
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನವೆಂಬರ್ 2 ಅತ್ಯಂತ ವಿಶೇಷವಾದ ದಿನ. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2025ರ ನವೆಂಬರ್ 2ರಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ತವರಿನಲ್ಲೇ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿತ್ತು. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ, ತನ್ನ ಚೊಚ್ಚಲ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಭಾರತೀಯ ಮಹಿಳಾ ಕ್ರಿಕೆಟ್ ಪಾಲಿಗೆ ಇದೊಂದು ಮರೆಯಲಾಗದ ಸಾಧನೆಯಾಗಿತ್ತು. ಏಕೆಂದರೆ ಇದಕ್ಕೂ ಮೊದಲು ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಹಲವು ವರ್ಷಗಳ ಕನಸನ್ನು ನನಸಾಗಿಸಿ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿತ್ತು. ನವಿ ಮುಂಬೈನಲ್ಲಿ ನಡೆದ ಆ ಐತಿಹಾಸಿಕ ಫೈನಲ್ ಪಂದ್ಯದಲ್ಲಿ ಭಾರತ ಹೇಗೆ ಚಾಂಪಿಯನ್ ಪಟ್ಟಕ್ಕೇರಿತು ಎಂಬುದನ್ನು ನೋಡೋಣ.
ಮಹಿಳಾ ಏಕದಿನ ವಿಶ್ವಕಪ್‌ನ 13ನೇ ಆವೃತ್ತಿಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಿದ್ದವು. ಟೂರ್ನಿಯ ಪಂದ್ಯಗಳು ಗುವಾಹಟಿ, ಇಂದೋರ್, ನವಿ ಮುಂಬೈ, ವಿಶಾಖಪಟ್ಟಣಂ ಹಾಗೂ ಕೊಲಂಬೊದಲ್ಲಿ ನಡೆದಿದ್ದವು. ವಿವಿಧ ತಂಡಗಳ ನಡುವಿನ ರೋಚಕ ಹಣಾಹಣಿಗೆ ಈ ಟೂರ್ನಿ ಸಾಕ್ಷಿಯಾಗಿತ್ತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಭಾರತದ ಪರ ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಅಮೋಘ ಅರ್ಧಶತಕಗಳನ್ನು ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾಗಿದ್ದರು. ಶಫಾಲಿ ವರ್ಮಾ 87 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ದೀಪ್ತಿ ಶರ್ಮಾ 58 ರನ್ ಗಳಿಸಿದ್ದರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 45 ರನ್‌ಗಳ ಕೊಡುಗೆ ನೀಡಿದ್ದರು.
ಇನ್ನು ರಿಚಾ ಘೋಷ್ ಕೇವಲ 24 ಎಸೆತಗಳಲ್ಲಿ 34 ರನ್ ಸಿಡಿಸಿ ತಂಡದ ರನ್ ವೇಗ ಹೆಚ್ಚಿಸಿದರು. ಜೆಮಿಮಾ ರೋಡ್ರಿಗಸ್ 24 ರನ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ 20 ರನ್ ಗಳಿಸಿದರು. ಅಮನ್‌ಜೋತ್ ಕೌರ್ 12 ರನ್‌ಗಳ ಕೊಡುಗೆ ನೀಡಿದ್ದರು. ದಕ್ಷಿಣ ಆಫ್ರಿಕಾ ಪರ ಅಯಬೊಂಗ ಖಾಕಾ ಮೂರು ವಿಕೆಟ್ ಪಡೆದು ಮಿಂಚಿದರೆ, ಮಲಾಬಾ, ಡಿ ಕ್ಲರ್ಕ್ ಮತ್ತು ಕ್ಲೋ ಟ್ರಯಾನ್ ತಲಾ ಒಂದು ವಿಕೆಟ್ ಕಬಳಿಸಿದ್ದರು.
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 246 ರನ್‌ಗಳಿಗೆ ಆಲೌಟ್ ಆಯಿತು. ನಾಯಕಿ ಲಾರಾ ವೋಲ್ವಾರ್ಟ್ ಶತಕದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ದೀಪ್ತಿ ಶರ್ಮಾ 5 ವಿಕೆಟ್ಗಳ ಗೊಂಚಲು ಪಡೆದರೆ, ಶಫಾಲಿ ವರ್ಮಾ 2 ವಿಕೆಟ್ ಪಡೆದರು. ಈ ಮೂಲಕ ಭಾರತ 52 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ 2025ರ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. 1973ರಲ್ಲಿ ಮೊದಲ ಮಹಿಳಾ ಏಕದಿನ ವಿಶ್ವಕಪ್ ನಡೆದಿತ್ತು. ಅಂದಿನಿಂದ ಬರೋಬ್ಬರಿ 52 ವರ್ಷಗಳ ಬಳಿಕ ಭಾರತ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು.