CSK vs LSG: ಪ್ಲೇಆಫ್ನಿಂದ ಅಧಿಕೃತವಾಗಿ ಹೊರಬಿದ್ದ ಲಕ್ನೋ; 5ನೇ ಸ್ಥಾನಕ್ಕೇರಿದ ಸಿಎಸ್ಕೆ
IPL 2026 CSK vs LSG: ಐಪಿಎಲ್ 2026ರ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಉರ್ವಿಲ್ ಪಟೇಲ್ ಕೇವಲ 13 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಗಳಿಸಿ ದಾಖಲೆ ನಿರ್ಮಿಸಿದರು. ಕೊನೆಯ ಓವರ್‌ನಲ್ಲಿ ಶಿವಂ ಡುಬೆ ಭರ್ಜರಿ ಸಿಕ್ಸರ್‌ಗಳ ಮೂಲಕ CSK ಗೆಲುವನ್ನು ಖಚಿತಪಡಿಸಿದರು. ಈ ಸೋಲಿನೊಂದಿಗೆ LSG ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.

ಐಪಿಎಲ್ 2026 (IPL 2026) ರ 53 ನೇ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (CSK vs LSG) ತಂಡವನ್ನು ಮಣಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದು ಈ ಆವೃತ್ತಿಯಲ್ಲಿ ಸಿಎಸ್ಕೆ ತಂಡದ 5ನೇ ಗೆಲುವಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇತ್ತ ಲಕ್ನೋ ತಂಡದ ಈ ಸೋಲಿನೊಂದಿಗೆ 10ನೇ ಸ್ಥಾನದಲ್ಲೇ ಉಳಿಯುವುದರ ಜೊತೆಗೆ ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಅಂದರೆ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದ ಮೊದಲ ತಂಡವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ ಕೊನೆಯ ಓವರ್‌ನಲ್ಲಿ ಗೆಲುವು ದಾಖಲಿಸಿತು.
ಲಕ್ನೋಗೆ ಸ್ಫೋಟಕ ಆರಂಭ
ಈ ಪಂದ್ಯದಲ್ಲಿ, ಟಾಸ್ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕ ಜೋಶ್ ಇಂಗ್ಲಿಸ್ ಕೇವಲ 33 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 85 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಅವರಿಗೆ ಇತರ ಆಟಗಾರರಿಂದ ಅಗತ್ಯ ಬೆಂಬಲ ಸಿಗಲಿಲ್ಲ. ಮಿಚೆಲ್ ಮಾರ್ಷ್ 10, ನಿಕೋಲಸ್ ಪೂರನ್ 1, ರಿಷಭ್ ಪಂತ್ 15, ಐಡೆನ್ ಮಾರ್ಕ್ರಾಮ್ 6, ಅಕ್ಷತ್ ರಘುವಂಶಿ 18, ಹಿಮ್ಮತ್ ಸಿಂಗ್ 17 ಮತ್ತು ಮೊಹಮ್ಮದ್ ಶಮಿ 0 ರನ್ ಗಳಿಸಿ ಔಟಾದರು. ಶಹಬಾಜ್ ಅಹ್ಮದ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 43 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಜೇಮೀ ಓವರ್ಟನ್ 4 ಓವರ್‌ಗಳಲ್ಲಿ 36 ರನ್‌ಗಳಿಗೆ 3 ವಿಕೆಟ್ ಪಡೆದರೆ, ಅನ್ಶುಲ್ ಕಾಂಬೋಜ್ 2 ಮತ್ತು ನೂರ್ ಅಹ್ಮದ್ 1 ವಿಕೆಟ್ ಪಡೆದರು.
ಉರ್ವಿಲ್ ಸಿಡಿಲಬ್ಬರ
ಈ ಗುರಿ ಬೆನ್ನಟ್ಟಿದ ಚೆನ್ನೈ ಪರ, ಸಂಜು ಸ್ಯಾಮ್ಸನ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಆಕ್ರಮಣಕಾರಿ ಆರಂಭವನ್ನು ನೀಡಿದರು, ನಾಲ್ಕನೇ ಓವರ್ ವೇಳೆಗೆ ತಂಡವನ್ನು 50 ರನ್‌ಗಳ ಹತ್ತಿರಕ್ಕೆ ತಂದರು. ಆದರೆ ಮೊದಲ ವಿಕೆಟ್ ಪತನದ ನಂತರ, ಉರ್ವಿಲ್ ಪಟೇಲ್ ಆಗಮನದೊಂದಿಗೆ ನಿಜವಾದ ಬಿರುಗಾಳಿ ಆರಂಭವಾಯಿತು. ತಮ್ಮ ಮೊದಲ ಎಸೆತದಲ್ಲಿ ಸಿಂಗಲ್ ಪಡೆದ ನಂತರ, ಉರ್ವಿಲ್ ಮುಂದಿನ ಏಳು ಎಸೆತಗಳಲ್ಲಿ ಆರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ಈ ಸಿಕ್ಸರ್‌ಗಳಲ್ಲಿ ಐದು, ಸತತ ಐದು ಎಸೆತಗಳಲ್ಲಿ ಬಂದವು. ಹೀಗಾಗಿ ಉರ್ವಿಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಯಶಸ್ವಿ ಜೈಸ್ವಾಲ್ ಅವರ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು.
ಕೊನೆಯ ಓವರ್‌ನಲ್ಲಿ ಗೆದ್ದ ಸಿಎಸ್ಕೆ
ಉರ್ವಿಲ್ ಪಟೇಲ್ ಕ್ರೀಸ್ನಲ್ಲಿರುವವರೆಗೂ, ಚೆನ್ನೈ ತಂಡವು ಆರಾಮದಾಯಕ ಗೆಲುವಿನತ್ತ ಸಾಗುವ ಲಕ್ಷಣ ತೋರುತ್ತಿತ್ತು. ಆದಾರೆ ಅವರ ವಿಕೆಟ್ ಪತನದ ಬಳಿಕ ತಂಡದ ರನ್ ವೇಗವೂ ನಿಧಾನವಾಯಿತು. ಇಲ್ಲಿಂದ ಲಕ್ನೋ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಂತೆ ತೋರುತ್ತಿತ್ತು. ಅಂತಿಮ ಓವರ್‌ನಲ್ಲಿ ಚೆನ್ನೈ ಗೆಲ್ಲಲು 10 ರನ್‌ಗಳು ಬೇಕಾಗಿದ್ದವು, ಆದರೆ ರಿಷಭ್ ಪಂತ್ ಚೆಂಡನ್ನು ಶಿವಂ ದುಬೆ ಮುಂದೆ ಸ್ಪಿನ್ನರ್ ಐಡೆನ್ ಮಾರ್ಕ್ರಾಮ್‌ಗೆ ಹಸ್ತಾಂತರಿಸಿದರು. ದುಬೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:19 pm, Sun, 10 May 26




