ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕರ ಮೇಲೆ ಸ್ಟೇಡಿಯಂನಲ್ಲಿ ದಾಳಿ
ISL 2025: ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿ ಮೋಹನ್ ಬಗಾನ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಒಡೆತನದಲ್ಲಿದ್ದರೆ, ಬೆಂಗಳೂರು ಎಫ್‌ಸಿ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರಾದ ಪಾರ್ಥ್ ಜಿಂದಾಲ್ ಅವರ ಮಾಲೀಕತ್ವದ ತಂಡ ಎಂಬುದು ವಿಶೇಷ.

ಇಂಡಿಯನ್ ಸೂಪರ್ ಲೀಗ್ 2024-2025ರ (ISL) ಫೈನಲ್ ಪಂದ್ಯದ ವೇಳೆ ಮೋಹನ್ ಬಗಾನ್ ಸೂಪರ್ ಜೈಂಟ್ಸ್ (MGSG) ತಂಡದ ಕೆಲ ಅಭಿಮಾನಿಗಳು ಬೆಂಗಳೂರು ಎಫ್‌ಸಿ ತಂಡದ ಮಾಲೀಕ ಪಾರ್ಥ್ ಜಿಂದಾಲ್ (Parth Jindal) ಮೇಲೆ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಏಪ್ರಿಲ್ 12 ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಐಎಸ್‌ಎಲ್ ಫೈನಲ್‌ನಲ್ಲಿ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ಹಾಗೂ ಬೆಂಗಳೂರು ಎಫ್‌ಸಿ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯವನ್ನು ವೀಕ್ಷಿಸಲು ಪಾರ್ಥ್ ಜಿಂದಾಲ್ ಕೂಡ ಸ್ಟೇಡಿಯಂನಲ್ಲಿ ಹಾಜರಿದ್ದರು. ಈ ವೇಳೆ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ತಂಡದ ಅಭಿಮಾನಿಗಳು ತಮ್ಮ ಮಾಲೀಕರ ಮೇಲೆ ಪಟಾಕಿಗಳೊಂದಿಗೆ ದಾಳಿ ನಡೆಸಿದ್ದಾರೆ ಎಂದು ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಆರೋಪಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕರು:
ಪಾರ್ಥ್ ಜಿಂದಾಲ್ ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರು. ಹಾಗೆಯೇ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡದ ಮಾಲಕತ್ವವನ್ನು ಹೊಂದಿದ್ದಾರೆ. ಹೀಗಾಗಿ ಬೆಂಗಳೂರು ತಂಡದ ಫೈನಲ್ ಪಂದ್ಯವನ್ನು ವೀಕ್ಷಿಸಲು ಪಾರ್ಥ್ ಜಿಂದಾಲ್ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಹಾಜರಿದ್ದರು.
ಈ ವೇಳೆ ಮೋಹನ್ ಬಗಾನ್ ಅಭಿಮಾನಿಗಳ ಒಂದು ಗುಂಪು ಪಾರ್ಥ್ ಅವರ ಮೇಲೆ ಉದ್ದೇಶಪೂರ್ವಕವಾಗಿ ಪಟಾಕಿಗಳೊಂದಿಗೆ ದಾಳಿ ನಡೆಸಿದ್ದಾರೆ. ಅಲ್ಲದೆ ಬೆಂಗಳೂರು ಎಫ್‌ಸಿ ಬೆಂಬಲಿಗರ ಮೇಲೂ ಪಟಾಕಿಗಳನ್ನು ಎಸೆದಿದ್ದಾರೆ. ಇದರಿಂದಾಗಿ ಬಿಎಫ್‌ಸಿ ಅಭಿಮಾನಿಯ ಕಣ್ಣಿಗೆ ಗಾಯವಾಗಿದೆ ಎಂದು ಬಿಎಫ್‌ಸಿ ಆರೋಪಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರು:
ಮೋಹನ್ ಬಗಾನ್ ಸೂಪರ್ ಜೈಂಟ್ಸ್ ತಂಡವು ಐಪಿಎಲ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಅವರ ಒಡೆತನದಲ್ಲಿದೆ. ಇದೀಗ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ತಂಡದ ಅಭಿಮಾನಿಗಳ ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಬಿಎಫ್‌ಸಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದೆ.
ಎಐಎಫ್‌ಎಫ್‌ಗೆ ದೂರು:
ಈ ವಿಷಯದಲ್ಲಿ ಬಿಎಫ್‌ಸಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮತ್ತು ಐಎಸ್‌ಎಲ್ ಸಂಘಟಕರಾದ ಎಫ್‌ಎಸ್‌ಡಿಎಲ್‌ಗೆ ಔಪಚಾರಿಕ ದೂರು ನೀಡಿದೆ. ಈ ಘಟನೆಯನ್ನು ಗಂಭೀರವಾಗಿ ತನಿಖೆ ಮಾಡಿ ಭವಿಷ್ಯದಲ್ಲಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕ್ಲಬ್ ಒತ್ತಾಯಿಸಿದೆ.
ಫುಟ್‌ಬಾಲ್ ಪ್ರಿಯರಿಗೆ ಕ್ರೀಡಾಂಗಣಗಳು ಸುರಕ್ಷಿತ ಸ್ಥಳಗಳಾಗಿರಬೇಕು. ಇಂತಹ ಘಟನೆಗಳಿಗೆ ಫುಟ್‌ಬಾಲ್ ಅಥವಾ ಯಾವುದೇ ಕ್ರೀಡೆಯಲ್ಲಿ ಸ್ಥಾನವಿಲ್ಲ ಎಂದು ಬೆಂಗಳೂರು ಫುಟ್‌ಬಾಲ್ ಕ್ಲಬ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಫೈನಲ್ ಪಂದ್ಯ ಹೇಗಿತ್ತು?
ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಯಾವುದೇ ಗೋಲುಗಳಿಸಿರಲಿಲ್ಲ. ಆದರೆ ದ್ವಿತೀಯಾರ್ಧ ಶುರುವಾದ ಬೆನ್ನಲ್ಲೇ, 49ನೇ ನಿಮಿಷದಲ್ಲಿ ಮೋಹನ್ ಬಗಾನ್ ತಂಡದ ಆಲ್ಬರ್ಟೊ ರೊಡ್ರಿಗಸ್ ಸೆಲ್ಫ್ ಗೋಲು ಗಳಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು.
ಆ ಬಳಿಕ ಕಂಬ್ಯಾಕ್ ಮಾಡಿದ ಮೋಹನ್ ಬಗಾನ್ ತಂಡವು ಉತ್ತಮ ಪ್ರದರ್ಶನ ನೀಡಿತು. ಅಲ್ಲದೆ 72ನೇ ನಿಮಿಷದಲ್ಲಿ ಜೇಸನ್ ಕಮ್ಮಿಂಗ್ಸ್ ಪೆನಾಲ್ಟಿ ಮೂಲಕ ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು.
ಇದನ್ನೂ ಓದಿ: 7/3, 65/5, 211/9: ಹೊಸ ಇತಿಹಾಸ ಬರೆದ ಡೆಲ್ಲಿ ಕ್ಯಾಪಿಟಲ್ಸ್
ನಿಗದಿತ ಸಮಯದಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯವು ಹೆಚ್ಚುವರಿ ಸಮಯದತ್ತ ಸಾಗಿತು. ಈ ವೇಳೆ ಜೇಮೀ ಮ್ಯಾಕ್ಲಾರೆನ್ 96 ನೇ ನಿಮಿಷದಲ್ಲಿ ಗೆಲುವಿನ ಬಾರಿಸಿ 1-2 ಅಂತರದಿಂದ ಮೋಹನ್ ಬಗಾನ್ ತಂಡಕ್ಕೆ ಗೆಲುವು ತಂದು ಕೊಟ್ಟರು. ಈ ಗೆಲುವಿನೊಂದಿಗೆ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ತಂಡವು ISL ಡಬಲ್ (ಲೀಗ್ ಶೀಲ್ಡ್ + ISL ಕಪ್) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
Published On - 9:55 am, Wed, 16 April 25