ಏಷ್ಯನ್ ಗೇಮ್ಸ್ 2026: ಟೀಮ್ ಇಂಡಿಯಾದ ಮೊದಲ ಎದುರಾಳಿ ಫಿಕ್ಸ್!
ಏಷ್ಯನ್ ಗೇಮ್ಸ್ 2026ರ ನಾಕೌಟ್ ಹಂತಕ್ಕೆ ವೇದಿಕೆ ಸಿದ್ಧವಾಗಿದ್ದು, ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್ ಹಂತದಲ್ಲಿ ನೇಪಾಳ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಅಫ್ಘಾನ್ ಪಡೆ, ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಹೀಗಾಗಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಟೀಮ್ ಇಂಡಿಯಾವನ್ನು ಎದುರಿಸಬೇಕಿದೆ.

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ. ಗ್ರೂಪ್ ಹಂತದಲ್ಲಿ ನೇಪಾಳ ವಿರುದ್ಧ ಸೋತಿರುವ ಅಫ್ಘಾನ್ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ. ಅದರಂತೆ ದ್ವಿತೀಯ ಸ್ಥಾನದಲ್ಲಿರುವ ಅಫ್ಗಾನಿಸ್ತಾನ್ ತಂಡವನ್ನು ಭಾರತ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎದುರಿಸಲಿದೆ.
ಗೆದ್ದು ಬೀಗಿದ ನೇಪಾಳ:
ಗ್ರೂಪ್ ‘ಎ’ ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ನೇಪಾಳ ತಂಡವು 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಆಘಾತಕಾರಿ ಸೋಲಿನಿಂದಾಗಿ ಅಫ್ಘಾನಿಸ್ತಾನ್ ಗ್ರೂಪ್‌ನಲ್ಲಿ ಎರಡನೇ ಸ್ಥಾನಕ್ಕೆ (A2) ತಳ್ಳಲ್ಪಟ್ಟಿದೆ. ಟೂರ್ನಿಯ ನಿಯಮಾವಳಿಗಳ ಪ್ರಕಾರ, ಗ್ರೂಪ್ ‘ಎ’ ನ ರನ್ನರ್-ಅಪ್ ತಂಡವು ಪ್ರಬಲ ಭಾರತ ತಂಡದ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಬೇಕಾಗಿದ್ದು, ಈ ಹೈ-ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈ ಪಂದ್ಯದ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ…
- ದಿನಾಂಕ: ಸೆಪ್ಟೆಂಬರ್ 28, 2026 (ಸೋಮವಾರ)
- ಸಮಯ: ಭಾರತೀಯ ಕಾಲಮಾನ ಬೆಳಿಗ್ಗೆ 10:00 ಗಂಟೆಗೆ (ಸ್ಥಳೀಯ ಸಮಯ ಮಧ್ಯಾಹ್ನ 1:30)
- ಕ್ರೀಡಾಂಗಣ: ಕೊರೊಗಿ ಅಥ್ಲೆಟಿಕ್ ಪಾರ್ಕ್, ನಿಸ್ಶಿನ್ (ನಗೋಯಾ, ಜಪಾನ್)
ಭರ್ಜರಿ ಫಾರ್ಮ್ನಲ್ಲಿ ಟೀಮ್ ಇಂಡಿಯಾ:
ಏಷ್ಯನ್ ಗೇಮ್ಸ್ ಆರಂಭಕ್ಕೂ ಮುನ್ನ ನವದೆಹಲಿಯಲ್ಲಿ ನಡೆದ 3 ಪಂದ್ಯಗಳ ದ್ವಿಪಕ್ಷೀಯ “ಫ್ರೆಂಡ್‌ಶಿಪ್ ಕಪ್” ಟಿ20 ಸರಣಿಯಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು.
- 1ನೇ ಟಿ20: ಭಾರತಕ್ಕೆ 7 ವಿಕೆಟ್ ಜಯ
- 2ನೇ ಟಿ20: ಭಾರತಕ್ಕೆ 7 ವಿಕೆಟ್ ಜಯ
- 3ನೇ ಟಿ20: ಭಾರತಕ್ಕೆ 127 ರನ್‌ಗಳ ಭರ್ಜರಿ ಜಯ
ಭಾರತವೇ ಫೇವರಿಟ್:
ಈ ಟೂರ್ನಿಗಾಗಿ ಬಿಸಿಸಿಐ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಅವರನ್ನೊಳಗೊಂಡ ಅತ್ಯಂತ ಬಲಿಷ್ಠ ತಂಡವನ್ನು ಕಳುಹಿಸಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನ್ ತಂಡವು ತನ್ನ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ “ಅಫ್ಘಾನ್ ಅಬ್ದಾಲಿಯನ್” (ಅಫ್ಘಾನಿಸ್ತಾನ್ ಎ) ಹೆಸರಿನ ಯುವ ತಂಡದೊಂದಿಗೆ ಕಣಕ್ಕಿಳಿಯಲಿದೆ. ಹೀಗಾಗಿಯೇ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಬಹುತೇಕ ಖಚಿತ ಎನ್ನಬಹುದು.




