ಬಿಸಿಸಿಐ ಹೊರದಬ್ಬಿದ ಅಭಿಷೇಕ್ ನಾಯರ್ಗೆ ಕೆಲಸ ಕೊಟ್ಟ ಕೆಕೆಆರ್
Abhishek Nayar: ಟೀಂ ಇಂಡಿಯಾದಿಂದ ವಜಾಗೊಂಡಿರುವ ತಂಡದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಟೀಂ ಇಂಡಿಯಾದಿಂದ ತೆಗೆದುಹಾಕಲ್ಪಟ್ಟ ಅವರು, ಮತ್ತೆ ಕೆಕೆಆರ್ ನಲ್ಲಿ ತಮ್ಮ ಹಿಂದಿನ ಪಾತ್ರವನ್ನು ವಹಿಸಲಿದ್ದಾರೆ.

ಟೀಂ ಇಂಡಿಯಾದಲ್ಲಿ (Team India) ಸಹಾಯಕ ಕೋಚ್ ಹುದ್ದೆಯಲ್ಲಿದ್ದ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ರನ್ನು (Abhishek Nayar) ನಿನ್ನೆಯಷ್ಟೇ ಬಿಸಿಸಿಐ ಆ ಹುದ್ದೆಯಿಂದ ತೆಗೆದುಹಾಕಿತ್ತು. ಹುದ್ದೆಯಿಂದ ಕೆಳಗಿಳಿದ ಬಳಿಕ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ನಾಯರ್ಗೆ ಒಂದೇ ದಿನದಲ್ಲಿ ಕೆಲಸ ಸಿಕ್ಕಿದೆ. ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದ ನಾಯರ್ ಅವರನ್ನು ಐಪಿಎಲ್ (IPL) ಫ್ರಾಂಚೈಸಿ ಕೆಕೆಆರ್ (KKR) ಕರೆದು ಕೆಲಸ ಕೊಟ್ಟಿದೆ. ವಾಸ್ತವವಾಗಿ ನಾಯರ್ ಹಿಂದಿನ ಆವೃತ್ತಿಯವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯಲ್ಲಿ ಕೆಲಸ ಮಾಡಿದ್ದರು. ಟೀಂ ಇಂಡಿಯಾದಲ್ಲಿ ಹುದ್ದೆ ಸಿಕ್ಕಬಳಿಕ ಕೆಕೆಆರ್ ಫ್ರಾಂಚೈಸಿ ತೊರೆದಿದ್ದ ಅಭಿಷೇಕ್ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಕೋಲ್ಕತ್ತಾ ಫ್ರಾಂಚೈಸಿ ಮಾಹಿತಿ ನೀಡಿದೆ.
ಕೆಕೆಆರ್ ಸೇರಿಕೊಂಡ ಅಭಿಷೇಕ್
ಮುಂಬೈ ತಂಡದ ಮಾಜಿ ಆಲ್‌ರೌಂಡರ್ ಅಭಿಷೇಕ್ ನಾಯರ್ ಕಳೆದ ಸೀಸನ್‌ವರೆಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು. ಈ ಫ್ರಾಂಚೈಸಿಯಲ್ಲಿ ಸಹಾಯಕ ತರಬೇತುದಾರರಾಗಿಯೂ ಕೆಲಸ ಮಾಡುತ್ತಿದ್ದರು. ಈಗ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ನಾಯರ್ ಮತ್ತೆ ಕೆಕೆಆರ್ ಫ್ರಾಂಚೈಸಿಗೆ ಮರಳಿದ್ದಾರೆ. ಈ ಸೀಸನ್‌ನಲ್ಲಿ ಕೋಲ್ಕತ್ತಾ ತಂಡ ಸಂಕಷ್ಟದಲ್ಲಿದ್ದು ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿರುವಾಗ ನಾಯರ್ ತಂಡಕ್ಕೆ ಮರಳಿದ್ದಾರೆ. ನಾಯರ್ ಮರಳುವಿಕೆ ತಂಡದ ಆಟಗಾರರಿಗೆ ಸಹಾಯ ಮಾಡುವ ನಿರೀಕ್ಷೆಯಿದೆ.
Welcome back home, @abhisheknayar1 💜 pic.twitter.com/IwJQTnAWxa
— KolkataKnightRiders (@KKRiders) April 19, 2025
ವಜಾಗೊಳಿಸಿದ ಬಿಸಿಸಿಐ
ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗುತ್ತದ್ದಂತೆ ಅವರ ಜೊತೆ ಕೆಕೆಆರ್ ತಂಡದಲ್ಲಿ ಕೆಲಸ ಮಾಡಿದ್ದ ನಾಯರ್ ಅವರನ್ನು ಟೀಂ ಇಂಡಿಯಾದಲ್ಲಿ ಸಹಾಯಕ ಕೋಚ್ ಆಗಿ ನೇಮಿಸಲಾಯಿತು. ಆದರೆ 10 ತಿಂಗಳೊಳಗೆ ಅವರನ್ನು ತಂಡದಿಂದ ಕೈಬಿಡಲಾಯಿತು. ಜನವರಿಯಲ್ಲಿ ನಡೆದ ಬಿಸಿಸಿಐ ಪರಿಶೀಲನಾ ಸಭೆಯ ನಂತರ ನಾಯರ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಟೀಂ ಇಂಡಿಯಾದಲ್ಲಿನ ಆಂತರಿಕ ಜಗಳಕ್ಕೆ ಬಲಿಪಶು ಆದ್ರ ಅಭಿಷೇಕ್ ನಾಯರ್?
ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಆ ಸಮಯದಲ್ಲಿ, ತಂಡದ ಅನೇಕ ಆಂತರಿಕ ಸುದ್ದಿಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದವು, ಇದು ಬಹಳಷ್ಟು ಕೋಲಾಹಲವನ್ನು ಸೃಷ್ಟಿಸಿತು. ಇದರೊಂದಿಗೆ, ಕೋಚಿಂಗ್ ಸಿಬ್ಬಂದಿಯ ಪ್ರಮುಖ ಸದಸ್ಯರೊಬ್ಬರು ಸಹ ಅಭಿಷೇಕ್ ಮೇಲೆ ಕೋಪಗೊಂಡಿದ್ದರು ಎಂದು ಹೇಳಲಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಗಿದ್ದು, ಆ ಬಳಿಕವೇ ನಾಯರ್ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಆದಾಗ್ಯೂ, ಈ ವಿಷಯದಲ್ಲಿ ಬಿಸಿಸಿಐ ಅಥವಾ ನಾಯರ್ ಇಲ್ಲಿಯವರೆಗೆ ಏನನ್ನೂ ದೃಢಪಡಿಸಿರಲಿಲ್ಲ ಆದರೆ ಈಗ ಅವರು ಕೋಲ್ಕತ್ತಾಗೆ ಮರಳಿದ್ದರಿಂದ ಎಲ್ಲವೂ ಸ್ಪಷ್ಟವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Sat, 19 April 25