IND vs AUS: ಭಾರತ- ಆಸೀಸ್ ನಡುವೆ ಬಾಕ್ಸಿಂಗ್ ಡೇ ಟೆಸ್ಟ್; ಏನಿದರ ವಿಶೇಷತೆ?
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ನಿರ್ಣಾಯಕ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಇದನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತದೆ.ಸಾಮಾನ್ಯವಾಗಿ ಕ್ರಿಸ್‌ಮಸ್ ಮುಗಿದ ಮರುದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಡಿ.25 ರಂದು ಕ್ರಿಸ್‌ಮಸ್ ಮುಗಿದರೆ, ಡಿಸೆಂಬರ್ 26 ಅನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ.
ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿದೆ. ಇಲ್ಲಿಯವರೆಗೆ ಉಭಯ ತಂಡಗಳ ನಡುವೆ ಮೂರು ಪಂದ್ಯಗಳು ನಡೆದಿದ್ದು, ಎರಡೂ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಒಂದು ಪಂದ್ಯ ಡ್ರಾಗೊಂಡಿದೆ. ಇದೀಗ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂತಲೂ ಕರೆಯಲಾಗುತ್ತದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಪ್ರತಿ ವರ್ಷ ಡಿಸೆಂಬರ್ 26 ರಂದು ಅಂದರೆ ಕ್ರಿಸ್‌ಮಸ್ ನಂತರದ ದಿನದಂದು ಆಡಲಾಗುತ್ತದೆ. ಆ ಪ್ರಕಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಬಾಕ್ಸಿಂಗ್ ಡೇ ಎಂದರೇನು?
ಸಾಮಾನ್ಯವಾಗಿ ಕ್ರಿಸ್‌ಮಸ್ ಮುಗಿದ ಮರುದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಡಿ.25 ರಂದು ಕ್ರಿಸ್‌ಮಸ್ ಮುಗಿದರೆ, ಡಿಸೆಂಬರ್ 26 ಅನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ಯುನೈಟೆಡ್ ಕಿಂಗ್‌ಡಮ್ ಮತ್ತು ಇತರ ದೇಶಗಳು ಈ ದಿನವನ್ನು ಆಚರಿಸುತ್ತವೆ. ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಕೆನಡಾದಂತಹ ಕಾಮನ್‌ವೆಲ್ತ್ ದೇಶಗಳಲ್ಲಿ ಆಚರಿಸಲಾಗುತ್ತದೆ. ಹಾಗೆಯೇ ಈ ದಿನದಿಂದ ಪ್ರಾರಂಭವಾಗುವ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತದೆ.
ವಿಕ್ಟೋರಿಯಾ ರಾಣಿಯ ಆಳ್ವಿಕೆಯಲ್ಲಿ, ಬ್ರಿಟಿಷ್ ಸಾಮ್ರಾಜ್ಯದ ಸೇವಕರಿಗೆ ಅವರ ರಾಜ ಅಥವಾ ರಾಣಿಯರು ಡಿಸೆಂಬರ್ 25 ರಂದು ಕ್ರಿಸ್‌ಮಸ್ ಉಡುಗೊರೆಗಳನ್ನು ನೀಡುತ್ತಿದ್ದರು. ಈ ಉಡುಗೊರೆಗಳನ್ನು ಡಿಸೆಂಬರ್ 26 ರಂದು ಓಪನ್ ಮಾಡಲಾಗುತ್ತಿತ್ತು. ಹೀಗಾಗಿ ಆ ದಿನವನ್ನು ಬಾಕ್ಸಿಂಗ್ ಡೇ ಎನ್ನುತ್ತಾರೆ. ಈ ಸಂಪ್ರದಾಯವನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಆ ಪ್ರಕಾರ ಪ್ರತಿ ವರ್ಷ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಲಾಗುತ್ತದೆ.
ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸ
ಬಾಕ್ಸಿಂಗ್-ಡೇ ಟೆಸ್ಟ್ ಪಂದ್ಯವನ್ನು ಮೊದಲ ಬಾರಿಗೆ 1950 ರಲ್ಲಿ ಪ್ರಾರಂಭಿಸಲಾಯಿತು. ಆರಂಭದಲ್ಲಿ ಇದನ್ನು ಪ್ರತಿ ವರ್ಷ ಆಡಲಾಗುತ್ತಿರಲಿಲ್ಲ. ಕಾಲನಂತರ ಈ ಟೆಸ್ಟ್ ಪಂದ್ಯವನ್ನು ಪ್ರತಿ ವರ್ಷ ನಡೆಸಲು ತೀರ್ಮಾನಿಸಲಾಯಿತು. ಈ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಆಡಲಾಯಿತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. 1952 ರಲ್ಲಿ ಮೊದಲ ಬಾರಿಗೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಿದ್ದ ದಕ್ಷಿಣ ಆಫ್ರಿಕಾ, ಆ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ನಂತರ 1968 ರಲ್ಲಿ ಈ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಬಳಿಕ 1980 ರಿಂದ ಪ್ರತಿ ವರ್ಷ ಈ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಅಂದಿನಿಂದ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ನಿರಂತರವಾಗಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡುತ್ತಿವೆ. ಟೀಂ ಇಂಡಿಯಾ ಕೂಡ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Wed, 18 December 24