಲಿ ಪ್ರಮುಖರು ಬಾಂಗ್ಲಾದೇಶ ಟಿ20 ವಿಶ್ವಕಪ್ ತಂಡದ ನಾಯಕ ಲಿಟ್ಟನ್ ದಾಸ್. ವರದಿಗಳ ಪ್ರಕಾರ, ಎಸ್‌ಜಿ ಬಾಂಗ್ಲಾದೇಶ ಆಟಗಾರರೊಂದಿಗಿನ ಎಲ್ಲಾ ಕಿಟ್ ಪ್ರಾಯೋಜಕತ್ವ ಒಪ್ಪಂದಗಳನ್ನು ರದ್ದುಗೊಳಿಸಿದೆ. ಭಾರತೀಯ ಕಂಪನಿಯು ಬಾಂಗ್ಲಾದೇಶದ ಆಟಗಾರರೊಂದಿಗಿನ ತನ್ನ ಒಪ್ಪಂದವನ್ನು ವಿಸ್ತರಿಸಲು ಯಾವುದೇ ಆಸಕ್ತಿಯನ್ನು ತೋರಿಸಿಲ್ಲ ಎಂದು ವರದಿಯಾಗಿದೆ.
ವಿವಾದ ಹುಟ್ಟಿಕೊಂಡಿದ್ದು ಎಲ್ಲಿ?
ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ನಡುವೆ ಸಂಘರ್ಷ ಹುಟ್ಟಿಕೊಳ್ಳಲು ಕಾರಣ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಗಿಟ್ಟಿದ್ದು. ಬಿಸಿಸಿಐ ಮುಸ್ತಾಫಿಜುರ್ ಅವರನ್ನು ಐಪಿಎಲ್‌ನಿಂದ ಹೊರಗಿಟ್ಟಿರುವುದು ಬಾಂಗ್ಲಾದೇಶ ಕ್ರೀಡಾ ಸಚಿವಾಲಯ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಕೆರಳುವಂತೆ ಮಾಡಿದೆ. ಕ್ರೀಡಾ ಸಚಿವಾಲಯದ ಸೂಚನೆಗಳನ್ನು ಅನುಸರಿಸಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಸಿಸಿಗೆ ಇಮೇಲ್ ಮಾಡಿ, ಬಾಂಗ್ಲಾ ತಂಡದ ಟಿ20 ವಿಶ್ವಕಪ್ ಪಂದ್ಯಗಳ ಸ್ಥಳವನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದೆ. ಏತನ್ಮಧ್ಯೆ, ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ಸಹ ನಿಷೇಧಿಸಿದೆ.
ಮುಸ್ತಾಫಿಜುರ್ ಐಪಿಎಲ್‌ನಿಂದ ಔಟ್; ಭಾರತದಲ್ಲಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂದ ಬಾಂಗ್ಲಾ
ಬೇಡಿಕೆ ತಿರಸ್ಕರಿಸಿದ ಐಸಿಸಿ
ಬಾಂಗ್ಲಾದೇಶದ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಐಸಿಸಿ ಸ್ಪಷ್ಟವಾಗಿ ನಿರಾಕರಿಸಿದೆ. ವರದಿಗಳ ಪ್ರಕಾರ, ಬಾಂಗ್ಲಾದೇಶ ತಂಡವು ತಮ್ಮ ಪಂದ್ಯಗಳನ್ನು ಈಗ ಪ್ರಕಟವಾಗಿರುವ ವೇಳಾಪಟ್ಟಿಯ ಪ್ರಕಾರವೇ ಆಡಬೇಕೆಂದು ಐಸಿಸಿ ಸ್ಪಷ್ಟವಾಗಿ ಹೇಳಿದೆ. ಇದರರ್ಥ ಬಾಂಗ್ಲಾದೇಶವು ತಮ್ಮ ಟಿ20 ವಿಶ್ವಕಪ್ 2026 ರ ಗುಂಪು ಪಂದ್ಯಗಳನ್ನು ಭಾರತದಲ್ಲಿ ಆಡಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Wed, 7 January 26
