Hardik Pandya: ನನಗೆ ಧೈರ್ಯ ಸಿಕ್ಕಿದೆ, ತಂಡದಲ್ಲಿ ಬದಲಾವಣೆ ಮಾಡ್ತೀನಿ ಅಷ್ಟೇ!
IPL 2026. RCB vs MI: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 240 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 222 ರನ್ಗಳಿಸಿ, 18 ರನ್ಗಳಿಂದ ಸೋಲೊಪ್ಪಿಕೊಂಡಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡ ಸೋಲನುಭವಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 240 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 222 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ 18 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪಂದ್ಯದ ಆರಂಭಿಕ 6 ಓವರ್‌ಗಳಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದೆ. ನಾವು ಪಂದ್ಯವನ್ನು ಮುನ್ನಡೆಸುವ ಬದಲು, ಎದುರಾಳಿ ನೀಡಿದ ಸವಾಲನ್ನು ಬೆನ್ನಟ್ಟುವ ಪರಿಸ್ಥಿತಿಯಲ್ಲೇ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪವರ್‌ಪ್ಲೇನಲ್ಲಿ ಹೆಚ್ಚಿನ ವಿಕೆಟ್ ಕಳೆದುಕೊಳ್ಳುವುದು ಮತ್ತು ಬೌಲಿಂಗ್‌ನಲ್ಲಿ ರನ್ ಬಿಟ್ಟುಕೊಡುವುದು ತಂಡಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಇದು ಇಡೀ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಟಾಸ್ ಗೆದ್ದ ತಂಡಗಳು ಚೇಸಿಂಗ್ ಆಯ್ದುಕೊಳ್ಳುತ್ತವೆ. ಆದರೆ ಮುಂಬೈ ಇಂಡಿಯನ್ಸ್ ವಿಷಯದಲ್ಲಿ ಈ ತಂತ್ರ ವರ್ಕ್ ಆಗುತ್ತಿಲ್ಲ. ನಾವು ಕೆಲವು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದೇವೆ, ಆದರೆ ಫಲಿತಾಂಶ ನಮಗೆ ಪೂರಕವಾಗಿಲ್ಲ. ಹೀಗಾಗಿ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆಯ ಬಗ್ಗೆ ನಾವು ಮರುಚಿಂತನೆ ಮಾಡಬೇಕಿದೆ ಎಂದು ಹಾರ್ದಿಕ್ ಹೇಳಿದ್ದಾರೆ.
ಈ ಸೋಲಿನ ನಡುವೆಯೂ ಹಾರ್ದಿಕ್ ಪಾಂಡ್ಯ ಅವರಿಗೆ ಶರ್ಫೇನ್ ರದರ್‌ಫೋರ್ಡ್ ಅವರ ಬ್ಯಾಟಿಂಗ್ ಪ್ರದರ್ಶನ ಸಮಾಧಾನ ತಂದಿದೆ. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯು ಮಧ್ಯಮ ಕ್ರಮಾಂಕಕ್ಕೆ ಆನೆಬಲ ನೀಡಿದೆ. ಇದು ಮುಂದಿನ ಪಂದ್ಯಗಳಲ್ಲಿ ತಂಡದ ಸಂಯೋಜನೆಯಲ್ಲಿ ಧೈರ್ಯವಾಗಿ ಬದಲಾವಣೆ ಮಾಡಲು ನಾಯಕನಿಗೆ ಆತ್ಮವಿಶ್ವಾಸ ನೀಡಿದೆ. ಈ ಮೂಲಕ ಮುಂದಿನ ಮ್ಯಾಚ್ನಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡ್ತೀನಿ ಎಂದು ಹಾರ್ದಿಕ್ ಪಾಂಡ್ಯ ಒತ್ತಿ ಹೇಳಿದ್ದಾರೆ.
ಸದ್ಯ ನಾಲ್ಕು ಮ್ಯಾಚ್ಗಳಲ್ಲಿ ಮೂರು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೆಲವು ದಿನಗಳ ಬಿಡುವು ಸಿಕ್ಕಿದೆ. ಈ ಸಮಯದಲ್ಲಿ ತಂಡವು ತನ್ನ ತಪ್ಪುಗಳನ್ನು ತಿದ್ದಿಕೊಂಡು, ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ನಾವು ಕೇವಲ ಕ್ರಿಕೆಟ್ ಆಡುವುದಷ್ಟೇ ಅಲ್ಲ, ಉತ್ತಮವಾಗಿ ಆಡಬೇಕಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇದನ್ನೂ ಓದಿ: ಕ್ರಿಸ್ ಗೇಲ್ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ
ಈ ಮೂಲಕ ಮುಂದಿನ ಮ್ಯಾಚ್ನಲ್ಲಿ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ರೂಪಿಸಿ ಕಂಬ್ಯಾಕ್ ಮಾಡುವ ಭರವಸೆ ನೀಡಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪಡೆಯನ್ನು ಮಹತ್ವದ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.
Published On - 9:13 am, Mon, 13 April 26




